Site icon Vistara News

Raja Marga Column : ಈ ಹೆಣ್ಮಕ್ಕಳು ಜಗತ್ತಿನ ಮಹಾನ್ ಪವರ್‌ ಹೌಸ್‌ಗಳು

Raja Marga Column Eliza beth fry

Raja Marga Column : ಇಂದು (ಮಾರ್ಚ್ 8) ಅಂತಾರಾಷ್ಟ್ರೀಯ ಮಹಿಳಾ ದಿನ (International Women’s day) . ಇಂದು ಜಗತ್ತಿನ ‘ಪವರ್ ಹೌಸ್’ (Power house) ಆದ ಮಹಿಳೆಯರ ದಿನ. ಒಂದು ಅವಕಾಶ ಕೊಟ್ಟು ನೋಡಿದರೆ ಏನು ಬೇಕಾದರೂ ಸಾಧಿಸುವ ನಮ್ಮ ಸ್ತ್ರೀ ರತ್ನಗಳನ್ನು ನಾವು ಅಭಿನಂದಿಸುವ ದಿನ. ಈ ಸಂದರ್ಭದಲ್ಲಿ ಅಂತಹ ಐದು ಪವರ್ ಹೌಸ್‌ಗಳನ್ನು ತಮಗೆ ಪರಿಚಯಿಸಲು ನಾನು ತುಂಬಾ ಹೆಮ್ಮೆ ಪಡುತ್ತೇನೆ.

Raja Marga Column : 1. ವ್ಯಾಲೆಂಟಿನಾ ತೆರೇಶ್ಕೊವಾ -Valentina Tereshkova

ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಮಹಿಳೆ ಆಕೆ. ಆದರೆ ಆ ಆಕಾಶಯಾನಕ್ಕೆ ಆಕೆ ಆಯ್ಕೆ ಆದದ್ದೇ ಅಚ್ಚರಿ. ಆಕೆ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುವ ಕಾರ್ಮಿಕಳು ಆಗಿದ್ದರು. ಆಕಾಶಯಾನದ ಯಾವ ಅನುಭವ ಕೂಡ ಆಕೆಗೆ ಇರಲಿಲ್ಲ! ಆಕೆಗೆ ಪ್ಯಾರಾಚೂಟ್ ಕಟ್ಟಿಕೊಂಡು ಹಾರುವುದು ಬಿಟ್ಟರೆ ಬೇರೆ ಯಾವ ಅನುಭವ ಕೂಡ ಇರಲಿಲ್ಲ.

1963 ಜೂನ್ 6ರಂದು ಆರಂಭವಾದ ಭೂಮಿಗೆ ಮೂರು ಪ್ರದಕ್ಷಿಣೆ ಬರುವ ವಾಶ್ಟೋಕ್ ಆಕಾಶ ನೌಕೆಗೆ ಆಕೆ ಆಯ್ಕೆ ಆದದ್ದೇ ಒಂದು ಅಚ್ಚರಿ. ಆ ಯಾತ್ರೆಗೆಂದು ಆಯ್ಕೆ ಆದ ಇನ್ನೊಬ್ಬ ಮಹಿಳೆಯು ಕೊನೆಯ ಕ್ಷಣದಲ್ಲಿ
ಅಸೌಖ್ಯವಾದಾಗ ಅವಕಾಶ ಪಡೆದವರು ಆಕೆ. ಯಾವ ತರಬೇತಿ ಕೂಡ ಇಲ್ಲದೆ ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ತನ್ನ ಇಚ್ಛಾಶಕ್ತಿ ಮತ್ತು ದೈಹಿಕ ಸಾಮರ್ಥ್ಯದಿಂದ ಆ ಯಾನವನ್ನು ಯಶಸ್ವೀ ಆಗಿ ಮುಗಿಸಿ ವಿಶ್ವದಾಖಲೆಯನ್ನು ಮಾಡಿದವರು ವ್ಯಾಲೆಂಟಿನಾ. ಆಕೆಗೆ ನಾವೆಲ್ಲರೂ ಶರಣು.

