Site icon Vistara News

Raja Marga Column : ನಿಮಗೂ ನೆನಪಿದೆಯಾ? ರಾಮಾಯಣ ಧಾರಾವಾಹಿಯ ರೋಮಾಂಚನ!

Ramayana seria Seetha Rama front

1987ರ ಜೂನ್ 25ರಿಂದ 1988ರ ಜುಲೈ 31ರವರೆಗೆ ಪ್ರತೀ ರವಿವಾರ ಮುಂಜಾನೆ ಪ್ರಸಾರವಾಗುತ್ತಿದ್ದ ರಮಾನಂದ ಸಾಗರ್ (Ramananda Sagar) ಅವರ ಮೆಗಾ ಧಾರಾವಾಹಿ‌ (Mega serial) ಭಾರತದಲ್ಲಿ ಹುಟ್ಟು ಮಾಡಿದ ಸಂಚಲನ ಇದೆಯಲ್ಲ, ಅದು ಅದ್ಭುತ! ಇಡೀ ಭಾರತವನ್ನು ಭಾವನಾತ್ಮಕವಾಗಿ ಒಗ್ಗೂಡಿಸಿದ ಒಂದು ಧಾರಾವಾಹಿ ಇದ್ದರೆ ಅದು ಖಂಡಿತವಾಗಿ ರಮಾನಂದ ಸಾಗರ್ ಅವರ ʻರಾಮಾಯಣʼ (Ramayana Serial) ಅಂದರೆ ಅದು ಉತ್ಪ್ರೇಕ್ಷೆ ಅಲ್ಲ. ನಾನಾಗ ಕಾಲೇಜು ವಿದ್ಯಾರ್ಥಿ ಆಗಿದ್ದು ಒಂದು ಸಂಚಿಕೆಯನ್ನು ಕೂಡ ಬಿಡದೇ ವೀಕ್ಷಣೆ ಮಾಡಿ ರೋಮಾಂಚನಪಟ್ಟಿದ್ದೆ (Raja Marga Column).

ಭಾರತೀಯರಿಗೆ ರಾಮಾಯಣ ಮತ್ತು ಮಹಾಭಾರತದ (Ramayana and Mahabharatha) ಕಥೆಗಳು ಹೊಸತಲ್ಲ. ಆದರೆ ಒಂದು ಸುಂದರವಾದ ಮತ್ತು ಕಲಾತ್ಮಕವಾದ ಟಿವಿ ಧಾರಾವಾಹಿ ಮೂಲಕ ರಾಮಾಯಣದ ಕತೆಯನ್ನು ರಮಾನಂದ ಸಾಗರ್ ಹೇಳಲು ಹೊರಟಾಗ ಇಡೀ ಭಾರತವು ಅದನ್ನು ಭಕ್ತಿಯಿಂದ ಸ್ವೀಕಾರ ಮಾಡಿತು. ರಾಮನ ಕಥೆಯನ್ನು ಭಾರತೀಯರು ತುಂಬಾ ಚಂದವಾಗಿ ನೋಡಿದರು.

1987-88ರ ಅವಧಿಯಲ್ಲಿ ಪ್ರತೀ ಆದಿತ್ಯವಾರ ಮುಂಜಾನೆ ಈ ಧಾರಾವಾಹಿಯನ್ನು ದೂರದರ್ಶನದ ಮೂಲಕ ಪ್ರಸಾರ ಆದಾಗ ಅದು ಜಾಗತಿಕ ದಾಖಲೆಯನ್ನು ಮಾಡಿತು.

ಆ ಧಾರಾವಾಹಿಯ ಬಗ್ಗೆ ಬಿಬಿಸಿಯ ವರದಿ ಹೀಗಿತ್ತು

ಭಾರತದಲ್ಲಿ ಆಗ ಹಲವು ಖಾಸಗಿ ಚಾನೆಲ್‌ಗಳು ಬಣ್ಣಗಳಿಂದ ಕಂಗೊಳಿಸಿದ್ದವು. ಆದರೆ ಭಾರತ ಸರಕಾರದ ಅಧೀನದ ದೂರದರ್ಶನಕ್ಕೆ ಅದರದ್ದೇ ಆದ ಹಿರಿಮೆ ಇತ್ತು. ಅಂತಹ ಟಿವಿ ಚಾನೆಲ್‌ನಲ್ಲಿ ರಮಾನಂದ ಸಾಗರ್ ಅವರ ಟಿವಿ ಧಾರಾವಾಹಿ ವಾರಕ್ಕೊಂದರಂತೆ 78 ಕಂತುಗಳನ್ನು ಪೂರ್ತಿ ಮಾಡಿದ್ದು ನಿಜಕ್ಕೂ ರೋಚಕ ಸಂಗತಿ.

ಜನರು ಟಿವಿಗೆ ಪೂಜೆ ಮಾಡಿ ಧಾರಾವಾಹಿ ನೋಡುತ್ತಿದ್ದರು!

ಆ ಧಾರಾವಾಹಿಯ ಪ್ರಸಾರದ ಹೊತ್ತಿನಲ್ಲಿ ಭಾರತದ ಎಲ್ಲ ರಸ್ತೆಗಳೂ ಖಾಲಿ ಆಗುತ್ತಿದ್ದವು. ಅಂಗಡಿಗಳು ಸ್ವಯಂ ಆಗಿ ಮುಚ್ಚಿಕೊಳ್ಳುತ್ತಿದ್ದವು. ಜನರು ಸ್ನಾನ ಮಾಡಿಬಂದು ಟಿವಿಗೆ ಪೂಜೆ ಮಾಡಿ, ಅರಸಿನ ಕುಂಕುಮ ಹಚ್ಚಿ ಧಾರಾವಾಹಿ ನೋಡಲು ಕೂರುತ್ತಿದ್ದರು. ಹಳ್ಳಿಗಳಲ್ಲಿ ಒಂದೊಂದು ಟಿವಿಯ ಮುಂದೆ 20-30 ಮಂದಿ ಕೂತು ಇಡೀ ಧಾರಾವಾಹಿ ನೋಡುತ್ತಿದ್ದರು. ಶ್ರೀ ರಾಮ (ಆ ಪಾತ್ರ ಮಾಡಿದ್ದು ಅರುಣ ಗೋವಿಲ್ ಅವರು) ಸ್ಕ್ರೀನ್ ಮೇಲೆ ಬಂದ ಕೂಡಲೇ ಜನರು ಕೈ ಮುಗಿದು ಕೂರುತ್ತಿದ್ದರು. ಮದುವೆ, ಉಪನಯನ ಮೊದಲಾದ ಸಂದರ್ಭಗಳಲ್ಲಿ ಇಡೀ ಮದುವೆಯ ಪೆಂಡಾಲುಗಳು ಆ ಹೊತ್ತಿನಲ್ಲಿ ಖಾಲಿ ಇರುತ್ತಿದ್ದವು. ಅದಕ್ಕಾಗಿ ಕಾರ್ಯಕ್ರಮದ ಆತಿಥೇಯರು ಮದುವೆ ಮಂಟಪದಲ್ಲಿ ಟಿವಿ ಇಟ್ಟು ರಾಮಾಯಣ ಧಾರಾವಾಹಿ ತೋರಿಸುತ್ತಿದ್ದರು ಮತ್ತು ಆ ಮಾಹಿತಿಯನ್ನು ಆಮಂತ್ರಣ ಪತ್ರಿಕೆಗಳಲ್ಲಿ ಮುದ್ರಿಸುತ್ತಿದ್ದರು! ರವಿವಾರ ರಾಮಾಯಣ ಪ್ರಸಾರ ಆದ ನಂತರ ಇಡೀ ವಾರ ದೇಶದಲ್ಲಿ ಅದರದ್ದೇ ಚರ್ಚೆ. ನೂರಾರು ನಿರೀಕ್ಷೆ. ಅದು ರಾಮಾಯಣದ ಪವರ್.

ರಮಾನಂದ ಸಾಗರ್ ರಾಮಾಯಣ ಅಷ್ಟೊಂದು ಜನಪ್ರಿಯ ಆದದ್ದು ಹೇಗೆ?

ರಮಾನಂದ ಸಾಗರ್ ಎಂಬ ನಿರ್ಮಾಪಕ, ನಿರ್ದೇಶಕ ಈ ಧಾರಾವಾಹಿಯ ಸ್ಕ್ರಿಪ್ಟ್ ಬರೆಯಲು ತುಂಬಾ ಶ್ರಮ ತೆಗೆದುಕೊಂಡಿದ್ದರು. ವಾಲ್ಮೀಕಿ ರಾಮಾಯಣ, ತುಲಸಿದಾಸರ ರಾಮಚರಿತ ಮಾನಸ ಹಾಗೂ ಭಾರತದ ಎಲ್ಲ ಭಾಷೆಗಳಲ್ಲೂ ಬಂದಿದ್ದ ರಾಮಾಯಣದ ಕೃತಿಗಳನ್ನು ಓದಿದ್ದರು. ಆಗ ಭಾರತದಲ್ಲಿ ಅಯೋಧ್ಯೆಯ ರಾಮ ಮಂದಿರದ ಹೋರಾಟವು ತೀವ್ರವಾದ ಸಂಚಲನ ಮೂಡಿಸಿತ್ತು. ಇಡೀ ದೇಶದಲ್ಲಿ ರಾಮನ ಪರವಾದ ಒಂದು ಅಲೆ ಹರಡಿತ್ತು. ಇವೆಲ್ಲವೂ ಸೇರಿ ಧಾರಾವಾಹಿ ಸೂಪರ್ ಹಿಟ್ ಆಯ್ತು.

