Site icon Vistara News

Raja Marga Column : ಕುರುಡಿ, ಕಿವುಡಿ ಶಿಷ್ಯೆ ಮತ್ತು ಕುರುಡಿ ಟೀಚರ್! ; ಇದು ಜಗತ್ತಿನ ಬೆಸ್ಟ್‌ ಶಿಕ್ಷಕಿಯ ಕತೆ

Anne Sullivan and Helen keller

ಇಂದು ನಾನು ನಿಮಗೆ ಜಗತ್ತಿನ ಅತಿ ಅದ್ಭುತವಾದ ಒಂದು ಗುರು ಹಾಗೂ ಶಿಷ್ಯೆಯರ ಸಂಬಂಧದ ಕಥೆ ಹೇಳಬೇಕು (Raja Marga Column). ಆಕೆ ಆನ್ನಿ ಸುಲೈವಾನ್ (Anne Sullivan, American teacher). ಹುಟ್ಟಿದ್ದು ಅಮೆರಿಕಾದ ಬೋಸ್ಟನ್ ನಗರದಲ್ಲಿ. ಬಡತನದ ಕುಟುಂಬ ಆಕೆಯದ್ದು. ತಂದೆಗೆ ಸಂಸಾರದ ಜವಾಬ್ದಾರಿ ಕಡಿಮೆ ಇತ್ತು. ತಾಯಿಗೆ ನಿರಂತರ ಕಾಯಿಲೆ. ಐದು ಮಕ್ಕಳು ಹುಟ್ಟಿದರೂ ಉಳಿದದ್ದು ಎರಡೇ ಎರಡು! ಅದರಲ್ಲಿ ಒಬ್ಬಳು ಆನ್ನಿ.

ಎಂತಹ ದುರದೃಷ್ಟ ಆಕೆಯದ್ದು ನೋಡಿ. ಆಕೆಗೆ ಐದನೇ ವರ್ಷಕ್ಕೆ ಟ್ರಕೋಮಾ (Trachoma) ಎಂಬ ಕಣ್ಣಿನ ಕಾಯಿಲೆ ಬಂದು ದೃಷ್ಟಿ ಮಂದ ಆಯಿತು. ಕ್ರಮೇಣ ದೃಷ್ಟಿಯು ಹತ್ತು ಶೇಕಡಾ ಮಾತ್ರ ಉಳಿಯಿತು! ಎಂಟನೆಯ ವರ್ಷಕ್ಕೆ ಅಮ್ಮ ತೀರಿಹೋದರು.

ಎರಡು ಮಕ್ಕಳನ್ನು ನೋಡಿಕೊಳ್ಳುವುದು ಅಸಾಧ್ಯ ಎಂದು ಭಾವಿಸಿದ ಅಪ್ಪ ಅವರನ್ನು ಅನಾಥಾಶ್ರಮಕ್ಕೆ ಸೇರಿಸಿ ಕೈ ತೊಳೆದುಕೊಂಡ! ಹಾಗೆ ಆನ್ನಿ ಮತ್ತು ಆಕೆಯ ಸೋದರ ಜಿಮ್ಮಿ ಇಬ್ಬರೂ ಅನಾಥ ಮಕ್ಕಳ ಜೊತೆಗೆ ತಮ್ಮ ಬಾಲ್ಯ ಕಳೆಯಬೇಕಾಯಿತು.

ಆ ಆಶ್ರಮದಲ್ಲಿ ತೀವ್ರ ಅನಾರೋಗ್ಯಕರವಾದ ವಾತಾವರಣ ಇತ್ತು. ಮಿತಿಗಿಂತ ಹೆಚ್ಚು ಮಕ್ಕಳನ್ನು ತುಂಬಿದ್ದರು. ಹಳಸಿದ ಅಂಬಲಿ ಕುಡಿದು ಬದುಕುವ ಅನಿವಾರ್ಯತೆ ಇತ್ತು. ಕೆಲವೇ ತಿಂಗಳಲ್ಲಿ ಸೋದರ ಜಿಮ್ಮಿ ತೀರಿ ಹೋದಾಗ ಆನ್ನಿ ಮತ್ತೆ ಒಬ್ಬಂಟಿ ಆದಳು.

