ಕನ್ನಡದ ಒಬ್ಬ ಲೇಖಕ -511 ಪುಸ್ತಕಗಳು -19 ಮಹಾಕಾವ್ಯಗಳನ್ನು ಬರೆದಿದ್ದಾರೆ (He written 511 Books, 19 Mahakavyas!) ಎಂದರೆ ನಂಬತ್ತೀರಾ? ನಾನು ಖಂಡಿತವಾಗಿಯೂ ಹೇಳಬಲ್ಲೆ. ಇಷ್ಟೊಂದು ವಿಸ್ತಾರವಾಗಿ ಭಾರತದ ಯಾವ ಲೇಖಕನೂ ಬರೆದ ನಿದರ್ಶನ ಇಲ್ಲ! ಜಾಗತಿಕವಾಗಿ, ನನಗೆ ಗೊತ್ತಿಲ್ಲ. ಅವರೇ ಈಗ ಮಂಡ್ಯದಲ್ಲಿ ಇರುವ ಡಾ. ಪ್ರದೀಪ್ ಕುಮಾರ್ ಹೆಬ್ರಿ (Dr. Pradeep Kumar Hebri). ಹೌದು, ಮೂಲತಃ ಕಾರ್ಕಳದ ಹೆಬ್ರಿಯ (ಈಗ ಅದು ಪ್ರತ್ಯೇಕ ತಾಲೂಕು ಆಗಿದೆ) ಒಬ್ಬ ಆಯುರ್ವೇದ ವೈದ್ಯರು (Arurvedic Doctor) ಕಳೆದ 36 ವರ್ಷಗಳಲ್ಲಿ ಬರೆದು ಮುಗಿಸಿದ್ದು ಬರೋಬ್ಬರಿ 511 ಪುಸ್ತಕಗಳನ್ನು! ಅದರಲ್ಲಿಯೂ ಅವರ ಆಸಕ್ತಿಯ ಹರವು ತುಂಬಾ ವಿಸ್ತಾರ ಆದದ್ದು. ಕವನ ಸಂಕಲನ, ಶಿಶು ಸಾಹಿತ್ಯ, ಆರೋಗ್ಯ, ಲಲಿತ ಪ್ರಬಂಧ, ವಚನ ಸಾಹಿತ್ಯ, ವಿಜ್ಞಾನ, ಅಂಕಣ, ಸಣ್ಣ ಕತೆಗಳು, ಕಾದಂಬರಿಗಳು, ಧಾರ್ಮಿಕ, ಆಧ್ಯಾತ್ಮ, ಜೀವನ ಚರಿತ್ರೆ, ಪ್ರವಾಸ ಕಥನ, ವ್ಯಕ್ತಿತ್ವ ವಿಕಸನ ಹೀಗೆ ಈ ಪಟ್ಟಿ ಮುಗಿಯುವುದೇ ಇಲ್ಲ! ಅವರು ಬರೆದ ಎಲ್ಲ ಪುಸ್ತಕಗಳು ಕೂಡ ಪ್ರಿಂಟ್ ಆಗಿ ಪಬ್ಲಿಷ್ ಆಗಿವೆ ಮತ್ತು ಓದುಗರ ಮಡಿಲು ಸೇರಿವೆ ಎಂದರೆ ಅದು ಅದ್ಭುತ (Raja Marga Column)!
1989ರಿಂದಲೂ ನಿರಂತರ ಅವರು ಬರೆಯುತ್ತಲೇ ಇದ್ದಾರೆ!
