Site icon Vistara News

ರಾಜ ಮಾರ್ಗ ಅಂಕಣ : ಜೈಹೋ ಇಸ್ರೋ; 4 ವರ್ಷದ ಹಿಂದೆ ಸುರಿದ ಕಣ್ಣೀರಿಗೆ ಈಗ ಸಿಕ್ಕಿದೆ ನಿಜವಾದ ಸಾಂತ್ವನ!

ISRO Success

ಆಗಸ್ಟ್ 23, 2023ರ ಸಂಜೆ 6.04 ನಿಮಿಷ ಆಗುವಾಗ ಇಸ್ರೋದ ವಿಜ್ಞಾನಿಗಳು (ISRO Scientists) ಹೆರಿಗೆ ನೋವಿನ ಸಂಕಟಪಡುತ್ತಾ ಇರುವಾಗ ಇಡೀ ಭಾರತದ 140 ಕೋಟಿ ಜನರು ಬೆಂಕಿಯ ಮೇಲೆ ಕೂತ ಹಾಗೆ ಚಡಪಡಿಸುತ್ತಿದ್ದರು. ಆದರೆ ಕೆಲವೇ ಸೆಕೆಂಡುಗಳಲ್ಲಿ ಇಡೀ ಚಿತ್ರಣವೇ ಬದಲಾಗಿ ಹೋಯ್ತು! ಚಂದ್ರಯಾನ 3 (Chandrayaana 3) ಯಶಸ್ವೀ ಆಗಿದೆ ಎಂದು ಇಸ್ರೋದ ಸಭಾಂಗಣದ ದೊಡ್ಡ ಪರದೆಯಲ್ಲಿ ಇಸ್ರೋ ಅಧ್ಯಕ್ಷರು ಘೋಷಣೆ ಮಾಡಿದಾಗ ಇಸ್ರೋ ವಿಜ್ಞಾನಿಗಳು ಕುಣಿದು ಕುಪ್ಪಳಿಸಿದರೆ ಇಡೀ ಭಾರತವು ಸಂಭ್ರಮದ ಶಿಖರವನ್ನು ಮುಟ್ಟಿತು. ಭಾರತವು ವಿಶ್ವವಿಕ್ರಮ ಮಾಡಿ ಇತಿಹಾಸವನ್ನು (ರಾಜ ಮಾರ್ಗ ಅಂಕಣ) ಬರೆಯಿತು.

ಇಸ್ರೋದ ಈಗಿನ ಅಧ್ಯಕ್ಷ ಎಸ್ ಸೋಮನಾಥ್ (ISRO President S Somanath) ‘ಚಂದ್ರಯಾನ 3 ಯಶಸ್ವೀ ಆಗಿದೆ’ ಎನ್ನುವಾಗ ಭಾವಸ್ಪರ್ಶದ ತುದಿಯಲ್ಲಿ ಇದ್ದರು. ಪ್ರಾಜೆಕ್ಟ್ ಡೈರೆಕ್ಟರ್ ಮುತ್ತುವೇಲ್ ಪುಟ್ಟ ಮಗುವಿನ ಹಾಗೆ ಕಣ್ಣೀರು ಸುರಿಸಿದರು. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್‌ನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ‘ಇದು ಭಾರತದ ವಿಜಯ’ ಎಂದರು. ಮುಂದೆ ನಮ್ಮ ಗುರಿ ಸೂರ್ಯ ಶಿಕಾರಿ ಮತ್ತು ಶುಕ್ರ ಗ್ರಹ ಯಾನ ಎಂದು ಹೇಳಿದಾಗ ಅವರ ಕಣ್ಣಲ್ಲಿ ಭರವಸೆ ಎದ್ದು ಕಾಣುತ್ತಿತ್ತು.

ಆ ಕೊನೆಯ 15 ನಿಮಿಷಗಳು….

ಅದನ್ನು ಬಾಹ್ಯಾಕಾಶ ವಿಜ್ಞಾನದ ಭಾಷೆಯಲ್ಲಿ ʻ15 ಮಿನಿಟ್ಸ್ ಆಫ್ ಟೆರರ್’ (15 Minutes of terror) ಎಂದು ಕರೆಯುತ್ತಾರೆ. ಪ್ರತಿ ಗಂಟೆಗೆ 6000 ಕಿಲೋಮೀಟರ್‌ ವೇಗದಲ್ಲಿ ಸಾಗುತ್ತಿದ್ದ ವಿಕ್ರಮ್ ಲ್ಯಾಂಡರ್ ತನ್ನ ವೇಗವನ್ನು ಇಳಿಸುತ್ತ ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತ ನಿಲ್ದಾಣವನ್ನು ಹುಡುಕುತ್ತ ಸೇಫ್ ಆಗಿ ಲ್ಯಾಂಡ್ ಆಗುವುದು ಇದೆಯಲ್ಲ ಅದು ತುಂಬಾನೇ ಚಾಲೆಂಜಿಂಗ್ ಟಾಸ್ಕ್ ಆಗಿತ್ತು. ನಾಲ್ಕು ವರ್ಷಗಳ ಹಿಂದೆ ಚಂದ್ರಯಾನ 2 ವಿಫಲ ಆದದ್ದು ಇದೇ ಹಂತದಲ್ಲಿ. ಆಗ ಇಸ್ರೋ ಅಧ್ಯಕ್ಷ ಕೆ ಶಿವನ್ ಕಣ್ಣೀರು ಹಾಕಿದ್ದು, ಪ್ರಧಾನಿ ಮೋದಿ ಅವರು ತಬ್ಬಿಕೊಂಡು ಸಾಂತ್ವನ ಹೇಳಿದ ದೃಶ್ಯ ಇನ್ನೂ ಕಣ್ಣ ಮುಂದೆ ಇದೆ.

India on Moon

ಆ ನೋವಿಗೆ ಇಂದು ಉಪಶಮನ ದೊರೆತಿದೆ. ಇಸ್ರೋ ವಿಜ್ಞಾನಿಗಳು ತಮ್ಮ ತಪ್ಪುಗಳಿಂದ ಪಾಠ ಕಲಿತದ್ದು ಭಾರತದ ಈ ಐತಿಹಾಸಿಕ ಸಾಧನೆಗೆ ಕಾರಣ ಆಗಿದೆ. ಇದರ ಯಶಸ್ಸು ನಾಲ್ಕು ವರ್ಷಗಳ ಕಾಲ ಹಗಲು ರಾತ್ರಿ ದುಡಿದ ಇಸ್ರೋದ ವಿಜ್ಞಾನಿಗಳಿಗೆ ಸಲ್ಲಬೇಕು. ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವೀ ಆಗಿ ಲ್ಯಾಂಡ್ ಆದದ್ದು ಅದರ ಒಳಗಿನಿಂದ ಪ್ರಗ್ಯಾನ್ ರೋವರ್ ಹೊರಗೆ ಬಂದು ಒಂದು ಸುತ್ತು ತಿರುಗಿ ನಿಂತದ್ದು ಅಲ್ಲಿಂದ ಚಂದ್ರನ ಮೇಲ್ಮೈಯ ಫೋಟೋಗಳನ್ನು ಇಸ್ರೋಗೆ ಕಳುಹಿಸಲು ಶುರು ಮಾಡಿದ್ದು ಎಲ್ಲವೂ ಭಾರತೀಯರು ಎದೆ ಉಬ್ಬಿಸಿ ನಡೆಯಲು ಕಾರಣ ಆಗಿವೆ!

