Site icon Vistara News

Raja Marga Column : ತಿಲಕರು ಮತ್ತು ಮಹಾರಾಷ್ಟ್ರದ ಸಾವಿರಾರು ಗಣೇಶ ಮಂಡಲಗಳು, ಅದೊಂದು ವಿಶ್ವದಾಖಲೆ

Mumbai Ganeshothsava

ನಾಡಿನ ಸಮಸ್ತ ಜನತೆಗೆ ವಿಘ್ನ ನಿವಾರಕ ಗಣೇಶೋತ್ಸವದ (Ganesha Festival) ಶುಭಾಶಯಗಳು. ಆದಿಪೂಜಿತ ಗಣಪತಿ ನಮ್ಮೆಲ್ಲರ ಇಷ್ಟಾರ್ಥಗಳನ್ನು ಪೂರೈಸಲಿ (Ganesha Chaturthy) ಎನ್ನುವುದು ನಮ್ಮ ಹಾರೈಕೆಗಳು. ಲೋಕಮಾನ್ಯ ಬಾಲಗಂಗಾಧರ ತಿಲಕರು (Lokamanya Balagangadhar tilak) ಸಾರ್ವಜನಿಕ ಗಣೇಶೋತ್ಸವಗಳ (Public Ganeshothsava) ಮೂಲಕ ಸ್ವರಾಜ್ಯದ ಕಲ್ಪನೆಯನ್ನು ಕೊಟ್ಟ ಕಥೆಯನ್ನು ಅದು ಮುಂಬಯಿಯಲ್ಲಿ ಸೃಷ್ಟಿಸಿದ ಚರಿತ್ರೆಯನ್ನು (History Created in Mumbai) ನೋಡೋಣ (Raja Marga Column).

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಮಹತ್ವದ ಕೊಡುಗೆ ಕೊಟ್ಟವರು ಲೋಕಮಾನ್ಯ ಬಾಲಗಂಗಾಧರ ತಿಲಕರು( 1856-1920). ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ಪಡೆದೇ ಪಡೆಯುತ್ತೇನೆ ಎಂದು ಘರ್ಜಿಸಿದವರು ಅವರು.

Lalbagh Ka Raja

ಅವರೊಬ್ಬ ಕ್ರಾಂತಿಕಾರಿ ಮತ್ತು ಶಿಕ್ಷಕ. ಭಾರತದಲ್ಲಿ ವಿದೇಶಿ ವಸ್ತುಗಳನ್ನು ಸುಡುವ ಚಳುವಳಿ ಮೊದಲು ಆರಂಭ ಮಾಡಿದವರೇ ತಿಲಕರು. ಅವರು ಸೆರೆಮನೆಯಲ್ಲಿ ಇದ್ದಾಗ ಬರೆದ ‘ ಗೀತಾ ಸಾರೋದ್ಧಾರ’ ಗ್ರಂಥವು ಭಗವದ್ಗೀತೆಯ ಬಗ್ಗೆ ಬಂದಿರುವ ಅತೀ ಶ್ರೇಷ್ಟ ಗ್ರಂಥ ಎಂಬ ಕೀರ್ತಿಯನ್ನು ಪಡೆದಿದೆ. ಗಾಂಧೀಜಿ ಅವರನ್ನು ‘ ಆಧುನಿಕ ಭಾರತದ ನಿರ್ಮಾಪಕ’ ಎಂದು ಕರೆದರು. ನಮ್ಮನ್ನು ನಾವೇ ಆಳುವುದು ಸ್ವರಾಜ್ಯದ ಕಲ್ಪನೆ. ಅದೇ ಮುಂದೆ ಭಾರತದ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲು ಆಯಿತು ಎನ್ನುವುದು ತಿಲಕರ ಶ್ರೇಷ್ಠತೆ. ಬ್ರಿಟಿಷರು ಅವರ ಬಗ್ಗೆ ಭಯಪಟ್ಟು ಅವರನ್ನು Father of Indian Unrest ಎಂದು ಕರೆದರು. ಅವರು ಎಲ್ಲಿಯೂ ರಾಜಿ ಮಾಡಿಕೊಳ್ಳದ ಕಾಂಗ್ರೆಸ್ ನಾಯಕರಾಗಿದ್ದರು.

ಮುಂಬೈಯಲ್ಲಿ ಗಣೇಶ ಮಂಡಲಗಳು

ಭಾರತದಲ್ಲಿ ಸ್ವಾಭಿಮಾನದ ಕಿಚ್ಚು ಹರಡಿದ ಮರಾಠಾ ಪೇಶ್ವೆಗಳು ಮೊದಲ ಬಾರಿಗೆ ಗಣೇಶನ ಪೂಜೆ ಮಾಡಿದ ಉಲ್ಲೇಖಗಳು ನಮಗೆ ಇತಿಹಾಸದಲ್ಲಿ ತುಂಬಾ ದೊರೆಯುತ್ತವೆ. ಹಿಂದೂ ಸಾಮ್ರಾಜ್ಯ ಸ್ಥಾಪನೆ ಮಾಡಿದ ಶಿವಾಜಿ ಮಹಾರಾಜರು ತಮ್ಮ ಕುಲ ದೇವತೆ ಅಂಬಾ ಭವಾನಿಯಷ್ಟೇ ಪ್ರೀತಿ ಮಾಡಿದ್ದು ಗಣೇಶನನ್ನು. ಇದೇ ಅಸ್ಮಿತೆಯನ್ನು ಭಾರತದಲ್ಲಿ ಸ್ವಾತಂತ್ರ್ಯದ ಹೋರಾಟಕ್ಕೆ ಪೂರಕವಾಗಿ ಬಳಸಿಕೊಂಡ ಕೀರ್ತಿಯು ಅದು ತಿಲಕರಿಗೆ ಸಲ್ಲಬೇಕು.

Lalbagh Ka Raja

ವಾಡೆಗಳಲ್ಲಿ ಪೂಜಿತವಾಗುತ್ತಿದ್ದ ಗಣೇಶ ಸಾರ್ವಜನಿಕ ಮೈದಾನಕ್ಕೆ

1890ರವರೆಗೆ ಮಹಾರಾಷ್ಟ್ರದಲ್ಲಿ ಗಣೇಶನ ಪೂಜೆಯು ನಡೆಯುತ್ತ ಇದ್ದದ್ದು ಅಲ್ಲಿನ ಶ್ರೀಮಂತರ ಮತ್ತು ಮೇಲ್ವರ್ಗದವರ ವಾಡೆ (ಮನೆ) ಗಳಲ್ಲಿ ಮಾತ್ರ. ಬಡವರಿಗೆ ಮತ್ತು ಸಮಾಜದ ಕೆಳವರ್ಗದ ಮಂದಿಗೆ ಆ ಆರಾಧನೆಯ ಅವಕಾಶವೇ ಇರಲಿಲ್ಲ. ಈ ಅಸಮಾನತೆಯನ್ನು ಹೋಗಲಾಡಿಸುವ ಉದ್ದೇಶದಿಂದ ತಿಲಕರು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವಗಳ ಆಯೋಜನೆಗೆ ಶ್ರೀಕಾರ ಹಾಕಿದರು.

1892ರಲ್ಲಿ ತಿಲಕರಿಗಿಂತ ಮೊದಲು ಭಾವೂ ಸಾಹೇಬ್ ಲಕ್ಷ್ಮಣ ಜವಳೆ ಎಂಬವರು ಪೂನಾದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಿ ಯಶಸ್ಸು ಪಡೆದಿದ್ದರು. ಅದನ್ನು ಗಮನಿಸಿದ ತಿಲಕರು 1893ರಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಲು ಪೂನಾದಲ್ಲಿ ಕರೆ ನೀಡಿದರು. ಅದಕ್ಕಾಗಿ ನೂರಾರು ಗಣೇಶೋತ್ಸವ ಸಮಿತಿಗಳನ್ನು (ಮಂಡಲ) ರಚನೆ ಮಾಡಲಾಯಿತು.

Lalbagh Ka Raja

ಆ ಸಮಿತಿಗಳಲ್ಲಿ ಸಮಾಜದ ಎಲ್ಲ ವರ್ಗದವರು ಇರಬೇಕು ಎಂದು ತಿಲಕರು ಆದೇಶ ನೀಡಿದರು. ಕೆಲವು ಮಂಡಳಗಳಲ್ಲಿ ದಲಿತರೇ ಅಧ್ಯಕ್ಷ, ಕಾರ್ಯದರ್ಶಿ ಕೂಡ ಆಗಿದ್ದರು. ಮೊದಲ ವರ್ಷದ ಸಾರ್ವಜನಿಕ ಉತ್ಸವಗಳಲ್ಲಿ ಸಾವಿರಾರು ಜನರು ಉತ್ಸಾಹದಲ್ಲಿ ಭಾಗವಹಿಸಿದ್ದು ತಿಲಕರಿಗೆ ಸ್ಫೂರ್ತಿ ನೀಡಿತು. ಮುಂದಿನ ವರ್ಷ ಪೂನಾ, ಮುಂಬೈ, ಅಮರಾವತಿ, ವಾರ್ಧ, ನಾಗಪುರಗಳಲ್ಲಿ ಈ ಉತ್ಸವ ಯಶಸ್ವೀ ಆಗಿ ನಡೆಯಿತು. ಮುಂದೆ ಅದರ ಯಶಸ್ಸು ಇಡೀ ಭಾರತಕ್ಕೆ ತಲುಪಿ ಎಲ್ಲೆಡೆಯೂ ಸ್ವಾಭಿಮಾನದ ಕಿಚ್ಚನ್ನು ಗಣೇಶೋತ್ಸವ ಹರಡಿತು.

