Site icon Vistara News

ರಾಜ್ಯಸಭೆ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ಗೆ ಎರಡು ರಾಜ್ಯಗಳಲ್ಲಿ ತಲಾ ನಾಲ್ಕು ಸ್ಥಾನ, ಹರಿಯಾಣ, ಮಹಾರಾಷ್ಟ್ರ ಫಲಿತಾಂಶ ವಿಳಂಬ

rajya sabha election

ನವ ದೆಹಲಿ: ರಾಜಸ್ಥಾನ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ತಲಾ ನಾಲ್ಕು ಸ್ಥಾನಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿವೆ. ಹರಿಯಾಣ ಹಾಗೂ ಮಹಾರಾಷ್ಟ್ರದಲ್ಲಿ ಮತದಾನದ ವೇಳೆ ಶಾಸಕರು ನಿಯಮಾವಳಿ ಉಲ್ಲಂಘಿಸಿದ ಕಾರಣ, ಫಲಿತಾಂಶ ವಿಳಂಬವಾಗುತ್ತಿದೆ.

ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಮೂರರಲ್ಲಿ ಬಿಜೆಪಿ ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್‌, ಜಗ್ಗೇಶ್‌ ಹಾಗೂ ಲೆಹರ್‌ ಸಿಂಗ್‌ ಸಿರೋಯಾ ಗೆದ್ದಿದ್ದಾರೆ. ಕಾಂಗ್ರೆಸ್‌ನಿಂದ ಜೈರಾಮ್‌ ರಮೇಶ್‌ ಆರಿಸಿ ಬಂದಿದ್ದಾರೆ.

ರಾಜಸ್ಥಾನದ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಶುಕ್ರವಾರ ಆಡಳಿತಾರೂಢ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿಗಳಾದ ರಣದೀಪ್ ಸುರ್ಜೆವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ, ಬಿಜೆಪಿ ಅಭ್ಯರ್ಥಿ ಘನಶ್ಯಾಮ್ ತಿವಾರಿ ಗೆದ್ದಿದ್ದಾರೆ. ಆದರೆ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ, ಮಾಧ್ಯಮ ದೊರೆ ಸುಭಾಷ್ ಚಂದ್ರ ಅವರು ಸೋತಿದ್ದಾರೆ.

ಮಹಾರಾಷ್ಟ್ರ, ಹರಿಯಾಣ ವಿಳಂಬ

ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಮತದಾನದ ವೇಳೆ ಶಾಸಕರು ನಿಯಮ ಉಲ್ಲಂಘಿಸಿದ ಕಾರಣ, ಈ ಮತಗಳನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಪಟ್ಟುಹಿಡಿದಿದೆ. ಮಹಾರಾಷ್ಟ್ರದಲ್ಲಿ ಆಡಳಿತ ಒಕ್ಕೂಟ MVAಯ ಮೂವರು ಶಾಸಕರು ಮತ್ತು ಹರಿಯಾಣದಲ್ಲಿ ವಿರೋಧ ಪಕ್ಷ ಕಾಂಗ್ರೆಸ್‌ನ ಇಬ್ಬರು ಶಾಸಕರು ಬಹಿರಂಗವಾಗಿ ಮತಪತ್ರಗಳನ್ನು ಪ್ರದರ್ಶಿಸಿ ನಿಯಮಾವಳಿ ಉಲ್ಲಂಘಿಸಿದ್ದರು. ಈ ಮತಗಳನ್ನು ರದ್ದುಗೊಳಿಸುವಂತೆ ಚುನಾವಣಾ ಆಯೋಗವನ್ನು ಬಿಜೆಪಿ ಒತ್ತಾಯಿಸಿದೆ. ಈ ಕಾರಣದಿಂದ ಈ ರಾಜ್ಯಗಳ ಫಲಿತಾಂಶ ವಿಳಂಬವಾಗಲಿದೆ.

Exit mobile version