Raja Marga Column : ಸ್ವರ ಸಾಮ್ರಾಜ್ಞಿ ಲತಾ ಮಂಗೇಶ್ಕರ್ (Lata Mangeshkar) ಫೆಬ್ರುವರಿ 6, 2021ರಂದು ಸ್ವರ ಲೀನ ಆಗಿದ್ದಾರೆ. ಲೆಜೆಂಡ್ ಎಂದಿಗೂ ಸಾಯುವುದಿಲ್ಲ! ಅವರು ತಾನು ಹಾಡಿದ 36 ಭಾಷೆಗಳ 50,000 ಹಾಡುಗಳ ಮೂಲಕ ನಮ್ಮ ಮನಸ್ಸಿನಲ್ಲಿ, ಭಾವನೆಗಳಲ್ಲಿ ಜೀವಂತ ಆಗಿರುತ್ತಾರೆ. ಎಲ್ಲಿಯವರೆಗೆ ಭಾರತೀಯ ಸಂಗೀತವು ಇರುತ್ತದೆಯೋ ಅಲ್ಲಿಯವರೆಗೆ ಲತಾ ನಮ್ಮ ಹೃದಯದಲ್ಲಿ ಜೀವಂತ (Ever live in our Heart) ಆಗಿ ಇರುತ್ತಾರೆ. ಲತಾ ಮಂಗೇಶ್ಕರ್ ಹಾಡುಗಳನ್ನು ಅವರು ಹಾಡಿದ ಹಾಗೆ ಹಾಡುವ ಶ್ರೇಯಾ ಘೋಷಾಲ್ (Shreya Ghoshal) ಅಂತಹ ಪ್ರತಿಭಾವಂತ ಗಾಯಕರು ಈಗ ಬಂದಿದ್ದಾರೆ. ಆದರೆ ಲೆಜೆಂಡ್ ಇಸ್ ಆಲ್ವೇಸ್ ಎ ಲೆಜೆಂಡ್ (Legend is Always a Legend)! ಲತಾಗೆ ಹೋಲಿಕೆ ಇಲ್ಲ!
ಲತಾ ಮಂಗೇಶ್ಕರ್ ಬಗ್ಗೆ ಕನ್ನಡದಲ್ಲಿ ವಸಂತ್ ನಾಡಿಗೇರ ಅವರು ಬರೆದಿರುವ “ಹಾಡು ಹಕ್ಕಿಯ ಹೃದಯ ಗೀತೆ” ಪುಸ್ತಕವನ್ನು ಹಲವು ಬಾರಿ ಓದಿ ಎದೆಯ ಮೇಲೆ ಒರಗಿಸಿ ಆಕೆಯ ಹಾಡುಗಳನ್ನು ಇಯರ್ ಫೋನ್ ಬಳಸಿ ಕೇಳುತ್ತಾ ಹಾಗೇ ಮಲಗಿದ್ದೇನೆ. ಆಗೆಲ್ಲ ಗಾಢವಾದ ನಿದ್ರೆ! ಅಮ್ಮನ ಕಾಲ ಮೇಲೆ ತಲೆ ಇಟ್ಟು ಮಲಗಿದ ಅನುಭೂತಿ. ಅದು ಲತಾ ಮಂಗೇಷ್ಕರ್ ಅವರ ಸಂಗೀತದ ಪವರ್! ಆಕೆಯ ಜೇನು ದನಿಯಲ್ಲಿ ಇರುವ ಕಶಿಷ್, ವೈವಿಧ್ಯತೆ ಮತ್ತು ಮಾಧುರ್ಯಗಳು ಬೇರೆ ಯಾವ ಗಾಯಕರಲ್ಲಿ ಕೂಡ ಇಲ್ಲ ಅನ್ನುವುದು ನನ್ನ ಅಭಿಪ್ರಾಯ. ಇದು ಇಡೀ ಭಾರತದ ಅಭಿಪ್ರಾಯ ಕೂಡ ಹೌದು!
