Raja Marga Column : ಭಾರತದ ಮುಖ್ಯ ಚುನಾವಣಾ ಕಮಿಷನರ್ (Former Chief Election Commissioner of India) ಆಗಿ ಭ್ರಷ್ಟಾಚಾರ ಮತ್ತು ಲಂಚಾವತಾರದಲ್ಲಿ ಮುಳುಗಿ ಹೋಗಿದ್ದ ಭಾರತದ ಚುನಾವಣೆಗಳನ್ನು ಮೊದಲ ಬಾರಿಗೆ ಶುದ್ಧ ಮಾಡಿದ ಕೀರ್ತಿ ಅದು ಖಂಡಿತವಾಗಿ ಟಿ.ಎನ್ ಸೇಷನ್ (T.N. Seshan) ಅವರಿಗೆ ಸಲ್ಲಬೇಕು. 1990-1996ರ ಅವಧಿಯಲ್ಲಿ ಭಾರತದ ಮುಖ್ಯ ಚುನಾವಣಾ ಕಮೀಷನರ್ ಆಗಿ ಕ್ರಾಂತಿಕಾರಕ ಕ್ರಮಗಳನ್ನು ಆರಂಭ ಮಾಡಿದ ಅವರು ಚುನಾವಣೆಗಳಲ್ಲಿ ಭಾರೀ ಸುಧಾರಣೆಗಳನ್ನು (Electoral Reforms) ತಂದರು.
Raja Marga Column : ಯಾರೀ ಟಿ.ಎನ್ ಸೇಷನ್?
ಅವರ ಆತ್ಮಚರಿತ್ರೆಯ ಪುಸ್ತಕ THROUGH THE BROKEN GLASS ಓದುತ್ತಾ ಹೋದಂತೆ ಅವರ ದಿಟ್ಟತನ, ನೆವರ್ ಕಾಂಪ್ರೋ ನಡೆಗಳು ಕಣ್ಣಿಗೆ ರಾಚುತ್ತವೆ.
ಕೇರಳದ ಪಾಲ್ಛಾಟ್ ಜಿಲ್ಲೆಯ ತಿರುನೆಲ್ಲೈ ಎಂಬ ಸಣ್ಣ ಊರಲ್ಲಿ ಜನಿಸಿದ (1932 ಡಿಸೆಂಬರ್ 15ರಂದು) ಅವರು ಬಾಲ್ಯದಲ್ಲಿ ಅತ್ಯಂತ ಕಷ್ಟದ ದಿನಗಳನ್ನು ಕಳೆದವರು. ಒಮ್ಮೆ ಒಂದು ಹೋಟೆಲಿನಲ್ಲಿ ಊಟ ಮಾಡಲು ಅವರು 25 ಪೈಸೆ ಖರ್ಚು ಮಾಡಿದ್ದರು. ಆಗ ಅವರ ತಾಯಿಯು ದುಂದು ವೆಚ್ಚ ಮಾಡಿದ್ದಕ್ಕೆ ಅವರನ್ನು ಚೆನ್ನಾಗಿ ಹೊಡೆದಿದ್ದರು. ಈ ಘಟನೆಯು ಅವರಿಗೆ ಆರ್ಥಿಕ ಶಿಸ್ತನ್ನು ಕಲಿಸಿತು ಎಂದು ಸೇಷನ್ ಹೇಳಿದ್ದಾರೆ. ಅವರು ಚುನಾವಣಾ ಕಮಿಷನರ್ ಆಗಿದ್ದಾಗಲೂ ‘ನನ್ನ ಬ್ಯಾಂಕ್ ಖಾತೆಯಲ್ಲಿ ನನ್ನ ಸಂಪಾದನೆಗಿಂತ ಒಂದು ರೂಪಾಯಿ ಜಾಸ್ತಿ ಇದ್ದರೆ ನಾನು ರಾಜೀನಾಮೆ ಕೊಟ್ಟು ತೆರಳುತ್ತೇನೆ ‘ ಎಂದಿದ್ದರು! ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವೇ ಇರಲಿಲ್ಲ.
ಐಪಿಎಸ್ ಹುದ್ದೆಗೆ ರಾಜೀನಾಮೆ ಕೊಟ್ಟರು ಸೇಷನ್!
