ಪ್ರತೀ ವರ್ಷ ನೊಬೆಲ್ ಶಾಂತಿ ಪ್ರಶಸ್ತಿ (Nobel Peace Prize) ಘೋಷಣೆ ಆದಾಗ ಇಡೀ ವಿಶ್ವವೇ ಕುತೂಹಲದಿಂದ ಗಮನಿಸುತ್ತದೆ (Raja Marga Column). ಈ ಬಾರಿ ಕೂಡ ಹಲವಾರು ಮಂದಿ ಪ್ರಶಸ್ತಿಯ ರೇಸಲ್ಲಿ ಇದ್ದರು. ಆದರೆ ಕೊನೆಗೆ ಆ ಪ್ರಶಸ್ತಿ ಒಲಿದದ್ದು ಇರಾನಿನ ಆ ಉಕ್ಕಿನ ಮಹಿಳೆಗೆ. ಆಕೆ ನರ್ಗೀಸ್ ಮೊಹಮ್ಮದಿ! (Narges Mohammadi)
ಆ ಹೆಸರು ಇಂದು ಇರಾನಿನ ಯುವ ಸಮುದಾಯದಲ್ಲಿ ಹೋರಾಟದ ಬೆಂಕಿಯನ್ನು ಸುರಿಯುತ್ತದೆ ( Iranian human rights activist and Nobel laureate). ಶತಮಾನಗಳಿಂದ ಧ್ವನಿ ಕಳೆದುಕೊಂಡ ಮಹಿಳೆಯರು ಆಕೆಯ ಪರವಾಗಿ ನಿಂತಿದ್ದಾರೆ. ಆಕೆ ಒಂದು ಕರೆ ಕೊಟ್ಟರೆ ಇರಾನಿನ ಮಹಿಳೆಯರು ಬೀದಿಗೆ ಇಳಿದು ಬರುತ್ತಾರೆ ಅಂದರೆ ಆಕೆ ನಿಜಕ್ಕೂ ಗ್ರೇಟ್.
ನಮಗೆಲ್ಲ ತಿಳಿದಿರುವಂತೆ ಇರಾನ್ ಒಂದು ಸರ್ವಾಧಿಕಾರಿ ರಾಷ್ಟ್ರ. 1979ರಲ್ಲಿ ಮತ ಬೋಧಕ ಆಯತುಲ್ ಖೋಮೇನಿ ಇರಾನ್ ಸರಕಾರವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಅಲ್ಲಿ ಮಹಿಳೆಯರು ಉನ್ನತ ಶಿಕ್ಷಣ ಪಡೆಯುವ ಹಾಗಿಲ್ಲ. ಬಿಗಿಯಾದ ವಸ್ತ್ರ ಸಂಹಿತೆ ಪಾಲಿಸಬೇಕು. ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವ ಹಾಗೆ ಇಲ್ಲ. ಸರಕಾರದ ವಿರುದ್ಧ ಗಟ್ಟಿಯಾಗಿ ಮಾತಾಡುವ ಹಾಗೆ ಇಲ್ಲ.
ಅಂತಹ ಉಸಿರು ಕಟ್ಟಿದ ಸಮಾಜದಲ್ಲಿ ಜನ್ಮ ತಾಳಿದ ನರ್ಗೀಸ್ ಬಾಲ್ಯದಿಂದಲೂ ಸ್ವತಂತ್ರ ಮನೋಭಾವದವರು. ದಬ್ಬಾಳಿಕೆ ಸಹಿಸುವುದು ಅವರಿಗೆ ಆಗುವುದಿಲ್ಲ. ಅದಕ್ಕಾಗಿ ಸರಕಾರದ ಬಿಗಿ ಕಾನೂನು ಧಿಕ್ಕರಿಸಿ ಆಕೆ ವಿಜ್ಞಾನ ಪದವಿ ಪಡೆಯುತ್ತಾರೆ. ಎಂಜಿನಿಯರಿಂಗ್ ಶಿಕ್ಷಣ ಕೂಡ ಪಡೆಯುತ್ತಾರೆ. ತನ್ನ ಪ್ರತಿಭೆಯಿಂದ ಉದ್ಯೋಗವನ್ನು ಕೂಡ ಸಂಪಾದನೆ ಮಾಡುತ್ತಾರೆ (1990).