ರಮಾನಂದ ಸಾಗರ್‌ ನಿರ್ದೇಶನ

ಪಾತ್ರಧಾರಿಗಳು ಮತ್ತು ತಂತ್ರಜ್ಞರು

ಸ್ನಿಗ್ಧ ನಗೆಯ ಅರುಣ ಗೋವಿಲ್ ಎಂಬ ನಟ ರಾಮನ ಪಾತ್ರದಲ್ಲಿ ಭಾರೀ ಮಿಂಚಿದರು. ದೀಪಿಕಾ ಚಿಕಲಿಯಾ ಸೀತೆಯಾಗಿ ಎಲ್ಲರ ಮನಗೆದ್ದರು. ದಾರಾ ಸಿಂಗ್ ಎಂಬ ಮಾಜಿ ಕುಸ್ತಿಪಟು ಹನುಮಂತ, ಸುನೀಲ್ ಲಾಹಿರಿ ಅವರ ಲಕ್ಷ್ಮಣ, ಸಂಜಯ್ ಜೋಗ್ ಅವರ ಭರತ, ಅಂಜಲಿ ವ್ಯಾಸ್ ಅವರ ಊರ್ಮಿಳಾ, ಅರವಿಂದ ತ್ರಿವೇದಿ ಅವರ ರಾವಣ, ಲಲಿತಾ ಪವಾರ್ ಅವರ ಮಂಥರೆ ಎಂದಿಗೂ ಮರೆಯಲು ಸಾಧ್ಯವೇ ಇಲ್ಲದ ಪಾತ್ರಗಳು. ಕಣ್ಣುಗಳೇ ಇಲ್ಲದ ರವೀಂದ್ರ ಜೈನ್ ಅವರ ಸಂಗೀತ ಇಡೀ ಧಾರಾವಾಹಿಯ ಕೀರ್ತಿ ಕಲಶ. ಸುಭಾಸ್ ಸೆಹಗಲ್ ಅವರ ಸಂಕಲನ ಸೂಪರ್ ಆಗಿತ್ತು. ಈ ಧಾರಾವಾಹಿಯ ಕಾರಣಕ್ಕೆ ಅವರೆಲ್ಲರೂ ಜನಪ್ರಿಯತೆಯ ಶಿಖರವನ್ನು ಮುಟ್ಟಿದರು.

ಮುಂದೆ ದೀಪಿಕಾ ಮತ್ತು ಅರವಿಂದ್ ತ್ರಿವೇದಿ ಲೋಕಸಭೆಗೆ ಆಯ್ಕೆ ಆದರು. ಅರುಣ್ ಗೋವಿಲ್ ಒಂದು ಪಕ್ಷದ ಸ್ಟಾರ್ ಪ್ರಚಾರಕ ಆದರು. ಈ ಧಾರಾವಾಹಿ ಜಗತ್ತಿನಲ್ಲಿಯೇ ಅತೀ ಹೆಚ್ಚು ವೀಕ್ಷಣೆ ಪಡೆದು ದಾಖಲೆ ಮಾಡಿತು.

ಅದು ಭಾರತದ ಅತ್ಯಂತ ದುಬಾರಿ ಆದ ಧಾರಾವಾಹಿ

ಆಗಿನ ಕಾಲಕ್ಕೆ ಒಂದು ಸಂಚಿಕೆಗೆ (ಅವಧಿ 45 ನಿಮಿಷ) ಒಂಬತ್ತು ಲಕ್ಷ ಖರ್ಚು ಮಾಡಿದ್ದ ಈ ಧಾರಾವಾಹಿ ಅದ್ದೂರಿಯ ಸೆಟ್ ಮತ್ತು ಮೇಕಿಂಗ್ ಮೂಲಕ ಜನಪ್ರಿಯತೆ ಪಡೆಯಿತು. ಆ ಕಾಲದಲ್ಲಿ 82% ವ್ಯೂವರ್‌ಷಿಪ್ ಪಡೆದ ಬೇರೆ ಯಾವ ಧಾರಾವಾಹಿ ಇರಲಿಲ್ಲ. ಪ್ರತೀ ಕಂತನ್ನು ಅಂದಾಜು 77 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು. ಐದು ಖಂಡಗಳ 17 ದೇಶಗಳು ಈ ಧಾರಾವಾಹಿಯನ್ನು ಪ್ರಸಾರ ಮಾಡಿದವು.