ಹೇಗಾದರೂ ಶಿಕ್ಷಣವನ್ನು ಪಡೆದು ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂಬ ತುಡಿತ ಹೆಚ್ಚಾದಾಗ ಆಕೆ ಕುರುಡು ಮಕ್ಕಳ ಪರ್ಕಿನ್ ಎಂಬ ಶಾಲೆಗೆ ಸೇರಿದರು. ಅಲ್ಲಿಯು ಕೂಡ ಬೇರೆ ಮಕ್ಕಳಿಂದ ಹಿಂಸೆ, ಅಪಮಾನ ಆಕೆ ಎದುರಿಸಬೇಕಾಯಿತು.

ಶಾಲೆಯ ಫೀಸ್ ಕಟ್ಟಲು ಕಷ್ಟ ಆದ ಕಾರಣ ಅಲ್ಲಿ ತಾರತಮ್ಯ ನೀತಿ ತೊಂದರೆ ಕೊಟ್ಟಿತು. ಆದರೆ ಕಲಿಯುವ ಗಟ್ಟಿ ಸಂಕಲ್ಪ ಇದೆಯಲ್ಲ ಅದು ನಿಜಕ್ಕೂ ಶ್ಲಾಘನೀಯವೇ ಆಗಿತ್ತು! ಕಣ್ಣಿನ ದೃಷ್ಟಿಯು ಪೂರ್ತಿ ಹೊರಟುಹೋದ ಕಾರಣ ಆಕೆ ಬ್ರೈಲ್ ಲಿಪಿಯಲ್ಲಿ ಅಕ್ಷರಗಳನ್ನು ಓದಲು ಮತ್ತು ಬರೆಯಲು ಕಲಿಯಬೇಕಾಯಿತು.

ಆಕೆ 20 ವರ್ಷ ಪ್ರಾಯಕ್ಕೆ ಬಂದಾಗ ಆಕೆಯ ಬದುಕಿನಲ್ಲಿ ಒಂದು ಅತ್ಯಂತ ಮಹತ್ವದ ತಿರುವು ಬಂದೇ ಬಿಟ್ಟಿತು. ಅದೇ ನಗರದಲ್ಲಿ ವಾಸಿಸುತ್ತಿದ್ದ ಕೆಲ್ಲರ್ ಕುಟುಂಬವು ಆಕೆಯನ್ನು ಸಂಪರ್ಕ ಮಾಡಿ ಒಂದು ವಿನಂತಿ ಮಾಡಿತು.

ಕೆಲ್ಲರ್ ಕುಟುಂಬದ ಅತ್ಯಂತ ಪ್ರೀತಿಯ ಕುಡಿಯಾದ ಹೆಲೆನ್ ಕೆಲ್ಲರ್ ಅವಳನ್ನು ಓದಿಸಿ, ಬರೆಸುವ ಜವಾಬ್ದಾರಿ ಹೊರಲು ಸಾಧ್ಯವೇ ಎಂದು ಕೇಳಿದಾಗ ಆಕೆ ಖುಷಿಯಿಂದ ಒಪ್ಪಿದಳು. ನಮಗೆಲ್ಲರಿಗೂ ಗೊತ್ತಿರುವಂತೆ ಹೆಲೆನ್ ಕೆಲ್ಲರ್ ಸಂಪೂರ್ಣ ಕುರುಡಿ ಮತ್ತು ಕಿವುಡಿ! ಮಾತು ಕೂಡ ತೊದಲು ಆಗಿತ್ತು. ಹೆಲೆನ್ ಕೆಲ್ಲರ್ ಅತ್ಯಂತ ಸುಂದರಿಯಾದ ಗೊಂಬೆಯೇ ಆಗಿದ್ದಳು.