ಚಂದ್ರಯಾನವನ್ನು ಮಾಡಿದ ಜಗತ್ತಿನ ಕೇವಲ ನಾಲ್ಕನೇ ರಾಷ್ಟ್ರ ಭಾರತ ಎನ್ನುವುದು ಒಂದು ಸಾಧನೆ ಆದರೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಮೊದಲ ರಾಷ್ಟ್ರ ಭಾರತ ಅನ್ನುವುದು ಇತಿಹಾಸ. ಇದನ್ನು ಮುಂದೆ ಯಾರೂ ಮುರಿಯಲು ಸಾಧ್ಯವೇ ಇಲ್ಲ!

ಇಸ್ರೋದ ಮಹಾನ್ ಸಾಧನೆ

1969 ಆಗಸ್ಟ್ 15ರಂದು ಆರಂಭವಾದ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈವರೆಗೆ 668 ಬಾಹ್ಯಾಕಾಶ ಮಿಷನ್ ಪೂರ್ತಿ ಮಾಡಿದೆ. 1975ರಲ್ಲಿ ಭಾರತದ ಮೊಟ್ಟಮೊದಲ ಉಪಗ್ರಹ ಆರ್ಯಭಟ ಹಾರಿಸಿದ್ದು, 1984ರಲ್ಲಿ ರಾಕೇಶ್ ಶರ್ಮಾ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದು ಅವರು ಏಳು ದಿನ ಸುತ್ತಾಡಿ ಹಿಂದೆ ಬಂದದ್ದು, PSLV ಎಂಬ ಹೆಸರಿನ ಒಂದೇ ರಾಕೆಟ್ ಮೇಲೆ 104 ಉಪಗ್ರಹಗಳನ್ನು ಜೊತೆಯಾಗಿ ಕಟ್ಟಿ ಉಡ್ಡಯನ ಮಾಡಿದ್ದು, 2008ರಲ್ಲಿ ಚಂದ್ರಯಾನ 1 ಮೂಲಕ ಚಂದ್ರನ ಮೇಲೆ ನೀರಿದೆ ಎಂದು ಸಾಬೀತು ಮಾಡಿದ್ದು, 2013ರಲ್ಲಿ ಮಂಗಳ ಯಾನ ಕೈಗೊಂಡದ್ದು…. ಹೀಗೆ ಸಾಗುತ್ತದೆ ಇಸ್ರೋದ ಮಹಾನ್ ಸಾಧನೆಗಳ ಪಟ್ಟಿ. ಇದೀಗ ಆ ಸಾಧನೆಗಳಿಗೆ ಶಿಖರ ಪ್ರಾಯವಾಗಿ ಭಾರತವು ಚಂದ್ರಯಾನ 3 ಯಶಸ್ವೀ ಮಾಡಿ ಕೊಟ್ಟಿದೆ.

ವಿಕ್ರಮ್ ಸಾರಾಭಾಯಿ ಕನಸು ನನಸು

ಇಸ್ರೋ ಸ್ಥಾಪನೆಗೆ ಕಾರಣರಾದ, ಅದನ್ನು ಹಲವು ದಶಕದ ಕಾಲ ಮುನ್ನಡೆಸಿದ ಮತ್ತು ಅಬ್ದುಲ್ ಕಲಾಮ್, ಯು ಆರ್ ರಾವ್ ಮೊದಲಾದ ಮಹಾನ್ ವಿಜ್ಞಾನಿಗಳನ್ನು ಬೆಳೆಸಿದ ಪ್ರೊಫೆಸರ್ ವಿಕ್ರಮ ಸಾರಾಭಾಯಿ ಅವರ ವಿಷನ್ ಇಂದು ಆಲ್ಮೋಸ್ಟ್ ಪೂರ್ತಿ ಆಗಿದೆ. ಅಂತಹ ಮಹಾನ್ ವಿಜ್ಞಾನಿಗೆ ಇನ್ನೂ ಭಾರತರತ್ನ ಪ್ರಶಸ್ತಿ ದೊರೆತಿಲ್ಲ ಎಂಬ ಕೊರಗು ಪ್ರತಿಯೊಬ್ಬ ಭಾರತೀಯರಿಗೂ ಇದೆ. ಆ ಕೊರಗನ್ನು ನೀಗಿಸಲು ಮೋದಿ ಸರಕಾರಕ್ಕೆ ಒಂದು ಸುವರ್ಣ ಅವಕಾಶ ಇದೀಗ ಪ್ರಾಪ್ತವಾಗಿದೆ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಅಬ್ಬಾ ಎಂಥಾ ಹೋರಾಟವಿದು?; ನಾಡಿಯಾ ಮುರಾದ್‌ ಎಂಬ ಹೆಣ್ಣಿನ ಕಣ್ಣು ತೋಯಿಸುವ ಕಥೆ

