Site icon Vistara News

Raja Marga column: ಮತ್ತೆ ಮನೆಗೆ ಮರಳಿದ ಶ್ರೀರಾಮ; ಈ ಕ್ಷಣಕ್ಕೆ ಸಾಕ್ಷಿಯಾಗುವ ನಾವೇ ಧನ್ಯ!

Ayodhya-Rama-Mandir

ಇಷ್ಟೊಂದು ಸಂಚಲನ ಮೂಡಿಸಿದ ಇನ್ನೊಂದು ಘಟನೆಯನ್ನು ನಾನಿದುವರೆಗೂ ನೋಡಿಲ್ಲ! ಇಡೀ ಜಗತ್ತು ಇಂದು ಕುತ್ತಿಗೆ ಹೊರಳಿಸಿ ಅಯೋಧ್ಯೆಯ (Ayodhya Rama Mandir) ಕಡೆಗೆ ನೋಡುತ್ತಿದೆ. ಎಲ್ಲ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ರಾಮ ಮತ್ತು ರಾಮನದ್ದೇ ಸುದ್ದಿ. ಎಲ್ಲ ನಗರ, ಪಟ್ಟಣ, ಗ್ರಾಮಗಳಲ್ಲಿ ಕೇಸರಿ ತೋರಣ, ರಾಮನ ಹಾಡುಗಳು, ಎಲ್ಲ ಮನೆಗಳ ಮುಂದೆ ರಾಮನದ್ದೇ ಹಸೆ ಮತ್ತು ರಂಗೋಲಿ. ಎತ್ತರದಲ್ಲಿ ಹಾರಾಡುವ ರಾಮನ ಪತಾಕೆಗಳು. ಇಡೀ ಜಗತ್ತು ಇಂದು ರಾಮಮಯ (Entire world Ramamaya) ಆಗಿಬಿಟ್ಟಿದೆ. ಇದೆಲ್ಲವೂ ಸರಕಾರದ ಆದೇಶಕ್ಕೆ ಮಾಡಿದವುಗಳು ಅಲ್ಲ. ಎಲ್ಲವೂ ಸ್ವಯಂ ನಿರ್ಮಿತ. ಪ್ರತಿಯೊಬ್ಬ ಹಿಂದುವಿಗೂ ಈ ಕ್ಷಣ ಭಾವಸ್ಪರ್ಶದ ಕ್ಷಣ (Emotional moment for Hindus) ಆಗಿದೆ. ಈ ಘಟನೆಯ ಬಗ್ಗೆ ಯಾರು ಟೀಕೆ ಮಾಡಿದರೂ, ಕೊಂಕು ನುಡಿದರೂ ಅದನ್ನು ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಎಲ್ಲರಿಗೂ ಇದು ನಮ್ಮದೇ ಕಾರ್ಯಕ್ರಮ ಎಂದು ಅನ್ನಿಸಿದೆ. ಅದಕ್ಕೆ ಕಾರಣ ಏನು? (Raja Marga Column)

ರಾಮ ಮನೆಗೆ ಬಂದ

ಈ ಹಿಂದೆ ರಾಮನು ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ಹೊರಟು ನಿಂತಾಗ ಅಯೋಧ್ಯಾವಾಸಿಗಳು ಆತನನ್ನು ತಡೆಯುವ ಪ್ರಯತ್ನ ಮಾಡಿದ್ದರು. ಆತ ಒಪ್ಪದೇ ಕಾಡಿಗೆ ಹೋದಾಗ ಹದಿನಾಲ್ಕು ವರ್ಷ ಆತನಿಗೆ ಅಯೋಧ್ಯೆಯನ್ನು ಕತ್ತಲೆ ಮಾಡಿ ಕಾದರು. ಆ ಹದಿನಾಲ್ಕು ವರ್ಷ ಅಯೋಧ್ಯೆಯಲ್ಲಿ ಯಾವ ಉತ್ಸವ, ಯಾವ ಹಬ್ಬ, ಯಾವ ಆಚರಣೆ, ಯಾವ ಜಾತ್ರೆ, ಯಾವ ಸಮಾರಂಭ ಕೂಡ ಆಗಿರಲಿಲ್ಲ. ಇಡೀ ನಗರದಲ್ಲಿ ಸೂತಕದ ಛಾಯೆ ಹರಡಿತ್ತು.

