ನವದೆಹಲಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಸತತ 10ನೇ ದಿನವೂ ಕೂಡ ಏರಿಕೆಯಾಗಿದೆ. ಗುರುವಾರ ದೇಶದಲ್ಲಿ ತೈಲ ದರ ಪ್ರತಿ ಲೀಟರ್‌ಗೆ 80 ಪೈಸೆ ಹೆಚ್ಚಳವಾಗಿದೆ. ಈ ಮೂಲಕ ಕಳೆದ 10 ದಿನಗಳಲ್ಲಿ 9 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ 6.40 ರೂಪಾಯಿ ಹೆಚ್ಚಳವಾದಂತಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 80 ಪೈಸೆ ಹೆಚ್ಚಳದೊಂದಿಗೆ ಪ್ರಸ್ತುತ ದರ ಲೀಟರ್‌ಗೆ 101.81 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 93.07 ರೂಪಾಯಿಗೆ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ 107 ರೂಪಾಯಿ 30 ಪೈಸೆಯಾಗಿದ್ದು, ಡೀಸೆಲ್ ದರ 91 ರೂಪಾಯಿ 27 ಪೈಸೆಯಾಗಿದೆ.
ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 116.72 ರೂಪಾಯಿ ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 100.94 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 107.45 ರೂಪಾಯಿಗಳಾಗಿದ್ದು, ಡೀಸೆಲ್ ದರ 97.52 ರೂಪಾಯಿಗೆ ಏರಿಕೆಯಾಗಿದೆ. ನಾಲ್ಕೂವರೆ ತಿಂಗಳ ನಂತರ ಮಾರ್ಚ್ 22ರಿಂದ ಏರಿಕೆಯಾದ ತೈಲ ಬೆಲೆ ಏರಿಕೆಯಲ್ಲಿ ಇದು ಸತತ 9ನೇ ಹೆಚ್ಚಳವಾಗಿದೆ.
ಇಂಧನ ಬೆಲೆಯಲ್ಲಿ ತೀವ್ರ ಏರಿಕೆಯಾಗುತ್ತಿರುವುದನ್ನು ಖಂಡಿಸಿ ದೆಹಲಿಯ ವಿಜಯ್ ಚೌಕ್‌ನಲ್ಲಿ ಗುರುವಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ ಅವರು ʻಕಳೆದ 10 ದಿನಗಳಲ್ಲಿ 9 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಲಾಹಿದೆ. ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಣಕ್ಕೆ ತರಬೇಕುʼ ಎಂದು ಸರ್ಕಾರವನ್ನು ಆಗ್ರಹಿಸಿದರು.