ಕಾರ್ಕಳ ತಾಲೂಕಿನ ಹೆಬ್ರಿಯಲ್ಲಿ (ಈಗ ಪ್ರತ್ಯೇಕ ತಾಲೂಕು ಆಗಿದೆ) ಜನಿಸಿದ ಪ್ರದೀಪ್ ಕುಮಾರ್ ಅವರು ಹೆಚ್ಚು ಓದಿದ್ದು ಸರಕಾರಿ ಶಾಲೆಗಳಲ್ಲಿ. ಆಯುರ್ವೇದ ಪದವಿ ಪಡೆದದ್ದು ಉದ್ಯಾವರದ ಎಸ್‌ಡಿಎಂ ಆಯುರ್ವೇದಿಕ್ ಕಾಲೇಜಿನಲ್ಲಿ. ಮುಂದೆ ಅವರು ಮಂಡ್ಯ ಜಿಲ್ಲೆಯನ್ನು ತನ್ನ ಕರ್ಮಭೂಮಿ ಮಾಡಿಕೊಂಡರು. ಆಯುರ್ವೇದ ಪ್ರಾಕ್ಟೀಸ್ ಮಾಡುತ್ತ ಬಿಡುವಿನ ಸಮಯದಲ್ಲಿ ಸಾಹಿತ್ಯ ಅಧ್ಯಯನ ಮಾಡುತ್ತ ಬರೆಯಲು ಆರಂಭ ಮಾಡಿದರು.
1989ರಲ್ಲಿ ಪ್ರಕಟ ಆದ ‘ಈ ಬಾಳ ಪಯಣ’ ಅವರ ಮೊದಲ ಪುಸ್ತಕ. ಮುಂದೆ ಬರೆಯುವ ಆಸಕ್ತಿ ಹೆಚ್ಚಾಯಿತು. ಅದಕ್ಕಾಗಿ ತನ್ನ ವೈದ್ಯಕೀಯ ಪ್ರಾಕ್ಟೀಸ್ ಸೀಮಿತ ಮಾಡಿದರು. ಮುಂದೆ ಅವರು ನಿರಂತರವಾಗಿ ಓದಿದರು, ದಣಿವು ಅರಿಯದೇ ಬರೆದರು. ವರ್ಷಕ್ಕೆ ಸರಾಸರಿ 18-20 ಪುಸ್ತಕಗಳನ್ನು ಬರೆದರು! ಅದರ ಜೊತೆಗೆ ವರ್ಷಕ್ಕೆ ಸರಾಸರಿ 100 ಬೇರೆಯವರ ಪುಸ್ತಕಗಳನ್ನು ಪೂರ್ಣವಾಗಿ ಓದಿ ಮುನ್ನುಡಿ ಬರೆದುಕೊಟ್ಟಿದ್ದಾರೆ. ಪುಸ್ತಕಗಳ ಪರಿಚಯಗಳನ್ನು ಪತ್ರಿಕೆಗೆ ಬರೆದು ಎಳೆಯರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.
ಕರ್ನಾಟಕದ ಯಾವ ಸ್ಟಾರ್ ಲೇಖಕನೂ ಕೂಡ ನೂರಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದ ಉದಾಹರಣೆ ದೊರೆಯುವುದಿಲ್ಲ! ಅಂತಹದ್ದರಲ್ಲಿ ನಮ್ಮ ಹೆಬ್ರಿಯ ಪ್ರದೀಪ್ ಕುಮಾರ್ ಅವರು 511 ಪುಸ್ತಕಗಳನ್ನು ಬರೆದು ಪಬ್ಲಿಷ್ ಮಾಡಿದರು ಅಂದರೆ ಅದು ಖಂಡಿತವಾಗಿ ವಿಸ್ಮಯ ಎಂದೇ ಹೇಳಬಹುದು. ಅದನ್ನು ಡಾಕ್ಟರ್ ಪ್ರದೀಪ್ ಕುಮಾರ್ ಹೆಬ್ರಿ ಸಾಧ್ಯ ಮಾಡಿ ತೋರಿಸಿದ್ದಾರೆ. ಇದು ಖಂಡಿತವಾಗಿ ಜಾಗತಿಕ ದಾಖಲೆ!
19 ಮಹಾಕಾವ್ಯಗಳನ್ನು ಅವರು ಬರೆದಿದ್ದಾರೆ!
