Site icon Vistara News

ರಾಜ ಮಾರ್ಗ ಅಂಕಣ : ಕೃಷ್ಣ ಮತ್ತು ಕೃಷ್ಣಾ ಸಂಬಂಧವೇ ಮಹಾಭಾರತದ ಪಂಚಾಂಗ; ದ್ರೌಪದಿ ಕಟ್ಟಿದ ಸೆರಗಿನ ತುಂಡೇ ರಕ್ಷಾಬಂಧನ!

Raksha Bandhan Krishna and droupadi

ಕೃಷ್ ಅಂದರೆ ಸಂಸ್ಕೃತ ಭಾಷೆಯಲ್ಲಿ ಆಕರ್ಷಣೆ (Krish means attraction)ಎಂದರ್ಥ. ಹಾಗೆಯೇ ಕೃಷ್ಣ (Everyone loves KRISHNA) ಎಂದರೆ ಭಾರತೀಯರಿಗೆ ಏನೋ ಅದ್ಭುತ ಆಕರ್ಷಣೆ! ಶ್ರೀ ರಾಮನನ್ನು, ಅವನ ಸಂದೇಶವನ್ನು ಅರ್ಥ ಮಾಡಿಕೊಳ್ಳುವುದು ತುಂಬ ಸುಲಭ. ಆದರೆ ಶ್ರೀಕೃಷ್ಣನನ್ನು, ಅವನು ಸಂದೇಶವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ!

ನನ್ನ ಹಾಗೆ ನೀವು ಬದುಕಿರಿ ಎಂದು ಶ್ರೀ ರಾಮದೇವರು ಹೇಳಬಹುದು. ನಾನು ಬದುಕಿದ ಹಾಗೆ ನೀವು ಬದುಕಿರೋ ಎಂದು ಕೃಷ್ಣನು ಎಂದಿಗೂ ಹೇಳುವುದಿಲ್ಲ! ನಮಗೆ ಅವನ ಹಾಗೆ ಬದುಕಲು ಸಾಧ್ಯವೂ ಇಲ್ಲ! ಇಡೀ ಮಹಾಭಾರತದಲ್ಲಿ ತಾನು ದೇವರು ಎಂದು ಕೃಷ್ಣ ಹೇಳಿದ ಉದಾಹರಣೆಯೇ ಇಲ್ಲ!

ನಾನಿಂದು ಹೇಳಲು ಹೊರಟಿದ್ದು ಕೃಷ್ಣ ಮತ್ತು ಕೃಷ್ಣಾ (ದ್ರೌಪದಿ) ಅವರ ಸುಮಧುರವಾದ ಸೋದರ ಸಂಬಂಧದ ಕತೆಯನ್ನು. ಆ ಭಾವನಾತ್ಮಕ ಸಂಬಂಧಕ್ಕೆ ರಕ್ಷಾ ಬಂಧನ ಒಂದು ನೆಪ ಮಾತ್ರ.

ದ್ರೌಪದಿಯು ಕೃಷ್ಣನಿಗೆ ರಕ್ಷೆ ಕಟ್ಟಿದ್ದು ಯಾಕೆ?

ಕೃಷ್ಣಾ ಎಂದರೆ ದ್ರೌಪದಿ. ಅವಳು ಅಗ್ನಿಯಿಂದ ಎದ್ದು ಬಂದ ಕಾರಣ ಅವಳ ಬಣ್ಣ ಕಪ್ಪು. ಕೃಷ್ಣ ಕೂಡ ಕಪ್ಪು. ಆದ್ದರಿಂದ ಅವರಿಬ್ಬರದ್ದೂ ಒಳ್ಳೆಯ ಹೋಲಿಕೆ.

