Site icon Vistara News

Raja Marga Column : ಕೌಸಲ್ಯಾ ಸುಪ್ರಜಾ ರಾಮ; ಶ್ರೀರಾಮನೆಂಬ ಶಾರ್ದೂಲ ಸದೃಶ ವ್ಯಕ್ತಿತ್ವ

Ramachandra Raja Marga

ಋಷಿ ಮುನಿಗಳು ಮಾಡುತ್ತಿದ್ದ ಯಜ್ಞ ಯಾಗಾದಿಗಳನ್ನು (Havanas by Sages) ರಾಕ್ಷಸರು ಬಂದು ಅಮೇಧ್ಯ ಸುರಿದು ಕೆಡಿಸುತ್ತಿದ್ದಾಗ ಅದನ್ನು ತಡೆಗಟ್ಟಲು ಗುರುಗಳಾದ ವಿಶ್ವಾಮಿತ್ರರು (Sage Vishwamitra) ದಶರಥನ ಅನುಮತಿ ಪಡೆದು ಇನ್ನೂ ಎಳೆಯರಾದ ರಾಮ ಲಕ್ಷ್ಮಣರನ್ನು ಕರೆದುಕೊಂಡು ಹೋಗುತ್ತಾರೆ. ಸರಯೂ ನದಿಯ ತಟದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಶ್ರೀರಾಮನನ್ನು (Sri Ramachandra) ವಿಶ್ವಾಮಿತ್ರರು ಎಬ್ಬಿಸುತ್ತ ಹೇಳುವ ಈ ಶ್ಲೋಕವು ಲೋಕವಿಖ್ಯಾತ ಆಗಿದೆ (Raja Marga Column).

ಕೌಸಲ್ಯಾ ಸುಪ್ರಜಾ ರಾಮ/ಪೂರ್ವ ಸಂಧ್ಯಾ ಪ್ರವೃತ್ತತೆ
ಉತ್ತಿಷ್ಟ ನರಶಾರ್ದೂಲ/ಕರ್ತವ್ಯಮ್ ದೈವಮಾಹ್ನೀಕಮ್

ಕೌಸಲ್ಯೆಯ ಮಗನಾದ ಶ್ರೀರಾಮ ಚಂದ್ರನೇ ಎದ್ದೇಳು. ಪೂರ್ವದ ದಿಗಂತದಲ್ಲಿ ಸೂರ್ಯನ ಪ್ರಭೆ ಕಾಣುತ್ತಿದೆ. ನರ ಶಾರ್ದೂಲನೆ ಎದ್ದೇಳು. ನಿನ್ನ ಕರ್ತವ್ಯಗಳು ನಿನ್ನನ್ನು ಕಾಯುತ್ತಿವೆ ಎಂಬುದು ಅದರ ಭಾವಾರ್ಥ.

ವಿಶ್ವಾಮಿತ್ರರು ರಾಮನನ್ನು ನರ ಶಾರ್ದೂಲ ಎಂದು ಯಾಕೆ ಕರೆದರು?

ಶಾರ್ದೂಲ ಎಂದರೆ ಸಿಂಹಕ್ಕಿಂತ ಬಲಿಷ್ಠವಾದ ಪ್ರಾಣಿ. ಹಾಗೆ ನರ ಶಾರ್ದೂಲ ಎನ್ನುವುದು ಅದ್ಭುತವಾದ ರೂಪಕ. ನಿನ್ನೊಳಗೆ ಶಾರ್ದೂಲ ಶಕ್ತಿ ಇದೆ, ಅದನ್ನು ಜಾಗೃತವಾಗಿ ಮಾಡು. ಆ ಶಕ್ತಿಗಳನ್ನು ನಿನ್ನ ಕರ್ತವ್ಯಕ್ಕಾಗಿ ಉಪಯೋಗ ಮಾಡು ಎಂದು ಗುರುಗಳಾದ ವಿಶ್ವಾಮಿತ್ರರು ತನ್ನ ಶಿಷ್ಯನಿಗೆ ಹೇಳಿದ್ದು ಅತ್ಯಂತ ಅರ್ಥಪೂರ್ಣ ಆಗಿದೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಆಗುತ್ತಾ ಇರುವುದು ರಾಮ ಲಲ್ಲಾನ ಮೂರ್ತಿ. ಅಂದರೆ ಬಾಲಕ ರಾಮನ ಮೂರ್ತಿ. ಪ್ರತಿಯೊಬ್ಬ ತಂದೆ ಮತ್ತು ತಾಯಿ ತನ್ನ ಮಗುವಿನಲ್ಲಿ ಬಹಳ ದೊಡ್ಡ ಕನಸುಗಳನ್ನು ಕಾಣುವುದು ಸಹಜ. ಇಲ್ಲಿ ಗುರುಗಳು ತನ್ನ ಶಿಷ್ಯನಲ್ಲಿ ಆ ಕನಸುಗಳನ್ನು ಬಿತ್ತುತ್ತಾರೆ. ಮುಂದೆ ಅಸದೃಶವಾಗಿ ಬೆಳೆಯುವ ಸಿಂಹ ಸದೃಶ ವ್ಯಕ್ತಿತ್ವವನ್ನು ರಾಮನಲ್ಲಿ ಜಾಗೃತ ಮಾಡುತ್ತಾರೆ.