ಅವರ ಇತರ 500 ಪುಸ್ತಕಗಳ ತೂಕ ಒಂದೆಡೆ ಆದರೆ ಅವರು ಬರೆದ 19 ಮಹಾಕಾವ್ಯಗಳದ್ದು ಇನ್ನೊಂದು ತೂಕ! ಇಷ್ಟೊಂದು ಕಾವ್ಯಗಳನ್ನು ಬರೆದವರು ಭಾರತದಲ್ಲಿ ಖಂಡಿತವಾಗಿ ಇಲ್ಲ! ಅದೊಂದು ತಪಸ್ಸು. ಅದರಲ್ಲಿಯೂ ಅವರು ಬರೆದ ‘ಯುಗಾವತಾರಿ’ ಮಹಾಕಾವ್ಯ ಆರು ಸಂಪುಟಗಳಲ್ಲಿ ಹೊರಬಂದಿದ್ದು 6000 ಪುಟಗಳನ್ನು ಹೊಂದಿದೆ! ಇದು ಜಗತ್ತಿನ ಅತೀ ದೊಡ್ಡದಾದ ಮಹಾ ಕಾವ್ಯ ಅನ್ನುವುದು ಕನ್ನಡದ ಹೆಮ್ಮೆ.
ಇಡೀ ಮಹಾಭಾರತವನ್ನು ‘ಜಯ ಭಾರತ’ ಎಂಬ ಶೀರ್ಷಿಕೆಯಲ್ಲಿ ಅವರು ಕಾವ್ಯಕ್ಕೆ ಇಳಿಸಿದ್ದು ಅದರ ಪುಟಗಳ ಸಂಖ್ಯೆಯೇ 1800! ಅದೂ ನಾಲ್ಕು ಸಂಪುಟಗಳನ್ನು ಹೊಂದಿದೆ. ಮಧ್ವಾಚಾರ್ಯರ ಬಗ್ಗೆ ಬರೆದ ಪೂರ್ಣಪ್ರಜ್ಞ, ಅಕ್ಕ ನಾಗಲಾಂಬಿಕೆ ಬಗ್ಗೆ ಬರೆದ ಶರಣ ಮಾತೆ, ಮಂತ್ರಾಲಯದ ರಾಘವೇಂದ್ರ ಸ್ವಾಮಿ ಬಗ್ಗೆ ಬರೆದ ಕಲ್ಪತರು, ಅಕ್ಕ ಮಹಾದೇವಿಯ ಬಗ್ಗೆ ಬರೆದ ಉಡುತಡಿಯ ಕಿಡಿ, ಪ್ರಭು ರಾಮಚಂದ್ರರ ಬಗ್ಗೆ ಬರೆದ ರಘು ಕುಲೋತ್ತಮ, ರಾಮಾನುಜರ ಬಗ್ಗೆ ಬರೆದ ದಿಗ್ವಿಚೇತ, ಡಾಕ್ಟರ್ ಬಾಲಗಂಗಾಧರನಾಥ ಸ್ವಾಮೀಜಿ ಬಗ್ಗೆ ಬರೆದ ದಿವ್ಯ ದಿನಕರ, ಕಾವೇರಿ ಹೋರಾಟಗಾರ ಮಾದೇಗೌಡ ಬಗ್ಗೆ ಬರೆದ ಕಾವೇರಿ ಪುತ್ರ ಇವೆಲ್ಲವೂ ಜನಪ್ರಿಯ ಆಗಿವೆ. ಅವರ ಇಪ್ಪತ್ತನೇ ಮಹಾಕಾವ್ಯ ಸುತ್ತೂರು ಸ್ವಾಮಿಗಳ ಬಗ್ಗೆ ಬರೆದ ‘ರಾಜಗುರು ತಿಲಕ’ ಮುಂದಿನ ತಿಂಗಳು ಲೋಕಾರ್ಪಣೆ ಆಗಲಿದೆ.
ಕನ್ನಡದ ಆದಿಕವಿಗಳು ಬರೆದ ಭಾಮಿನಿ ಮೊದಲಾದ ಸಿದ್ಧ ಷಟ್ಪದಿಗಳ ಜೊತೆಗೆ ಮಹಾಭಾಮಿನಿ, ಶ್ರೀ ಗುರು, ಪದವರ್ಧಿನಿ ಮೊದಲಾದ ಷಟ್ಪದಿಗಳ ಆವಿಷ್ಕಾರ ಮಾಡಿ ಬೆಳೆಸಿದ ಕೀರ್ತಿಯೂ ಅವರಿಗೆ ಸಿಗಬೇಕು.