ಆಗ ಆನ್ನಿಗೆ 20ರ ಹರೆಯ. ಆದರೆ ಆಕೆಗೆ ತನ್ನ ಪ್ರಾಯಕ್ಕೆ ಮೀರಿದ ಪ್ರಬುದ್ಧತೆ, ಜಾಣ್ಮೆ ಹಾಗೂ ತಾಳ್ಮೆ ಇತ್ತು. ಹೆಲೆನ್ ಕೆಲ್ಲರ್ ಕೂಡ ತುಂಬಾ ಬುದ್ಧಿವಂತೆ. ಆದರೆ ಕುರುಡುತನ ಹಾಗೂ ಕಿವುಡುತನ ಅಡ್ಡಿ ಆಗಿದ್ದವು. ಆದರೆ ಆನ್ನಿ ಒಳ್ಳೆಯ ಗುರುವಾಗಿ, ಗೆಳತಿ ಆಗಿ, ತಾಯಿ ಆಗಿ ತನ್ನ ಶಿಷ್ಯೆಯನ್ನು ತಿದ್ದಿ ತೀಡಿದಳು.

ಆನ್ನಿಯು ತನ್ನ ಶಿಷ್ಯೆಯಾದ ಹೆಲೆನ್ ಕೆಲ್ಲರ್‌ ಒಂದೊಂದೇ ಅಕ್ಷರಗಳನ್ನು ಬ್ರೈಲ್ ಲಿಪಿಯ ಮೂಲಕ ಬರೆಯುವುದನ್ನು ಮತ್ತು ಓದುವುದನ್ನು ಕಲಿಸಿದರು. ವಸ್ತುಗಳ ಸ್ಪರ್ಶದಿಂದ ಅನುಭವವನ್ನು ಮತ್ತು ಲೋಕ ಜ್ಞಾನವನ್ನು ಕೊಟ್ಟರು. ಗಣಿತದ ಸಂಖ್ಯೆಗಳನ್ನು ಕೂಡಿಸು, ಕಳೆ, ಗುಣಿಸು, ಭಾಗಿಸು ಮಾಡುವುದನ್ನು ಕಲಿಸಿದರು.

ಜಗತ್ತಿನ ಅತೀ ಉತ್ತಮವಾದ ಪುಸ್ತಕಗಳನ್ನು ಓದಿಸಿದರು. ಆತ್ಮವಿಶ್ವಾಸವನ್ನು ತುಂಬಿದರು. ಶ್ರೇಷ್ಠ ಮೌಲ್ಯಗಳನ್ನು ತುಂಬಿದರು. ಸಂವಹನ ಕಲೆಯನ್ನು ಕಲಿಸಿದರು. ಬಹಳ ವೇದಿಕೆಯಲ್ಲಿ ಭಾಷಣಗಳನ್ನು ಮಾಡಲು ಕಲಿಸಿದರು. ನೂರಾರು ನಗರಗಳಿಗೆ ಆಕೆಯನ್ನು ಸ್ವತಃ ಕರೆದುಕೊಂಡು ಹೋಗಿ ಭಾಷಣಗಳನ್ನು ಮಾಡಿಸಿದರು. ಆಕೆಯಿಂದ ಹಲವು ಪುಸ್ತಕಗಳನ್ನು ಬರೆಸಿದರು.

ಪರಿಣಾಮವಾಗಿ ಹೆಲೆನ್ ಕೆಲ್ಲರ್ ರೆಡ್ ಕ್ಲಿಫ್ ಕಾಲೇಜಿನ ಮೊದಲ ಕುರುಡಿ ಮತ್ತು ಕಿವುಡಿ ಹುಡುಗಿಯಾಗಿ ಪದವಿ ಪಡೆದು ಹೊರಬಂದರು! ಆಕೆಯ ವ್ಯಕ್ತಿತ್ವವನ್ನು ವಿಶ್ವ ಮಟ್ಟಕ್ಕೆ ತಲುಪಿಸಿದ ಕೀರ್ತಿಯು ಖಂಡಿತವಾಗಿ ಆನ್ನಿಗೆ ದೊರೆಯಬೇಕು.

