ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್
(Sadguru Jaggi Vasudev, Isha Foundation)
ನೀವು ಯಾವ ಪ್ರಮಾಣದಲ್ಲಿ ಜೀವಂತರಾಗಿರಲು ಬಯಸುತ್ತೀರಿ? ಸ್ವಲ್ಪ ಗಮನ ಕೊಟ್ಟು ನೋಡಿ, ನೀವು 50% ಜೀವಂತವಾಗಿದ್ದರೆ ಸಾಕೆ? ಅಥವಾ 40% ಸಾಕೆ? ಅಥವಾ ನಿಮ್ಮ ಲೋಕಲ್ ಪಾಸ್ ಮಾರ್ಕ್ (Local Pass mark) ಎಷ್ಟು? 35 % ಮಾತ್ರವೆ? ಅಥವಾ 100% ಜೀವಿಸಬೇಕೆಂದಿರುವಿರಾ? ಪ್ರಾಣವನ್ನು 50%, 40% ಎಂದು ಕಡಿಮೆಗೊಳಿಸಿಕೊಂಡು ಜೀವಿಸಲು ಸಾಧ್ಯವೆ?
ನೀವು 100% ಜೀವಿಸಬೇಕೆಂದರೆ, ನಿಮ್ಮ ಸ್ಪಂದಿಸುವ ಸಾಮರ್ಥ್ಯಕ್ಕೆ ಮಿತಿಯನ್ನು (Limiting the response Capacity) ಹಾಕಿಕೊಂಡರೆ, 100% ಜೀವಂತಿಕೆಯಿಂದಿರಲು ಸಾಧ್ಯವೆ? ನಿಮ್ಮ ಪ್ರಾಣವೇ ನಿಮ್ಮ ಸ್ಪಂದಿಸುವ ಸಾಮರ್ಥ್ಯವಲ್ಲವೆ? ಹಾಗಾದರೆ, ನಿಮ್ಮ ಸ್ಪಂದಿಸುವ ಸಾಮರ್ಥ್ಯಕ್ಕೆ ಗಡಿಯನ್ನು ನಿರ್ಧರಿಸಿ ಜವಾಬ್ದಾರಿಗಳಿಗೆ (Responsibility) ಎಲ್ಲೆಯನ್ನು ಹಾಕಿದರೆ 100% ಬಾಳಲು ಸಾಧ್ಯವಾಗುವುದೇ ಇಲ್ಲ.
‘ನನ್ನ ಜವಾಬ್ದಾರಿಗಳಿಗೆ ಗಡಿಯಿಲ್ಲ’ ಎಂದು ಅನುಭವಪೂರ್ವಕವಾಗಿ ನೀವು ಭಾವಿಸುವುದಾದರೆ, ಈಗ ನೀವು 100% ಒಂದು ಜೀವವಾಗಿ ಜೀವಿಸುತ್ತೀರಿ. ಇಲ್ಲವಾದರೆ ಬೇರೆ ಹಲವರಂತೆ ಪ್ರಪಂಚದಲ್ಲಿ ನೀವು ಸಹ ಅರ್ಧಜೀವಿಯಾಗಿಯೇ ಕಾಲ ಕಳೆಯುತ್ತೀರಿ!
ಮನುಷ್ಯರು ಹಲವು ರೀತಿಗಳಲ್ಲಿ ತಮ್ಮ ಜೀವನದ ಸ್ವಭಾವಕ್ಕೆ ತಡೆಹಿಡಿದು ಜವಾಬ್ದಾರಿಯನ್ನು ಕಡಿಮೆಗೊಳಿಸಿಕೊಳ್ಳುತ್ತಾರೆ. ಇದನ್ನೇ ಕಂತುಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಎನ್ನುವುದು. ಸಾವಧಾನವಾಗಿ ಅವರ ಜೀವಂತಿಕೆ ಸ್ವಲ್ಪಸ್ವಲ್ಪವಾಗಿ ಕಡಮೆಯಾಗುತ್ತ ಹೋಗುತ್ತದೆ.