2. ಕನ್ನಡದ ಖ್ಯಾತ ಕಾದಂಬರಿಗಾರ್ತಿ ಮತ್ತು ಲೇಖಕಿ ತ್ರಿವೇಣಿ- Novelist Triveni

ಆಕೆ ಬದುಕಿದ್ದದ್ದು ಕೇವಲ 34 ವರ್ಷ. ಬರೆದು ಮುಗಿಸಿದ್ದು ಅಸಾಮಾನ್ಯವಾದ 21 ಕಾದಂಬರಿ ಮತ್ತು ಮೂರು ಕಥಾ ಸಂಕಲನಗಳನ್ನು! ಎಲ್ಲವೂ ಶ್ರೇಷ್ಠ ಎಂಬುದು ಅವರ ಸಾಧನೆ.

ಮನಶಾಸ್ತ್ರದಲ್ಲಿ ಚಿನ್ನದ ಪದಕದ ಜೊತೆಗೆ ಪದವಿ ಪಡೆದ ತ್ರಿವೇಣಿ ತಮ್ಮ ಕಾದಂಬರಿಗಳಲ್ಲಿ ವೈಭವೀಕರಣ ಮಾಡಿದ್ದು ಸ್ತ್ರೀ ಸಂವೇದನೆ ಮತ್ತು ನೋವುಗಳನ್ನು. ಆಕೆಯ ಜನಪ್ರಿಯ ಕಾದಂಬರಿಗಳಾದ ಬೆಳ್ಳಿ ಮೋಡ, ಹಣ್ಣೆಲೆ ಚಿಗುರಿದಾಗ, ಶರಪಂಜರ, ಕಂಕಣ, ಹೂವು ಹಣ್ಣು, ಬೆಕ್ಕಿನ ಕಣ್ಣು ಮುಂದೆ ಕನ್ನಡದ ಜನಪ್ರಿಯ ಸಿನಿಮಾ ಆಗಿ ಕೂಡ ಮಿಂಚಿದವು. ರಾಷ್ಟ್ರಪ್ರಶಸ್ತಿ ಕೂಡ ಪಡೆದವು. ತನ್ನ ಜೀವಮಾನದ ಉದ್ದಕ್ಕೂ ಮಾನಸಿಕ ಮತ್ತು ದೈಹಿಕವಾಗಿ ನೋವನ್ನು ಉಂಡ ತ್ರಿವೇಣಿ ಅವರು ತಮ್ಮ ಕಾದಂಬರಿಗಳ ಮೂಲಕ ಇನ್ನೂ ನಮ್ಮ ನಡುವೆ ಜೀವಂತ ಆಗಿದ್ದಾರೆ.

3. ಏಕಾಂಗಿಯಾಗಿ ಮೂರು ಬಾವಿ ಅಗೆದ ಗೌರಮ್ಮ- Gouramma from Sirsi

ಶಿರಸಿಯ ಮೌನ ಸಾಧಕಿ ಗೌರಮ್ಮನ ಬಗ್ಗೆ ಎಷ್ಟು ಬರೆದರೂ ಕಡಿಮೆ ಎಂದು ನನಗೆ ಅನ್ನಿಸುತ್ತದೆ. ಅವರಿಗೆ ಈಗ 57 ವರ್ಷ. ತನ್ನ ಊರಿನ ನೀರಿನ ಕೊರತೆಯನ್ನು ನೋಡಿ ನೊಂದಿದ್ದ ಗೌರಮ್ಮ ಈಗ ಮೂರು ಬಾವಿಗಳನ್ನು ಅಗೆದು ದಾಖಲೆ ನಿರ್ಮಾಣ ಮಾಡಿದ್ದಾರೆ. ಅದೂ ಒಬ್ಬಂಟಿಯಾಗಿ!