ಆನ್ನಿ ಮುಂದೆ ಹೆಲೆನ್‌ಗೆ ಆ ಕಾಲದ ಖ್ಯಾತ ವಿಜ್ಞಾನಿಗಳಾದ ಥಾಮಸ್ ಆಲ್ವಾ ಎಡಿಸನ್, ಅಲೆಕ್ಸಾಂಡರ್ ಗ್ರಹಾಂ ಬೆಲ್, ಪ್ರಸಿದ್ಧ ತತ್ವಜ್ಞಾನಿ ಮಾರ್ಕ್ ಟ್ವೈನ್ ಮೊದಲಾದವರನ್ನು ಭೇಟಿ ಮಾಡಿಸುತ್ತಾರೆ. ಹಲವು ತಾತ್ವಿಕ ನಾಟಕಗಳನ್ನು ಬರೆಯುತ್ತಾರೆ. ಮುಂದೆ ಹೆಲೆನ್ ಕೆಲ್ಲರ್ ತನ್ನ ಆತ್ಮಚರಿತ್ರೆ ಬರೆಯಲು ಸಹಾಯ ಮಾಡುತ್ತಾರೆ.

ಒಂದು ಅರ್ಧ ಕ್ಷಣ ಕೂಡ ತನ್ನ ಶಿಷ್ಯೆಯನ್ನು ಬಿಟ್ಟು ಇರದೆ ಆಕೆಯ ಬೆಂಬಲಕ್ಕೆ ನಿಲ್ಲುತ್ತಾರೆ. ತನ್ನ ಶಿಷ್ಯೆಯ ಭವಿಷ್ಯಕ್ಕಾಗಿ ತನ್ನ ಖಾಸಗಿ ಜೀವನದ ಮಧುರವಾದ ಕ್ಷಣಗಳನ್ನು ಕೂಡ ಮರೆಯುತ್ತಾರೆ! ಪರಿಣಾಮವಾಗಿ ಆಕೆ ಮದುವೆ ಆದ ಜಾನ್ ಮಾಕಿ ಅವರು ಆನ್ನಿಯನ್ನು ಬಿಟ್ಟು ಹೋಗುತ್ತಾರೆ.

ಇದನ್ನೂ ಓದಿ : Raja Marga Column : ಗೋ ಗೋ ಗೋವಾ!; ಒಂದು ಕಾಲದ ಕುಡುಕರ ರಾಜ್ಯ ಈಗ ಸಾಂಸ್ಕೃತಿಕ ರಾಜಧಾನಿ ಆಗಿದ್ದು ಹೇಗೆ?

ಆದರೆ ಗುರು ಶಿಷ್ಯೆಯರ ಪ್ರೀತಿಯ ಮಧುರ ಸಂಬಂಧವು ಕೊನೆಯವರೆಗೂ ಹಾಗೆಯೇ ಉಳಿಯುತ್ತದೆ. ಮುಂದೆ ಹೆಲೆನ್ ಕೆಲ್ಲರ್ ವಿಶ್ವಮಟ್ಟದ ಐಕಾನ್ ಆಗುತ್ತಾರೆ. ಜಗತ್ತಿನಾದ್ಯಂತ ಪ್ರವಾಸ ಹೋಗುತ್ತಾರೆ. ಆಕೆ ಹೋದಲ್ಲೆಲ್ಲ ಆನ್ನಿ ತನ್ನ ಶಿಷ್ಯೆಯ ನೆರಳಾಗಿ ಹೋಗುತ್ತಾಳೆ. ಆಕೆಯಿಂದ ಸ್ಫೂರ್ತಿ ಪಡೆದು ಹೆಲೆನ್ ಕೆಲ್ಲರ್ ಅಂಧರ ಸ್ಫೂರ್ತಿ ದೇವತೆ ಆಗುತ್ತಾರೆ. ಜಾಗತಿಕ ಲಯನ್ಸ್ ಸಂಸ್ಥೆ ಅವರನ್ನು ತನ್ನ ಐಕಾನ್ ಆಗಿ ಸ್ವೀಕಾರ ಮಾಡಿತು.
ಹೆಲೆನ್ ಕೆಲ್ಲರ್ ಅವರ ಸಾಧನೆಯ ಯಾವ ಪುಟವನ್ನು ಓದಿದರೂ ಅವರ ಗುರುವಾದ ಆನ್ನಿ ಸುಲೈವಾನ್ ಉಲ್ಲೇಖ ಮಾಡದೆ ಅದು ಪೂರ್ತಿ ಆಗುವುದಿಲ್ಲ!

Exit mobile version