ನೀವು ಮೊದಲು ಹೇಗೆ ಸ್ಪಂದಿಸುತ್ತಿದ್ದಿರಿ?
ನಿಮ್ಮ ಐದನೆಯ ವಯಸ್ಸಿನಲ್ಲಿ ನೀವು ಎಷ್ಟೊಂದು ಜೀವಂತಿಕೆಯಿಂದ ಆನಂದವಾಗಿದ್ದಿರಿ! ಪ್ರತಿಯೊಂದಕ್ಕೂ ನೀವು ಇಷ್ಟಪಟ್ಟು ಸ್ಪಂದಿಸುತ್ತಿದ್ದಿರಿ. ಒಂದು ಬಣ್ಣದ ಚಿಟ್ಟೆಯನ್ನು ನೋಡಿದಾಗಲೂ ನಿಮ್ಮ ಸ್ವಭಾವ ಪೂರ್ತಿಯಾಗಿ ಆ ಚಿಟ್ಟೆಯೊಂದಿಗೆ ಹಾರಾಡಿತಲ್ಲವೆ?
ಈಗ ನೀವು ಕುಳಿತಿರುವ ರೂಮಿನಲ್ಲಿ ಒಂದು ಬಣ್ಣದ ಚಿಟ್ಟೆ ಹಾರಿ ಬಂದರೆ ಗಮನಿಸುತ್ತೀರಾ? ಬಹು ಮಂದಿ ಅಂತಹುದನ್ನು ಗಮನಿಸುವುದಿಲ್ಲ. ಗಮನಿಸಿದರೂ ಅದನ್ನು ಕಂಡೂ ಕಾಣದಂತೆ ಸುಮ್ಮನಾಗುತ್ತಾರೆ. ಈಗ ನಿಮ್ಮ ಜೀವನದ ಸ್ವಭಾವ ಆ ಬಣ್ಣದ ಚಿಟ್ಟೆಯನ್ನು ಅನುಸರಿಸಿ ಹಾರಾಡುವುದಿಲ್ಲವೇಕೆ? ಕಾರಣ, ನಿಮ್ಮ ಸ್ಪಂದಿಸುವ ಸಾಮರ್ಥ್ಯವನ್ನು ಕಡಮೆ ಮಾಡಿ ಅಂಕೆಯಲ್ಲಿ ಇರಿಸಿಕೊಂಡಿದ್ದೀರಿ.
ನಿಮ್ಮ ಸ್ಪಂದಿಸುವ ಸಾಮರ್ಥ್ಯವನ್ನು ನೀವು ಮೊಟಕುಗೊಳಿಸುವುದು ಹೇಗೆಂಬುದು ನಿಮಗೆ ಗೊತ್ತಿದೆಯೆ?
ಯಾವಾಗ ನೀವು ಎಲ್ಲವನ್ನೂ ನನ್ನದು, ನನ್ನದಲ್ಲ ಎಂದು ವಿಭಾಗಿಸಲು ತೊಡಗುತ್ತೀರೋ ಆಗಲೇ ಅದು ಮೊಟಕಾಗುತ್ತದೆ. ನಿಮಗೆ ಒಂದಕ್ಕೆ ಸ್ಪಂದಿಸಲು ಸಾಧ್ಯವಾಗುತ್ತದೆ. ಮತ್ತೊಂದಕ್ಕೆ ಆಗುವುದಿಲ್ಲ. ಅದು ಸರಿ, ಅದು ಹೇಗೆ ಯಾವುದೋ ಒಂದನ್ನು ಮಾತ್ರ ನಿಮ್ಮದನ್ನಾಗಿ ಭಾವಿಸುತ್ತೀರಿ? ಉದಾಹರಣೆಗೆ, ನೀವು ಓದುವ ಈ ಪುಸ್ತಕ ಎಲ್ಲಿಯೋ ಇದ್ದದ್ದಲ್ಲವೆ?
