Site icon Vistara News

ನೂಪುರ್‌ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದರೇ ಸಿ.ಟಿ. ರವಿ?

ಸಿ.ಟಿ.ರವಿ

ಬೆಂಗಳೂರು: ಇಸ್ಲಾಂ ಹಾಗೂ ಪ್ರವಾದಿ ಮೊಹಮ್ಮದ್‌ ಅವರ ಕುರಿತು ಮಾತನಾಡಿ ಈಗಾಗಲೆ ವಿಶವಾದ್ಯಂತ ವಿವಾದಕ್ಕೀಡಾಗಿರುವ ಬಿಜೆಪಿ ಮಾಜಿ ನಾಯಕಿ ನೂಪುರ್‌ ಶರ್ಮಾ ಅವರನ್ನು ಮಾಜಿ ಸಚಿವ ಹಾಗೂ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪರೋಕ್ಷವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಹಾಸನದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮಂಗಳವಾರ ಸಿ.ಟಿ. ರವಿ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಪ್ರವಾದಿ ಮೊಹಮ್ಮದ್‌ ಅವರ ಬಗ್ಗೆ ಬಿಜೆಪಿ ನಾಯಕರು ಅವಹೇಳನಕಾರಿಯಾಗಿ ಮಾತನಾಡಿದ್ದರ ಕುರಿತ ಪ್ರಶ್ನೆಗೆ ಸಿ.ಟಿ. ರವಿ ಉತ್ತರಿಸಿದ್ದಾರೆ.

ಇದನ್ನೂ ಓದಿ | ಪ್ರವಾದಿ ಮೊಹಮ್ಮದ್‌ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದ ವಕ್ತಾರೆ ನೂಪುರ್‌ ಶರ್ಮಾ ಬಿಜೆಪಿಯಿಂದ ಅಮಾನತು

“ಕೆಲವೊಮ್ಮೆ ಅಪ್ರಿಯವಾದ ಸತ್ಯ ಹೇಳಬಾರದು ಎಂದು ಹಿಂದೆಯೇ ಹೇಳಿದ್ದಾರೆ. ಅದಕ್ಕೊಂದು ಸಂಸ್ಕೃತ ಶ್ಲೋಕವೂ ಇದೆ. ಅಪ್ರಿಯವಾದ ಸತ್ಯವನ್ನು ಕೆಲವೊಮ್ಮೆ ಹೇಳಬಾರದು. ಕೆಲವೊಮ್ಮೆ ಸತ್ಯವಾಗಿದ್ದರೂ ಅದನ್ನು ಹೇಳಬಾರದು. ಅದರಲ್ಲೂ ನಮ್ಮಂತಹ ರಾಜಕಾರಣದ ಬಾಯಲ್ಲಿ ಹೇಳಿಸಬಾರದು. ನೀವು ಬೇಕಿದ್ದರೆ ಒಂದೊಂದೇ ವಿಷಯವನ್ನು ಅವಲೋಕನ ಮಾಡಿದರೆ ಸತ್ಯ ಏನು ಎಂದು ನಿಮಗೆ ಗೊತ್ತಾಗುತ್ತದೆ” ಎಂದು ನೂಪುರ್‌ ಶರ್ಮಾ ಹೇಳಿದ ವಿಚಾರದಲ್ಲಿ ಸತ್ಯವಿದೆ, ಆದರೆ ಅದನ್ನು ಬಹಿರಂಗವಾಗಿ ಹೇಳಬಾರದಿತ್ತು ಎಂದು ಪರೋಕ್ಷವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಬಾಯಿ ಹರಿಯಬಿಡಬೇಡಿ ಎಂದ ಕಟೀಲ್‌

ಈಗಾಗಲೆ ದೇಶ ಹಾಗೂ ವಿದೇಶಗಳಲ್ಲಿ ನೂಪುರ್‌ ಶರ್ಮಾ ಹೇಳಿಕೆ ವಿವಾದ ಹೊಗೆಯಾಡುತ್ತಿದೆ. ಈ ನಡುವೆ ಬಿಜೆಪಿ ನಾಯಕರೇ ಆಗಿಂದಾಗ್ಗೆ ಧರ್ಮ, ನಂಬಿಕೆ ವಿಚಾರಗಳಲ್ಲಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕುತ್ತಿದ್ದಾರೆ. ಇದನ್ನು ತಡೆಯಲು ರಾಜ್ಯ ಬಿಜೆಪಿ ಮುಂದಾಗಿದೆ.