ಬಾಲ್ಯದಿಂದಲೂ ತುಂಬಾ ಪ್ರತಿಭಾವಂತ ಆಗಿದ್ದ ಸೇಷನ್ ಐಪಿಎಸ್ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿಯೇ ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿದ್ದರು (1953). ಆದರೆ ಅವರಿಗೆ ಆ ಹುದ್ದೆ ಇಷ್ಟ ಆಗದೆ ರಾಜೀನಾಮೆ ಕೊಟ್ಟು ಹೊರಬಂದರು. 1955ರಲ್ಲಿ ಐಎಎಸ್ ಪರೀಕ್ಷೆಯನ್ನು ಬರೆದು ಮತ್ತೆ ಪ್ರಥಮ ಪ್ರಯತ್ನದಲ್ಲೇ ಪಾಸ್ ಆದರು. ಮುಂದೆ ಹಾರ್ವರ್ಡ್ ವಿವಿಗೆ ಹೋಗಿ ಸ್ನಾತಕೋತ್ತರ ಪದವಿ ಪಡೆದು ಭಾರತಕ್ಕೆ ಬಂದರು.
ಮುಂದೆ ತಮಿಳುನಾಡು ರಾಜ್ಯದ ವಿವಿಧ ಇಲಾಖೆಗಳಲ್ಲಿ ನಿಷ್ಠೆಯಿಂದ ಕೆಲಸ ಮಾಡಿದರು. ಭ್ರಷ್ಟರ ಕಾರುಬಾರು ಹೆಚ್ಚಾದಾಗ ತಮಿಳುನಾಡು ಬಿಟ್ಟು ದೆಹಲಿಗೆ ಪ್ರಯಾಣ ಮಾಡಿದರು. ಅಲ್ಲಿ ಅವರಿಗೆ ದೊರಕಿದ ಅತೀ ದೊಡ್ಡ ಹುದ್ದೆ ಎಂದರೆ ಕೇಂದ್ರ ಕ್ಯಾಬಿನೆಟ್ ಸೆಕ್ರೆಟರಿ ಹುದ್ದೆ. ಆಗ ಅವರ ಅತ್ಯಂತ ಆತ್ಮೀಯರಾದ ಸುಬ್ರಹ್ಮಣ್ಯಂ ಸ್ವಾಮಿ ಅವರ ಸಲಹೆಯಂತೆ 1990ರಲ್ಲಿ ಭಾರತದ ಮುಖ್ಯ ಚುನಾವಣಾ ಕಮೀಷನರ್ ಆಗಿ ಆಯ್ಕೆಯಾದರು.
ಅದುವರೆಗೆ ಆ ಹುದ್ದೆ ಇದೆ ಎಂದು ಯಾರಿಗೂ ಗೊತ್ತಿರಲಿಲ್ಲ!
ಸೇಷನ್ ಅವರ ಮಹತ್ವ ನಮಗೆ ತಿಳಿಯಬೇಕು ಎಂದಾದರೆ ಅವರಿಗಿಂತ ಮೊದಲು ಭಾರತದ ಚುನಾವಣಾ ವ್ಯವಸ್ಥೆ ಹೇಗಿತ್ತು ಎಂದು ತಿಳಿಯಬೇಕು. ಗೂಂಡಾಗಿರಿ, ದುಡ್ಡು, ಜಾತೀಯ ವ್ಯವಸ್ಥೆ, ಪ್ರಲೋಭನೆ ಒಡ್ಡಿ ಮತ ಪಡೆಯುವುದು, ಮತಗಟ್ಟೆ ಕ್ಯಾಪ್ಚರಿಂಗ್, ಮಾಧ್ಯಮಗಳ ದುರ್ಬಳಕೆ ಎಲ್ಲವೂ ನಡೆಯುತ್ತಿತ್ತು. ಬಿಹಾರ್ ಮತ್ತು ಪಂಜಾಬ್ ರಾಜ್ಯದಲ್ಲಿ ಗೂಂಡಾರಾಜ್ ನಡೆಯುತ್ತಿತ್ತು. 1971ರಷ್ಟು ಹಿಂದೆ ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಜಾರಿಗೆ ತಂದಿದ್ದರೂ ಅದು ದುರ್ಬಳಕೆ ಆದದ್ದೇ ಹೆಚ್ಚು. ಮಧ್ಯರಾತ್ರಿಯತನಕ ರಾಜಕೀಯ ಸಭೆಗಳು ನಡೆಯುತ್ತಿದ್ದವು. ಮೈಕಾಸುರನ ಆರ್ಭಟವು ಮೇರೆ ಮೀರುತ್ತಿತ್ತು. ಯಾರ್ಯಾರ ಹೆಸರಿನಲ್ಲಿ ಯಾರ್ಯಾರೋ ಬಂದು ವೋಟ್ ಮಾಡಿ ಹೋಗುತ್ತಿದ್ದರು.
