ಅಯೋಧ್ಯಾ ಎಂದರೆ ಸಂಸ್ಕೃತ ಭಾಷೆಯಲ್ಲಿ ‘ಯುದ್ಧರಹಿತ ನಗರ’ (City without war) ಎಂದರ್ಥ. ಅದು ಭಾರತದ ಅತ್ಯಂತ ಪ್ರಾಚೀನ ನಗರಗಳಲ್ಲಿ (Ancient City of India) ಒಂದು. ಅದನ್ನು ಆದಿಪುರುಷ ಮನು ಸ್ಥಾಪನೆ ಮಾಡಿದನು ಎಂದು ಪ್ರತೀತಿ. ಸರಯೂ ನದಿಯ (Sarayu River) ದಡದಲ್ಲಿ ವಿಶಾಲವಾಗಿ ಹರಡಿರುವ ಈ ನಗರವು ಸಹಸ್ರ ಸಹಸ್ರ ವರ್ಷಗಳಿಂದ ಅಬೇಧ್ಯವಾಗಿ ಉಳಿದಿರುವುದು ಅದರ ಹೆಗ್ಗಳಿಕೆ. ಭಾರತದ ಅತ್ಯಂತ ಶ್ರೇಷ್ಠವಾದ ಏಳು ಪುಣ್ಯ ಕ್ಷೇತ್ರಗಳಲ್ಲಿ ಅಯೋಧ್ಯೆಯೇ (Ayodhya City) ಮೊದಲಿನದ್ದು. ಸಾಕೇತ ಅದರ ಮೊದಲಿನ ಹೆಸರು. ಅಲ್ಲಿ ಅಂದಾಜು 9500 ವರ್ಷಗಳ ಹಿಂದೆ ಶ್ರೀ ರಾಮದೇವರು ಹುಟ್ಟಿದರು (Rama Janmabhumi) ಅನ್ನುವ ಕಾರಣಕ್ಕೆ ಅದು ಲೋಕಪ್ರಸಿದ್ಧಿ ಪಡೆಯಿತು. ರಾಮದೇವರು ತನ್ನ ಜೀವನದ ಬಹು ಭಾಗವನ್ನು ಅಯೋಧ್ಯೆಯಲ್ಲಿ ಕಳೆದರು (Raja Marga Column).
ರಾಮನು ಒಂದು ಕಾಲ್ಪನಿಕ ಪಾತ್ರ ಅಲ್ಲವೇ ಅಲ್ಲ
ರಾಮನು ಒಂದು ಕಾಲ್ಪನಿಕವಾದ ಪಾತ್ರ ಅಲ್ಲ, ಅದೊಂದು ಐತಿಹಾಸಿಕ ವ್ಯಕ್ತಿತ್ವ ಅನ್ನುವುದಕ್ಕೆ ಅಯೋಧ್ಯೆಯಲ್ಲಿ ಹೆಜ್ಜೆ ಹೆಜ್ಜೆಗೂ ಆಧಾರಗಳು ದೊರೆಯುತ್ತವೆ. ರಾಮಾಯಣದಲ್ಲಿ ಅಯೋಧ್ಯಾ ನಗರವು ಹೇಗೆ ವಾಲ್ಮೀಕಿ ಕವಿಯಿಂದ ವರ್ಣಿಸಲ್ಪಟ್ಟಿದೆಯೋ ಆ ನಗರವು ಹೆಚ್ಚು ಕಡಿಮೆ ಈಗ ಹಾಗೇ ಇದೆ. ಒಂದು ಕಾಲದಲ್ಲಿ ಅಯೋಧ್ಯೆಯನ್ನು ದೇಗುಲಗಳ ನಗರ ಎಂದು ಕರೆಯಲಾಯಿತು. ಇಲ್ಲಿ ವಿದೇಶೀ ಆಕ್ರಮಣಕಾರರ ಸಾವಿರಾರು ದಾಳಿಗಳು ನಡೆದರೂ ಆ ಪ್ರಾಚೀನ ದೇವಾಲಯಗಳ ಕುರುಹು ಈಗಲೂ ಹಾಗೆಯೇ ಇದೆ. ಆದಿಕವಿ ವಾಲ್ಮೀಕಿ ಬಣ್ಣಿಸಿದ ಅಯೋಧ್ಯೆಯ ವೈಭವ ಇಲ್ಲಿ ನಮ್ಮ ಪ್ರತೀ ಹೆಜ್ಜೆಗೂ ಕಣ್ಣಿಗೆ ಕಟ್ಟುತ್ತದೆ.
