Raja Marga Column : ‘ನಗುವು ಸಹಜದ ಧರ್ಮ’ ಎಂದರು ಡಿವಿಜಿ. ನಗುವೇ ದಿವ್ಯೌಷಧ (Laughter is the Best Medicine) ಎನ್ನುತ್ತಾರೆ ಮನಶ್ಶಾಸ್ತ್ರಜ್ಞರು! ನಗುವು ನಮ್ಮ ಹಲವು ಮಾನಸಿಕ ಒತ್ತಡಗಳಿಗೆ ಅದ್ಭುತವಾದ ಚಿಕಿತ್ಸೆ (Treatment for stress) ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಮಕ್ಕಳು ದಿನಕ್ಕೆ 300-400 ಬಾರಿ ನಗುತ್ತಾರೆ. ಆದರೆ ನಾವು ಬೆಳೆಯುತ್ತಾ ಹೋದಂತೆ ನಗುವುದಕ್ಕೆ ಕಾರಣ ಹುಡುಕಲು ಆರಂಭ ಮಾಡುತ್ತೇವೆ ಮತ್ತು ನಗುವುದನ್ನು ಕಡಿಮೆ ಮಾಡುತ್ತಾ ಹೋಗುತ್ತೇವೆ. ಬಹಿರಂಗವಾಗಿ ನಗಲು ಕೂಡ ಹಿಂಜರಿಯುತ್ತೇವೆ. ಇದರಿಂದಾಗಿ ನಾವು ಹೆಚ್ಚು ಪ್ರಬುದ್ಧರು ದಿನಕ್ಕೆ 10-15 ಬಾರಿ ಮಾತ್ರ ನಗುತ್ತೇವೆ. ನಗುವಾಗಲೂ ಮುಗುಳ್ನಗೆ, ಕಿರುನಗೆ, ಹೂನಗೆ ನಗುತ್ತೇವೆಯೇ ಹೊರತು ಇಡೀ ದೇಹವು ಅಲ್ಲಾಡುವ, ಶಬ್ದ ಮಾಡುವ ಗಟ್ಟಿ ನಗುವನ್ನು ನಗುವುದೇ ಇಲ್ಲ! ಆದರೆ ವೈದ್ಯರು ಆ ಗಟ್ಟಿ ನಗುವೇ ಹೆಚ್ಚು ಆರೋಗ್ಯಪೂರ್ಣ ಎಂದು ಷರಾ ಬರೆದು ಬಿಟ್ಟಿದ್ದಾರೆ. ಅಂದರೆ ದಿನಕ್ಕೆ ಸ್ವಲ್ಪ ಹೊತ್ತು ಕೇಕೆ ಹಾಕಿ ನಗುವುದನ್ನು ಅಭ್ಯಾಸ ಮಾಡಿಕೊಂಡರೆ ನಾವು ದೀರ್ಘ ಅವಧಿಗೆ ಆರೋಗ್ಯಪೂರ್ಣ ಆಗಿ ಬದುಕಬಹುದು.
ನಗು ಒಂದು ಅದ್ಭುತ ಚಿಕಿತ್ಸಾ ಪದ್ಧತಿ!
ಆಧುನಿಕ ಬದುಕಿನಲ್ಲಿ ಒತ್ತಡದ ನಡುವೆ ಬದುಕುತ್ತಿರುವ ನಾವು ನಗುವುದನ್ನು ಕಡಿಮೆ ಮಾಡಿರುವುದರಿಂದ ಇನ್ನೂ ಹೆಚ್ಚು ಒತ್ತಡಕ್ಕೆ ಒಳಗಾಗುತ್ತೇವೆ. ಹಾಸ್ಯ ಪ್ರಜ್ಞೆ ಇದ್ದವರು ದೊಡ್ಡ ದೊಡ್ಡ ಸಮಸ್ಯೆಗಳನ್ನು ಲೀಲಾಜಾಲವಾಗಿ ಗೆಲ್ಲುತ್ತಾರೆ ಎನ್ನುತ್ತದೆ ಆಧುನಿಕ ವಿಜ್ಞಾನ! ಆದ್ದರಿಂದ ನಗುವನ್ನು ಮನಸಿನಲ್ಲಿ ಇಟ್ಟುಕೊಳ್ಳದೆ ಗಟ್ಟಿಯಾಗಿ ನಗುವುದರಿಂದ ಈ ಕೆಳಗಿನ ಲಾಭಗಳು ಇವೆ ಎಂದರೆ ಖಂಡಿತ ಸುಮ್ಮನೆ ನಗುತ್ತಾ ಇರಬೇಡಿ. ಒಮ್ಮೆ ನಕ್ಕು ಹಗುರಾಗಿ ಮತ್ತು ಅದನ್ನು ನಿರಂತರ ಅಭ್ಯಾಸ ಮಾಡಿಕೊಳ್ಳಿ.
