ಇಸ್ಲಾಮಾಬಾದ್: ಭಯೋತ್ಪಾದಕರ ನೆಲೆವೀಡಾಗಿರುವ, ಜಗತ್ತಿಗೇ ಉಗ್ರರು ತಲೆನೋವಾಗಿರುವ ಹೊತ್ತಿನಲ್ಲಿ ಪಾಕಿಸ್ತಾನದಲ್ಲಿ ಸಾಲು ಸಾಲಾಗಿ ಉಗ್ರರು ಹತ್ಯೆಗೀಡಾಗುತ್ತಿದ್ದಾರೆ. ಒಂದು ವಾರದಲ್ಲಿಯೇ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಲಷ್ಕರೆ ತಯ್ಬಾ ಕಮಾಂಡರ್ ಅಕ್ರಮ್ ಘಾಜಿ, ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯ ಮೌಲಾನಾ ರಹೀಮ್ ಉಲ್ಲಾ ತಾರಿಕ್ ಹತ್ಯೆಗೀಡಾಗಿದ್ದಾನೆ. ಅದರಲ್ಲೂ ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನ, ಕೆನಡಾ ಸೇರಿ ಹಲವೆಡೆ 16 ಉಗ್ರರು ಬರೀ ‘ಅಪರಿಚಿತರ’ ಗುಂಡಿಗೆ ಬಲಿಯಾಗಿದ್ದಾರೆ. ಹಾಗಾದರೆ, ಒಂದು ವರ್ಷದಲ್ಲಿ ಹತ್ಯೆಗೀಡಾದ ಉಗ್ರರು ಯಾರು? ಅವರ ಹಿನ್ನೆಲೆ ಏನು? ಯಾವಾಗ ಹತ್ಯೆಯಾಯಿತು ಎಂಬುದರ ಮಾಹಿತಿ ಇಲ್ಲಿದೆ.
1. ಮೌಲಾನಾ ರಹೀಮ್ ಉಲ್ಲಾ ತಾರಿಕ್, ನವೆಂಬರ್ 12, 2023
ಜೈಶೆ ಮೊಹಮ್ಮದ್ ಉಗ್ರ, ಉಗ್ರ ಸಂಘಟನೆಯ ಸಂಸ್ಥಾಪಕ ಮೌಲಾನ ಮಸೂದ್ ಅಜರ್‌ನ ಆಪ್ತನಾಗಿದ್ದ ಮೌಲಾನಾ ರಹೀಮ್ ಉಲ್ಲಾ ತಾರಿಕ್‌ನನ್ನು ಕರಾಚಿಯ ಒರಾಂಗಿ ಪಟ್ಟಣದಲ್ಲಿ ಹತ್ಯೆ ಮಾಡಲಾಗಿದೆ. ಬೈಕ್‌ನಲ್ಲಿ ಬಂದ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ವಾಪಸಾಗುವಾಗ ಗುಂಡಿನ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
2. ಅಕ್ರಮ್ ಘಾಜಿ, ನವೆಂಬರ್ 9, 2023
2018ರಿಂದ 2020ರಲ್ಲಿ ಲಷ್ಕರೆ ತಯ್ಬಾ ಉಗ್ರ ಸಂಘಟನೆಯಲ್ಲಿ ಉಗ್ರರ ನೇಮಕಾತಿ ಹುದ್ದೆ ನಿಭಾಯಿಸಿದ ಅಕ್ರಮ್ ಘಾಜಿ, ಜಮ್ಮು-ಕಾಶ್ಮೀರದಲ್ಲಿ ಹಲವು ಉಗ್ರ ದಾಳಿಯ ರೂವಾರಿಯೂ ಆಗಿದ್ದಾನೆ ಎಂದು ತಿಳಿದುಬಂದಿದೆ. ಹಾಗೆಯೇ, ಭಾರತದ ವಿರೋಧಿ ಹೇಳಿಕೆ, ಘೋಷಣೆಗಳಿಂದಲೇ ಉಗ್ರರನ್ನು ಪ್ರಚೋದಿಸುತ್ತಿದ್ದ ಈತ ಹಲವು ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಬಜೌರ್ ಜಿಲ್ಲೆಯಲ್ಲಿ ಅಪರಿಚಿತರು ಬೈಕ್‌ನಲ್ಲಿ ಬಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಇದರ ಕುರಿತು ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ತನಿಖೆ ನಡೆಸುತ್ತಿದೆ.
3. ದಾವೂದ್ ಮಲಿಕ್, ಅಕ್ಟೋಬರ್
ಮೌಲಾನಾ ಮಸೂದ್ ಅಜರ್ ಆಪ್ತನಾಗಿದ್ದ ದಾವೂದ್ ಮಲಿಕ್‌ನನ್ನು ಕಳೆದ ತಿಂಗಳು ಹತ್ಯೆ ಮಾಡಲಾಗಿದೆ. ಉತ್ತರ ವಾಜಿರ್‌ಸ್ತಾನ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಈತನನ್ನು ಹತ್ಯೆ ