Site icon Vistara News

Raja Marga Column : ಗಝಲ್ ಕೀ ಮಿಟಾಸ್ ಪಂಕಜ್ ಉಧಾಸ್ ; ಹಾಡು ನಿಲ್ಲಿಸಿದ ಗಝಲ್‌ ಸಾಮ್ರಾಟ

Raja Marga Column Pankaj Udhas no more

Raja Marga Column : ಭಾರತದಲ್ಲಿ ಗಝಲ್ ದೊರೆ (Gazhal King) ಎಂದು ಕರೆಸಿಕೊಂಡವರು ಜಗಜಿತ್ ಸಿಂಗ್. ಆದರೆ ಗಝಲ್ ಜಗತ್ತಿನಲ್ಲಿ ಮಾಧುರ್ಯದ ಅಲೆಗಳ ಮೂಲಕ ಗೆದ್ದವರು ಪಂಕಜ್ ಉಧಾಸ್ (Pankaj Udhas). ಅವರು ಸಿನಿಮಾ ಹಾಡುಗಳನ್ನು ಹೆಚ್ಚು ಹಾಡಿದ್ದು ಇಲ್ಲ (Indian playback singer). ಆದರೆ ಹಾಡಿದ್ದೆಲ್ಲವೂ ಸೂಪರ್ ಹಿಟ್ ಆಗಿವೆ ಅನ್ನುವುದು ನಿಜಕ್ಕೂ ಗ್ರೇಟ್. ಅಂತಹ ಪಂಕಜ್ ಉಧಾಸ್ ಈ ಸೋಮವಾರ ನಮ್ಮನ್ನು ಆಗಲಿದ್ದಾರೆ. 72 ವರ್ಷದ ಅವರ ನಿರ್ಗಮನದಿಂದ ಗಝಲ್ ಜಗತ್ತಿನಲ್ಲಿ ಒಂದು ದೊಡ್ಡ ಶೂನ್ಯ ಕ್ರಿಯೇಟ್ ಆಗಿದೆ. ಆ ಸ್ಥಾನವನ್ನು ತುಂಬುವ ಇನ್ನೊಬ್ಬ ಗಝಲ್ ಗಾಯಕ ಸದ್ಯಕ್ಕಿಲ್ಲ ಅನ್ನುವುದೇ ಒಂದು ವಿಷಾದ ಯೋಗ.

Raja Marga Column : ಸಂಗೀತದ ಪರಂಪರೆಯಿಂದ ಬಂದವರು ಪಂಕಜ್

ಗುಜರಾತ್ ರಾಜ್ಯದ ಜೇಟ್ಪೂರ ಎಂಬ ನಗರದಿಂದ ಬಂದ ಪಂಕಜ್ ಅತ್ಯಂತ ಶ್ರೀಮಂತ ಕುಟುಂಬದ ಹಿನ್ನೆಲೆಯವರು. ಅವರ ಅಜ್ಜ ಭಾವನಗರ ರಾಜ್ಯದ ದಿವಾನರಾಗಿ ಸೇವೆ ಸಲ್ಲಿಸಿದವರು. ಪಂಕಜ್ ಅವರ ಅಣ್ಣಂದಿರಾದ ಮನಹರ್ ಉಧಾಸ್ ಮತ್ತು ನಿರ್ಮಲ್ ಉಧಾಸ್ ಕೂಡ ಗಾಯಕರಾಗಿ ಜನಪ್ರಿಯರಾಗಿದ್ದವರು. ಮುಂದೆ ಮುಂಬೈಗೆ ಬಂದ ಆ ಕುಟುಂಬ ಸಂಗೀತಕ್ಕೆ ತನ್ನನ್ನು ಸಮರ್ಪಣೆ ಮಾಡಿಕೊಂಡಿತು. ಪಂಕಜ್ ಗ್ವಾಲಿಯರ್ ಘರಾಣೆಯ ಗುರುಗಳಿಂದ ಹಿಂದೂಸ್ಥಾನಿ ಸಂಗೀತವನ್ನು ಕಲಿತರು. ಅದರ ಜೊತೆಗೆ ಹಾರ್ಮೋನಿಯಂ, ವಯಲಿನ್, ತಬಲಾ, ಗಿಟಾರ್, ಪಿಯಾನೋ ಎಲ್ಲವನ್ನೂ ಕಲಿತು ಒಬ್ಬ ಪರಿಪೂರ್ಣ ಸಂಗೀತ ಕಲಾವಿದರಾದರು.