ಗಟ್ಟಿಯಾಗಿ ನಗುವುದರಿಂದ ಆಗುವ ಲಾಭಗಳು
1. ನಮ್ಮಲ್ಲಿ ಒತ್ತಡ ಉಂಟುಮಾಡುವ ಸ್ಟ್ರೆಸ್ ಹಾರ್ಮೋನ್‌ಗಳ ಬೆಳವಣಿಗೆಯನ್ನು ನಗು ನಿಯಂತ್ರಣ ಮಾಡುತ್ತದೆ!
2. ಆ ಸ್ಟ್ರೆಸ್ ಹಾರ್ಮೋನ್‌ಗಳು ರಕ್ತನಾಳಗಳ ಮೂಲಕ ಹರಿದು ರಕ್ತದ ವೇಗ ಹೆಚ್ಚಾಗುವುದನ್ನು ನಗು ಸಹಜವಾಗಿ ತಡೆಯುತ್ತದೆ.
3. ನಗುವುದರಿಂದ ನಮ್ಮ ರಕ್ತ ನಾಳಗಳು ಹಿಗ್ಗುತ್ತವೆ ಮತ್ತು ರಕ್ತವು ಇಡೀ ದೇಹದ ಎಲ್ಲ ಭಾಗಗಳಿಗೆ ತಲುಪುವುದರ ಮೂಲಕ ಚೈತನ್ಯ ಶಕ್ತಿಯು ಉಂಟಾಗುತ್ತದೆ.
4. ನಮ್ಮ ದೇಹದಲ್ಲಿ ಒತ್ತಡವನ್ನು ಉಂಟುಮಾಡುವ ರಸದೂತಗಳಾದ ಎಪಿನೆಫ್ರಿನ್ ಮತ್ತು ಕಾರ್ಟಿಸೋಲ್‌ಗಳ ಉತ್ಪಾದನೆಯನ್ನು ನಗುವು ಕಡಿಮೆ ಮಾಡುತ್ತದೆ.
5. ನಗುವುದರಿಂದ ಮಾನಸಿಕ ಆರೋಗ್ಯವು ವೃದ್ಧಿಯಾಗುತ್ತದೆ ಮತ್ತು ಖಿನ್ನತೆಯು ಖಂಡಿತ ದೂರವಾಗುತ್ತದೆ.
6. ಶರೀರದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುವ ಮೂಲಕ ಉತ್ಸಾಹವನ್ನು ಹೆಚ್ಚುಮಾಡುತ್ತದೆ.
7. ನಗುವು ನಿಮ್ಮ ಕೆಲಸ ಮಾಡುವ ಕ್ಷಮತೆಯನ್ನು ಹೆಚ್ಚು ಮಾಡುತ್ತದೆ.
8. ನಗು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
9. ನಗುವುದರಿಂದ ನಮ್ಮ ಮುಖದ ನರಗಳಿಗೆ ಲಘುವಾದ ವ್ಯಾಯಾಮ ದೊರೆಯುವ ಕಾರಣ ನಮ್ಮ ಮುಖದ ಸೌಂದರ್ಯವು ಹೆಚ್ಚುತ್ತದೆ.
10. ನಗುವುದರಿಂದ ನಮ್ಮ ವಪೆ, ಹೊಟ್ಟೆ, ಶ್ವಾಸಕೋಶ, ಭುಜ, ಬೆನ್ನಿನ ಮಾಂಸಖಂಡಗಳಿಗೆ ಉತ್ತಮವಾದ ವ್ಯಾಯಾಮವು ಲಭಿಸುತ್ತದೆ.
