ಅಮ್ಮೆಂಬಳ ಸುಬ್ಬರಾವ್ ಪೈ (Ammembala Subbarao Pai) ಅವರು ಬ್ಯಾಂಕಿಂಗ್ ವ್ಯವಸ್ಥೆಗೆ (Banking System) ಭಾರೀ ಸ್ಫೂರ್ತಿಯನ್ನು ನೀಡಿದ ಕೆನರಾ ಬ್ಯಾಂಕನ್ನು (Canara Bank) ದೇಶಕ್ಕೆ ಕೊಡುಗೆಯಾಗಿ ನೀಡಿದವರು. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ಇಂದು ಭಾರೀ ಕೀರ್ತಿಯನ್ನು ಪಡೆದಿರುವ ಮಂಗಳೂರಿನ ಕೆನರಾ ವಿದ್ಯಾಸಂಸ್ಥೆಗಳನ್ನು (Canara Education Institutes) ಸಮರ್ಪಣೆ ಮಾಡಿದವರು (Raja Marga Column).
ಅಮ್ಮೆಂಬಳ ಸುಬ್ಬರಾವ್ ಪೈ ಅವರು 1852ರ ಇಸವಿಯ ನವೆಂಬರ್ 19ರಂದು ಮಂಗಳೂರಿನ ಹತ್ತಿರ ಇರುವ ಮೂಲ್ಕಿಯಲ್ಲಿ ಜನಿಸಿದರು. ಅವರ ತಂದೆ ಉಪೇಂದ್ರ ಪೈ ಅವರು ಮುನ್ಸಿಫರ ಕೋರ್ಟನಲ್ಲಿ ಜನಪ್ರಿಯ ವಕೀಲರಾಗಿದ್ದರು.
ಮಂಗಳೂರಿನ ಕನ್ನಡ ಶಾಲೆಯಲ್ಲಿ ಓದಿ ಎಫ್.ಎ ಪರೀಕ್ಷೆ ಮುಗಿಸಿದ ನಂತರ ಸುಬ್ಬರಾವ್ ಪೈ ಅವರು ಮದ್ರಾಸಿಗೆ ತೆರಳಿ ಪದವಿ ಮತ್ತು ಕಾನೂನು ಪದವಿಗಳನ್ನು ಪಡೆದರು. ಅಲ್ಲಿ ಅವರಿಗೆ ದೊರೆತ ಜಸ್ಟೀಸ್ ಹಾಲೋವೇ ಎಂಬ ಶಿಕ್ಷಕರ ವ್ಯಕ್ತಿತ್ವವು ಅವರ ಮೇಲೆ ಭಾರೀ ಪ್ರಭಾವ ಬೀರಿತು. ‘ಸ್ವಂತಕ್ಕಿಂತ ಸಮಾಜಕ್ಕೆ ಹೆಚ್ಚು’ ಎಂಬ ಕಲ್ಪನೆ ಕೊಟ್ಟದ್ದೇ ಅವರು.
1876ರಲ್ಲಿ ತಮ್ಮ ತಂದೆಯವರು ನಿಧನ ಆದ ಕಾರಣದಿಂದ ಮಂಗಳೂರಿಗೆ ಹಿಂದಿರುಗಿದ ಸುಬ್ಬರಾವ್ ಪೈಯವರು ಉತ್ತಮವಾಗಿ ವಕೀಲಿ ವೃತ್ತಿ ನಡೆಸುತ್ತಿದ್ದರು. ತಮಗೆ ದುಡ್ಡು ಬಾರದಿದ್ದರೂ ಚಿಂತೆಯಿಲ್ಲ ಎಂಬ ಧೋರಣೆ ಅವರದ್ದು. ಅದಕ್ಕಾಗಿ ಆದಷ್ಟೂ ಕೋರ್ಟಿನ ಹೊರಗೇ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಅವರ ಪ್ರಯತ್ನ ಜಾರಿಯಲ್ಲಿ ಇತ್ತು. ಅವರಿಗೆ ದುಡ್ಡು ಆದ್ಯತೆ ಆಗಿರಲಿಲ್ಲ.