Raja Marga Column : ಆ ಭ್ರಷ್ಟ ವ್ಯವಸ್ಥೆಯ ನಿರ್ಮೂಲನಕ್ಕೆ ಸೇಷನ್ ಸಂಕಲ್ಪ
ತಮಗೆ ಸಿಕ್ಕಿದ ಆರು ವರ್ಷಗಳ ಅಧಿಕಾರದ ಅವಧಿಯಲ್ಲಿ ಅವರು ಎಲ್ಲ ರಾಜಕೀಯ ಪಕ್ಷಗಳಿಗೆ ನಡುಕ ಹುಟ್ಟಿಸಿದರು ಎಂದರೆ ಅದು ಸೇಷನ್ ಪವರ್. ಅವರು ಭಾರತದ ಹಿಂದಿನ ಚುನಾವಣೆಗಳನ್ನು ಅಧ್ಯಯನ ಮಾಡಿ ಆಗ್ತಾ ಇದ್ದ ನೂರು ಅಕ್ರಮಗಳ ಪಟ್ಟಿ ಮಾಡಿದರು. ಒಂದೊಂದಾಗಿ ಅವುಗಳಿಗೆ ಕಾನೂನು ಬಿಗಿ ಮಾಡುತ್ತ ಹೋದರು. ಭಾರತದ ಚುನಾವಣೆಗಳಲ್ಲಿ ಮೊದಲ ಬಾರಿಗೆ (ಫೋಟೋ ಸಹಿತ) ವೋಟರ್ ಐಡಿ ಬಳಸಿದ ಕೀರ್ತಿಯು ಅವರಿಗೆ ಸಲ್ಲಬೇಕು. ಆ ಕಾರ್ಡುಗಳನ್ನು ಈಗಲೂ ಕೆಲವರು ಸೇಷನ್ ಕಾರ್ಡ್ ಎಂದು ಕರೆಯುತ್ತಾರೆ.
ಆದರೆ ಅದು ಸುಲಭದ ಕೆಲಸ ಆಗಿರಲಿಲ್ಲ. ಆಗಲೇ ಭಾರತದಲ್ಲಿ 50-55 ಕೋಟಿ ಮತದಾರರು ಇದ್ದರು. ಅವರೆಲ್ಲರ ಫೋಟೋ ತೆಗೆದು ವೋಟರ್ ಐಡಿ ಮುದ್ರಿಸಿ ಕೊಡುವುದು ಸುಲಭದ ಮಾತಾಗಿರಲಿಲ್ಲ. ಆದರೆ ಅವರು ಹಿಡಿದ ಹಠವನ್ನು ಬಿಡುವವರೆ ಅಲ್ಲ!