ಶಿರಸಿಯ ಪಕ್ಕ ಇರುವ ಗಣೇಶನಗರ ಎಂಬ ಪುಟ್ಟ ಹಳ್ಳಿಯಲ್ಲಿ ಆಕೆಯನ್ನು ಜನರು ‘ಬಾವಿ ಗೌರಮ್ಮ’ ಎಂದೇ ಕರೆಯುತ್ತಾರೆ. ಆಕೆ ತೋಡಿದ ಮೂರೂ ಬಾವಿಗಳಲ್ಲಿ ಸಮೃದ್ಧವಾಗಿ ನೀರು ಚಿಮ್ಮಿದೆ. ಮೊದಲ ಬಾವಿಯ ನೀರನ್ನು ತನ್ನ ಮನೆ ಬಳಕೆಗೆ ಉಪಯೋಗ ಮಾಡಿದ ಆಕೆ, ಎರಡನೇ ಬಾವಿಯ ನೀರನ್ನು ಅಡಿಕೆ ತೋಟಕ್ಕೆ ಹರಿಸಿದರು. ಮೂರನೇ ಬಾವಿಯ ನೀರನ್ನು ಅಂಗನವಾಡಿ ಮಕ್ಕಳು ಕುಡಿಯಲು ಒದಗಿಸಿರುವ ಆಕೆ ಇಂದು ಕರ್ನಾಟಕದ ಭಾರಿ ಸೆನ್ಸೇಷನ್ ಆಗಿದ್ದಾರೆ.

4. ವಾಹನಗಳ ವೈಪರ್ ಸಂಶೋಧನೆ ಮಾಡಿದ ಮೇರಿ ಆಂಡರ್ಸನ್-Mary Anderson

ಅಮೆರಿಕಾದ ಈ ಸಾಮಾನ್ಯ ಮಹಿಳೆ ಭಾರೀ ದೊಡ್ಡ ಕನಸುಗಳನ್ನು ಹೊತ್ತವರು. ಅಮೆರಿಕಾದ ಅಲಬಾಮಾ ಎಂಬ ಪ್ರದೇಶದಲ್ಲಿ ಸಂಚರಿಸುವಾಗ ತೀವ್ರ ಚಳಿಗಾಳಿಯನ್ನು ಸೀಳಿಕೊಂಡು ಟ್ರಾಲಿ ಕಾರು ಹೋಗುವಾಗ ಹಿಮಪಾತದ ಕಾರಣಕ್ಕೆ ಕಾರಿನ ಎದುರಿನ ಗಾಜು ಪೂರ್ತಿ ಮಸುಕಾಗಿ ಚಾಲಕ ಬವಣೆ ಪಡುತ್ತಿದ್ದ ಸಂಗತಿಯನ್ನು ಆಕೆ ಗಮನಿಸಿದರು.

ಹಲವು ತಂತ್ರಜ್ಞರ ನೆರವು ಪಡೆದು ಹಲವು ತಿಂಗಳು ಹೆಣಗಾಟ ಮಾಡಿದ ಮೇರಿ ಕಾರಿನ ಒಳಗೆ ಕುಳಿತು ಗಾಜನ್ನು ಶುಭ್ರ ಮಾಡುವ ‘ವಿಂಡ್ ಶೀಲ್ಡ್ ವೈಪರನ್ನು’ ಆಕೆ ಕಂಡು ಹಿಡಿದರು. ಮುಂದೆ ಅದನ್ನು ಉತ್ಪಾದನೆ ಮಾಡುವ ಒಂದು ಉದ್ಯಮವನ್ನು ಆರಂಭ ಮಾಡಿದ ಮೇರಿ ಕೆಲವೇ ವರ್ಷಗಳಲ್ಲಿ ಕೋಟಿ ಕೋಟಿ ಸಂಪಾದನೆ ಮಾಡಿದರು. ಅವರ ಸಂಶೋಧನೆ ಆದ ವೈಪರನ್ನು ನಾವು ಇಂದಿಗೂ ಬಳಕೆ ಮಾಡುತ್ತ ಅವರಿಗೆ ಶೃದ್ಧಾಂಜಲಿ ಸಲ್ಲಿಕೆ ಮಾಡುತ್ತ ಇದ್ದೇವೆ.

ಇದನ್ನೂ ಓದಿ : Raja Marga Column : ನಿಮ್ಮ ಬೆಸ್ಟ್‌ ಫ್ರೆಂಡ್‌ ಯಾರು ಗೊತ್ತಾ? ನಾನ್‌ ಹೇಳ್ತೀನಿ ಕೇಳಿ!