ದ್ರೌಪದಿಯು ರಕ್ಷೆಯನ್ನು ಕಟ್ಟಿ ಅಣ್ಣನಾಗಿ ಸ್ವೀಕರಿಸಿದ್ದು ಶ್ರೀ ಕೃಷ್ಣನನ್ನು! ಅದೂ ಆಕಸ್ಮಿಕವಾಗಿ. ಒಮ್ಮೆ ಕೃಷ್ಣ ಕತ್ತಿಯಿಂದ ಯಾವುದೋ ಕೆಲಸ ಮಾಡುತ್ತಿದ್ದ ಹೊತ್ತು ಕತ್ತಿ ತಾಗಿ ಆತನ ಬೆರಳಿಗೆ ಗಾಯವಾಗಿ ರಕ್ತ ಸುರಿಯುತ್ತದೆ. ಆಗ ಅಲ್ಲಿಯೇ ಇದ್ದ ದ್ರೌಪದಿಯು ಆತಂಕಗೊಂಡು ತನ್ನ ಸೀರೆಯ ಸೆರಗಿನ ಒಂದು ತುಂಡು ಸೀಳಿ ತೆಗೆದು ಆತನ ಬೆರಳಿಗೆ ಕಟ್ಟಿದಳು. ಅದನ್ನೇ ರಕ್ಷೆಯಾಗಿ ಕೃಷ್ಣ ತೆಗೆದುಕೊಂಡ ಮತ್ತು ಅಣ್ಣನಾಗಿ ಹೊಣೆಯನ್ನು ಹೊತ್ತುಕೊಂಡ.

ರಕ್ಷಾ ಬಂಧನದ ಋಣವನ್ನು ಕೃಷ್ಣ ತೀರಿಸಿದ್ದು ಹೇಗೆ?

ಆ ರಕ್ಷಾಬಂಧನದ ಋಣವನ್ನು ಶ್ರೀ ಕೃಷ್ಣ ಹಿಂದೆ ಕೊಟ್ಟದ್ದು ಆಕೆಯ ವಸ್ತ್ರಾಪಹರಣ ಸಂದರ್ಭದಲ್ಲಿ. ಹಸ್ತಿನಾವತಿಯ ಅರಮನೆಯಲ್ಲಿ ದ್ಯೂತವನ್ನು ಸೋತು ಹೋದ ಧರ್ಮರಾಯನು ಪಣವಾಗಿ ಇಟ್ಟದ್ದು ದ್ರೌಪದಿಯನ್ನು.

ಅಂತಃಪುರದಲ್ಲಿ ಏಕವಸ್ತ್ರವನ್ನು ಧರಿಸಿ ಮೈಮುದ್ದೆ ಮಾಡಿ ಕುಳಿತಿದ್ದ ದ್ರೌಪದಿಯನ್ನು ದುಶ್ಯಾಸನನು ಹಸ್ತಿನಾವತಿಯ ಆಸ್ಥಾನಕ್ಕೆ ಎಳೆದು ತಂದು ಆಕೆಯ ಸೀರೆಯನ್ನು ಎಳೆಯಲು ಪ್ರಯತ್ನ ಪಟ್ಟಾಗ ಆಕೆಯ ಗಂಡಂದಿರಾದ ಪಾಂಡವರು ತಲೆತಗ್ಗಿಸಿ ಕುಳಿತುಕೊಳ್ಳುತ್ತಾರೆ. ಭೀಷ್ಮ, ದ್ರೋಣ ಇವರಿಗೆಲ್ಲ ಅನಿವಾರ್ಯತೆಗಳು! ಅವರೂ ಕಣ್ಣು ಮುಚ್ಚಿ ಸುಮ್ಮನೆ ಕೂತರು.

ಆಗ ಅದೇ ಕೃಷ್ಣನು ದ್ರೌಪದಿಗೆ ಅಕ್ಷಯ ವಸ್ತ್ರವನ್ನು ಕೊಟ್ಟು ಆಕೆಯ ಮಾನ, ಪ್ರಾಣ ಮತ್ತು ಸ್ವಾಭಿಮಾನದ ರಕ್ಷಣೆಯನ್ನು ಮಾಡುತ್ತಾನೆ. ಆಕೆಯು ತನಗೆ ಕಟ್ಟಿದ ರಕ್ಷೆಯ ಋಣವನ್ನು ತೀರಿಸುತ್ತಾನೆ.