‘ಬರವಣಿಗೆಯ ವೈಭವ’ ಅವರು
ಇಷ್ಟೊಂದು ಹೇಗೆ ಬರೆಯಲು ಸಾಧ್ಯವಾಯಿತು? ಎಂದವರನ್ನು ಕೇಳಿದಾಗ ಅವರು ಹೇಳಿದ ಮಾತು ತುಂಬಾನೆ ಇಷ್ಟ ಆಯಿತು.
“ಬರವಣಿಗೆ ಒಂದು ತಪಸ್ಸು. ನಾನು ಕಳೆದ 36 ವರ್ಷಗಳಿಂದ ನಿರಂತರ ಬರೆಯುತ್ತಿದ್ದೇನೆ. ಹಗಲು ನನಗೆ ಉಪನ್ಯಾಸಗಳು, ಪ್ರಯಾಣ, ಹೊಟ್ಟೆಪಾಡು ಇರುತ್ತವೆ. ನಾನು ರಾತ್ರಿ ಏಳೂವರೆ ಘಂಟೆಗೆ ಬರೆಯಲು ಆರಂಭ ಮಾಡಿದರೆ ಮುಗಿಸುವುದು ರಾತ್ರಿ ಮೂರೂವರೆ ಘಂಟೆಗೆ! ನಾನು ಬರೇ ಪೆನ್ನು, ಪುಸ್ತಕ ಹಿಡಿದು ಬರೆಯುವವನು. ಆಧುನಿಕ ತಂತ್ರಜ್ಞಾನ ನನಗೆ ಒಗ್ಗುವುದಿಲ್ಲ. ಮುನ್ನುಡಿಗಳನ್ನು ಬರೆಯಲು ವರ್ಷಕ್ಕೆ ನೂರಾರು ಪುಸ್ತಕಗಳು ಬರುತ್ತವೆ. ಅವುಗಳನ್ನು ಪೂರ್ತಿಯಾಗಿ ಓದಬೇಕು. ನಿರಂತರ ಓದುವಿಕೆ, ಆಸಕ್ತಿ ಮತ್ತು ಅಧ್ಯಯನ ಇವುಗಳಿಂದ ನನಗೆ ಬರೆಯಲು ಸಾಧ್ಯವಾಗುತ್ತದೆ. ನನ್ನ ಪುಸ್ತಕಗಳ ಬಗ್ಗೆ ಎಂಟು ಜನ ಲೇಖಕರು ಬರೆದು ಪಿ.ಎಚ್.ಡಿ ಪೂರ್ತಿ ಮಾಡಿದ್ದಾರೆ! 22 ಮಂದಿ ನನ್ನ ಬಗ್ಗೆ, ನನ್ನ ಕೃತಿಗಳ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಮಂಡ್ಯದ ಜನತೆ ತುಂಬಾ ಪ್ರೀತಿಯಿಂದ ‘ರಾಜ ದೀಪ’ ಮತ್ತು ‘ಕಾವ್ಯ ತಪಸ್ವೀ ‘ಎಂಬ ಎರಡು ಬೃಹತ್ ಅಭಿನಂದನಾ ಗ್ರಂಥಗಳನ್ನು ಸಮರ್ಪಣೆ ಮಾಡಿ ನನ್ನನ್ನು ಸನ್ಮಾನ ಮಾಡಿದ್ದಾರೆ. ಜನರು ಪ್ರೀತಿಯಿಂದ ಉಪನ್ಯಾಸಕ್ಕೆ, ಗಮಕ ವಾಚನ, ವ್ಯಾಖ್ಯಾನಕ್ಕೆ ಕರೆಯುತ್ತಾರೆ. ಅದಕ್ಕೂ ಸಮಯ ಕೊಡಬೇಕು. ಆದರೆ ಬರವಣಿಗೆ, ಅದರಲ್ಲಿಯೂ ಕಾವ್ಯರಚನೆ ನನ್ನ ಆದ್ಯತೆ. ಅದು ನಿಲ್ಲಬಾರದು. ನನ್ನ ಕೊನೆಯ ಉಸಿರಿನತನಕವೂ ಬರೆಯುತ್ತ ಇರಬೇಕು ಎಂದು ನನ್ನ ಆಸೆ ಇದೆ” ಎನ್ನುತ್ತಾರೆ.