ಮುಂಬೈಯಲ್ಲಿ ಗಣೇಶನಿಗೆ ತಾರಾ ಮೌಲ್ಯ

ಮಹಾರಾಷ್ಟ್ರದಲ್ಲಿ ವಿಶ್ವ ಕೀರ್ತಿ ಪಡೆದ ಅಷ್ಟ ವಿನಾಯಕ ಕ್ಷೇತ್ರಗಳು ಇವೆ. ಸಾರ್ವಜನಿಕ ಗಣೇಶೋತ್ಸವ ಮಂಡಲಗಳನ್ನು ಗಮನಿಸಿದಾಗ ಆ ಸಂಖ್ಯೆ 1,50,000 ಮೀರುತ್ತದೆ! ಈ ಉತ್ಸವಗಳಿಗೆ ಲಕ್ಷಾಂತರ ಜನರು ಸೇರುತ್ತಾರೆ. ಮುಂಬೈ ನಗರ ಇನ್ನು ಹತ್ತು ದಿನಗಳ ಕಾಲ ಮಲಗುವುದಿಲ್ಲ. ನಿರಂತರ ಸಂತರ್ಪಣೆ, ಮನರಂಜನಾ ಕಾರ್ಯಕ್ರಮಗಳು, ಗಣಪತಿಯ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಇಂದು ಆರಂಭವಾಗಿ ಮುಂದಿನ ಅನಂತ ಚತುರ್ದಶಿಯವರೆಗೆ ಈ ಆರಾಧನೆ ನಡೆದು ಮುಂದೆ ವೈಭವದ ಶೋಭಾಯಾತ್ರೆ ನಡೆದು ಆ ಎಲ್ಲ ವಿಗ್ರಹಗಳನ್ನು ಜಲಸ್ಥಂಬನ ಮಾಡುವಲ್ಲಿಗೆ ಪ್ರತೀ ವರ್ಷದ ಗಣೇಶೋತ್ಸವಗಳು ಮುಗಿದು ಹೋಗುತ್ತವೆ.

ವಿಶ್ವದಾಖಲೆಯ ‘ಲಾಲಭಾಗ್‌ ಕಾ ರಾಜಾ’

ಮುಂಬೈಯ ಗಣೇಶ ಮಂಡಳಗಳಲ್ಲಿ ಅತ್ಯಂತ ಶ್ರೀಮಂತ ಮತ್ತು ವೈಭವದ ಗಣೇಶೋತ್ಸವ ಅಂದರೆ ಅದು ಲಾಲ್‌ ಭಾಗ್‌ನ ಗಣಪ. ಬೇರೆಲ್ಲ ಮಂಡಲಗಳದ್ದು ಒಂದು ತೂಕವಾದರೆ ಲಾಲ್‌ಭಾಗ್‌ ಮಂಡಲದ್ದೇ ಒಂದು ತೂಕ.

Lalbagh Ka Raja

1934ರಲ್ಲಿ ಆ ಭಾಗದ ಬೆಸ್ತರು ಮತ್ತು ವ್ಯಾಪಾರಿಗಳು ಈ ಮಂಡಲವನ್ನು ಆರಂಭ ಮಾಡಿದ್ದರು. ಅಲ್ಲಿಂದ ಇವತ್ತಿನವರೆಗೆ ಆ ಗಣಪತಿಯ ವೈಭವ ಕಡಿಮೆ ಆಗಿಲ್ಲ. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಎರಡು ವರ್ಷ ಬಿಟ್ಟರೆ ಆ ಉತ್ಸವ ಎಂದಿಗೂ ನಿಂತಿಲ್ಲ. ಹತ್ತು ದಿನಗಳ ಕಾಲ ಹಗಲೂ ರಾತ್ರಿ ಭಾವುಕ ಜನರು ಮೈಲುಗಟ್ಟಲೆ ಸರತಿಯ ಸಾಲಿನಲ್ಲಿ ನಿಂತು ಪಾಲುಗೊಳ್ಳುವ ಉತ್ಸವ ಇದು. ಮೂರು ತಿಂಗಳಿಗೂ ಅಧಿಕ ಅವಧಿಗೆ ಸಿದ್ಧತೆಗಳನ್ನು ಮಾಡಿ ಈ ಮಂಡಲವು ಗಣೇಶೋತ್ಸವದ ಆಚರಣೆ ಮಾಡುತ್ತದೆ.

ಇದನ್ನೂ ಓದಿ : Ganesh Chaturthi: ಗಣೇಶನಿಗೆ ಇವೆ 108 ಹೆಸರುಗಳು! ಪ್ರತಿ ಹೆಸರಿನ ಅರ್ಥವೂ ವಿಶೇಷ!

ಅತ್ಯಂತ ಶ್ರೀಮಂತ ಗಣಪತಿ

ಪ್ರತೀ ವರ್ಷವೂ 12-14 ಅಡಿ ಎತ್ತರದ ಮೂರ್ತಿಯು ಸಿದ್ಧವಾಗುತ್ತದೆ. ವರ್ಷ ವರ್ಷ ಮೂರ್ತಿಯ ವಿನ್ಯಾಸ ಮತ್ತು ಅಲಂಕಾರಗಳು ಬದಲಾಗುತ್ತವೆ. ಎರಡು ಕಿಲೋ ತೂಕದ ರತ್ನಖಚಿತ ಬಂಗಾರದ ಕಿರೀಟ ಸೇರಿ ಗಣಪತಿಯ ಮೈ ತುಂಬಾ ಚಿನ್ನ, ವಜ್ರ, ಬೆಳ್ಳಿಯ ಆಭರಣಗಳು ಹರಕೆಯ ರೂಪದಲ್ಲಿ ಬಂದಿವೆ. ಮೂರ್ತಿಯ ನಿರ್ಮಾಣಕ್ಕೆ 42 ಲಕ್ಷ ರೂಪಾಯಿ ಖರ್ಚು ಆಗುತ್ತದೆ. 24 ಘಂಟೆಯೂ ಪೂಜೆ, ಪುನಸ್ಕಾರ, ಭಜನೆ, ಸಂತರ್ಪಣೆ ನಿಲ್ಲುವುದಿಲ್ಲ. ಪ್ರತೀ ವರ್ಷವೂ ಹರಕೆಯ ರೂಪದಲ್ಲಿ ಅಂದಾಜು 11.5 ಕೋಟಿ ಸಂಗ್ರಹ ಆಗುತ್ತದೆ. ಚಿನ್ನ, ಬೆಳ್ಳಿ, ವಜ್ರದ ಆಭರಣಗಳು ಹರಕೆ ಬರುತ್ತವೆ. ಮುಂಬೈಯ ಕೊಳಚೆಗೇರಿಯ ಬಡವರೂ ಕೂಡ ಇಡೀ ವರ್ಷ ಮನೆಗಳಲ್ಲಿ ದೇವರ ಹುಂಡಿ ಇಟ್ಟು ಗಣೇಶನಿಗೆ ದುಡ್ಡು ಸಂಗ್ರಹ ಮಾಡಿ ಸಮರ್ಪಣೆ ಮಾಡುತ್ತಾರೆ. ಆ ಗಣೇಶನ ಮೂರ್ತಿಯು 26.54 ಕೋಟಿಗೆ ವಿಮೆ ಆಗಿದೆ ಅನ್ನುವುದು ಕೂಡ ದೊಡ್ಡ ಸುದ್ದಿ! ಅದರ ಜೊತೆಗೆ ಇಡೀ ಉತ್ಸವದ ಕಾರ್ಯಕ್ರಮಗಳು ಟಿವಿ ಮತ್ತು ಯು ಟ್ಯೂಬ್ ವೇದಿಕೆಯಲ್ಲಿ ನೇರ ಪ್ರಸಾರ ಆಗುವುದು ವಿಶೇಷ. ಅಂತಹ ಗಣೇಶನ ಉತ್ಸವಗಳನ್ನು ಅತ್ಯಂತ ಶ್ರದ್ಧೆಯಿಂದ ಆಚರಣೆ ಮಾಡಿಕೊಂಡು ಬಂದಿರುವ ಮುಂಬೈ ಮಹಾನಗರದ ಮಹಾ ಜನತೆಗೆ ನಮ್ಮ ಒಂದು ಸೆಲ್ಯೂಟ್ ಇರಲಿ.

Exit mobile version