ದ್ರೌಪದಿಯ ಸಣ್ಣ ಅಹಂ ಅನ್ನು ಕೃಷ್ಣ ಮುರಿದದ್ದು ಹೇಗೆ?

ಅಲ್ಲಿಯೂ ಒಂದು ಸ್ವಾರಸ್ಯ ಇದೆ. ಆರಂಭದ ಸ್ವಲ್ಪ ಹೊತ್ತು ದ್ರೌಪದಿ ವಸ್ತ್ರಾಪಹರಣವು ಆಗುವ ಸಂದರ್ಭ ಆಕೆಯು ರೋದಿಸುತ್ತಾಳೆ, ಬೊಬ್ಬೆ ಹೊಡೆಯುತ್ತಾಳೆ. ಆದರೆ ಕೃಷ್ಣ ಬರುವುದೇ ಇಲ್ಲ. ಕೊನೆಗೆ ಕೃಷ್ಣನು ತಡವಾಗಿ ಬರುತ್ತಾನೆ. ಅದನ್ನೂ ದ್ರೌಪದಿ ಕೇಳುತ್ತಾಳೆ – ಅಣ್ಣಾ, ಯಾಕೆ ತಡವಾಗಿ ಬಂದೆ?

ಅದಕ್ಕೆ ಕೃಷ್ಣ ಹೇಳಿದ ಉತ್ತರ ಕೇಳಿ – ದ್ರೌಪದಿ. ಆರಂಭದ ಕೆಲವು ಕ್ಷಣಗಳು ನೀನು ಸೀರೆಯ ಸೆರಗನ್ನು ಗಟ್ಟಿಯಾಗಿ ಕೈಯ್ಯಲ್ಲಿ ಹಿಡಿದುಕೊಂಡು ನನ್ನನ್ನು ಕರೆದರೆ ನಾನು ಯಾಕೆ ಬರುತ್ತೇನೆ? ನಿನಗೆ ನಿನ್ನನ್ನು ನೀನು ರಕ್ಷಣೆ ಮಾಡಿಕೊಳ್ಳಬಲ್ಲೆ ಎಂಬ ಸಣ್ಣ ಅಹಂ ಇತ್ತು! ಆದರೆ ಯಾವಾಗ ನೀನು ನಿನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಅಣ್ಣಾ ಎಂದು ಕರೆದೆಯೋ ಆಗ ನಾನು ಓಡಿ ಬರಲೇಬೇಕಾಯಿತು! ನಾನು ಒಲಿಯುವುದು ಸಂಪೂರ್ಣ ಶರಣಾಗತಿಗೆ, ಹೊರತು ʻನಾನು’ ಎಂಬ ಅಹಂಕಾರಕ್ಕೆ ಅಲ್ಲ!

ಎಂತಹ ಅದ್ಭುತ ಉತ್ತರ ನೋಡಿ. ದೇವರು ಒಲಿಯುವುದು ಸಂಪೂರ್ಣ ಶರಣಾಗತಿಗೆ ಹೊರತು ನಮ್ಮ ಆಹಂಕಾರಕ್ಕೆ ಅಲ್ಲ ಎಂದು ಕೃಷ್ಣನು ಚಂದವಾಗಿ ಹೇಳಿದ್ದ.

