Raja Marga Column : 1990ರವರೆಗೂ ನಾವು ಈ ಕಾರ್ಪೊರೇಟ್ ಎಂಬ ಶಬ್ದವನ್ನು ಕೇಳಿರಲಿಲ್ಲ! ಆದರೆ ಯಾವಾಗ ಭಾರತವು ಗ್ಯಾಟ್ ಒಪ್ಪಂದಕ್ಕೆ (GATT Agreement) ಸಹಿ ಮಾಡಿತೋ, ಭಾರತಕ್ಕೆ ಯಾವಾಗ ಅಂತಾರಾಷ್ಟ್ರೀಯ ಕಂಪೆನಿಗಳು (International Companies) ದಾಂಗುಡಿ ಇಟ್ಟು ಬಂದವೋ ಅಲ್ಲಿಗೆ ಭಾರತೀಯ ಉದ್ಯಮ ರಂಗದ (Indian Industry) ಚಿತ್ರಣವೇ ಬದಲಾಯಿತು! ಅದರ ಜೊತೆಗೆ ಇಂಟರ್ನೆಟ್ ಜಗತ್ತನ್ನು ಆಳಲು ಆರಂಭ ಮಾಡಿತೋ ಅಲ್ಲಿಗೆ ಎಲ್ಲವೂ ವೇಗವನ್ನು ಪಡೆದವು. ಸ್ಪರ್ಧೆಯು ಹೆಚ್ಚಾಯಿತು. ವಿದೇಶೀ ಕಂಪನಿಗಳ ಜೊತೆಗೆ ದೇಶೀಯ ಕಂಪನಿಗಳು ಸ್ಪರ್ಧೆಗೆ ಇಳಿಯಲೇ ಬೇಕಾಯಿತು. ಅಲ್ಲಿಗೆ ಮಾರುಕಟ್ಟೆ ಆಧಾರಿತ ಉದ್ಯಮ ಜಗತ್ತನ್ನು ಆಳಲು ಆರಂಭ ಆಯಿತು. ಸೇವೆ ಆಧಾರಿತ ಉದ್ಯಮ ಹಿಂದೆ ಬಿತ್ತು!
ಈಗ ಕಾರ್ಪೊರೇಟ್ ಕಂಪನಿಗಳು (Corporate Companies) ಅಂದರೆ ಬಂಡವಾಳ ಹೂಡುವ ಕಂಪನಿಗಳು ಎಂದಾಗಿದೆ. ಹೂಡಿದ ಬಂಡವಾಳವನ್ನು ಎಷ್ಟು ಬೇಗ ಹಿಂದೆ ಪಡೆಯಲು ಸಾಧ್ಯವಿದೆ ಎಂದು ಯೋಚನೆ ಮಾಡುವುದಷ್ಟೇ ಅವರ ಆದ್ಯತೆ!
ಇದನ್ನೂ ಓದಿ: Raja Marga Column : ನಿಮ್ಮ ಮಗು ಮಗುವಾಗಿರಲಿ, ರಿಯಾಲಿಟಿ ಮಾರ್ಕೆಟ್ ಸರಕು ಆಗದಿರಲಿ!
ಕಾರ್ಪೊರೇಟ್ ಎಂದರೆ ವೇಗವೇ ಪ್ರಧಾನ!
ಕಾರ್ಪೊರೇಟ್ ಬೇಡಿಕೆಗಳು ಇಂದು ಮಾರುಕಟ್ಟೆ ಆಧಾರಿತ ಆಗಿವೆ. ಮಾರುಕಟ್ಟೆಗಳು ಗ್ರಾಹಕರ ಅಭಿರುಚಿಯನ್ನು ಪ್ರತಿಫಲಿಸುತ್ತವೆ. ಗ್ರಾಹಕರ ಅಭಿರುಚಿಗಳು ಇಂದು ಅತ್ಯಂತ ವೇಗವಾಗಿ ಬದಲಾಗುತ್ತಿವೆ. ಅದರಿಂದಾಗಿ ಉದ್ಯಮಗಳ ಟ್ರೆಂಡ್ಸ್ ಅತ್ಯಂತ ವೇಗವಾಗಿ ಬದಲಾಗುತ್ತಿವೆ. ಅದಕ್ಕೆ ಪೂರಕವಾಗಿ ಉದ್ಯೋಗಿಗಳು ಇಂದು ಅತಿಯಾದ ವೇಗಕ್ಕೆ ಸ್ಪಂದಿಸಬೇಕಾದ ಅನಿವಾರ್ಯತೆ ಇದೆ. ವೇಗದ ಇನ್ನೊಂದು ಮುಖವೇ ಟಾರ್ಗೆಟ್ ಮತ್ತು ಟಾರ್ಗೆಟ್! ಎಲ್ಲವೂ ಕಾಲನಿರ್ಧಾರಿತ ಟಾರ್ಗೆಟ್‌ಗಳು! ಇದರಿಂದ ಕಾರ್ಪೊರೇಟ್ ಕಂಪನಿಗಳ ಉದ್ಯೋಗಿಗಳು ತೀವ್ರವಾದ ಒತ್ತಡವನ್ನು ಎದುರಿಸುತ್ತಿದ್ದಾರೆ. ಪರಿಣಾಮವಾಗಿ ಉದ್ಯೋಗಿಗಳಲ್ಲಿ ಡಿಪ್ರೆಶನ್, ಆತಂಕ ಹೆಚ್ಚಾಗುತ್ತಿದೆ.
ಸೇವಾಭದ್ರತೆ ಯಾರಿಗೂ ಇಲ್ಲ!
ಕಾರ್ಪೊರೇಟ್ ಸಂಸ್ಥೆಗಳ ಇತ್ತೀಚಿನ ಟ್ರೆಂಡ್ ಎಂದರೆ ಖರ್ಚು ಕಡಿತದ ಹೆಸರಲ್ಲಿ ಉದ್ಯೋಗಿಗಳಿಗೆ ದೊಡ್ಡ ಸಂಖ್ಯೆಯಲ್ಲಿ ಗೇಟ್ ಪಾಸ್ ಕೊಡುತ್ತಿರುವುದು! ಕೊರೊನಾ ನಂತರದ ಅವಧಿಯಲ್ಲಿ ಇದು ಇನ್ನಷ್ಟು ಹೆಚ್ಚಾಯಿತು. ಹಲವು ಕಂಪನಿಗಳು ವೇತನ ಕಡಿತಕ್ಕೆ ಮುಂದಾದವು! ‘ಬೇಕಾದರೆ ದುಡಿ, ಇಲ್ಲಾಂದ್ರೆ ಎದ್ದು ಹೋಗು’ ಎನ್ನುವ ಮರ್ಜಿಗೆ ಕಂಪನಿಗಳು ಇಳಿದಿವೆ. ಯಾರಿಗೂ ಸೇವಾಭದ್ರತೆ ಇಲ್ಲ! ಹಿಂದೆ ಟಾಟಾ, ಮಹೀಂದ್ರ, ಇನ್ಫೋಸಿಸ್, ಬಜಾಜ್ ಮೊದಲಾದ ಭಾರತೀಯ ಕಂಪೆನಿಗಳಲ್ಲಿ ದಶಕಗಳ ಕಾಲ ಕೆಲಸ ಮಾಡಿದ ಉದ್ಯೋಗಿಗಳು ಬಹಳ ಮಂದಿ ದೊರೆಯುತ್ತಿದ್ದರು! ಆ ಕಂಪೆನಿಗಳು ತನ್ನ ಉದ್ಯೋಗಿಗಳನ್ನು ತುಂಬಾ ಪ್ರೀತಿಯಿಂದ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದವು. ಆದರೆ ಇಂದು ಯುವ ಉದ್ಯೋಗಿಗಳು ತಾವು ದುಡಿಯುತ್ತಿರುವ ಕಂಪನಿಯ ಹೆಸರು ಹೇಳಲು ಹಿಂಜರಿಯುತ್ತಿದ್ದಾರೆ! ಹೆಚ್ಚಿನ ಕಾರ್ಪೊರೇಟ್ ಕಂಪನಿಗಳ ಉದ್ಯೋಗಿಗಳು ನೆಮ್ಮದಿಯಿಂದ ಇಲ್ಲ ಅನ್ನುವುದು ನೂರಕ್ಕೆ ನೂರು ಸತ್ಯ!
ಕಂಪನಿಯಿಂದ ಕಂಪನಿಗೆ ಹಾರುವ ಯಂಗ್ ಇಂಡಿಯಾ!