ರಾಮನಲ್ಲಿ ಎದ್ದು ಕಾಣುವ ಗುಣಗಳು

1) ರಾಮನು ಎಲ್ಲಿಯೂ ಸುಳ್ಳು ಹೇಳಿದ ಪ್ರಸಂಗ ರಾಮಾಯಣದಲ್ಲಿ ಬರುವುದಿಲ್ಲ.
2) ಆತನಿಗೆ ಯಾವುದೇ ವ್ಯಸನಗಳು ಇರಲಿಲ್ಲ. ಜೂಜಾಡಿದ್ದು ಇಲ್ಲವೇ ಇಲ್ಲ.
3) ಶ್ರೀರಾಮನು ಏಕಪತ್ನಿ ವೃತಸ್ಥ. ಅದನ್ನು ಆತ ಎಲ್ಲಿಯೂ ಮುರಿದ ಉದಾಹರಣೆ ಇಲ್ಲ.
4) ಆತನ ರಾಜ್ಯದಲ್ಲಿ ರಾಜನೇ ಎಲ್ಲರಿಗೂ ಮಾದರಿಯಾದ ವ್ಯಕ್ತಿತ್ವ.
5) ಆತನ ರಾಜ್ಯದಲ್ಲಿ ಒಬ್ಬ ಅಗಸನೂ ಗೌರವಾನ್ವಿತ ಪ್ರಜೆ. ಆತನ ಅಭಿಪ್ರಾಯವೂ ಅರಸನಿಗೆ ಶಿರೋಧಾರ್ಯ.

6) ತಾನು ನೆಟ್ಟಗಿರೋದು ಮಾತ್ರವಲ್ಲ, ತನ್ನ ನೆರಳೂ ನೆಟ್ಟಗಿರಬೇಕು ಎನ್ನುವುದು ರಾಮನ ನಿಲುವು.
7) ರಾಜಧರ್ಮದ ಪಾಲನೆಯಲ್ಲಿ ರಾಮನು ತನ್ನ ವೈಯಕ್ತಿಕ ಸುಖಗಳನ್ನು ಕಡೆಗಣಿಸಲು ಹಿಂದೆ ಮುಂದೆ ನೋಡಲಿಲ್ಲ.
8) ಸಂಪತ್ತನ್ನು ಕೂಡಿಡದೇ ಅದರ ಸದ್ವಿನಿಯೋಗ ಮಾಡಿದ್ದಾನೆ.
9) ತನ್ನ ಮೇಲೆ ವಿಶ್ವಾಸವನ್ನು ಇಟ್ಟು ದುಡಿದವರನ್ನು ರಾಮನು ಎಂದಿಗೂ ಮರೆಯಲಿಲ್ಲ. ಅಯೋಧ್ಯೆಯಲ್ಲಿ ಪಟ್ಟಾಭಿಷೇಕ ಆಗುವ ಸಂದರ್ಭ ಎಲ್ಲ ವಾನರರನ್ನು ಕರೆದು ಸತತ ಸತ್ಕಾರ ಮಾಡುತ್ತಾನೆ. ಅಯೋಧ್ಯೆಯಲ್ಲಿ ಹನುಮಂತನಿಗೆ ಒಂದು ಗುಡಿಯನ್ನೇ ಕಟ್ಟಿ ದೈವತ್ವಕ್ಕೆ ಏರಿಸುತ್ತಾನೆ.
10) ರಾಮನು ಪ್ರಾಣಿ, ಪಕ್ಷಿಗಳಲ್ಲಿ ಕೂಡ ಪ್ರೀತಿಯನ್ನು ಮತ್ತು ದಯೆಯನ್ನು ಹೊಂದಿದ್ದಾನೆ. ಜಟಾಯು ಎಂಬ ಹಕ್ಕಿ, ಒಂದು ಅಳಿಲು ಕೂಡ ಆತನ ಪ್ರೀತಿಗೆ ಪಾತ್ರವಾಯಿತು.