ಶ್ರೀ ರಾಮನ ಜನನದ ಮೊದಲ ಸಂಚಿಕೆಯಿಂದ ಆರಂಭ ಮಾಡಿ ಶ್ರೀ ರಾಮನ ಪಟ್ಟಾಭಿಷೇಕದ ಕೊನೆಯ ಕಂತಿನವರೆಗೂ ಧಾರಾವಾಹಿಯ ಜನಪ್ರಿಯತೆಯು ಏರುಗತಿಯಲ್ಲಿ ಇತ್ತು.

ಈ ಧಾರಾವಾಹಿಯ ಜನಪ್ರಿಯತೆಯಿಂದ ಪ್ರಭಾವಿತವಾಗಿ ರಮಾನಂದ್ ಸಾಗರ್ ಅವರು ಅದರ ಎರಡನೇ ಭಾಗವಾದ ರಾಮಾಯಣದ ಉತ್ತರ ಕಾಂಡದ ಲವ ಕುಶರ ಕತೆಯನ್ನು ಧಾರಾವಾಹಿ ಮಾಡಿದರು.‌ ಅದೂ ಪ್ರಸಾರವಾಗಿ ಜನಪ್ರಿಯವಾಯಿತು. ಮುಂದೆ 2000ದಲ್ಲಿ ಸ್ಟಾರ್ ಉತ್ಸವ ಮತ್ತು ಸ್ಟಾರ್ ಪ್ಲಸ್ ಎಂಬ ಎರಡು ಖಾಸಗಿ ವಾಹಿನಿಗಳಲ್ಲಿ ಇದೇ ಧಾರಾವಾಹಿ ಮರುಪ್ರಸಾರ ಆಗಿ ಮತ್ತೆ 55 ದೇಶಗಳನ್ನು ತಲುಪಿತು. ಭಾರತದ ಎಲ್ಲ ಭಾಷೆಗಳಿಗೂ ಡಬ್ ಆಯಿತು.

ಕೊರೊನಾ ಕಾಲದಲ್ಲಿ ಮತ್ತೆ ಪ್ರಸಾರ

2020ರಲ್ಲಿ ಭಾರತ ಲಾಕ್ ಡೌನ್ ಆಗಿ ಜನರು ಮನೆಯಲ್ಲಿ ಬಂಧಿಯಾಗಿದ್ದ ಸಂದರ್ಭ ಈ ಧಾರಾವಾಹಿ ಮರುಪ್ರಸಾರ ಆಗಿ ಮತ್ತೆ ದಾಖಲೆಯ ವೀಕ್ಷಕರನ್ನು ತಲುಪಿತು. ರಾಮಾಯಣ ಧಾರಾವಾಹಿ ಮುಗಿಯಿತು ಎಂದಾದ ಕೂಡಲೇ ಬಿಆರ್ ಚೋಪ್ರಾ ಅವರ ಮಹಾಭಾರತ ಧಾರಾವಾಹಿಯ ಪ್ರಸಾರ ಆರಂಭವಾಗಿ ಅದೂ ಭಾರೀ ಸಂಚಲನ ಮೂಡಿಸಿತು. (ಅದರ ಬಗ್ಗೆ ಇನ್ನೊಮ್ಮೆ ಬರೆಯುವೆ).

ಇದನ್ನೂ ಓದಿ: Raja Marga Column : ಅವಕಾಶಗಳ ಬಾಗಿಲು ತಾನಾಗಿ ತೆರೆಯಲ್ಲ, ನಾವೇ ಒದ್ದು ತೆಗೀಬೇಕು!

ರಾಮಾಯಣ ಧಾರಾವಾಹಿ ಮಾಡಿದ ರಮಾನಂದ ಸಾಗರ್ 2005ರಲ್ಲಿ ನಮ್ಮನ್ನು ಅಗಲಿದರು. ಹಲವಾರು ಪ್ರಮುಖ ಪಾತ್ರಧಾರಿಗಳು ಈಗ ಬದುಕಿಲ್ಲ. ಆದರೆ ರಮಾನಂದ್ ಸಾಗರ್ ಅವರ ರಾಮಾಯಣ ಧಾರಾವಾಹಿ ಭಾರತೀಯರಿಗೆ ಮರೆತು ಹೋಗುವುದಿಲ್ಲ. ಅದು ತೆರೆದಿಟ್ಟ ದಾರ್ಶನಿಕ ಮೌಲ್ಯಗಳೂ ಮರೆತು ಹೋಗುವುದಿಲ್ಲ. ಅಂತಹ ಧಾರಾವಾಹಿಗಳನ್ನು ಈಗಿನ ಮಕ್ಕಳು ನೋಡಬೇಕು ಎನ್ನುವುದು ಆಶಯ. ಏನಂತೀರಿ?

Exit mobile version