ಹಿಂದಿನ ಉದ್ಯೋಗಿಗಳಲ್ಲಿ ಇರುತ್ತಿದ್ದ ನಿಷ್ಠೆಯನ್ನು ಇಂದಿನ ಯುವ ಉದ್ಯೋಗಿಗಳಲ್ಲಿ ಹುಡುಕುವುದು ಸಾಧ್ಯವೇ ಇಲ್ಲ! ಆಟಿಟ್ಯುಡ್ ಹೆಸರಿನಲ್ಲಿ ಕಂಪನಿಗಳು ತನ್ನ ಉದ್ಯೋಗಿಗಳ ಮೇಲೆ ಗದಾಪ್ರಹಾರಕ್ಕೆ ನಿಂತಿರುವಾಗ ಯುವ ಉದ್ಯೋಗಿಗಳು ತಮ್ಮ ಡ್ರೆಸ್ ಬದಲಾವಣೆ ಮಾಡಿಕೊಂಡ ಹಾಗೆ ಉದ್ಯೋಗಗಳನ್ನು ಬದಲಾವಣೆ ಮಾಡಲು ಹಿಂದೆ ಮುಂದೆ ನೋಡುತ್ತಿಲ್ಲ! ಒಂದೇ ಕಂಪನಿಯ ಜೊತೆ ತಮ್ಮನ್ನು ದೀರ್ಘ ಕಾಲದಲ್ಲಿ ಗುರುತಿಸಿಕೊಳ್ಳಲು ಅವರಿಗೆ ಸಾಧ್ಯ ಆಗುತ್ತಿಲ್ಲ. ಒಂದೇ ಕಂಪನಿಯ ಲ್ಯಾಪ್‌ಟಾಪ್ ಮುಂದೆ ಅವರು ದೀರ್ಘ ಕಾಲ ಕುಳಿತುಕೊಳ್ಳಲು ಅವರು ಸಿದ್ಧರಿಲ್ಲ. ಇದರಿಂದಾಗಿ ಮೌಲ್ಯಗಳು ಸಾಯುತ್ತಿವೆ. ಮಾನವೀಯ ಸಂಬಂಧಗಳು ಮೂಲೆಗುಂಪಾಗುತ್ತಿವೆ. ಪರಿಣಾಮವಾಗಿ ಕಾರ್ಪೊರೇಟ್ ಜಗತ್ತು ಇಂದು ತಲ್ಲಣಗಳ ನಡುವೆ ಇದೆ.
ಉದ್ಯೋಗಿಗಳಿಗೆ ಖಾಸಗಿ ಬದುಕೇ ಇಲ್ಲ!
ಅದರ ಜೊತೆಗೆ ಉದ್ಯೋಗಿಗಳ ಖಾಸಗಿ ಬದುಕು ಮೂರಾಬಟ್ಟೆ ಆಗುತ್ತಾ ಇದೆ. ಮದುವೆಗಳ ಸ್ಥಳದಲ್ಲಿ ಲಿವಿಂಗ್ ಇನ್ ಸಂಬಂಧಗಳು ಹೆಚ್ಚುತ್ತಿವೆ. ಕೆಲಸದ ಒತ್ತಡವನ್ನು ಕಳೆಯಲು ವಾರಾಂತ್ಯದ ಗುಂಡು ಪಾರ್ಟಿಗಳು ಹೆಚ್ಚುತ್ತಿವೆ!
ರಿಸಾರ್ಟ್ಗಳು, ಹೋಂ ಸ್ಟೇಗಳು ತುಂಬಿ ತುಳುಕುತ್ತಿವೆ! ಐಟಿ ಕಂಪನಿಗಳ ಉದ್ಯೋಗಿಗಳು ಮದುವೆಗಳನ್ನು ಮುಂದೂಡುತ್ತಿದ್ದಾರೆ! ಒಬ್ಬಂಟಿತನ ಅವರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ದೊಡ್ಡ ಸಂಬಳದ ಕಂಪನಿಗಳ ಹಿಂದೆ ಹೋದವರು ಈಗ ಹಿಂದೆ ಬರಲು ಆಗದೇ ಉಸಿರು ಕಟ್ಟುತ್ತಿದ್ದಾರೆ.
ಮುಂದೆ ಈ ಅಪಸವ್ಯಗಳು ಎಲ್ಲಿಗೆ ಹೋಗಿ ಮುಟ್ಟಬಹುದು ಎಂದು ಊಹೆ ಮಾಡುವುದೂ ಕಷ್ಟ!