11) ಆತನು ಪೂರ್ವ ಸ್ಮಿತ. ಪೂರ್ವ ಭಾಷಿ. ಅಂದರೆ ಅಪರಿಚಿತರು ಸಿಕ್ಕಿದಾಗಲೂ ನಗುವಿನ ಜೊತೆ ಸ್ವಾಗತ ಮಾಡುವವನು. ಮತ್ತು ಆತನೇ ಮೊದಲು ಮಾತಾಡಿಸುವವನು.
12) ಆತನು ಮಿತ ಭಾಷಿ. ಅಗತ್ಯ ಇರುವಷ್ಟೇ ಮಾತಾಡುವವನು.
13) ಆತನು ಭಾವನೆಗಳನ್ನು ಗೆದ್ದವನು. ರಾಗ, ದ್ವೇಷಗಳಿಂದ ಅತೀತನಾದವನು. ಇಡೀ ರಾಮಾಯಣದಲ್ಲಿ ಆತನು ಸಿಟ್ಟು ಮಾಡಿಕೊಂಡ ಎರಡು ಉದಾಹರಣೆಗಳು ದೊರೆಯುತ್ತವೆ. ಅದೂ ತನಗಾಗಿ ಅಲ್ಲ.
14) ರಾಮನು ಮಾನವೀಯತೆಯ ಸಾಕಾರಮೂರ್ತಿ. ತನ್ನನ್ನು ದ್ವೇಷ ಮಾಡಿದವರನ್ನು ಕೂಡ ಪ್ರೀತಿ ಮಾಡಿದವನು.
15) ಶ್ರೀರಾಮನು ಕಣ್ಣೀರು ಸುರಿಸಿದ ಮೂರು ಘಟನೆಗಳು ರಾಮಾಯಣದಲ್ಲಿ ಬರುತ್ತವೆ. ಅದೂ ತನಗಾಗಿ ಅಲ್ಲ.

ಇದನ್ನೂ ಓದಿ : Raja Marga Column : ರಾಮ ಮರ್ಯಾದಾ ಪುರುಷೋತ್ತಮ ಆಗಿದ್ದು ಹೇಗೆ?

16) ತಾನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ. ಆತನ ಒಳಗೆ ಇರುವ ರಾಕ್ಷಸೀ ಪ್ರವೃತ್ತಿಯನ್ನು ಎನ್ನುವ ವೈಚಾರಿಕ ಸ್ಪಷ್ಟತೆ ಆತನಿಗೆ ಇತ್ತು. ಯಾವ ದ್ವೇಷವೂ ಮರಣದ ನಂತರ ಇರಬಾರದು ಎನ್ನುವ ನಿಲುವು ಅದ್ಭುತ.
17) ರಾಮನು ಎಂದಿಗೂ ನ್ಯಾಯಪರ ಆಗಿರುತ್ತಾನೆ. ಆತ ಪಕ್ಷಪಾತ ಧೋರಣೆ ಎಂದಿಗೂ ತೋರಿದ್ದು ಇಲ್ಲ.
18) ಅಧಿಕಾರದ ಆಸೆ ಆತನು ಎಂದಿಗೂ ತೋರಿದ್ದು ಇಲ್ಲ. ಅಧಿಕಾರ ತ್ಯಾಗ ಮಾಡಲು ಆತನು ಎಂದಿಗೂ ಹಿಂದೆ ಮುಂದೆ ನೋಡಿದ್ದೇ ಇಲ್ಲ.
19) ಆತನು ಸ್ಥಿರ ಚಿತ್ತವನ್ನು ಹೊಂದಿದವನು. ರಾಮನ ಮನಸ್ಸು ಎಲ್ಲಿಯೂ ಚಂಚಲ ಆದದ್ದು ಅಥವಾ ದ್ವಂದ್ವಗಳು ಮೂಡಿದ್ದು ಇಲ್ಲವೇ ಇಲ್ಲ.
20) ಉಜ್ವಲವಾದ ರಾಷ್ಟ್ರಪ್ರೇಮ ಆತನ ಹೆಗ್ಗುರುತು. ಜನನೀ ಜನ್ಮಭೂಮಿ ಎರಡೂ ಸ್ವರ್ಗಕ್ಕೆ ಸಮಾನ ಎಂದು ಹೇಳಿದವನು ಆತ.
21) ಆತನು ತಾಳ್ಮೆಯ ಸಾಕಾರ ಮೂರ್ತಿ. ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಲಕ್ಷ್ಮಣನ ಹೆಂಡತಿಯಾದ ಊರ್ಮಿಳೆಯು ತನ್ನ ಗಂಡನನ್ನು ರಾಮನು ಕಾಡಿಗೆ ಕರೆದುಕೊಂಡು ಹೋದ ಬಗ್ಗೆ ಧ್ವನಿ ಏರಿಸಿ ಮಾತಾಡುತ್ತಾಳೆ. ರಾಮನು ಆಕೆಯ ಭಾವನೆಯನ್ನು ಅರ್ಥ ಮಾಡಿಕೊಂಡು ಒಂದಕ್ಷರ ಕೂಡ ಹಿಂದೆ ಮಾತಾಡುವುದಿಲ್ಲ. ಆಕೆಯ ಕ್ಷಮೆ ಕೇಳಲು ಹಿಂದೆ ಮುಂದೆ ನೋಡುವುದಿಲ್ಲ.

ಇಂತಹ ನೂರಾರು ಗುಣಗಳು ಆತನ ವ್ಯಕ್ತಿತ್ವವನ್ನು ರೂಪಿಸಿದವು. ಅದರಿಂದಾಗಿ ಆತನಲ್ಲಿ ಶಾರ್ದೂಲ ಸದೃಶ ವ್ಯಕ್ತಿತ್ವ ಸ್ಥಾಪಿತವಾಯಿತು ಎಂದು ಖಚಿತವಾಗಿ ಹೇಳಬಹುದು.

Exit mobile version