ಯಾವುದೇ ಅಭ್ಯರ್ಥಿಯು ಚುನಾವಣೆ ಮುಗಿದ ತಕ್ಷಣ ತನ್ನ ಖರ್ಚಿನ ವಿವರವನ್ನು ಚುನಾವಣಾ ಆಯೋಗಕ್ಕೆ ಕೊಡಬೇಕು ಎಂಬ ಕಾನೂನು ಇತ್ತು. ಆದರೆ ಅದನ್ನು ಯಾರೂ ಗಂಭೀರವಾಗಿ ಪಾಲಿಸುತ್ತಿರಲಿಲ್ಲ. ಆದರೆ ಸೇಷನ್ 40,000ಕ್ಕಿಂತ ಅಧಿಕ ಅಭ್ಯರ್ಥಿಗಳು ನೀಡಿದ ಖರ್ಚಿನ ವಿವರಗಳನ್ನು ಸ್ವತಃ ಪರಿಶೀಲನೆ ಮಾಡಿದರು. ಅದರಲ್ಲಿ 14,000 ಅಭ್ಯರ್ಥಿಗಳು ಕೊಟ್ಟ ದುಡ್ಡಿನ ವಿವರವು ಪೂರ್ತಿ ಫೇಕ್ ಆಗಿತ್ತು. ಅದರಲ್ಲಿ 1488 ಅಭ್ಯರ್ಥಿಗಳನ್ನು ವಜಾ ಮಾಡಿದ್ದು ಮಾತ್ರವಲ್ಲ ಮುಂದಿನ ಮೂರು ವರ್ಷ ಅವರು ಚುನಾವಣೆಗೆ ಸ್ಪರ್ಧೆ ಮಾಡದಂತೆ ಪ್ರತಿಬಂಧಿಸುವ ಐತಿಹಾಸಿಕ ಕ್ರಮವನ್ನು ಸೇಷನ್ ತೆಗೆದುಕೊಂಡಾಗ ಎಲ್ಲ ರಾಜಕೀಯ ಪಕ್ಷಗಳು ಬೆವರಲು ಆರಂಭ ಮಾಡಿದವು.
ಇದನ್ನೂ ಓದಿ : Raja Marga Column : ಎಲಿಸ್ ಪೆರ‍್ರಿ RCBಗೆ ಅದೃಷ್ಟ ತಂದ ಸುಂದರಿ; ಕ್ರಿಕೆಟ್, ಫುಟ್ಬಾಲ್ ವಿಶ್ವಕಪ್ ಆಡಿದ ಏಕೈಕ ಮಹಿಳೆ!
ನಾನು ‘ಡೆಮಾಕ್ರಸಿಯ ಆಲ್ಸೇಶನ್ ನಾಯಿ ‘ಎಂದು ಸ್ವತಃ ಅವರು ಕರೆಸಿಕೊಂಡರು.
ಚುನಾವಣಾ ಅಕ್ರಮಗಳಿಗೆ ಕುಖ್ಯಾತಿ ಪಡೆದಿದ್ದ ಬಿಹಾರ್ ಮತ್ತು ಪಂಜಾಬ್ ವಿಧಾನ ಸಭೆಗಳಿಗೆ ಚುನಾವಣೆ ರದ್ದು ಮಾಡಿ ಅವರು ಶುದ್ಧೀಕರಣಕ್ಕೆ ಇಳಿದಾಗ ಮತ್ತೆ ರಾಜಕೀಯ ಪಕ್ಷಗಳು ದಿಗಿಲಾದವು.
ಚುನಾವಣಾ ನೀತಿ ಸಂಹಿತೆಯನ್ನು ಬಿಗಿ ಮಾಡಿ ಅಭ್ಯರ್ಥಿಗಳು ಧಾರ್ಮಿಕ ಕ್ಷೇತ್ರಗಳನ್ನು ದುರ್ಬಳಕೆ ಮಾಡಿ ವೋಟ್ ಕೇಳುವುದನ್ನು ನಿಲ್ಲಿಸಿದ್ದು ಅವರೇ! ಜಾತಿ, ಮತಗಳ ಹೆಸರಿನಲ್ಲಿ ವೋಟ್ ಕೇಳುವುದನ್ನು ತಡೆದ ಕೀರ್ತಿಯೂ ಅವರಿಗೆ ಸಲ್ಲಬೇಕು. ಧ್ವನಿವರ್ಧಕಗಳ ಶಬ್ದಮಾಲಿನ್ಯ ತಡೆಗಟ್ಟಿದ್ದು, ಎಲ್ಲೆಂದರಲ್ಲಿ ಪೋಸ್ಟರ್ ಅಂಟಿಸಿ ಪರಿಸರ ಕೆಡಿಸುವುದಕ್ಕೆ ಬ್ರೇಕ್ ಹಾಕಿದ್ದು ಕೂಡ ಅವರೇ! ಚುನಾವಣಾ ಆಯೋಗದಲ್ಲಿ ದೂರು ಪೆಟ್ಟಿಗೆ ತೆರೆದು ಜನಸಾಮಾನ್ಯರ ಪ್ರತೀ ದೂರನ್ನು ಆಲಿಸಿ ಪರಿಹಾರ ಕೊಟ್ಟದ್ದು ಅವರೇ!