ಆಗ ಶಿರಿನ್ ಎಬಡಿ ಅವರನ್ನು ಭೇಟಿ ಆಗುತ್ತಾರೆ
ಯಾವಾಗ ನರ್ಗೀಸ್ ಅವರು ಶಿರಿನ್ ಎಂಬ ಹೋರಾಟಗಾರ ಮಹಿಳೆಯನ್ನು ಭೇಟಿ ಮಾಡಿದರೋ ಅವರ ಬದುಕಿನಲ್ಲಿ ಮಹತ್ವದ ತಿರುವು ಬಂದಿತು. ಶಿರಿನ್ ಅದೇ ಇರಾನಿನಲ್ಲಿ ಮಾನವ ಹಕ್ಕುಗಳ ಹೋರಾಟಗಾರ್ತಿ ಆಗಿ ನೋಬೆಲ್ ಪ್ರಶಸ್ತಿ ಪಡೆದವರು. ಹಾಗೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮೊದಲ ಮುಸ್ಲಿಂ ಮಹಿಳೆ ಅಂದರೆ ಶಿರಿನ್. ಆಕೆ ಸ್ಥಾಪನೆ ಮಾಡಿದ್ದ ‘ಡಿಫೆಂಡರ್ ಆಫ್ ಹ್ಯೂಮನ್ ರೈಟ್ಸ್’ ಎಂಬ ಸಂಸ್ಥೆಯು ಆಗ ಇರಾನಿನಲ್ಲಿ ಯುವಜನತೆಯ ಹಾರ್ಟ್ ತ್ರಾಬ್ ಆಗಿತ್ತು. ನರ್ಗೀಸ್ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಅದೇ ಸಂಘಟನೆ ಸೇರುತ್ತಾರೆ.
ನರ್ಗೀಸ್ ಹೋರಾಟಕ್ಕೆ ವೇದಿಕೆ
ನರ್ಗೀಸ್ ತನ್ನ ದಿಟ್ಟ ಹೋರಾಟ, ಬೆಂಕಿ ಉಗುಳುವ ಭಾಷಣ ಮತ್ತು ಪತ್ರಿಕಾ ಲೇಖನಗಳ ಮೂಲಕ ಬಹಳ ಬೇಗ ಜನಪ್ರಿಯ ಆದರು. ಧ್ವನಿ ಕಳೆದುಕೊಂಡ ಮಹಿಳೆಯರು ಆಕೆಯ ಭಾಷಣಗಳನ್ನು ಕೇಳಲು ಬೀದಿಗೆ ಇಳಿದು ರ‍್ಯಾಲಿ ಮಾಡಲು ಆರಂಭಿಸಿದರು. ವಿವಿಧ ದೇಶಗಳ ಕಾನೂನು ಅಧ್ಯಯನ ಮಾಡಿ ನರ್ಗೀಸ್ ಮಾಡುತ್ತಿದ್ದ ಆಕ್ರೋಶ ಇದ್ದ ಭಾಷಣಗಳು ಇರಾನ್ ಸರಕಾರಕ್ಕೆ ದೊಡ್ಡ ತಲೆನೋವು ತಂದಿತು. ಸರಕಾರ ಆಕೆಯ ಮೇಲೆ ದೇಶದ್ರೋಹದ ಐದು ಬಿಗಿಯಾದ ಕೇಸ್ ದಾಖಲಿಸಿ ಆಕೆಯನ್ನು ಸೆರೆಮನೆಗೆ ತಳ್ಳಿತು.