5. ಜೈಲು ಸುಧಾರಣೆಯ ಕ್ರಾಂತಿಕಾರಿ ಎಲಿಜಬೇತ್ ಫ್ರೈ-Elizabeth Fry

18ನೆಯ ಶತಮಾನದಲ್ಲಿ ಇಂಗ್ಲೆಂಡಿನ ಕೊಳಕು ಜೈಲುಗಳು ವಿಚಾರಣಾಧೀನ ಕೈದಿಗಳಿಗೆ ಉಸಿರುಗಟ್ಟಿಸುವ ಹಾಗೆ ಇದ್ದವು. ಮಹಿಳಾ ಆರೋಪಿಗಳು, ಬಾಲಕರು, ಬಾಲಕಿಯರು ಒಂದೇ ಕೋಣೆಯಲ್ಲಿ ಬವಣೆ ಪಡುತ್ತಿದ್ದರು.
‘ಒನ್ಸ್ ಎ ಕ್ರಿಮಿನಲ್ ವಾಸ್ ಆಲ್ವೇಸ್ ಎ ಕ್ರಿಮಿನಲ್’ ಎನ್ನುವುದು ಆಗಿನ ಜನಪ್ರಿಯ ನುಡಿ ಆಗಿತ್ತು.

ಅಂತಹ ಜೈಲುಗಳನ್ನು ಭೇಟಿ ಮಾಡಿದ ಎಲಿಜೆಬೆತ್ ಫ್ರೈ ಸರಕಾರದ ಗಮನವನ್ನು ಸೆಳೆದು ಹೋರಾಟಕ್ಕೆ ನಿಂತರು. ದಶಕಗಳ ಕಾಲ ನಡೆದ ಆ ಕ್ರಾಂತಿಕಾರಿ ಹೋರಾಟದ ಫಲವಾಗಿ ಇಂಗ್ಲೆಂಡಿನ ಸೆರೆಮನೆಗಳು ಪರಿವರ್ತನೆಯ ತಾಣಗಳು ಆದವು. ಸೆರೆವಾಸಿಗಳ ಮಕ್ಕಳಿಗೆ ಶಾಲೆಗಳು ತೆರೆದವು. ಮಹಿಳಾ ಆರೋಪಿಗಳಿಗೆ ಪ್ರತ್ಯೇಕವಾದ ಸೆಲ್ ನಿರ್ಮಾಣ ಆದವು. ಆರೋಪಿಗಳಿಗೆ ನಿರಂತರ ವೈದ್ಯಕೀಯ ಚಿಕಿತ್ಸೆ ಮತ್ತು ನೆರವುಗಳು ದೊರೆತವು. ಅವರನ್ನು ತಿದ್ದುವ ಮತ್ತು ಅವರಲ್ಲಿ ಪರಿವರ್ತನೆ ತರುವ ಕೆಲಸಗಳು ನಿರಂತರವಾಗಿ ನಡೆದವು. ಪರಿಣಾಮವಾಗಿ ಇಂಗ್ಲೆಂಡ್ ಮತ್ತು ಇತರ ದೇಶಗಳಲ್ಲಿ ಜೈಲಿನ ಚಿತ್ರಣವೇ ಬದಲಾಯಿತು. ಅದಕ್ಕೆ ಕಾರಣ ಎಲಿಜೆಬೆತ್ ಫ್ರೈ ಎಂಬ ಹುಟ್ಟು ಹೋರಾಟಗಾರರು.

ಭರತವಾಕ್ಯ: ಒಬ್ಬ ಮಹಿಳೆಗೆ ಸೂಕ್ತವಾದ ಅವಕಾಶ ಮತ್ತು ಪ್ರೋತ್ಸಾಹಗಳು ದೊರೆತರೆ ಅವರು ಏನು ಬೇಕಾದರೂ ಸಾಧಿಸುತ್ತಾರೆ ಅನ್ನುವುದಕ್ಕೆ ಇಂತಹ ನೂರಾರು ನಿದರ್ಶನಗಳು ದೊರೆಯುತ್ತವೆ.

Exit mobile version