ಅದು ಶ್ರೀರಾಮನ ಜನ್ಮಸ್ಥಳ ಮಾತ್ರ ಅಲ್ಲ
ಅಯೋಧ್ಯಾ ನಗರವು ಹಿಂದೂಗಳ ಪವಿತ್ರ ನಗರ ಅಷ್ಟೇ ಅಲ್ಲ ಜೈನ ಮತ್ತು ಬೌದ್ಧರಿಗೂ ಧರ್ಮಭೂಮಿ ಆಯಿತು. ಐವರು ಶ್ರೇಷ್ಠರಾದ ಜೈನ ತೀರ್ಥಂಕರರು ಇಲ್ಲಿ ಜನ್ಮ ಪಡೆದರು ಎಂಬ ಕಾರಣಕ್ಕೆ ಇದು ಜೈನರಿಗೆ ಪವಿತ್ರ ಕ್ಷೇತ್ರ ಆಯಿತು. ಕ್ರಿಸ್ತ ಶಕ ಏಳನೇ ಶತಮಾನದಲ್ಲಿ ಅಯೋಧ್ಯೆಗೆ ಭೇಟಿ ನೀಡಿದ ಚೀನಾ ಯಾತ್ರಿಕ ಹ್ಯೂಯೆನ್ ತ್ಸಾಂಗ್ ಬರೆದಿರುವ ಪ್ರಕಾರ ಇಲ್ಲಿ ಇಪ್ಪತ್ತು ಬೌದ್ಧ ಮಂದಿರಗಳು ಇದ್ದವು ಮತ್ತು ಮೂರು ಸಾವಿರ ಭಿಕ್ಷುಗಳು ಇದ್ದರು. ಗೌತಮ ಬುದ್ಧ ಅಯೋಧ್ಯೆಗೆ ಭೇಟಿ ಕೊಟ್ಟು ದೀರ್ಘ ಕಾಲ ವಾಸ ಮಾಡಿದ್ದನು. ಹಾಗಾಗಿ ಬೌದ್ಧರು ಕೂಡ ಅಯೋಧ್ಯೆಯನ್ನು ಶ್ರದ್ಧಾ ಕೇಂದ್ರವಾಗಿ ತೆಗೆದುಕೊಂಡಿದ್ದಾರೆ.
ಅಯೋಧ್ಯೆಯ ತುಂಬಾ ದೇವಸ್ಥಾನಗಳು
ಅಯೋಧ್ಯೆಯ ಪ್ರಮುಖ ದೇವಸ್ಥಾನ ಅಂದರೆ ಅದು ರಾಮ ಜನ್ಮಭೂಮಿ ದೇವಸ್ಥಾನ. ಪುರಾಣಗಳ ಪ್ರಕಾರ ಅದನ್ನು ಕುಶ ಭೂಪತಿ ಕಟ್ಟಿಸಿದನು. ಇತಿಹಾಸದ ಪ್ರಕಾರ ಅದನ್ನು ಕ್ರಿಸ್ತಶಕ ಐದನೇ ಶತಮಾನದಲ್ಲಿ ವಿಕ್ರಮಾದಿತ್ಯ ಕಟ್ಟಿದನು ಎನ್ನುವುದಕ್ಕೆ ಐತಿಹಾಸಿಕ ಪುರಾವೆಗಳು ಇವೆ.
ಅದನ್ನು ಮುಂದೆ ಬಾಬರನ ಆಜ್ಞೆಯ ಮೇಲೆ ಆತನ ಸೇನಾಧಿಪತಿ ಮೀರ್ ಬಾಕಿ ಒಡೆದು ಹಾಕುವ ಮೊದಲು ಅದು ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ವೈಭವದ ದೇವಾಲಯ ಆಗಿತ್ತು. ಅದನ್ನು ಹಲವು ವಿದೇಶಿ ಯಾತ್ರಿಕರು ತುಂಬಾ ಅದ್ಭುತವಾಗಿ ವರ್ಣಿಸಿದ್ದಾರೆ.
ಆ ಮಂದಿರದ ಪಶ್ಚಿಮ ಭಾಗದಲ್ಲಿ ಶ್ರೀ ರಾಮ್ಕೊಟ್ ಎಂಬ ದೇಗುಲ ಇದ್ದು ಅದು ರಾಮನವಮಿಗೆ ಭಕ್ತರಿಂದ ತುಂಬಿ ತುಳುಕುತ್ತದೆ. ಹನುಮಾನ್ ಗಢಿ ಅಥವಾ ಹನುಮಾನ್ ಟೀಲಾ ಎಂಬ ಮಂದಿರವು ತುಂಬಾ ಸುಂದರವಾಗಿದೆ. ರಾಮ ಮಂದಿರ ವೀಕ್ಷಣೆ ಮಾಡಲು ಬರುವ ಭಕ್ತರು ಮೊದಲು ಈ ಆಂಜನೇಯನ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಾರೆ.