ಸಂಗೀತಗಾರರ ಕುಟುಂಬದಿಂದಲೇ ಬಂದ ಲತಾ ತನ್ನ ತಂದೆಯಿಂದ ಸಂಗೀತದ ಬಳುವಳಿ ಪಡೆದವರು. ತಂದೆ ಪ್ರಸಿದ್ಧ ನಾಟಕ ನಿರ್ದೇಶಕ ಮತ್ತು ಸಂಗೀತಗಾರರಾದ ದೀನಾನಾಥ್ ಮಂಗೇಷ್ಕರ್ ಅವರು ತೀರಿ ಹೋದಾಗ ಲತಾ ಅವರಿಗೆ ಕೇವಲ 13 ವರ್ಷ!
ಮುಂದೆ ತಾಯಿ ಹಾಗೂ ತನ್ನ ಬೆನ್ನ ಹಿಂದೆ ಬಂದ ಮೂವರು ತಂಗಿಯಂದಿರು (ಆಶಾ, ಮೀನಾ, ಉಷಾ) ಮತ್ತು ತಮ್ಮ (ಹೃದಯನಾಥ) ಇವರಿಗೆ ತಮ್ಮ ಬದುಕನ್ನು ಕಟ್ಟಿಕೊಡಲು ನೆರವಿಗೆ ನಿಂತ ಆಕೆ ಶಾಲೆಗೇ ಹೋಗಲಿಲ್ಲ! ಈ ಹೊಣೆಗಳ ನಡುವೆ ಲತಾ ಮದುವೆಯನ್ನೇ ಮರೆತರು.
ತನ್ನ ಪ್ರೀತಿಯನ್ನು ಹೃದಯದ ಒಳಗೆ ಮುಚ್ಚಿ ಇಟ್ಟು ಲತಾ ತನ್ನ ಎಲ್ಲ ನೋವು, ಸಂತಸ, ಖುಷಿ, ಸಿಟ್ಟು, ನಿರಾಶೆಗಳನ್ನು ತನ್ನ ಹಾಡುಗಳ ಮೂಲಕ ಹೊರಹಾಕಿದರು. ಆತ್ಯಂತ ಕ್ಲಿಷ್ಟವಾದ ಸ್ವರ ಸಂಯೋಜನೆಯ ಶಾಸ್ತ್ರೀಯ ಹಾಡುಗಳನ್ನು ಕೂಡ ಆಕೆ ಅತ್ಯಂತ ಲೀಲಾಜಾಲವಾಗಿ ಹಾಡುತ್ತಾ ಹೋದಂತೆ ಸೃಷ್ಟಿಸುವ ಮೇರು ಮಾಧುರ್ಯದ ಪರಾಕಾಷ್ಠೆ, ಅನನ್ಯ ಭಾವಸ್ಪರ್ಶ, ಸಂಗೀತದ ಅಲೆಗಳು ಮತ್ತು ನಾದ ಸೌಖ್ಯ ಬೇರೆ ಯಾರಲ್ಲಿ ಕೂಡ ದೊರೆಯಲು ಸಾಧ್ಯವಿಲ್ಲ. ಅದು ಲತಾ ತಾಕತ್ತು! ಆಕೆಯ ದೈವದತ್ತವಾದ ಹಕೀಕತ್ತು!
Raja Marga Column: ಲತಾ ದುರಹಂಕಾರದ ಹೆಣ್ಣೇ?
ಹೊರಗಿಂದ ನೋಡುವಾಗ ಆಕೆ ನಮಗೆ ದುರಹಂಕಾರದ ಹೆಣ್ಣಾಗಿಯೇ ಕಂಡು ಬರುತ್ತಾರೆ. ಆಕೆ ಪದೇಪದೆ ಸಿಟ್ಟು ಮಾಡಿಕೊಳ್ಳುವುದು, ಸಿಟ್ಟು ಬಂದಾಗ ಯಾರನ್ನು ಕೂಡ ಕ್ಯಾರೇ ಅನ್ನದೆ ಝಾಡಿಸುವುದು, ರಫೀ ಅಂತಹ ಗಾಯಕರ ಜೊತೆಗೆ ವರ್ಷಗಟ್ಟಲೆ ಮಾತು ಬಿಡುವುದು, ಇಂಥವರ ಜೊತೆಗೆ ತಾನು ಹಾಡುವುದಿಲ್ಲ ಎಂದು ಭಾರೀ ಧಿಮಾಕು ತೋರಿಸುವುದು, ಪದೇಪದೆ ತನ್ನ ಹಠವನ್ನು ತಾನೇ ಪ್ರೂವ್ ಮಾಡಿಕೊಳ್ಳಲು ಹೊರಡುವುದು, ರವೀಂದ್ರ ಜೈನ್ ಅವರಂಥ ಸಂಗೀತ ನಿರ್ದೇಶಕರನ್ನು ಬೈದು ಅಪಮಾನ ಮಾಡುವುದು…ಹೀಗೆ ಲತಾ ಅವರ ಸಿಟ್ಟಿನ ಮುಖಗಳು ಒಂದೆಡೆ.