ಎಲ್ಲೋ ಇದ್ದ ಪುಸ್ತಕ ನಿಮ್ಮ ಕೈಗೆ ಬಂದಾಗ ʻನನ್ನದುʼ ಹೇಗಾಯಿತು?
ನಿಮ್ಮ ಕೈಯಲ್ಲಿ ಈ ಪುಸ್ತಕ ಬಂದ ಕೂಡಲೇ, ಅದು ನನ್ನದು ಎನ್ನುತ್ತೀರಿ. ಅದು ಹೇಗೆ ನಿಮ್ಮದಾಯಿತು? ಅದು ನಿಮ್ಮದಾಗಲು ಏನು ಆಧಾರ? ನನ್ನದು ಎಂದು ಭಾವಿಸಿದ ಕೂಡಲೇ ಅದನ್ನು ಒರೆಸಿ ಇಟ್ಟುಕೊಳ್ಳುತ್ತೀರಿ. ಅದು ಮಾಸಿಹೋಗದಂತೆ ಗಮನ ನೀಡುತ್ತೀರಿ. ಹೌದಲ್ಲವೆ? ಅದಕ್ಕಾಗಿ ಜವಾಬ್ದಾರಿಯನ್ನು ವಹಿಸಿಕೊಂಡುಬಿಟ್ಟಿದ್ದೀರಿ. ಅಲ್ಲವೆ?
ಇದು ನನ್ನ ಜವಾಬ್ದಾರಿ ಎಂದು ಭಾವಿಸಿದ ಕೂಡಲೆ ಇದು ನನ್ನದು ಎಂದು ತೋರುತ್ತದೆ. ಅಲ್ಲವೆ? ಯಾವುದೆಲ್ಲವನ್ನು ನಿಮ್ಮ ಜವಾಬ್ದಾರಿಯೆಂದು ಭಾವಿಸುತ್ತೀರೋ ಅವೆಲ್ಲವೂ ನಿಮ್ಮದಾಗಿಬಿಡುತ್ತವೆ. ಯಾವುದೆಲ್ಲವೂ ನಿಮ್ಮದಲ್ಲ ಎಂದು ಹೇಳುತ್ತೀರೋ ನಿಮ್ಮಿಂದ ಅದರೊಂದಿಗೆ ಸಂಪೂರ್ಣ ಸಂಬಂಧ ಹೊಂದುವುದು ಸಾಧ್ಯವಾಗುವುದಿಲ್ಲ, ಅಲ್ಲವೆ? ಎಲ್ಲೆಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಿಲ್ಲವೋ, ಅಲ್ಲೆಲ್ಲಾ ನಿಮ್ಮ ಜೀವಂತಿಕೆಯ ಭಾವನೆ ಮಂಕಾಗಿಬಿಡುತ್ತದೆ.
ಬಾನಿನಲ್ಲಿ ಮಿನುಗುವ ನಕ್ಷತ್ರಗಳನ್ನು ನೋಡಿ ನೀವು ಸ್ಪಂದಿಸಲು ಸಾಧ್ಯವಾಗುತ್ತದೆಯಲ್ಲವೆ? ಅವು ಎಲ್ಲಿ ಹೇಗಿವೆಯೆಂಬುದು ತಿಳಿಯದು. ಅವುಗಳಲ್ಲಿ ಕೆಲವೊಂದು ಜೀವಂತವಾಗಿವೆಯೇ ಎಂಬುದೂ ಸಹ ಗೊತ್ತಿಲ್ಲ. ಹೀಗಿದ್ದರೂ ನಿಮ್ಮಿಂದ ಅವಕ್ಕೆ ಸ್ಪಂದಿಸಲು ಸಾಧ್ಯವಾಗಿದೆಯಲ್ಲವೆ? ಆ ಕಗ್ಗತ್ತಲೆಯ ಬಾನಿಗೂ, ಮೃದುವಾದ ಗಾಳಿಗೂ, ಹಸುರಿನಿಂದ ಕೂಡಿದ ಭೂಮಿಗೂ, ಸ್ಪಂದಿಸಲು ಸಾಧ್ಯವಾಗುತ್ತದಲ್ಲವೆ?
ಎಲ್ಲದಕ್ಕೂ ಸ್ಪಂದಿಸಿದಾಗ ಮಾತ್ರ ಬದುಕು ಪರಿಪೂರ್ಣ
ನಿಮಗೆ ಇಷ್ಟವಿರಲಿ ಇಲ್ಲದೆ ಹೋಗಲಿ, ನಿಮ್ಮ ದೇಹದಲಿರುವ ಪ್ರತಿಯೊಂದು ಅಣುವೂ ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆಗೂ ಸ್ಪಂದಿಸುತ್ತಾ ಇದೆ. ಈಗ ವಿಜ್ಞಾನವೂ ಅದನ್ನು ನಿರೂಪಿಸಬಲ್ಲದು.
ನಿಮ್ಮ ಪ್ರಾಣಶಕ್ತಿಯು ಈ ಜಗತ್ತಿನ ಪ್ರತಿಯೊಂದು ಘಟನೆಗೆ ಸ್ಪಂದಿಸುತ್ತಲೇ ಬಂದಿದೆ. ಆ ಸೂರ್ಯನಿಗೆ ಸ್ಪಂದಿಸುತ್ತೀರಲ್ಲವೆ? ನಿಮ್ಮ ದೇಹ, ಪ್ರಾಣ, ಎಲ್ಲವೂ ಯಾವುದೇ ಅಡ್ಡಿಯಿಲ್ಲದೆ ಸ್ಪಂದಿಸುತ್ತಾ ಬಂದಿವೆ. ಮನದಾಳದಲ್ಲಿ ಮಾತ್ರ ನೀವು ನಾನು ಜವಾಬ್ದಾರನಲ್ಲ ಎಂದು ಭಾವಿಸುವುದರಿಂದ ನಿಮ್ಮ ಸ್ಪಂದಿಸುವ ಸಾಮರ್ಥ್ಯ ಕುಂಠಿತಗೊಂಡು ಜೀವವಿಲ್ಲದಂತಾಗುವಿರಿ. ಆದ್ದರಿಂದ ದೇಹವೂ ಕ್ಲೇಶಗೊಳ್ಳುತ್ತದೆ. ಭಾವನೆಯೂ ಸೊರಗುತ್ತದೆ. ನಾನು ಕೇಳುವುದು ನಿಮ್ಮ ಮನದಾಳದಲ್ಲಿ, ನಿಮ್ಮ ಪೂರ್ಣ ಸಮ್ಮತಿಯೊಂದಿಗೆ ಹಾಗೂ ತಿಳಿವಳಿಕೆಯೊಂದಿಗೆ ಇಂತಹ ತಡೆಗಳನ್ನು ತೆಗೆದುಹಾಕಲು ನಿಮಗೆ ಇಷ್ಟವಿದೆಯೆ, ಇಲ್ಲವೆ?
ಹೇಗೂ ನೀವು ಯಾವುದೇ ಮಿತಿಯಿಲ್ಲದೆ ಸ್ಪಂದಿಸುತ್ತಿದ್ದೀರಿ. ನಿಮ್ಮಲ್ಲಿರುವ ಒಂದೇ ಒಂದು ಅವಕಾಶವೆಂದರೆ – ಅದನ್ನು ಮನಃಪೂರ್ವಕವಾಗಿ ನಡೆಸುವುದೋ ಅಥವಾ ಮನಸ್ಸಿಲ್ಲದೆ ನಡೆಸುವುದೋ – ಎಂಬುದು.
ನನ್ನ ಜವಾಬ್ದಾರಿಗೆ ಎಲ್ಲೆಯಿಲ್ಲ ಎಂದು ಮನಃಪೂರ್ವಕವಾಗಿ ನೋಡಿದರೆ, ಈಗ ನಿಮಗೆ ಮನಸಾರೆ ಜಗತ್ತಿನೊಂದಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ದೇಹ, ಪ್ರಾಣ ಮತ್ತು ಚಂಚಲವಾಗಿದ್ದ ಮನಸ್ಸು ಈಗ ಒಂದೇ ಕಡೆ ಸೇರುತ್ತವೆ.