ಮುಂದೆ ಸಂಧಾನಕ್ಕಾಗಿ ಕೃಷ್ಣನು ಹಸ್ತಿನಾವತಿಗೆ ಹೊರಟಾಗ ಎದುರು ಬಂದು ಸಿಟ್ಟು ತೋರಿಸಿದ ದ್ರೌಪದಿಗೆ ಪ್ರಾಮಿಸ್ ಕೊಡುತ್ತಾನೆ. ಏನೆಂದರೆ ಈ ಸಂಧಾನವು ಕೇವಲ ನಾಟಕ ಮಾತ್ರ! ನಾನು ಯುದ್ಧವನ್ನೇ ನಿಷ್ಕರ್ಷೆ ಮಾಡಿ ಬರುತ್ತೇನೆ ಎಂದು! ಕೃಷ್ಣ ಈ ಭರವಸೆ ಬೇರೆ ಯಾರಿಗೂ ಕೊಟ್ಟಿರಲಿಲ್ಲ!

ಇದನ್ನೂ ಓದಿ: ರಾಜ ಮಾರ್ಗ ಅಂಕಣ: ನಾಯಬ್ ಸುಬೇದಾರ್ ನೀರಜ್ ಚೋಪ್ರಾ: ಭಾರತೀಯ ಕ್ರೀಡಾ ಕ್ಷೇತ್ರ ಅಪ್ಪಟ ಚಿನ್ನ

ಮುಂದೆ ಹಸ್ತಿನಾವತಿಗೆ ಹೋದ ಶ್ರೀಕೃಷ್ಣನು ಸಂಧಾನವನ್ನು ಮಾಡದೆ ಯುದ್ಧವನ್ನೇ ನಿಶ್ಚಯ ಮಾಡಿಕೊಂಡು ಬರುತ್ತಾನೆ! ದ್ರೌಪದಿಯ ಅಂತರಂಗದ ಭಾವನೆಗಳಿಗೆ ಸ್ಪಂದಿಸುತ್ತಾನೆ.

ಮುಂದೆ ಮಹಾಭಾರತದ ಯುದ್ಧವು ನಡೆದಾಗ ತಾನೇ ಸೃಷ್ಟಿ ಮಾಡಿ ಯುದ್ಧವನ್ನು ಗೆಲ್ಲಿಸಿ ದ್ರೌಪದಿಯ ಪ್ರತಿಜ್ಞೆಯನ್ನು ಪೂರ್ತಿ ಮಾಡಿದ್ದು ಇದೇ ಕೃಷ್ಣ! ಕೃಷ್ಣನು ತಾನು ಮುಂದೆ ಮಾಡುವುದನ್ನು ಮೊದಲು ಹೇಳುವುದಿಲ್ಲ. ಎಲ್ಲ ಘಟನೆಯು ಅವನು ಯೋಜನೆ ಮಾಡಿದ ಪ್ರಕಾರ ನಡೆಯುತ್ತದೆ. ಕುರುಕ್ಷೇತ್ರದ ಯುದ್ಧವೂ ಅದಕ್ಕೆ ಸಾಕ್ಷಿ!

ಮಹಾಭಾರತದಲ್ಲಿ ಕೃಷ್ಣ ಮತ್ತು ಕೃಷ್ಣಾ ಅವರ ಸುಮಧುರ ಸೋದರ ಸಂಬಂಧವೇ ಮಹಾಭಾರತದ ಪಂಚಾಂಗ ಎಂದು ನನಗೆ ಅನ್ನಿಸುತ್ತದೆ. ಆ ಮಧುರ ಸಂಬಂಧಕ್ಕೆ ಇಂತಹ ನೂರಾರು ಸಾಕ್ಷಿಗಳು ದೊರೆಯುತ್ತವೆ. ಇಡೀ ಮಹಾಭಾರತವು ಈ ಕೃಷ್ಣ ಮತ್ತು ಕೃಷ್ಣಾ ಅವರ ಪ್ರೀತಿಯ ಅನುಭೂತಿಯಲ್ಲಿ ಮಿಂದೆದ್ದ ಹಾಗೆ ನನಗೆ ಅನ್ನಿಸುತ್ತದೆ.

Exit mobile version