ವಿಚಾರಣೆಯ ನಾಟಕ, ಕಠಿಣ ಶಿಕ್ಷೆ
ಆ ಟೆಹ್ರಾನ್ ಸೆರೆಮನೆಯು ವಾಸಿಸಲು ಯೋಗ್ಯವಾಗಿ ಇರಲಿಲ್ಲ. ಇಡೀ ದೇಶದ ನಾಲ್ಕನೇ ಒಂದರಷ್ಟು ರಾಜಕೀಯ ಕೈದಿಗಳು ಅಲ್ಲಿಯೇ ಇದ್ದರು. ಆದರೆ ಯಾರನ್ನೂ ಭೇಟಿ ಮಾಡಲು ಅವಕಾಶ ಇರಲಿಲ್ಲ. ಫೋನ್ ಮಾಡಲು, ಪತ್ರ ಬರೆಯಲು ಅವಕಾಶ ಇರಲಿಲ್ಲ. ಸೆರೆಮನೆಯ ಅಧಿಕಾರಿಗಳು ಆಕೆಗೆ ತನ್ನ ತಪ್ಪುಗಳಿಗೆ ಕ್ಷಮೆ ಕೇಳಬೇಕು ಎಂದು ಷರತ್ತು ವಿಧಿಸಿತು. ಆಕೆ ಒಪ್ಪಲಿಲ್ಲ. ಕೋರ್ಟಿನಲ್ಲಿ ಸರಕಾರಿ ವಕೀಲರು ಆಕೆಯ ವಿರುದ್ಧವಾಗಿ ವಾದ ಮಂಡಿಸಿದರು.
ಇರಾನ್ ಸರಕಾರವು ಆಕೆಯನ್ನು 13 ಬಾರಿ ಬಂಧಿಸಿತು! ದೇಶದ್ರೋಹದ ಐದು ಕೇಸ್ ದಾಖಲಿಸಿ ಚಾರ್ಜ್ ಶೀಟ್ ಹಾಕಿತು. ತೀರ್ಪು ಅವಳ ವಿರುದ್ಧವಾಗಿ ಬಂದಿತು. ಆಕೆಗೆ ಕೋರ್ಟು ವಿಧಿಸಿದ್ದು 31 ವರ್ಷಗಳ ಕಠಿಣ ಸೆರೆಮನೆಯ ಶಿಕ್ಷೆ! ಅದರ ಜೊತೆಗೆ ಕ್ರೂರವಾದ 154 ಛಡಿ ಏಟುಗಳ ಶಿಕ್ಷೆ! ಆಕೆಯು ಎಲ್ಲವನ್ನೂ ಹಲ್ಲು ಕಚ್ಚಿ ಸಹಿಸಿಕೊಂಡಳು.
ಆ ಉಸಿರು ಕಟ್ಟಿದ ಕೋಣೆಯಲ್ಲಿ ಒಂದು ಸಣ್ಣ ಕಿಟಕಿ ಮಾತ್ರ ಇತ್ತು. ಅದನ್ನು ತೆರೆದು ನೋಡಿದಾಗ ಅತ್ಯಂತ ಸುಂದರವಾದ ಹಸಿರು ಬಣ್ಣ ಹೊದ್ದು ಮಲಗಿದ ಆಲ್ಬು ಜ್ ಪರ್ವತ ಶ್ರೇಣಿ ಕಣ್ಣಿಗೆ ಎಟುಕುತ್ತಿತ್ತು. ಆ ದೃಶ್ಯ ಮಾತ್ರ ಆಕೆಗೆ ಪ್ರೇರಣೆ ಕೊಡುವಂತದು.
ಅಂತಹ ಅಸಹನೀಯ ಬದುಕಿನ ನಡುವೆ ಕೂಡ ಆಕೆ ತನ್ನ ಹೋರಾಟದ ಕಿಚ್ಚನ್ನು ಕಳೆದುಕೊಳ್ಳಲಿಲ್ಲ. ನನ್ನ ಇರಾನಿನ ತಾಯಂದಿರು ತಮ್ಮ ಹಕ್ಕುಗಳನ್ನು ಪಡೆಯುವತನಕ ತಾನು ವಿರಮಿಸುವುದಿಲ್ಲ ಎಂದಾಕೆ ಸಂಕಲ್ಪ ಮಾಡಿ ಆಗಿತ್ತು. ಸೆರೆಮನೆಯಿಂದ ಆಕೆ ಬರೆದ ಒಂದು ಪತ್ರಿಕಾ ಲೇಖನ ಇರಾನಿನಲ್ಲಿ ಬೆಂಕಿ ಹಚ್ಚಿತು.