ಭರತ ನಂದಿಗ್ರಾಮಕ್ಕೆ ಹೋಗಿ ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲೆ ಇಟ್ಟು ಪೂಜೆ ಮಾಡಿಕೊಂಡು ರಾಜ್ಯಭಾರವನ್ನು ಮಾಡಿಕೊಂಡು ಇದ್ದನು. ಆ ಅವಧಿಯಲ್ಲಿ ಅಯೋಧ್ಯಾ ನಗರವು ದೇವರ ಮೂರ್ತಿ ಇಲ್ಲದ
ಗುಡಿಯಂತೆ ಆಗಿತ್ತು. ಅಂತಹ ಅಯೋಧ್ಯೆ ಹದಿನಾಲ್ಕು ವರ್ಷಗಳ ನಂತರ ಪ್ರಭು ರಾಮಚಂದ್ರನು ಅಯೋಧ್ಯೆಗೆ ಮತ್ತೆ ಹಿಂದಿರುಗಿ ಬಂದಾಗ ಅದು ದೀಪಾವಳಿ ಅಮಾವಾಸ್ಯೆಯ ತಿಥಿ. ಅಲ್ಲಿನ ವಾಸಿಗಳಿಗೆ ಅದು ಬಹಳ ದೊಡ್ಡ ಸಂಭ್ರಮದ ಹಬ್ಬ ಆಗಿಹೋಗಿತ್ತು. ನಗರವಾಸಿಗಳು ಇಡೀ ನಗರವನ್ನು ಸಿಂಗರಿಸಿ, ದೀಪ ಹಚ್ಚಿ, ಹೊಸ ಬಟ್ಟೆ ತೊಟ್ಟು, ನೃತ್ಯ ಮಾಡಿ ರಾಮನನ್ನು ಸ್ವಾಗತ ಮಾಡಿದ್ದರು. ಅದೇ ದೀಪಾವಳಿಯ ಸಂಭ್ರಮವು ಇಂದು ದೇಶದಾದ್ಯಂತ ಕಂಡು ಬರುತ್ತಿದೆ.

ಹಿಂದೂಗಳ ತಾಳ್ಮೆ ಗೆದ್ದಿತ್ತು

ರಾಮನಿಗಾಗಿ ಅಯೋಧ್ಯಾ ವಾಸಿಗಳು ಕಾದದ್ದು 14 ವರ್ಷ. ಈ ಬಾರಿ ರಾಮಮಂದಿರಕ್ಕಾಗಿ ಜಗತ್ತಿನ ಹಿಂದೂಗಳು ಕಾದದ್ದು ಬರೋಬ್ಬರಿ 496 ವರ್ಷ. ಬಾಬರನ ಆಜ್ಞಾನುವರ್ತಿಯಾಗಿ ಆತನ ಸೇನಾಧಿಪತಿ ಮೀರ್ ಬಾಕಿ ದೇವಾಲಯವನ್ನು ಒಡೆದು ಹಾಕಿ ಅದರ ತಲೆಯ ಮೇಲೆ ಮೂರು ಗುಮ್ಮಟಗಳನ್ನು ಕಟ್ಟಿದ್ದು ಭಾರತೀಯರ ಸ್ವಾಭಿಮಾನಕ್ಕೆ ಭಾರೀ ದೊಡ್ಡ ಹೊಡೆತ ನೀಡಿತ್ತು. ಆ ತಪ್ಪನ್ನು ಒರೆಸಿಹಾಕಲು ಭಾರತದ 80% ಸಂಖ್ಯೆಯ ಹಿಂದೂಗಳಿಗೆ ಯಾವ ಕಷ್ಟವೂ ಇರಲಿಲ್ಲ. ಆದರೆ ಸಹಿಷ್ಣು ಹಿಂದೂಗಳು ಹಂತ ಹಂತವಾಗಿ ಎಲ್ಲವನ್ನೂ ಗೆಲ್ಲುತ್ತ ಹೋದರು. 1992ರ ಡಿಸೆಂಬರ್ 6ರಂದು ಒಮ್ಮೆ ಅವರ ತಾಳ್ಮೆಯ ಕಟ್ಟೆ ಒಡೆದು ಹೋಗಿತ್ತು. ಉಳಿದಂತೆ ನ್ಯಾಯಾಲಯದ ಮೂಲಕವೇ ನ್ಯಾಯವನ್ನು ಪಡೆಯಲು 2019ರ ವರೆಗೂ ಕಾದರು.