ಚಂದ್ರಯಾನ 3 ಬಗ್ಗೆ ಒಂದಿಷ್ಟು ಪೂರಕ ಮಾಹಿತಿ

ವಿಕ್ರಮ್ ಲ್ಯಾಂಡರ್ ತನ್ನ ಒಳಗೆ ಪ್ರಗ್ಯಾನ್ ರೋವರ್ ಹೊತ್ತುಕೊಂಡು ಕ್ರಮಿಸಿದ್ದು 41 ದಿನಗಳ ಕಾಲ. ಕ್ರಮಿಸಿದ ದೂರ 3,84,000 ಕಿಲೋಮೀಟರ್. ಅದರ ಒಟ್ಟು ತೂಕ 3900 ಕಿಲೋಗ್ರಾಂ. ತಗುಲಿದ ಖರ್ಚು 615 ಕೋಟಿ!

ಈ ದುಡ್ಡು ವ್ಯರ್ಥ ಎಂದು ಯಾರೂ ಭಾವಿಸುವ ಅಗತ್ಯ ಇಲ್ಲ. ಯಾಕೆಂದರೆ ಮುಂದಿನ 14 ದಿನಗಳ ಕಾಲ ಪ್ರಗ್ಯಾನ್ ರೋವರ್ ತನ್ನ ಶಕ್ತಿಶಾಲಿ ಕ್ಯಾಮೆರಾದ ಮೂಲಕ ಚಂದ್ರನ ಮೇಲ್ಮೈ ಮೇಲಿನ ಫೋಟೋಗಳನ್ನು ಕಳುಹಿಸುತ್ತದೆ. ಅಲ್ಲಿನ ಮಣ್ಣನ್ನು ಅಗೆದು ಅದನ್ನು ಅಲ್ಲಿಯೇ ಪರೀಕ್ಷೆ ಮಾಡಿ ಖನಿಜ, ಲವಣ, ನೀರಿನ ಹನಿಗಳು, ವಿಶೇಷವಾದ ಲೋಹಗಳು, ಬಹು ಬೆಲೆ ಬಾಳುವ ಹೀಲಿಯಂ 3 ಮೊದಲಾವುಗಳ ದೊರಕುವಿಕೆಯ ಬಗ್ಗೆ ಸಂಶೋಧನೆ ಮಾಡುತ್ತದೆ. ಈ ಮಾಹಿತಿಗಳು ತುಂಬಾ ಬೆಲೆ ಬಾಳುತ್ತಿದ್ದು ಭಾರತದ ಮುಂದಿನ ವ್ಯೋಮ ಸಂಶೋಧನೆಗೆ ಮಾರ್ಗದರ್ಶಿ ಆಗಲಿವೆ.

ಅದಕ್ಕಿಂತ ಹೆಚ್ಚಾಗಿ ಚಂದ್ರನ ನೆಲದ ಮೇಲೆ ಎದೆ ಉಬ್ಬಿಸಿ ನಿಂತ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಗಳು ಭಾರತದ ಲಾಂಛನಗಳನ್ನು ಹೊಂದಿದ್ದು ಭಾರತದ ಸ್ವಾಭಿಮಾನವನ್ನು ಎತ್ತಿ ಹಿಡಿಯಲಿವೆ.

Exit mobile version