ಹನುಮಾನ್ ದೇವಸ್ಥಾನ ಅಭಿವೃದ್ದಿ ಮಾಡಿದ್ದು ಮುಸ್ಲಿಂ ದೊರೆ
ತನ್ನ ಮಗನ ಪ್ರಾಣ ಉಳಿಸಿದ ಎಂಬ ಕಾರಣಕ್ಕೆ ಅವಧ್ ನವಾಬ ಮನ್ಸೂರ್ ಆಲಿ ಖಾನ್ ಈ ಹನುಮಾನ್ ದೇವಾಲಯದ ಜೀರ್ಣೋದ್ಧಾರ ಮಾಡಿದ್ದು ಮಾತ್ರವಲ್ಲ ಅದಕ್ಕೆ ಐವತ್ತೆರಡು ಭಿಘಾ ಜಮೀನು ಕೂಡ ಉಂಬಳಿಯಾಗಿ ನೀಡಿದ ಬಗ್ಗೆ ತಾಮ್ರ ಶಾಸನ ದೊರೆತಿದೆ. ಈ ದೇವಾಲಯದಲ್ಲಿ ಹನುಮಂತನ ತಾಯಿ ಅಂಜನೀ ದೇವಿಯ ಮೂರ್ತಿ ಕೂಡ ಇದೆ. ಅಯೋಧ್ಯೆಯ ಕೇಂದ್ರಭಾಗದಲ್ಲಿ ಈಗಲೂ ಸುಂದರವಾದ ರಾಘವ್ ಜಿ ಕಾ ಮಂದಿರ್ ಮತ್ತು ನಾಗೇಶ್ವರ ನಾಥ್ ಮಂದಿರಗಳು ಇವೆ.
ಇದನ್ನೂ ಓದಿ : Raja Marga Column: ಆಡ್ವಾಣಿ ರಥಯಾತ್ರೆ; ರಾಮಜನ್ಮಭೂಮಿ ಹೋರಾಟದ ಮಹತ್ತರ ಮೈಲುಗಲ್ಲು
ಅಯೋಧ್ಯೆಯ ಅವಳಿ ನಗರ ಫೈಜಾಬಾದ್
ಅಯೋಧ್ಯೆಯಿಂದ ಹತ್ತು ಕಿಲೋಮೀಟರ್ ದೂರ ಇರುವ ಫೈಜಾಬಾದ್ ಬ್ರಿಟಿಷ್ ಕಾಲದಲ್ಲಿ ಪ್ರಾಮುಖ್ಯತೆಯನ್ನು ಪಡೆದು ಅಯೋಧ್ಯೆಯ ಪ್ರಾಮುಖ್ಯತೆಯು ಮಸುಕಾಗಿತ್ತು. ಬ್ರಿಟಿಷರ ಒಡೆದು ಆಳುವ ನೀತಿಯ ಪರಿಣಾಮ ಆ ಎರಡು ನಗರಗಳ ನಡುವೆ ದೊಡ್ಡ ಕಂದಕವನ್ನು ಸೃಷ್ಟಿ ಆಗಿತ್ತು. ಆ ನಗರಗಳ ನಡುವೆ ಯಾವುದೇ ಸಂಪರ್ಕ, ಸಂವಹನ ನಡೆಯದಂತೆ ಬ್ರಿಟಿಷರು ಕುತಂತ್ರಗಳನ್ನು ಮಾಡುತ್ತ ಹೋದರು.
ಆ ಎರಡೂ ನಗರಗಳಿಗೆ ಇತ್ತೀಚಿನ ತನಕ ಪ್ರತ್ಯೇಕ ನಗರಪಾಲಿಕೆಗಳು ಇದ್ದವು. ಆದರೆ ಈಗಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎರಡೂ ನಿಗಮಗಳನ್ನು ಒಟ್ಟು ಸೇರಿಸಿ ಅದಕ್ಕೆ ‘ಅಯೋಧ್ಯಾ ನಗರ ನಿಗಮ’ ಎಂದು ಹೆಸರು ಕೊಟ್ಟಿದ್ದಾರೆ. ರೈಲು ನಿಲ್ದಾಣ, ವಿಮಾನ ನಿಲ್ದಾಣ, ಆಧುನಿಕ ರಸ್ತೆಗಳು ಎಲ್ಲವೂ ಇಲ್ಲಿ ಆಗಿವೆ. ಅಯೋಧ್ಯಾ ನಗರದಲ್ಲಿ ಇಡೀ ಜಗತ್ತು ಮೆಚ್ಚುವಂತಹ ರಾಮಜನ್ಮಭೂಮಿಯ ಮಂದಿರ ನಿರ್ಮಾಣ ಆಗ್ತಾ ಇದೆ. ಜನವರಿ 22ರಂದು ಇಡೀ ಜಗತ್ತಿನ ಹಿಂದೂಗಳು ಅಯೋಧ್ಯೆಯ ಕಡೆ ದೃಷ್ಟಿ ನೆಟ್ಟು ಕೂತಿದ್ದಾರೆ.
ಈ ಎಲ್ಲ ಕಾರಣಗಳಿಂದ ಅಯೋಧ್ಯಾ ನಗರವು ಮತ್ತೆ ತನ್ನ ಗತ ವೈಭವದ ದಿನಗಳಿಗೆ ಮರಳುತ್ತಿದೆ. ಶತಕೋಟಿ ಹಿಂದೂಗಳ ಶತಮಾನಗಳ ಕನಸು ಇದೀಗ ನನಸು ಆಗುತ್ತಿದೆ. ಅಯೋಧ್ಯೆ ಮುಂದೆ ನಿಜವಾದ ಆರ್ಥದಲ್ಲಿ ‘ಯುದ್ಧವಿಲ್ಲದ ನಗರ’ ಆಗುತ್ತಿದೆ.