ಆದರೆ ನನಗೆ ಪ್ರಶಸ್ತಿಗಳು ಸಾಕು, ಇನ್ನು ಉದಯೋನ್ಮುಖ ಗಾಯಕರಿಗೆ ಕೊಡಿ ಎಂದು ರಾಷ್ಟೀಯ ಜ್ಯೂರಿಗಳಿಗೆ ಅನ್ನುವುದು, ಚಾರಿಟಿ ಶೋಗಳಿಗೆ ಕರೆ ಬಂದಾಗ ಒಂದು ರೂಪಾಯಿ ಸಂಭಾವನೆಯನ್ನೂ ಪಡೆಯದೆ ಹೋಗಿ ಹಾಡಿ ಬರುವುದು, ಸಂಗೀತ ನಿರ್ದೇಶಕರು ಎಷ್ಟು ಬಾರಿ ರಿಟೇಕ್ ಹೇಳಿದರೂ ಒಂದಿಷ್ಟು ಬೇಸರವನ್ನು ಮಾಡದೆ ಮತ್ತೆ ರಿಹರ್ಸಲ್ ಮಾಡಿ ಹಾಡುವುದು, ಇತ್ತೀಚಿನ ಹತ್ತು ಹಲವು ಯುವ ಗಾಯಕರ ಜೊತೆಗೆ ಒಂದಿಷ್ಟು ಇಗೋ ಇಲ್ಲದೆ ಯುಗಳ ಹಾಡುಗಳನ್ನು ಹಾಡುವುದು…ಇವೆಲ್ಲವೂ ಲತಾ ಅವರ ಇನ್ನೊಂದು ಮಾನವೀಯ ಮುಖ. ಅದೇ ಅವರ ನಿಜವಾದ ಐಡೆಂಟಿಟಿ.
ಇದೆಲ್ಲದರ ಜೊತೆಗೆ ಶ್ರೇಷ್ಠ ಗಾಯಕಿ ಆಗಿ ಆಕೆಯ ಶ್ರದ್ಧೆ, ಭಕ್ತಿ, ಪರಿಶ್ರಮ ಮತ್ತು ಪ್ರತಿಭೆ ಇವುಗಳಿಗೆ ಆಕೆಗೆ ಆಕೆಯೇ ಸಮ! ಭಾರತಕ್ಕೆ ಇನ್ನೊಬ್ಬರು ಲತಾ ಮಂಗೇಶ್ಕರ್ ದೊರೆಯಲು ಸಾಧ್ಯವೇ ಇಲ್ಲ!
ನಿಮ್ಮ ಹಿಂದಿ ಭಾಷೆ ಶುದ್ಧ ಇಲ್ಲ, ಅದರಲ್ಲಿ ಮರಾಠಿ ಭಾಷೆ ಎಸೆಂಟ್ ಇದೆ ಎಂದು ನಟ ದಿಲೀಪ್ ಕುಮಾರ್ ಆಕೆಯನ್ನು ಸಣ್ಣದಾಗಿ ಅಣಕಿಸಿದಾಗ ಮನೆ ಪಾಠಕ್ಕೆ ಒಬ್ಬ ಮೇಷ್ಟ್ರನ್ನು ನೇಮಕ ಮಾಡಿ ಹಠ ಹಿಡಿದು ಹಿಂದಿ ಮತ್ತು ಅರೇಬಿಕ್ ಭಾಷೆ ಕಲಿತವರು ಲತಾ. ಆಕೆಯ ಹಠ ಸಾಧನೆಗೆ ನೂರಾರು ಉಲ್ಲೇಖಗಳು ನಿಮಗೆ ವಸಂತ್ ನಾಡಿಗೇರ ಅವರ ಕನ್ನಡ ಪುಸ್ತಕದಲ್ಲಿ ಸಿಗುತ್ತವೆ.
