Site icon Vistara News

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತದಿಂದ 76 ಸಾವಿರ ಟನ್ ಇಂಧನ ನೆರವು

ಕೊಲಂಬೋ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ ಸಹಾಯಹಸ್ತ ಚಾಚಿದೆ. ಭಾರತ ಸರ್ಕಾರ ಶ್ರೀಲಂಕಾಗೆ ಸುಮಾರು 76 ಸಾವಿರ ಟನ್ ಇಂಧನವನ್ನು ಪೂರೈಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ 36,000 MT ಪೆಟ್ರೋಲ್ ಮತ್ತು 40,000 MT ಡೀಸೆಲ್ ಅನ್ನು ಶ್ರೀಲಂಕಾಕ್ಕೆ ತಲುಪಿಸಲಾಗಿದೆ. ಭಾರತ ನೆರವಿನ ಅಡಿಯಲ್ಲಿ ವಿವಿಧ ರೀತಿಯ ಇಂಧನದ ಒಟ್ಟು ಪೂರೈಕೆಯು ಈಗ 270,000 MT ಗಿಂತಲೂ ಹೆಚ್ಚಿದೆ ಎಂದು ತಿಳಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ʻನಾವು ಹೇಳಿದಂತೆ, ನೆರೆಹೊರೆಯವರು ಮೊದಲುʼ ಎಂದು ಹೇಳಿದ್ದಾರೆ. 

ಭಾರತದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ ಶ್ರೀಲಂಕಾ ಕ್ರಿಕೆಟಿಗ ಜಯಸೂರ್ಯ

ದ್ವೀಪರಾಷ್ಟ್ರಕ್ಕೆ ಹೆಚ್ಚಿನ ಅಗತ್ಯವಿರುವ ಇಂಧನ ನೆರವು ನೀಡಿರುವ ಭಾರತವನ್ನು ಶ್ರೀಲಂಕಾ ಕ್ರಿಕೆಟಿಗ ಸನತ್‌ ಜಯಸೂರ್ಯ ದೊಡ್ಡಣ್ಣ ಎಂದು ಸಂಬೋಧಿಸಿದ್ದಾರೆ. ನೆರೆಯ ಮತ್ತು ದ್ವೀಪರಾಷ್ಟ್ರ ಶ್ರೀಲಂಕಾಗೆ ಭಾರತ ಸಹಾಯಹಸ್ತ ಚಾಚಿದೆ. ಭಾರತ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳು. ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಸದ್ಯಕ್ಕೆ ಚೇತರಿಸಿಕೊಳ್ಳುವುದು ಕಷ್ಟಕರ. ಭಾರತ ಸೇರಿದಂತೆ ಇತರೆ ರಾಷ್ಟ್ರಗಳು ನಮ್ಮ ನೆರವಿಗೆ ನಿಲ್ಲುತ್ತವೆ ಎನ್ನುವ ಭರವಸೆಯಿದೆ ಎಂದು ಸನತ್‌ ಜಯಸೂರ್ಯ ಹೇಳಿದ್ದಾರೆ.

ದ್ವೀಪ ರಾಷ್ಟ್ರದಲ್ಲಿ ಅನ್ನ, ನೀರಿಗೂ ಜನರ ಪರದಾಟ

ಶ್ರೀಲಂಕಾದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಲ್ಲಿನ ನಿವಾಸಿಗಳು ಅನ್ನ ಮತ್ತು ಕುಡಿಯುವ ನೀರಿಗೂ ಪರದಾಡುವಂತಹ ದುಸ್ಥಿತಿ ಬಂದೊದಗಿದೆ. ಇಂಧನ, ಆಹಾರದ ಕೊರತೆ ಮತ್ತು ವಿದ್ಯುತ್ ವ್ಯತ್ಯಯದಿಂದ ಕಂಗೆಟ್ಟಿರುವ ಶ್ರೀಲಂಕಾದ ಪ್ರಜೆಗಳು ಆ ದೇಶದ ಅಧ್ಯಕ್ಷ ಗೋಟಬಯ ರಾಜಪಕ್ಸ ರಾಜೀನಾಮೆಗೆ ಒತ್ತಾಯಿಸಿ ಬೀದಿಗಿಳಿದು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.

Exit mobile version