11. ನಗು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಫೇಸ್ ವ್ಯಾಲ್ಯೂವನ್ನು ಹೆಚ್ಚು ಮಾಡುತ್ತದೆ.
12. ಅಸ್ತಮಾ ಮತ್ತು ಉಸಿರಾಟದ ತೊಂದರೆಗಳಿಗೆ ನಗು ಒಂದು ಅದ್ಭುತ ಚಿಕಿತ್ಸೆ ಎಂದು ವೈದ್ಯರೇ ಹೇಳುತ್ತಾರೆ.
13. ಹತ್ತು ನಿಮಿಷಗಳ ಗಟ್ಟಿಯಾದ ನಗುವು ನಮ್ಮ ರಕ್ತದ ಒತ್ತಡವನ್ನು 10-20 ಮಿಲಿಮೀಟರನಷ್ಟು ಇಳಿಸುತ್ತದೆ!
14. ನಗುವುದರ ಮೂಲಕ ನಮ್ಮ ದೇಹದಲ್ಲಿ ಹಂತ ಹಂತವಾಗಿ ಸಕ್ಕರೆಯ ಮಟ್ಟವು ನಿಯಂತ್ರಣಕ್ಕೆ ಬರುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ!
15. ನಿದ್ರಾಹೀನತೆಗೆ ನಗು ಒಂದು ಉತ್ತಮವಾದ ಚಿಕಿತ್ಸಾ ಪದ್ಧತಿ ಎಂದು ಸಾಬೀತಾಗಿದೆ.
16. ನಗು ನಿಮ್ಮ ಜೊತೆ ಇರುವ ವ್ಯಕ್ತಿಗಳ ಜೊತೆಗೆ ನಿಮ್ಮ ಸಂಬಂಧವನ್ನು ಉತ್ತಮ ಪಡಿಸುವುದರ ಜೊತೆಗೆ ನಿಮ್ಮ ಭಾವನಾತ್ಮಕ ಸಂಬಂಧವನ್ನು ಖಾತರಿಪಡಿಸುತ್ತದೆ.
17. ವೃದ್ಧರಲ್ಲಿ ಗಟ್ಟಿಯಾಗಿ ನಗುವುದರ ಮೂಲಕ ಕೀಲು ನೋವು, ಮಾಂಸ ಖಂಡಗಳ ಬಿಗಿತಗಳು ಪರಿಹಾರ ಆಗುತ್ತವೆ.
18. ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಗಟ್ಟಿಯಾಗಿ ನಗುವುದಕ್ಕಾಗಿ ಲಾಫರ್ (ನಗುವ) ಕ್ಲಬ್‌ಗಳನ್ನು ಉತ್ತೇಜಿಸುತ್ತಿವೆ!
19. ನಗು ನಮ್ಮ ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಿ ಸೆರೆಟೋನಿನ್ ಎಂಬ ಮೆದುಳಿನ ಹಾರ್ಮೋನ್ ಸ್ರಾವವನ್ನು ಹೆಚ್ಚು ಮಾಡುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
20. ದಿನಕ್ಕೆ 15 ನಿಮಿಷಗಳ ನಗು ನಮ್ಮ ಮನಸಿನಲ್ಲಿ ಪ್ರಶಾಂತತೆಯ ಸಹಜವಾದ ಅನುಭವವನ್ನು ಉಂಟುಮಾಡುವುದರಿಂದ ದೀರ್ಘ ಕಾಲದ ದಣಿವು, ಆಯಾಸ ಮಾಯವಾಗುತ್ತದೆ.
ಇದನ್ನೂ ಓದಿ: Raja Marga Column : ಗೆದ್ದವರ ಕಥೆಗಿಂತಲೂ ಸೋತವರ ಕಥೆಗಳೇ ಹೆಚ್ಚು ಕುತೂಹಲಕಾರಿ!
ಇನ್ನೂ ನಗುವುದಕ್ಕೆ ಕಾರಣಗಳು ಬೇಕೇ? ಗಟ್ಟಿಯಾಗಿ ನಕ್ಕು ಒಮ್ಮೆ ಹಗುರಾಗಿ ಬಿಡಿ ಆಯ್ತಾ?