ಇದನ್ನೂ ಓದಿ : Raja Marga Column : ಬದುಕಿನ ಅಗ್ನಿ ಪರೀಕ್ಷೆಗಳೇ ನಮ್ಮನ್ನು ಸ್ಟ್ರಾಂಗ್‌ ಮಾಡೋ ಶಕ್ತಿಗಳು

ನೂರಾರು ಸಂಗೀತ ಆಲ್ಬಮ್‌ ಗಳು

1980ರಲ್ಲಿ ಅವರು ಹೊರತಂದ ಆಹತ್ ಎಂಬ ಆಲ್ಬಂ ಮೂಲಕ ಅವರು ಭಾರೀ ಕೀರ್ತಿ ಪಡೆದರು. ಅವರ ಹೆಚ್ಚಿನ ಹಾಡುಗಳಿಗೆ ಅವರೇ ಸಂಗೀತ ಸಂಯೋಜನೆ ಮಾಡಿದರು. ಅವರ ಧ್ವನಿಯಲ್ಲಿ ವೈವಿಧ್ಯತೆ ಕಡಿಮೆ ಇದ್ದರೂ ಒಂದು ಮಾಧುರ್ಯದ ಸಿಗ್ನೇಚರ್ ಇತ್ತು. ಪ್ರೇಮಿಗಳಿಗೆ ಉತ್ತೇಜನ ನೀಡುವ ಮತ್ತು ವಿರಹಿಗಳಿಗೆ ಸಾಂತ್ವನ ನೀಡುವ ಶಕ್ತಿ ಅವರ ಹಾಡುಗಳಿಗೆ ಇದ್ದವು. ಮುಂದೆ ಅವರು ನೂರಾರು ಆಲ್ಬಂ ಹೊರತಂದರು. ನಶಾ, ಮುಕರಾರ್, ತರನ್ನಮ್, ನಯಾಬ್, ಖಜಾನಾ, ಶಗುಫ್ತ, ಆಶಿಯಾನ ಅವರ ಅತ್ಯಂತ ಜನಪ್ರಿಯ ಸಂಗೀತ ಆಲ್ಬಂಗಳು. ಅವರು ಗಝಲ್ ಮತ್ತು ಪ್ರೇಮಗೀತೆ ಎರಡನ್ನೂ ತುಂಬಾ ಅದ್ಭುತವಾಗಿ ಹಾಡಿದರು. ದೇಶ ವಿದೇಶಗಳಲ್ಲಿ ಸ್ಟೇಜ್ ಶೋಗಳನ್ನು ನೀಡಿದರು. ಒಂದು ವರ್ಷ ಅಮೆರಿಕದಲ್ಲಿ ಇದ್ದುಕೊಂಡು ಸಾವಿರಾರು ಅಭಿಮಾನಿಗಳನ್ನು ಪಡೆದರು.

ಚಿಟ್ಟಿ ಆಯಿ ಹೈ ಆಯಿ ಹೈ

1983ರಲ್ಲೀ ಹೊರಬಂದ ನಾಮ್ ಸಿನಿಮಾದಲ್ಲಿ ಅವರು ಹಾಡಿದ ‘ಚಿಟ್ಟಿ ಆಯಿ ಹೈ’ ಹಾಡು ಸೂಪರ್ ಹಿಟ್ ಆಯಿತು. ಅದು ಎವರ್ ಗ್ರೀನ್ ಹಾಡು. ಅದರ ಬೆನ್ನಿಗೆ ಬಂದ ಬಾಜಿಗರ್ ಸಿನಿಮಾದ ‘ಚೂಪಾನಾ ಭೀ ನಹೀಂ ಆತಾ’ ಹಾಡು, ಮೈನ್ ಖಿಲಾಡಿ ತೂ ಅನಾರಿ ಸಿನಿಮಾದ ‘ಹಾತೋ ಪೇ ತೇರಾ ನಾಮ್’ ಮಾಧುರ್ಯದ ಶಿಖರವಾದ ಹಾಡುಗಳು. ಸಾಜನ್ ಸಿನಿಮಾದ ‘ಜಿಯೆ ತೋ ಜಿಯೇ ಕೈಸೇ ‘ ಹಾಡು ಮತ್ತು ಮೋಹರಾ ಸಿನಿಮಾದ ‘ ನಾ ಕಝರೆ ಕೀ ಧಾರ್ ‘ ಘಾಯಲ್ ಸಿನಿಮಾದ ‘ಮಾಹಿಯ ತೇರಿ ಕಸಮ್ ‘ ಹಾಡುಗಳಿಗೆ ಶರಣಾಗದ ಸಂಗೀತ ಪ್ರೇಮಿಗಳೇ ಇಲ್ಲ. ಸಿನಿಮಾಗಳಲ್ಲಿ ಅವರು ಹಾಡಿದ್ದು ಕಡಿಮೆ. ಆದರೆ ಅಷ್ಟೂ ಹಾಡುಗಳು ಸೂಪರ್ ಹಿಟ್ ಆದವು ಎಂಬಲ್ಲಿಗೆ ಅವರು ಮಾಧುರ್ಯದ ಅಲೆಗಳನ್ನು ಸೃಷ್ಟಿ ಮಾಡಿದರು.