ಸಂಗೀತದ ಬಗ್ಗೆ ಆಕೆಗೆ ಇದ್ದ ಶ್ರದ್ಧೆ ಮತ್ತು ಬದ್ದತೆಗಳು ಅದು ಎಲ್ಲ ಉಪಮೆಗಳನ್ನು ಮೀರಿದ್ದು! ಪ್ರತಿಯೊಂದು ಪದ್ಯವನ್ನು ಪೂರ್ಣವಾಗಿ ಅಭ್ಯಾಸ ಮಾಡಿ ಅದರ ರಾಗ, ತಾಳ ಮತ್ತು ಸ್ವರ ಸಂಚಾರ ಎಲ್ಲವನ್ನೂ ಕೇಳಿ ತಿಳಿದು, ತುಂಬ ರಿಹರ್ಸಲ್ ಮಾಡಿ ಹಾಡಲು ನಿಂತರೆ ಆಕೆಯ ಶ್ರೀಮಂತ ಕಂಠದಲ್ಲಿ ದೇವಿ ಸರಸ್ವತಿಯ ಆವಾಹನೆಯೇ ಆಗುತ್ತಿತ್ತು. ಅದರಿಂದಾಗಿ ಆಕೆಯ ಎಲ್ಲ ಹಾಡುಗಳು ಕೂಡ ಅಮರತ್ವ ಪಡೆದವು. ಆಕೆಯ ಎಲ್ಲ ಹಾಡುಗಳ ದೈವಿಕ ಪ್ರಭಾವಕ್ಕೆ ಈ ಶಕ್ತಿಗಳು ಕಾರಣ.
ಗೋವಾದಲ್ಲಿ ಇರುವ ಮಂಗೇಶಿ ದೇವಳದ ಭಕ್ತರಾದ ಆಕೆಗೆ ಸಂಗೀತವೇ ಉಪಾಸನೆ! ಸಂಗೀತವೇ ದೇವರು! ತನ್ನ ನಿಜ ಜೀವನದಲ್ಲಿ ಹಠಕ್ಕೆ ಬಿದ್ದ ಹಾಗೆ ಬಂಗಾರದ ಚಪ್ಪಲಿಯನ್ನು ಹಾಕಿಕೊಂಡು ಓಡಾಡುತ್ತಿದ್ದ ಲತಾ ವೇದಿಕೆಯಲ್ಲಿ ಅಥವಾ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ನಿಂತು ಹಾಡುವಾಗ ಚಪ್ಪಲಿ ಹಾಕುತ್ತಿರಲಿಲ್ಲ. ಇಡೀ ಜೀವಮಾನದಲ್ಲಿ ಐಸ್ ಕ್ರೀಮ್, ಜ್ಯೂಸ್, ಬಾಳೆಹಣ್ಣು ತಿಂದದ್ದೆ ಇಲ್ಲ. ಸಂಗೀತವು ತನಗೆ ದೇವರು ಕೊಟ್ಟ ಅತೀ ದೊಡ್ಡದಾದ ವರ, ತಾನು ಹುಟ್ಟಿದ್ಡೇ ಹಾಡಲು ಎಂದು ಅವರು ಎಲ್ಲ ಕಡೆ ಹೇಳುತ್ತಿದ್ದರು ಮತ್ತು ಅದನ್ನು ಗಾಢವಾಗಿ ನಂಬಿದ್ದರು.
1963ರಲ್ಲಿ ಭಾರತ ಚೀನಾ ಯುದ್ಧ ಆದಾಗ ಭಾರತ ಅತೀ ದೊಡ್ಡ ಸಂಖ್ಯೆಯ ಸೈನಿಕರನ್ನು ಕಳೆದುಕೊಂಡಿತು. ಆಗ ತುಂಬಾ ನೊಂದ ಬಹು ಪ್ರಸಿದ್ಧ ಕವಿ ಪ್ರದೀಪ್ ಅವರು ಸೈನಿಕರನ್ನು ಕುರಿತು ‘ಏ ಮೇರೆ ವತನ್ ಕೆ ಲೋಗೋ’ ಎಂಬ ಗೀತೆಯನ್ನು ಬರೆದರು. ಅದಕ್ಕೆ ಸಿ.ರಾಮಚಂದ್ರ ಅವರು ಸಂಗೀತದ ಸಂಯೋಜನೆಯನ್ನು ಮಾಡಿ ಅದನ್ನು ಲತಾ ಗಣರಾಜ್ಯದಂದು ಸೈನಿಕರ ಮುಂದೆ ಹಾಡಿದರು. ‘ನನಗೆ ಆ ಹಾಡು ಕಣ್ಣೀರು ತರಿಸಿತು’ ಎಂದು ಪ್ರಧಾನಿ ನೆಹರೂ ಅದೇ ವೇದಿಕೆಯಲ್ಲಿ ಹೇಳಿದರು. ಮುಂದೆ ಲತಾ ಅದೇ ಹಾಡನ್ನು ಸಾವಿರಾರು ದೇಶ ವಿದೇಶಗಳ ವೇದಿಕೆಯಲ್ಲಿ ಹಾಡಿದ್ದಾರೆ. ಇಂತಹ ಸಾವಿರಾರು ಅಮರ ಗೀತೆಗಳು ಅವರ ಕಂಠದಿಂದ ಮೂಡಿಬಂದಿವೆ.
ಆಕೆಗೆ ಕನಿಷ್ಠ ನಾಲ್ಕು ದಶಕಗಳ ಕಾಲ ತಂಗಿ ಆಶಾ ಭೋಸ್ಲೆ ಬಿಟ್ಟರೆ ಬೇರೆ ಸ್ಪರ್ಧಿಯೇ ಇರಲಿಲ್ಲ.
ಅದು ಶಾಸ್ತ್ರೀಯ ಹಾಡು, ಜಾನಪದ ಹಾಡು, ಪಾಶ್ಚಾತ್ಯ ಹಾಡು, ಟುಮ್ರಿ, ಗಝಲ್, ಮುಜ್ರಾ, ಭಜನ್, ಅಭಂಗ, ಐಟಂ ಡಾನ್ಸ್ ಹಾಡು, ಅಣಕಿಸುವ ಹಾಡು, ದೇಶಭಕ್ತಿಯ ಹಾಡು, ಮೀರಾ ಭಜನ್, ಮರಾಠಿ ಅಭಂಗ, ಪ್ರಣಯ ಗೀತೆ, ಗರ್ಭಾ ಹಾಡು, ವಿರಹ ಗೀತೆ, ಶೋಕ ಗೀತೆ….. ಅದು ಯಾವ ಹಾಡು ಇದ್ದರೂ ಅವುಗಳನ್ನು ಅಷ್ಟೇ ಶ್ರದ್ಧೆ ಮತ್ತು ತನ್ಮಯತೆಯಿಂದ ಹಾಡಿ ಅವುಗಳಿಗೆ ಒಂದು ದೈವಿಕ ಸ್ಪರ್ಶ ನೀಡುವುದು ಲತಾ ಮಂಗೇಷ್ಕರ್ ವಿಶೇಷತೆ.
ಅದರ ಜೊತೆಗೆ ಬೇರೆ ಬೇರೆ ನಾಯಕಿಯರ ಧ್ವನಿಗಳನ್ನು ಚಂದವಾಗಿ ಅನುಕರಣೆ ಮಾಡಿ ಅವರದ್ದೇ ಧ್ವನಿಯಲ್ಲಿ ಹಾಡುವುದು ಅವರ ಇನ್ನೊಂದು ಪ್ರತಿಭೆ!