ಬೆಳವಣಿಗೆಯ ಉನ್ನತ ಸ್ಥಾನದಲ್ಲಿ ವಿಶಿಷ್ಟ ಮಾನವರಾಗಿ ಬದುಕುವುದೆಂದರೆ, ಸಂಪೂರ್ಣವಾದ ಮಾನವರಾಗಿ ಬಾಳುವುದೆಂದರೆ, ಮಿತಿಯಿರದ ಜವಾಬ್ದಾರಿಯುಳ್ಳ ಜೀವನ ಮಾತ್ರ.
ನಂದಿಷ್ಟೇ ಜವಾಬ್ದಾರಿ ಎಂದರೆ ಏನಾಗುತ್ತದೆ ಗೊತ್ತಾ?
ಎಲ್ಲೆಯಿಲ್ಲದ ಜವಾಬ್ದಾರಿಗಳಿಗೆ ನೀವು ನೆಲೆಯಾದಾಗ ನಿಮ್ಮಲ್ಲಿರುವ ಮಾನವತೆ ಉನ್ನತಿಗೇರುತ್ತದೆ. ಯಾವಾಗ ನಿಮ್ಮಲ್ಲಿ ಮಾನವತೆ ತುಂಬಿ ತುಳುಕಾಡುತ್ತದೆಯೋ ಆಗ ದೈವಿಕವೆಂಬುದು ನಿಮಗೆ ಲಭಿಸುತ್ತದೆ. ಅದರ ನಂತರ ದೈವಿಕವನ್ನು ಹುಡುಕುತ್ತಾ ನೀವು ಅಕಾಶವನ್ನು ನೋಡಬೇಕಾದ ಅಗತ್ಯವಿರುವುದಿಲ್ಲ.
ನಿಮ್ಮ ಜವಾಬ್ದಾರಿಗಳಿಗೆ ಎಲ್ಲೆಗಳನ್ನು ವಿಧಿಸಿ ಅಂತಹ ಮಹತ್ವವಾದುದೇನನ್ನು ಸಾಧಿಸಿದ್ದೀರಿ? ಹಲವಾರು ಮಂದಿ ಸಂಗ್ರಹಿಸಿರುವುದಾದರೂ ಟೆನ್ಶನ್, ಸಕ್ಕರೆ ರೋಗ, ರಕ್ತದೊತ್ತಡ, ಅಲ್ಸರ್ ಮತ್ತಿತರ ಕಾಯಿಲೆಗಳನ್ನು ಮಾತ್ರ.
ನಿಮ್ಮ ಜವಾಬ್ದಾರಿಗಳು ಸೀಮಾರಹಿತವಾದವು ಎಂಬುದನ್ನು ಒಂದು ತತ್ತ್ವವನ್ನಾಗಿ ನೋಡದೆ, ಅನುಭವಪೂರ್ವಕವಾಗಿ ನೋಡುವುದಾದರೆ, ನಿಮ್ಮ ಜೀವನದಲ್ಲಿ ನೀವು ಆಸಕ್ತಿಯಿಂದ ಪಾಲ್ಗೊಳ್ಳುತ್ತೀರಿ. ಆಗ ಪ್ರತಿಕ್ಷಣವೂ ಅದ್ಭುತವಾಗಿರುತ್ತದೆ. ಇದು ಯಾವುದೋ ಮನಸ್ಸಿನ ಇಚ್ಛೆಯಿಂದ ಬಂದ ಉಪಾಯದ ತತ್ತ್ವವಲ್ಲ, ಮೂಲಭೂತವಾದ ಸತ್ಯ.