ಚಾಂದಿನಿ ರಾತ್ ಮೇ, ಔರ್ ಆಹಿಸ್ಥಾ ಕೀಜಿಯೆ, ಏಕ್ ತರಫ್ ಉಸ್ಕ ಘರ್, ತೋಡಿ ತೋಡಿ ಪಿಯಾ ಕರೇ ಅವರ ಅತ್ಯಂತ ಜನಪ್ರಿಯ ಹಾಡುಗಳು. ಅವರು ಹಾರ್ಮೋನಿಯಂ ನುಡಿಸುತ್ತಾ ವೇದಿಕೆಗಳಲ್ಲಿ ಹಾಡಲು ತೊಡಗಿದರೆ ಪ್ರೇಕ್ಷಕರು ಕಣ್ಣು ಮುಚ್ಚಿ ಭಾವತೀವ್ರತೆಯ ಅನುಭವ ಮಾಡುತ್ತಿದ್ದರು.

ಅವರು ಎಲ್ಲ ವೇದಿಕೆಗಳಲ್ಲಿ ಚಿಟ್ಟಿ ಆಯಿ ಹೈ ಮತ್ತು ನಾ ಕಜರೆ ಕೀ ಧಾರ್ ಹಾಡುಗಳನ್ನು ಹಾಡದೆ ಅಭಿಮಾನಿಗಳು ಅವರನ್ನು ಕೆಳಗೆ ಇಳಿಯಲು ಬಿಡುತ್ತಿರಲಿಲ್ಲ!

ಇದನ್ನೂ ಓದಿ : Raja Marga Column : ನಾವು ಬೆಳೆಯಬೇಕಾಗಿರುವುದು ಹೊರಗಿನಿಂದ ಅಲ್ಲ, ಒಳಗಿನಿಂದ! ಇಲ್ಲಿದೆ 12 ಸೂತ್ರ

ಕನ್ನಡದಲ್ಲಿಯೂ ಹಾಡಿದರು

ಭಾರತದ ಹೆಚ್ಚಿನ ಭಾಷೆಗಳಲ್ಲಿ ಅವರು ಹಾಡಿದ್ದಾರೆ. ಅವರ ಬಂಗಾಲಿ ಭಾಷೆಯ ಆಲ್ಬಂ ತುಂಬಾ ಜನಪ್ರಿಯ ಆಗಿದೆ. ಅಂತಹ ಪಂಕಜ್ ಉಧಾಸ್ ಅವರನ್ನು ‘ಸ್ಪರ್ಶ’ ಸಿನಿಮಾದ ಮೂಲಕ ಹಂಸಲೇಖ ಕನ್ನಡಕ್ಕೂ ಕರೆತಂದರು. ಅದು ಕಿಚ್ಚ ಸುದೀಪ್ ಅವರ ಮೊದಲ ಸಿನೆಮಾ ಆಗಿತ್ತು.

ಅದರಲ್ಲಿ ಅವರು ಅತ್ಯಂತ ಭಾವಪೂರ್ಣವಾಗಿ ಹಾಡಿರುವ ‘ಚಂದಕ್ಕಿಂತ ಚಂದ ನೀನೇ ಸುಂದರ’ ಮತ್ತು ‘ಬರೆಯದ ಮೌನದ ಕವಿತೆ ಹಾಡಾಯಿತುʼ ಅವರ ಮಾಧುರ್ಯದ ಸಿಗ್ನೇಚರ್ ಹಾಡುಗಳು. ಅವರು ನೂರಾರು ಸ್ಟೇಜ್ ಶೋಗಳನ್ನು ಕರ್ನಾಟಕದಲ್ಲಿಯೂ ನೀಡಿದ್ದಾರೆ. ಅವರು ತಮ್ಮ ಸಂಗೀತ ಯಾತ್ರೆಯ 25ನೆಯ ಹಾಗೂ 50ನೆಯ ವರ್ಷಗಳ ಆಚರಣೆಯನ್ನು ಹಲವು ಚಾರಿಟಿ ಶೋಗಳ ಮೂಲಕ ಮಾಡಿ ಕ್ಯಾನ್ಸರ್ ರೋಗಿಗಳಿಗೆ ನೆರವಾದದ್ದನ್ನು ಮರೆಯಲು ಸಾಧ್ಯವೇ ಇಲ್ಲ.

ಅವರಿಗೆ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಗಝಲ್ ವಿಭಾಗದಲ್ಲಿ ಸೈಗಲ್
ರಾಷ್ಟ್ರಪ್ರಶಸ್ತಿಗಳು ದೊರೆತಿವೆ. ಅಂತಹ ಸಂಗೀತ ಮಾಂತ್ರಿಕ ನಿನ್ನೆ (ಫೆಬ್ರುವರಿ 26) ನಮ್ಮನ್ನು ಅಗಲಿದ್ದಾರೆ. ಅವರಿಗೆ ನಮ್ಮ ಭಾವಪೂರ್ಣ ಶೃದ್ಧಾಂಜಲಿ.

Exit mobile version