ಉದಿತ್ ನಾರಾಯಣ್, ಕುಮಾರ್ ಸಾನು, ಆರ್ಜಿತ್ ಸಿಂಗ್ ಮೊದಲಾದ ಯುವ ಗಾಯಕರ ಜೊತೆಗೆ ಯಾವ ಇಗೋ ಕೂಡ ಕಟ್ಟಿಕೊಳ್ಳದೆ ಯುಗಳ ಗೀತೆ ಹಾಡಿರುವುದು ಆಕೆಯ ಇನ್ನೊಂದು ಸನ್ನಡತೆ! ಲತಾ ಅವರನ್ನು ಪ್ರೀತಿ ಮಾಡಲು ಇಂಥ ನೂರಾರು ಕಾರಣಗಳು ನಮಗೆ ದೊರೆಯುತ್ತವೆ. ಅದರ ಜೊತೆಗೆ ಅವರಲ್ಲಿ ಕೊನೆಯತನಕ ಇದ್ದ ಮುಗ್ಧತೆ ಆಕೆಯನ್ನು ತುಂಬಾ ಮಹಾ ಅನ್ನಿಸುವಂತೆ ಮಾಡುತ್ತವೆ. ಅವರ ಮೇರು ವ್ಯಕ್ತಿತ್ವದ ಪರಿಚಯ ಮಾಡಲು ಅಂತಹ ನೂರಾರು ಘಟನೆಗಳು ನಾಡಿಗೇರ ಅವರ ಪುಸ್ತಕದಲ್ಲಿ ಇವೆ.
ನಾನಿಂದು ಆಕೆಗೆ ಶೃದ್ಧಾಂಜಲಿ ಕೊಡಲು ಹೋಗುವುದಿಲ್ಲ. ನಾನು ಮೊದಲೇ ಹೇಳಿದ ಹಾಗೆ ಲೆಜೆಂಡ್ಸ್ ಎಂದಿಗೂ ಸಾಯುವುದಿಲ್ಲ!
ಅವರು ಹಾಡಿದ 50,000 ಅದ್ಭುತ ಹಾಡುಗಳಲ್ಲಿ ನಾನು ತುಂಬಾ ಇಷ್ಟ ಪಟ್ಟ, ನನಗೆ ತುಂಬಾ ಭಾವ ಸ್ಪರ್ಶಗಳನ್ನು ಕೊಟ್ಟ 25 ಹಾಡುಗಳನ್ನು ಇಲ್ಲಿ ಪರಿಚಯ ಮಾಡುವುದರ ಮೂಲಕ ಆಕೆಯನ್ನು ನೆನಪು ಮಾಡುತ್ತೇನೆ.
1) ರಸಿಕ್ ಬಲಮಾ (ಚೋರಿ ಚೋರಿ)
2) ಜ್ಯೋತಿ ಕಲಶ ಝಲಕೆ (ಭಾಬೀ ಕಿ ಚೂಡಿಯ)
3) ಮೋ ಹೆ ಭೂಲ್ ಗಯೆ ಸಾವರಿಯಾ (ಬೈಜು ಬಾವ್ರ)
4) ಯೆ ಜಿಂದಗಿ ಉಸೀಕಿ ಹೈ (ಅನಾರ್ಕಲಿ)
5) ತುಜೆ ದೇಖಾ ತೋ ಯೇ (DDLJ)
6) ಪ್ಯಾರ್ ಕಿಯಾ ತೋ ಡರನಾ ಕ್ಯಾ (ಮೊಗಲ್ ಎ ಅಜಂ)
7) ಆಯೆಗ ಆಯೆಗ ಆಯೇಗಾ ಆನೆವಾಲ (ಮಹಲ್)
8) ಆಜಾ ರೆ ಪರದೇಶಿ (ಮಧುಮತಿ)
9) ಲಗ್ ಜಾ ಗಲೆ (ವೋ ಕೌನ್ ತೀ)
10) ಸಜನಾ ಬರ್ಖ ಬಹಾರ್ ( ಪರಖ್)
11) ಐಸಾ ದೇಶ್ ಹೈ ಮೇರಾ (ವೀರ್ ಝರ)
12) ಅಲ್ಲಾ ತೆರೋ ನಾಮ್ (ಹಮ್ ದೋನೋ)
13) ಸತ್ಯಂ ಶಿವಂ ಸುಂದರಂ (ಶೀರ್ಷಿಕೆ ಗೀತೆ)
14) ಆಜ್ ಫಿರ್ ಜೀನೆ ಕೀ ತಮನ್ನಾ ಹೈ (ಗೈಡ್)
15) ರೈನಾ ಬೀತ್ ಜಾಯೆ ( ಅಮರ್ ಪ್ರೇಮ್)
16) ದಿಲ್ ಹೂಂ ಹೂಂ ಕರೆ (ರುಡಾಲಿ)