ಸಾಮಾಜಿಕ ಜಾಲತಾಣಗಳು ಇಲ್ಲದ ಆ ಕಾಲದಲ್ಲಿಯೂ ಕೂಡ ಆಯೋಗದ ಕೊಠಡಿಯಲ್ಲಿ ಕುಳಿತು ಇಡೀ ಭಾರತದ ಮೆಗಾ ಚುನಾವಣೆಗಳನ್ನು ನಿಯಂತ್ರಣ ಮಾಡಿದ್ದು ಸಣ್ಣ ಸಾಧನೆ ಅಲ್ಲ. ಅವರ ನಂತರ ಬಂದ ಎಲ್ಲ ಆಯುಕ್ತರೂ ಸೇಷನ್ ಆರಂಭ ಮಾಡಿದ ಕ್ರಮಗಳನ್ನು ಮುಂದುವರಿಸಿಕೊಂಡು ಹೋದದ್ದು ಸೇಷನ್ ಅವರ ಗೆಲುವು.
‘ಪ್ರತೀ ಭಾರತೀಯನೂ ನಿರ್ಭೀತಿಯಿಂದ ಮತದಾನ ಮಾಡಬೇಕು. ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸುವುದು ಚುನಾವಣಾ ಆಯೋಗದ ಕರ್ತವ್ಯ. ಭಾರತದಲ್ಲಿ 50% ಜನರು ಮಾತ್ರ ವೋಟ್ ಮಾಡಲು ಬರುತ್ತಾರೆ. ಇದರಿಂದ ಎಷ್ಟೋ ಬಾರಿ ಯೋಗ್ಯರು ಆರಿಸಿ ಬಾರದೆ ಡೆಮಾಕ್ರಸಿ ಸೋಲುತ್ತದೆ. ಮತದಾನದ ಪ್ರಮಾಣವನ್ನು ಹೆಚ್ಚು ಮಾಡುವುದೂ ನಮ್ಮ ಆಯೋಗದ ಕರ್ತವ್ಯ’ ಎಂದವರು ಹೇಳಿದ್ದಾರೆ.
ಮುಂದೆ ನಿವೃತ್ತಿ ಆದ ನಂತರ ಅವರು ಶಿಕ್ಷಕರಾಗಿ ಪಾಠ ಮಾಡಿದರು. ಒಮ್ಮೆ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧೆ ಮಾಡಿ ಸೋತರು. (ಅವರಿಂದ ಸಂತ್ರಸ್ತರಾದ ರಾಜಕಾರಣಿಗಳು ಅವರಿಗೆ ವೋಟ್ ಮಾಡಲು ಸಾಧ್ಯವೇ ಇರಲಿಲ್ಲ! ಇದು ಅವರಿಗೆ ಗೊತ್ತಿತ್ತು). ಅವರಿಗೆ 1996ರಲ್ಲಿ ಅಂತಾರಾಷ್ಟ್ರೀಯ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯು ಒಲಿದು ಬಂದಿತು. ಮುಂದೆ 2019ರಲ್ಲೀ ಅವರು ನಮ್ಮನ್ನು ಆಗಲಿದರು.
ಭಾರತೀಯ ಚುನಾವಣಾ ವ್ಯವಸ್ಥೆಯನ್ನು ತಕ್ಕ ಮಟ್ಟಿಗೆ ಶುದ್ಧೀಕರಣ ಮಾಡಿದ ಕೀರ್ತಿಪುರುಷ ಟಿ.ಎನ್ ಸೇಷನ್ ಅವರಿಗೆ ನಮ್ಮ ಶೃದ್ಧಾಂಜಲಿ ಮೀಸಲಿರಲಿ.
No Nonsense man, TN Seshan pic.twitter.com/uAZO7eOpa2
— V (@apolitical147) March 18, 2024