ನ್ಯಾಯಾಲಯ ಗ್ರೀನ್ ಸಿಗ್ನಲ್ ಕೊಟ್ಟ ನಂತರವೇ ದೇವಸ್ಥಾನದ ಅಡಿಗಲ್ಲು ಹಾಕಿದರು. ಈ ಘಟನೆ ನಡೆದು ಮಂದಿರ ಕಟ್ಟುವ ಕೆಲಸ ಆರಂಭ ಆದಾಗ ಸ್ಫೂರ್ತಿಯಿಂದ ಮಂದಿರದ ಬೆಂಬಲಕ್ಕೆ ನಿಂತರು . ಕೇವಲ 3-4 ತಿಂಗಳಿನಲ್ಲಿ 13 ಕೋಟಿ ಹಿಂದೂ ಕುಟುಂಬಗಳು ತಮ್ಮ ಕಠಿಣ ದುಡಿಮೆಯ ಬಹು ದೊಡ್ಡ ಪಾಲನ್ನು ರಾಮ ಮಂದಿರಕ್ಕಾಗಿ ತಂದು ಸುರಿದರು ಅಂದರೆ ಅದು ಮಿರಾಕಲ್. ಅದಕ್ಕೆ ಕಾರಣ ಜನರು ತೋರಿಸಿದ ರಾಮನ ಪ್ರೀತಿ.

ಇದನ್ನೂ ಓದಿ: Raja Marga Column : ರಾಮ ಮಂದಿರ ಹೋರಾಟದ ಪ್ರಾತಃಸ್ಮರಣೀಯ ಹೆಸರು ಪೇಜಾವರ ಶ್ರೀ!

ರಾಮನು ದೇವರು ಅನ್ನೋದಕ್ಕಿಂತ ಒಬ್ಬ ಆದರ್ಶ ವ್ಯಕ್ತಿ

ಈಶ್ವರ ಮತ್ತು ಕೃಷ್ಣನಿಗೆ ಭಾರತದಲ್ಲಿ ಲಕ್ಷಾಂತರ ಮಂದಿರಗಳು ಇವೆ. ಅದಕ್ಕೆ ಹೋಲಿಸಿದರೆ ರಾಮನ ಮಂದಿರಗಳು ಕಡಿಮೆ. ಆದರೆ ಜನರ ಹೃದಯ ಮಂದಿರದಲ್ಲಿ ರಾಮನು ಒಬ್ಬ ಆದರ್ಶ ವ್ಯಕ್ತಿಯಾಗಿ, ಒಂದು ತತ್ವವಾಗಿ, ಒಬ್ಬ ರಾಜನಾಗಿ ವಿರಾಜಮಾನ ಆಗಿದ್ದಾನೆ. ಅಂತಹ ರಾಮನಿಗೆ ಆತನದ್ದೇ ಹುಟ್ಟಿದ ಸ್ಥಳದಲ್ಲಿ ಜಗತ್ತಿನ ಅತ್ಯಂತ ವೈಭವದ ಮಂದಿರ ಇತ್ತು ಎಂದು ಓದಿಕೊಂಡಿದ್ದ ಹಿಂದೂಗಳಿಗೆ ಅದು ಮತ್ತೆ ಪುನರುತ್ಥಾನ ಆಗ್ತಾ ಇದೆ ಅನ್ನುವುದು ಜೀವಮಾನದ ಘಟನೆ. ಅಯೋಧ್ಯೆಯಲ್ಲಿ ಮುಂದಿನ ಒಂದೆರಡು ವರ್ಷಗಳ ಒಳಗೆ ಒಂದು ದೇಗುಲಗಳ ಸಮುಚ್ಚಯ ನಿರ್ಮಾಣ ಪೂರ್ಣವಾಗಲಿದೆ ಅನ್ನುವುದು ಒಂದು ಜಾಗತಿಕ ಸಂಭ್ರಮ. ಅದೊಂದು ಸಹಸ್ರಮಾನದ ಕನಸು. ಅದರಿಂದಾಗಿ ಇಂದು ಜಗತ್ತಿನ ಎಲ್ಲ ದಾರಿಗಳೂ ಅಯೋಧ್ಯೆಗೆ ತೆರೆದುಕೊಳ್ಳುತ್ತವೆ. ಹಿಂದೂಗಳಿಗೆ ಇಂದೇ ದೀಪಾವಳಿ ಆಚರಣೆ. ಅದು ಹೃನ್ಮನಗಳ ಹಬ್ಬ. ಅದು ಇತಿಹಾಸದ ಸುವರ್ಣ ಪುಟಗಳಲ್ಲಿ ದಾಖಲಾಗುವ ಭಾರೀ ದೊಡ್ಡ ಮತ್ತು ಪ್ರಮುಖ ಘಟನೆ.

ಎಲ್ಲರಿಗೂ ರಾಮಮಂದಿರದ ಲೋಕಾರ್ಪಣೆಯ ದಿನದ ಶುಭಾಶಯಗಳು.

Exit mobile version