ಅವರಿಗೆ ಸಿಕ್ಕಿದ ಸನ್ಮಾನ, ಪ್ರಶಸ್ತಿಗಳ ಬಗ್ಗೆ ಒಂದು ಬೃಹತ್ ಪುಸ್ತಕವನ್ನೇ ಬರೆಯಬಹುದು! ಅವರ ಕೃತಿಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಹತ್ತಾರು ಪ್ರಶಸ್ತಿಗಳು ಲಭಿಸಿವೆ. ಅವರ ಇಬ್ಬರು ಅಭಿಮಾನಿಗಳು ‘ಆರವತ್ತಾರಕ್ಕಾರತಿ’ ಮತ್ತು ‘ಹೆಬ್ರಿ ಸವಿನುಡಿ’ ಎಂಬ ಪುಸ್ತಕಗಳನ್ನು ಅವರ ಬಗ್ಗೆ ಬರೆದು ಗುರುವಂದನೆ ಮಾಡಿದ್ದಾರೆ. ಅವರ ಲೇಖನ ಮತ್ತು ಕವಿತೆಗಳು ಹಲವಾರು ಪಠ್ಯ ಪುಸ್ತಕಗಳಲ್ಲಿ ಸ್ಥಾನ ಪಡೆದಿವೆ. ಕನ್ನಡದ ಎಲ್ಲ ಪತ್ರಿಕೆಗಳಲ್ಲಿ ಅವರ ಅಂಕಣಗಳು, ಲೇಖನಗಳು ಬಂದಿವೆ. ಏಳು ತಾಲೂಕು ಮತ್ತು ಒಂದು ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆಯ ಪಟ್ಟವು ಅವರಿಗೆ ದೊರೆತಿವೆ. ಶರಣ ಸಾಹಿತ್ಯದ ಬಗ್ಗೆ ಅವರು ಬರೆದಷ್ಟು ಮತ್ತು ಭಾಷಣ ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ ಅನ್ನುವುದು ಕನ್ನಡದ ಹೆಮ್ಮೆ. ಅದರ ಜೊತೆಗೆ ಅಧ್ಯಯನ ಮಾಡಿ ಕಾನೂನು ಪದವಿ, ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ ಫಿಲ್ ಪೂರ್ತಿ ಮಾಡಿದ್ದಾರೆ. ಕರ್ನಾಟಕ ಸಂಗೀತ, ತಬಲಾ, ನಾಟಕ, ಯಕ್ಷಗಾನ ಕೂಡ ಕಲಿತಿದ್ದಾರೆ. ಅವರ ಧರ್ಮಪತ್ನಿ ಶ್ರೀಮತಿ ಎಂ ಎನ್ ರಾಜಲಕ್ಷ್ಮಿ ಅವರ ಬೆಂಬಲವನ್ನು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಇದನ್ನೂ ಓದಿ: Raja Marga Column : ಯೋಧರ ಕುಟುಂಬದ ವೀರಗಾಥೆಗಳು; ಬೇಕಿರುವುದು ಸಾಂತ್ವನ ಅಲ್ಲ, ಸೆಲ್ಯೂಟ್!
ಭರತವಾಕ್ಯ
ಡಾಕ್ಟರ್ ಪ್ರದೀಪ್ ಕುಮಾರ್ ಹೆಬ್ರಿ ಅವರು ಕನ್ನಡದ ಮುಕುಟಮಣಿ ಅನ್ನೋದೇ ಭರತವಾಕ್ಯ. ಅವರು ಈ ರವಿವಾರ ಕಾರ್ಕಳದ ಶ್ರೇಷ್ಟ ‘ಜ್ಞಾನ ಸುಧಾ’ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಕಾರ್ಕಳ ತಾ.ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಶಿಖರೋಪನ್ಯಾಸ ಮಾಡಲಿದ್ದಾರೆ ಅನ್ನುವುದು ನಮ್ಮೆಲ್ಲರ ಭಾಗ್ಯ. ಆರವತ್ತಾರರ ಅವರಿಗೆ ಶುಭವಾಗಲಿ.