ಬೆಂಗಳೂರು: ಕರೊನಾ ಸಂದರ್ಭದಲ್ಲಿ ದೇಶಾದ್ಯಂತ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡಿದ್ದರೂ ಅವರನ್ನು ಕಡುಬಡತನಕ್ಕೆ ತಳ್ಳಲ್ಪಡುವುದರಿಂದ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ ತಡೆದಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF) ಅಧೀನದ ಅಧ್ಯಯನ ವರದಿಯೊಂದು ತಿಳಿಸಿದೆ.
Pandemic, Poverty, and Inequality: Evidence from India ಎಂಬ ಶೀರ್ಷಿಕೆಯಲ್ಲಿ ನಡೆದಿರುವ ವರದಿಯನ್ನು ಸುರ್ಜಿತ್ ಎಸ್ ಭಲ್ಲಾ, ಕರಣ್ ಭಾಸಿನ್ ಹಾಗೂ ಅರವಿಂದ ವೀರಮಣಿ ಅವರು ಸಿದ್ಧಪಡಿಸಿದ್ದಾರೆ. ಭಾರತದಲ್ಲಿ ಕಡುಬಡತನದ ಪ್ರಮಾಣ 2019ರಲ್ಲಿ 1%ಗಿಂತ ಕಡಿಮೆ ಅಂದರೆ 0.8% ಆಸುಪಾಸಿನಲ್ಲಿತ್ತು. ಕರೊನಾ ಸಂಕಷ್ಟ ಎದುರಾದಾಗ ಅನೇಕರು ಉದ್ಯೋಗ ಕಳೆದುಕೊಂಡರು. ಈ ಸಂದರ್ಭದಲ್ಲಿ ಆಹಾರ ಸಮಸ್ಯೆಯ ಕಾರಣಕ್ಕೆ ಕಡುಬಡತನ ಏರಿಕೆಯಾಗುವ ಅಪಾಯವಿತ್ತು. ಕೇಂದ್ರ ಸರ್ಕಾರದ ಆರ್ಥಿಕ ಪ್ಯಾಕೇಜ್ ಅತ್ಯುತ್ತಮವಾಗಿ ಕೆಲಸ ಮಾಡಿತು. ಆದರೆ ಹಣಕಾಸು ನೆರವನ್ನು ಮುಂದುವರಿಸುವ ಬದಲಿಗೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಆಹಾರ ಧಾನ್ಯ ನೀಡಿಕೆಯನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ(PMGKY) ಮೂಲಕ ದ್ವಿಗುಣಗೊಳಿಸಿದ್ದು ಅತ್ಯಂತ ಪರಿಣಾಮಕಾರಿಯಾಗಿ ಪರಿಣಮಿಸಿತು. ಇದರಿಂದಾಗಿ, ಕಡು ಬಡತನವು 0.8 ಹಂತದಲ್ಲೇ ನಿರ್ವಹಣೆ ಆಯಿತು. ಈ ಯೋಜನೆ ಇಲ್ಲದಿದ್ದಲ್ಲಿ ಕಡು ಬಡತನವು 1.05% ಕ್ಕೆ ಹೆಚ್ಚಳವಾಗುವ ಅಪಾಯವಿತ್ತು ಎಂದು ತಿಳಿಸಿದೆ.
ಆಹಾರ ಧಾನ್ಯ ವಿತರಣೆ ವ್ಯವಸ್ಥೆಯಲ್ಲಿ ಸೋರಿಕೆಯನ್ನು ತಡೆಯುವಲ್ಲೂ ಸರ್ಕಾರ ಯಶಸ್ವಿಯಾಗಿದೆ ಎನ್ನುವುದನ್ನು ವರದಿ ಸೂಕ್ಷ್ಮವಾಗಿ ತಿಳಿಸಿದೆ. 2011ಕ್ಕೂ ಮೊದಲು ಆಹಾರ ಧಾನ್ಯಗಳ ವಿತರಣೆ 54% ಇತ್ತು. ಆದರೆ 2014-15ರ ನಂತರ 86% ಕ್ಕೆ ಏರಿಕೆ ಕಂಡಿದೆ. ಆಧಾರ್ ಜತೆಗೆ ವ್ಯವಸ್ಥೆಯನ್ನು ಜೋಡಣೆ ಮಾಡಿರುವುದರಿಂದಾಗಿ ಸೋರಿಕೆಯನ್ನು ತಡೆಯಲು ಸಾಧ್ಯವಾಗಿದೆ ಎಂದು ವರದಿ ಹೇಳಿದೆ.
2020ರಲ್ಲಿ ಕರೊನಾ ಶೋಂಕು ಭಾರತದಲ್ಲಿ ಕಾಣಿಸಿಕೊಂಡ ನಂತರದಲ್ಲಿ ದೇಶಾದ್ಯಂತ ಸೋಂಕು ಹರಡದಂತೆ ಲಾಕ್‌ಡೌನ್ ವಿಧಿಸಲಾಯಿತು. ಈ ಸಮಯದಲ್ಲಿ ಯಾವುದೇ ನಾಗರಿಕರು ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸಬಾರದು ಎಂದು ತಿಳಿಸಿದರೂ ಆತಂಕಗೊಂಡ ದಿನಗೂಲಿ ನೌಕರರು, ವಲಸೆ ಕಾರ್ಮಿಕರು ಲಕ್ಷೋಪಲಕ್ಷ ಸಂಖ್ಯೆಗಳಲ್ಲಿ ತಂತಮ್ಮ ಊರಿನತ್ತ ತೆರಳಿದರು. ಈ ಸಂದರ್ಭ ಮುಖ್ಯವಾಗಿ ಆಹಾರ ಧಾನ್ಯದ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ ಅಡಿಯಲ್ಲಿ ದ್ವಿಗುಣ ಧಾನ್ಯ ನೀಡಲಾರಂಭಿಸಿದರು. ಇದೀಗ ದೇಶದಲ್ಲಿ ಕರೊನಾ ಸೋಂಕು ಇಳಿಕೆಯಾಗಿ ಜನಜೀವನ ಸಹಜತೆಯತ್ತ ಮರಳಿದೆಯಾದರೂ ಉದ್ಯೋಗ ನಷ್ಟ ಇನ್ನೂ ಮುಂದುವರಿದಿದೆ. ಈ ಕಾರಣಕ್ಕಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು 2022ರ ಸೆಪ್ಟೆಂಬರ್‌ವರೆಗೆ ಮುಂದುವರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ತಿಂಗಳು ಘೋಷಣೆ ಮಾಡಿದ್ದರು.