ಕೆನರಾ ವಿದ್ಯಾಸಂಸ್ಥೆಗಳ ಸ್ಥಾಪನೆ
1891ರ ಹೊತ್ತಿಗೆ ಶಿಕ್ಷಕರಾಗಿದ್ದ ಅವರ ಕೆಲವು ಸ್ನೇಹಿತರು ಮಂಗಳೂರಿನಲ್ಲಿ ಉತ್ತಮ ಶಾಲೆಗಳ ಕೊರತೆಯನ್ನು ಪ್ರಸ್ತಾಪಿಸಿದರು. ಆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಅವರು ತುಂಬಾ ಕಾಳಜಿಯನ್ನು ವಹಿಸಿ ಕೆನರಾ ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿದರು. ಮಂಗಳೂರಿನ ಕೇಂದ್ರ ಭಾಗದಲ್ಲಿ ಅವರ ತಂದೆ ಉಪೇಂದ್ರ ಪೈ ಅವರು ಉಚಿತವಾಗಿ ಕೊಟ್ಟ 22 ಎಕರೆ ಜಾಗದಲ್ಲಿ ಇಂದು ಕೆನರಾ ವಿದ್ಯಾಸಂಸ್ಥೆಗಳು ತಲೆ ಎತ್ತಿ ನಿಂತಿರುವುದನ್ನು ನೋಡುವುದೇ ಚಂದ. ಆ ವಿದ್ಯಾಸಂಸ್ಥೆಯಲ್ಲಿ ಇಂದು ಸಾವಿರಾರು ವಿದ್ಯಾರ್ಥಿಗಳು ಕ್ವಾಲಿಟಿ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಯಾವಾಗಲೂ ಹೇಳುತ್ತಿದ್ದ ಮುಖ್ಯವಾದ ಮಾತು – ನಿಮ್ಮ ಗುರಿಗಳ ಮೇಲೆ ಫೋಕಸ್ ಮಾಡಿ. ಆಗ ಲಾಭವು ನಿಮ್ಮನ್ನು ಅನುಸರಿಸಿಕೊಂಡು ಬರುತ್ತದೆ.
ಅದಾದ ನಂತರ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುವಂತೆ 1894ರಲ್ಲಿ ಕೆನರಾ ಹೆಣ್ಣು ಮಕ್ಕಳ ಹೈಸ್ಕೂಲನ್ನು ಕೂಡ ಅವರು ತೆರೆದರು. ಅಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಬಗೆಗೆ ಸಮಾಜದಲ್ಲಿ ಪ್ರೋತ್ಸಾಹದ ವಾತಾವರಣ ಇರಲಿಲ್ಲ. ಆದ್ದರಿಂದ ಕೆನರಾ ವಿದ್ಯಾಸಂಸ್ಥೆಯ ಸ್ಥಾಪನೆಯು ಕ್ರಾಂತಿಕಾರಕ ಹೆಜ್ಜೆಯೇ ಆಗಿತ್ತು.
ಮುಂದೆ ಕೆನರಾ ವಿದ್ಯಾಸಂಸ್ಥೆಗಳು ಭಾರೀ ದೊಡ್ಡ ಹೆಮ್ಮರ ಆಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುತ್ತಾ ಮುಂದೆ ಸಾಗಿವೆ. ಶತಮಾನೋತ್ಸವ ಕಂಡಿವೆ.
ಹೆಣ್ಣುಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಅಂದಿನ ದಿನಗಳಲ್ಲಿ ನಿರುತ್ಸಾಹದ ವಾತಾವರಣವನ್ನು ಕಂಡಾಗ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಕಂಡುಹಿಡಿದ ಪರಿಹಾರವು ಅದ್ಭುತವಾಗಿಯೇ ಇತ್ತು. ಅದು ಉಳಿತಾಯ ಪ್ರಜ್ಞೆ.
ಹಿಡಿಯಕ್ಕಿಯಿಂದ ಆರಂಭ ಆಯಿತು ಕೆನರಾ ಬ್ಯಾಂಕ್!
ತಮ್ಮ ಹೆಣ್ಣು ಮಕ್ಕಳಿಗೆ ಓದು ಬರಹ ಬೇಕು ಎಂದು ಆಸೆ ಪಡುವ ತಾಯಿಯರು ಪ್ರತೀದಿನ ‘ಹಿಡಿ ಅಕ್ಕಿ ಉಳಿಸಿ’ ಎಂಬ ಅಭಿಯಾನದ ಮೂಲಕ ಅಮ್ಮೆಂಬಳ ಪೈಯವರು ಜನರಲ್ಲಿ ಜಾಗೃತಿಯನ್ನು ಮೂಡಿಸಿದರು. ಇದೇ ಉಳಿತಾಯದ ಶ್ರೇಷ್ಠ ಚಿಂತನೆಯು ಮುಂದೆ ಯಶಸ್ವಿಯಾಗಿ ಅವರಿಂದ ಹುಟ್ಟಿದ್ದು ‘ಹಿಂದೂ ಪರ್ಮನೆಂಟ್ ಫಂಡ್ʼ ಎಂಬ ಹಣಕಾಸು ಸಂಸ್ಥೆ. ಇದೇ ಮುಂದೆ ಕೆನರಾ ಬ್ಯಾಂಕ್ ಆಯಿತು.
‘ಉತ್ತಮ ಬ್ಯಾಂಕ್ ಎನ್ನುವುದು ಸಮಾಜದ ಆರ್ಥಿಕ ಶಕ್ತಿಯ ಕೇಂದ್ರ ಮಾತ್ರವಲ್ಲ, ಅದು ಸಾಮಾನ್ಯ ಜನರ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸುವ ಜವಾಬ್ಧಾರಿಯನ್ನು ತನ್ನ ಮೇಲಿರಿಸಿಕೊಂಡಿದೆ’ ಎಂಬುದು ಅಮ್ಮೆಂಬಳ ಸುಬ್ಬರಾವ್ ಪೈ ಅವರು ಬಲವಾಗಿ ನಂಬಿದ ಧ್ಯೇಯ ಆಗಿತ್ತು. ಲಾಭದ ಗಳಿಕೆಗಿಂತ ಜನಸಾಮಾನ್ಯರ ಆರ್ಥಿಕ ಸಬಲೀಕರಣವು ಅವರ ಉದ್ದೇಶವಾಗಿತ್ತು.
ಬ್ರಿಟಿಷ್ ಬ್ಯಾಂಕುಗಳ ತಾರತಮ್ಯದ ವಿರುದ್ಧ ಸಿಡಿದು ನಿಂತ ಕೆನರಾ ಬ್ಯಾಂಕ್
1906ರಲ್ಲಿ ಕೆನರಾ ಬ್ಯಾಂಕ್ ಸ್ಥಾಪನೆಯು ಆಗಿನ ಕಾಲದಲ್ಲಿ ಭಾರೀ ಸಂಚಲನವನ್ನು ಮೂಡಿಸಿದ್ದು ಹೇಗೆ?
ಅದು ಶತಮಾನದ ಆರಂಭದ ದಶಕ. ಭಾರತದಲ್ಲಿ ಆಗ ಬ್ರಿಟನ್ ರಾಣಿಯ ಆಡಳಿತ. ಮಂಗಳೂರಿನಲ್ಲಿ ಆಗ ಇದ್ದದ್ದು ಬ್ರಿಟಿಷರಿಗೆ ಸೇರಿದ ಮದ್ರಾಸ್ ಬ್ಯಾಂಕಿನ ಶಾಖೆಯೊಂದೇ! ಸಂಪೂರ್ಣವಾಗಿ ಬ್ರಿಟಿಷ್ ಅಧಿಕಾರಿಗಳೇ ತುಂಬಿದ್ದ ಈ ಬ್ಯಾಂಕ್‌ನಲ್ಲಿ ಭಾರತೀಯರು ಕಾರಕೂನರ ಮತ್ತು ಜವಾನನ ಕೆಲಸಕ್ಕೆ ಮಾತ್ರ ನೇಮಕ ಆಗುತ್ತಿದ್ದರು. ಆ ಬ್ಯಾಂಕ್ ಕೇವಲ ಶ್ರೀಮಂತರತ್ತ ಮಾತ್ರ ಮುಖವನ್ನು ಮಾಡಿತ್ತು. ಆದರೆ ಅದು ವಿಧಿಸುತ್ತಿದ್ದ ಬಡ್ಡಿ ಮಾತ್ರ ವಿಪರೀತ ಪ್ರಮಾಣದ್ದಾಗಿತ್ತು. ಬಡವರು ಬ್ಯಾಂಕಿನ ಒಳಗೆ ಬರಲು ಸಾಧ್ಯವೇ ಇರಲಿಲ್ಲ!