17) ಯಾರಾ ಸಿಲಿ ಸೀಲಿ (ಲೇಕಿನ್)
18) ಜಿಯಾ ಜಲೆ ಜಾನ್ ಜಲೇ (ದಿಲ್ ಸೆ)
19) ಲುಕಾ ಚುಪ್ಪಿ (ರಂಗ್ ದೇ ಬಸಂತಿ)
20) ಇಕ್ ಪ್ಯಾರ್ ಕೀ ನಗಮ ಹೈ (ಶೋರ್)
Forever in our hearts, remembering Lata Mangeshkar ji on her death anniversary. Her voice continues to inspire generations. 🌹 #LataMangeshkar pic.twitter.com/gv8ctJXIYw
— Prayag (@theprayagtiwari) February 6, 2024
21) ಚಲ್ತೇ ಚಲ್ತೇ (ಪಾಕೀಜಾ)
22) ಮನ್ ಕ್ಯುನ್ ಬೇಹಕ (ಉತ್ಸವ)
23) ಅಜೀಬ್ ದಾಸತಾನ್ ಹೈ (ದಿಲ್ ಅಪನಾ ಔರ್ ಪ್ರೀತ್ ಪರಾಯ)
24) ಪಿಯಾ ಬಿನಾ ಪಿಯಾ ಬಿನಾ (ಅಭಿಮಾನ್)
25) ಆಜಾ ರೆ ಪರದೇಶಿ (ಮಧುಮತಿ).
ಇದನ್ನೂ ಓದಿ : Raja Marga Column : ಹರೆಯದ ಮಕ್ಕಳನ್ನು ಸಂಭಾಳಿಸೋದು ಹೇಗೆ? ಇಲ್ಲಿದೆ 33 ಟಿಪ್ಸ್!
ಲತಾ ಅಂದರೆ ಇಷ್ಟೇ ಅಲ್ಲ! ಆಕೆಯ ಪ್ರತಿಭೆಗಳು ಎಲ್ಲಾ ಸೀಮೆಗಳನ್ನು ಮೀರಿದ್ದು! ಎಲ್ಲಾ ಧರ್ಮ, ಬಾಷೆ, ನಾಡು, ರಾಷ್ಟ್ರಗಳನ್ನು ಮೀರಿದ್ದು! ಎಲ್ಲಾ ಉಪಮೆ, ರೂಪಕಗಳು, ಅಲಂಕಾರ ಎಲ್ಲವನ್ನೂ ಮೀರಿದ್ದು. ಅತೀ ಹೆಚ್ಚು ರಾಷ್ಟ್ರಗಳ ವೇದಿಕೆಗಳಲ್ಲಿ ಹಾಡಿದ ಒಬ್ಬ ಭಾರತೀಯ ಗಾಯಕಿ ಇದ್ದರೆ ಅದು ಲತಾ ಮಂಗೇಶ್ಕರ್ ಮಾತ್ರ! ಈ ಅರ್ಥದಲ್ಲಿ ಆಕೆ ಭಾರತದ ನಿಜವಾದ ಸಾಂಸ್ಕೃತಿಕ ರಾಯಭಾರಿ!
ಅಂದ ಹಾಗೆ ಆಕೆ ಕನ್ನಡದಲ್ಲಿ ಕೂಡ ಎರಡು ಹಾಡುಗಳನ್ನು ಹಾಡಿದ್ದಾರೆ. ಅದರಲ್ಲಿ ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ಆಕೆ ಹಾಡಿದ ಬೆಳ್ಳನೆ ಬೆಳಗಾಯಿತು ಹಾಡು ನಿಜಕ್ಕೂ ಚುಂಬಕ ಶಕ್ತಿ ಹೊಂದಿದೆ.
ಸಂಗೀತಕ್ಕೆ ಒಬ್ಬರೇ ಲತಾ! ಇನ್ನೊಬ್ಬ ಲತಾ ಹುಟ್ಟಿ ಬರಲು ಸಾಧ್ಯವೆ ಇಲ್ಲ!