ಏಳೆಂಟು ವರ್ಷಗಳಿಂದ ಹಲವು ಚುನಾವಣೆಗಳಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ಗೆ ನೂಪುರ್‌ ಶರ್ಮಾ ಹೇಳಿಕೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಟೀಕಿಸಲು ಅಸ್ತ್ರ ಈಗ ಸಿಕ್ಕಂತಾಗಿದೆ. ಕಾಂಗ್ರೆಸ್‌ಗೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತೆ ಆಗಿದೆ. ಕಳೆದ ಎರಡು ಮೂರು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಗುರಿಯಾಗಿರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಬಹಿರಂಗವಾಗಿ ಕಾಂಗ್ರೆಸ್ ನಾಯಕರು ವಾಗ್ದಾಳಿ ಮಾಡಲು ಶುರು ಮಾಡಿದ್ದಾರೆ. ಮುಂದೆ ಇಂತಹದ್ದಕ್ಕೆ ಅವಕಾಶ ನೀಡಬಾರದು ಎಂದು ರಾಜ್ಯದ ಪ್ರಮುಖ ಜನಪ್ರತಿನಿಧಿಗಳಿಗೆ ಕರ್ನಾಟಕ ಬಿಜೆಪಿ ಸೂಚನೆ ನೀಡಿದೆ.

ಧಾರ್ಮಿಕ ಗುರುಗಳ ಹಾಗೂ ಸಂಪ್ರದಾಯಗಳ ಬಗ್ಗೆ ಮಾತನಾಡದಂತೆ ಪಕ್ಷದ ನಾಯಕರು ಮತ್ತು ಮುಖಂಡರಿಗೆ ರಾಜ್ಯ ಬಿಜೆಪಿ ಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ. ಬಿಜೆಪಿ ಮಾಧ್ಯಮ ಘಟಕದಿಂದ ಶಾಸಕರು ಸಂಸದರಿಗೆ ಈ ಬಗ್ಗೆ ಸಂದೇಶ ರವಾನೆ ಮಾಡಿಸಿದ್ದಾರೆ. ಪ್ರಮುಖವಾಗಿ, ಆಗಿಂದಾಗ್ಗೆ ಈಂತಹ ವಿಚಾರಗಳಲ್ಲಿ ಬಾಯಿ ಹರಿಬಿಡುವ ಕೆ.ಎಸ್‌. ಈಶ್ವರಪ್ಪ, ಪ್ರತಾಪ್‌ ಸಿಂಹ, ಶೋಭಾ ಕರಂಧ್ಲಾಜೆ, ಅನಂತಕುಮಾರ್‌ ಹೆಗಡೆ ಸೇರಿ ಅನೇಕರಿಗೆ ದೂರವಾಣಿ ಕರೆ ಮಾಡಿ ಕಟೀಲ್‌ ಅವರ ಸೂಚನೆಯನ್ನು ನೀಡಲಾಗುತ್ತಿದೆ. ಒಟ್ಟಾರೆಯಾಗಿಯೂ ಪಕ್ಷದ ಎಲ್ಲ ನಾಯಕರಿಗೆ ಸೂಚನೆ ನೀಡಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಮೂಲಗಳು ಖಚಿತಪಡಿಸಿವೆ.

ಸಿ.ಟಿ. ರವಿ ಉದಾಹರಿಸಿದ ಶ್ಲೋಕ ಇದು

ಸತ್ಯಂ ಬ್ರೂಯಾತ್ ಪ್ರಿಯಮ್ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ |
ಪ್ರಿಯಂ ಚ ನಾನೃತಂ ಬ್ರೂಯಾದೇಷ ಧರ್ಮ: ಸನಾತನ: ||

ಅರ್ಥ: ಸತ್ಯವಾದದ್ದನ್ನು ಹೇಳಬೇಕು, ಪ್ರಿಯವಾದದ್ದನ್ನು ಹೇಳಬೇಕು. ಕಹಿಯಾದ ಸತ್ಯವನ್ನು ಹೇಳಬಾರದು, ಹಾಗೆಯೇ ಪ್ರಿಯವಾದ ಅಸತ್ಯವನ್ನೂ ನುಡಿಯಬಾರದು. ಇದುವೇ ಸನಾತನ ಧರ್ಮ.

ಇದನ್ನೂ ಓದಿ | ನೂಪುರ್‌ ಶರ್ಮಾ ಸೃಷ್ಟಿಸಿದ ವಿವಾದದ ಬಗ್ಗೆ ಕೆದಕಿ ಪ್ರಶ್ನಿಸಿದ ಪಾಕ್‌ ಪತ್ರಕರ್ತ; ವಿಶ್ವ ಸಂಸ್ಥೆಯ ಉತ್ತರ ಹೀಗಿದೆ

Exit mobile version