ಜನ ಸಾಮಾನ್ಯರು ತಮ್ಮ ಕಠಿಣ ದುಡಿಮೆಯ ಹಣವನ್ನು ಸುರಕ್ಷಿತವಾಗಿಡಲು ಪಡುತ್ತಿದ್ದ ಕಷ್ಟಗಳು, ಸಂಕಷ್ಟದ ವೇಳೆ ಸಾಲಕ್ಕಾಗಿ ಅಲೆದಾಡುತ್ತಿದ್ದ ಕಷ್ಟವನ್ನು ನೋಡಿ ಸುಬ್ಬರಾವ್ ಪೈ ಅವರು ಭಾರೀ ಚಿಂತನೆಗೆ ತೊಡಗಿದರು. ಬಡವರ ಕಷ್ಟಗಳಿಗೆ ಅವರ ಮನಸ್ಸು ಕರಗಿತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಣದಿಂದಲೇ ನಿಧಿ ಸ್ಥಾಪಿಸಿ, ಉಳಿತಾಯದ ಅವಕಾಶ ಮತ್ತು ಸಾಲವನ್ನು ನೀಡುವುದು ಅವರ ಉದೇಶ ಆಗಿತ್ತು.
ವಿಶೇಷವಾಗಿ ಶಿಕ್ಷಣದ ಸಾಲ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಕೆನರಾ ಬ್ಯಾಂಕಿನ ಆದ್ಯತೆ ಆಗುವಂತೆ ಅವರು ಮಾಡಿದರು. ಹೆಣ್ಣುಮಕ್ಕಳ ಶೈಕ್ಷಣಿಕ ಸಾಲವನ್ನು ಆದ್ಯತೆಯ ಸಾಲವಾಗಿ ಅವರು ಘೋಷಣೆ ಮಾಡಿದರು.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ‘ಆದ್ಯತೆಯ ಸಾಲ’ ನೀಡಿದ ದೇಶದ ಮೊದಲ ಬ್ಯಾಂಕು ಎಂಬ ಕೀರ್ತಿಯು ಕೂಡ ಕೆನರಾ ಬ್ಯಾಂಕಿಗೆ ದೊರೆಯಿತು! ಇದೆಲ್ಲವೂ ಅಮ್ಮೆಂಬಳ ಸುಬ್ಬರಾವ್ ಪೈ ಅವರ ದೂರದೃಷ್ಟಿಯ ಸಂಕೇತವೇ ಆಗಿದೆ.
ಕೆನರಾ ಬ್ಯಾಂಕಿನ ನಿಧಿಯನ್ನು ಸಂಗ್ರಹಿಸಲು ಸುಬ್ಬರಾವ್ ಪೈ ಅವರು ಹಾಕಿದ ಶ್ರಮವು ಅಷ್ಟಿಷ್ಟಲ್ಲ. ಅವರು ಎತ್ತಿನ ಗಾಡಿಯಲ್ಲಿ ಊರೂರು ಸುತ್ತಿ ತಲಾ 50 ರೂ. ಬೆಲೆಯ ಎರಡು ಸಾವಿರ ಷೇರು ಪತ್ರಗಳನ್ನು ಮಾರಿ ನಿಧಿಯನ್ನು ಸಂಗ್ರಹಿಸಿದರು! ಹೀಗೆ ಸುಬ್ಬರಾವ್ ಪೈಯವರ ಘನ ಅಧ್ಯಕ್ಷತೆಯಲ್ಲಿ 1906ರಲ್ಲಿ ಆರಂಭ ಆದ ಬ್ಯಾಂಕು ಇಂದು ದೇಶ, ವಿದೇಶಗಳಲ್ಲಿ ಅವರು ಮಾಡಿರುವ ಶ್ರೇಷ್ಠವಾದ ಕಾಯಕವನ್ನು ಸಾರುತ್ತಿದೆ. ಆ ಬ್ಯಾಂಕ್ ಸ್ಥಾಪನೆಯಿಂದ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಹೆಸರು ಶಾಶ್ವತ ಸ್ಥಾನ ಪಡೆಯಿತು. ಇಂದು ಕೆನರಾ ಬ್ಯಾಂಕ್ ಭಾರತದ ಅತೀ ಶ್ರೇಷ್ಠವಾದ ಬ್ಯಾಂಕುಗಳ ಸಾಲಿನಲ್ಲಿ ಸ್ಥಾನ ಪಡೆದಿದೆ.
ಅಮ್ಮೆಂಬಳ ಪೈ ಅವರು 1909ರ ಜುಲೈ 25ರಂದು ಕೇವಲ ತಮ್ಮ 57ನೆಯ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರು ಸ್ಥಾಪನೆ ಮಾಡಿದ ಸಂಸ್ಥೆಗಳು ಮತ್ತು ಶಾಲೆಗಳು ಮುಖ್ಯವಾದ ಸಾಮಾಜಿಕ ಕೊಡುಗೆಯಾಗಿ ಉಳಿದವು. ಹಗಲಿರುಳು ಬಡಜನತೆಗಾಗಿ ಮಾಡಿದ ಕಾರ್ಯಗಳು ಅವರನ್ನು ಚಿರಂಜೀವಿ ಆಗಿ ಮಾಡಿದವು.