ಸೆರೆಮನೆಯಲ್ಲಿ ಕುಳಿತು ಆಕೆ ಬರೆದ ಒಂದು ರಹಸ್ಯ ಪತ್ರವು ಅದು ಹೇಗೋ ಅಂದಿನ ಜನಪ್ರಿಯ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಕಚೇರಿ ತಲುಪಿತು. ಅದರ ಶೀರ್ಷಿಕೆ – The more you lock us up, the stronger we become. ಆ ಲೇಖನವು ಪತ್ರಿಕೆಯ ಮುಖಪುಟದಲ್ಲಿ ಪ್ರಕಟ ಆಯಿತು. ಅದು ಇರಾನಿನಲ್ಲಿ ಎಷ್ಟು ಬೆಂಕಿ ಹಚ್ಚಿತು ಅಂದರೆ ಇರಾನ್ ಸರಕಾರವು ಸೆರೆಮನೆಯ ಅಧಿಕಾರಿಗಳನ್ನು ಅಮಾನತು ಮಾಡಿತು. ಜಾಗತಿಕ ನ್ಯಾಯಾಲಯವು ಇರಾನ್ ಸರಕಾರಕ್ಕೆ ಒಂದು ನೋಟಿಸ್ ಜಾರಿ ಮಾಡಿತು. ಇರಾನ್ ಸರಕಾರವು ಅದಕ್ಕೆ ಉತ್ತರ ಕೊಡದೆ ಧಿಮಾಕು ತೋರಿತು. ನರ್ಗೀಸ್ ಮೇಲೆ ಇನ್ನೊಂದು ಬಿಗಿ ಕೇಸ್ ದಾಖಲು ಆಯಿತು.
ಇದನ್ನೂ ಓದಿ: Raja Marga Column : ಬ್ರಿಜ್ ಮ್ಯಾನ್ ಆಫ್ ಇಂಡಿಯಾ!; ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್
ನನ್ನ ಹೋರಾಟ ನಿಲ್ಲುವುದಿಲ್ಲ ಎಂದರು ನರ್ಗೀಸ್
ಯಾವ ರೀತಿ ಸರಕಾರ ತನ್ನ ಮಾನವ ಹಕ್ಕುಗಳ ಮತ್ತು ಮಹಿಳೆಯರ ಹಕ್ಕುಗಳ ಪರವಾದ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ಪಟ್ಟರೂ ತಾನು ವಿರಮಿಸುವುದಿಲ್ಲ ಎಂದಿದ್ದಾರೆ ನರ್ಗೀಸ್. ಆಕೆ ಇನ್ನೂ ಸೆರೆಮನೆಯಲ್ಲಿಯೇ ಇದ್ದಾರೆ. ಇಂತಹ ಸಂದರ್ಭದಲ್ಲಿ ಆಕೆಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಆಗಿದೆ!
2023 peace laureate Narges Mohammadi is a woman, a human rights advocate, and a freedom fighter. This year’s #NobelPeacePrize also recognises the hundreds of thousands of people who have demonstrated against the theocratic regime’s policies of discrimination and oppression… pic.twitter.com/U3DhCvYE3A
— The Nobel Prize (@NobelPrize) October 6, 2023
ಇದು ಇರಾನಿನ ಮಾನವ ಹಕ್ಕುಗಳ ಹೋರಾಟಗಾರರಿಗೆ ಭಾರೀ ಸಂತೋಷ ತಂದಿದೆ. ನರ್ಗೀಸ್ ಕತ್ತಲೆಯ ಕೋಣೆಯಲ್ಲಿ ಕುಳಿತು ‘ಗೆಲುವು ಹತ್ತಿರ ಇದೆ ಅನ್ನುವುದರ ಸೂಚನೆ ಇದು. ಇಡೀ ವಿಶ್ವ ಸಮುದಾಯ ಈಗ ನಮ್ಮ ಪರವಾಗಿ ನಿಲ್ಲಬೇಕು’ ಅಂದಿದ್ದಾರೆ. ನಾನು ಜೀವನ ಪೂರ್ತಿ ಇರಾನಿನ ಧ್ವನಿ ಕಳೆದುಕೊಂಡ ಮಹಿಳೆಯರ ಪರವಾಗಿ ನಿಲ್ಲುತ್ತೇನೆ ಎಂದು ಗಟ್ಟಿಯಾಗಿ ಹೇಳಿದ್ದಾರೆ. ತನಗೆ ದೊರೆತ ಈ ಮಹಾ ಪ್ರಶಸ್ತಿಯನ್ನು ಅದೇ ಮಹಿಳೆಯರಿಗೆ ಅರ್ಪಣೆ ಮಾಡಿದ್ದಾರೆ.