ನಿಮ್ಮ ಜೀವನದಲ್ಲಿ ಸ್ವಂತ ಇಚ್ಛೆಯಿಂದ ಸ್ಪಂದಿಸಿದಾಗ, ನಿಮ್ಮ ದೇಹ, ಬುದ್ಧಿ, ಮನಸ್ಸು, ಪ್ರಾಣಶಕ್ತಿ ಈ ನಾಲ್ಕೂ ಸರಿಯಾಗಿ ನೆಲೆನಿಲ್ಲುವುದು. ಹೀಗಿರುವಾಗ ಸುಮ್ಮನೆ ಕುಳಿತುಕೊಂಡಿರುವುದು ಸಹ ಸ್ವರ್ಗವೆಂದು ಭಾವಿಸುತ್ತೀರಿ. ಬಾಳಿನಲ್ಲಿ ಇಷ್ಟವಿಲ್ಲದೆ ಕಾರ್ಯದಲ್ಲಿ ತೊಡಗಿದಾಗ ದೇಹ, ಬುದ್ಧಿ, ಮನಸ್ಸು, ಪ್ರಾಣಶಕ್ತಿ ಇವೆಲ್ಲವೂ ನರಕವಾದಂತೆ ಭಾಸವಾಗುತ್ತವೆ. ಆಗ ದೇಹ ಯಾತನೆಯಿಂದ ಕೂಡಿರುತ್ತದೆ. ಮನಸ್ಸು ನೆಮ್ಮದಿಯಾಗಿರುವುದಿಲ್ಲ, ಸೊರಗುತ್ತದೆ. ಜೀವನವು ತಾರುಮಾರಾಗುತ್ತದೆ.
ಇದನ್ನೂ ಓದಿ: Sadguru Prerane : ನೀವು ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದಾದರೆ ನೀವು ಜೀವಂತವಾಗಿ ಇಲ್ಲ ಎಂದೇ ಅರ್ಥ ತಾನೇ?
ಎಲ್ಲೆಯಿಲ್ಲದ ಜವಾಬ್ದಾರಿಯೊಂದಿಗೆ ಮನಃಪೂರ್ವಕವಾಗಿ ಒಮ್ಮೆ ಉಸಿರು ಎಳೆದು ಬಿಟ್ಟರೂ ಸಹ ಅದು ಪರವಶವಾಗುತ್ತದೆ. ಇದೇ ನೀವು ಧ್ಯಾನಕ್ಕೆ ಮುಂಚೆ ತೆಗೆದುಕೊಳ್ಳಬೇಕಾಗಿರುವ ಹೆಜ್ಜೆ. ಜವಾಬ್ದಾರಿಗೆ ಎಲ್ಲೆ ಇದೆಯೆ? ಇಲ್ಲವೇ? ಎಂಬುದು, ಪ್ರಶ್ನೆಯೇ ಅಲ್ಲ. ಹೇಗಿದ್ದರೂ ನೀವು ಅನುಭವಪೂರ್ವಕವಾಗಿ ಪ್ರಪಂಚದಲ್ಲಿ ಪ್ರತಿಯೊಂದಕ್ಕೂ ಎಲ್ಲೆಯಿಲ್ಲದೆ ಸ್ಪಂದಿಸುತ್ತಿದ್ದೀರಿ ಎಂಬುದು ನಿರಾಕರಿಸಲಾರದ ಸತ್ಯ. ಪ್ರಶ್ನೆ ಏನೆಂದರೆ, ನೀವು ನಿಮ್ಮ ಜವಾಬ್ದಾರಿ ಎಲ್ಲೆಯಿಲ್ಲದ್ದು ಎಂಬುದನ್ನು ಒಪ್ಪಿಕೊಂಡಿದ್ದೀರಾ? ಎಂಬುದು ಮಾತ್ರ. ಅದನ್ನು ನೀವು ಮನಸ್ಸಿನೊಳಕ್ಕೆ ತೆಗೆದುಕೊಂಡಿದ್ದೀರಿ ಎಂದ ಮೇಲೆ ನಿಮ್ಮ ಜೀವನ ನಿಮ್ಮ ಸಂಪೂರ್ಣ ಆಶಯಯಂತೆ ಹಾಗೂ ಇಷ್ಟದಂತೆ ನಡೆಯುತ್ತದೆ.
(ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn) (ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org)