ಇದನ್ನೂ ಓದಿ: Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್ ಕಂಪನಿ ಸಿಇಓ!
ಮೌಢ್ಯಗಳ ವಿರುದ್ಧ ಹೋರಾಟ
ಅಮ್ಮೆಂಬಳ ಸುಬ್ಬರಾವ್ ಪೈ ಅವರು ಆಗಿನ ಕಾಲಕ್ಕೆ ತುಂಬಾ ಅಡ್ವಾನ್ಸ್ ಆಗಿದ್ದರು. ತನ್ನದೇ ಸಮಾಜದ ಒಬ್ಬ ಮಹಿಳೆಯು ಅಂತರ್ಜಾತೀಯ ಮದುವೆಯ ಕಾರಣಕ್ಕೆ ಸಾಮಾಜಿಕವಾದ ಬಹಿಷ್ಕಾರಕ್ಕೆ ಒಳಗಾದಾಗ ತುಂಬಾ ನೊಂದರು. ಮುಂದೆ ಅದೇ ಮಹಿಳೆ ನಿಧನರಾದಾಗ ಅವರ ಕೊನೆಯ ಇಚ್ಛೆಯಂತೆ ಪೈಯವರೇ ಮುಂದೆ ನಿಂತು ತನ್ನ ಗೆಳೆಯರ ಸಹಕಾರ ಪಡೆದು ಹಿಂದೂ ಸಂಪ್ರದಾಯದ ಪ್ರಕಾರ ಅವರ ಅಂತಿಮ ವಿಧಿಗಳನ್ನು ಪೂರ್ತಿ ಮಾಡಿದರು. ಈ ಕಾರಣಕ್ಕೆ ಅವರು ಒಂದು ಪ್ರಬಲ ವರ್ಗದ ಜನರ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಆದರೆ ಪೈಯವರು ಅವುಗಳಿಗೆ ಕ್ಯಾರೇ ಅನ್ನಲಿಲ್ಲ!
ಮಂಗಳೂರಿನಲ್ಲಿ ತನ್ನದೇ ಗೆಳೆಯರ ಬಳಗ ಕಟ್ಟಿಕೊಂಡು ಅಮ್ಮೆಂಬಳ ಪೈಯವರು ಮೌಢ್ಯಗಳ ವಿರುದ್ಧ ಭಾರೀ ಹೋರಾಟಗಳನ್ನು ನಡೆಸಿದರು. ಅವರೇ ಸ್ಥಾಪನೆ ಮಾಡಿದ ಕೆನರಾ ಬ್ಯಾಂಕಿನ ಉದ್ದೇಶಗಳಲ್ಲಿ ಮೌಢ್ಯಗಳ ವಿರುದ್ಧ ಹೋರಾಟ ಕೂಡ ಒಂದಾಗಿದೆ. ಶಿಕ್ಷಣ ಸಾಲಕ್ಕಾಗಿ ಬ್ಯಾಂಕ್ ಒಳಗೆ ಕಾಲಿಟ್ಟ ಯಾವುದೇ ಹುಡುಗಿಗೆ ಒಂದು ಕ್ಷಣ ಕೂಡ ಕಾಯಿಸದೆ ಸಾಲ ಕೊಡಬೇಕು ಎನ್ನುವುದು ಅವರು ಬ್ಯಾಂಕ್ ಅಧಿಕಾರಿಗಳಿಗೆ ಕೊಟ್ಟ ನಿರ್ದೇಶನ ಆಗಿತ್ತು. ಅದನ್ನು ಬ್ಯಾಂಕ್ ಇಂದು ಕೂಡ ಪಾಲಿಸುತ್ತಿದೆ.
ಅವರು ಸ್ಥಾಪನೆ ಮಾಡಿದ ಕೆನರಾ ಬ್ಯಾಂಕ್ ಮತ್ತು ಕೆನರಾ ವಿದ್ಯಾಸಂಸ್ಥೆಗಳು ಇರುವ ತನಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಹೆಸರು ಶಾಶ್ವತ ಆಗಿರುವುದು ಖಂಡಿತ.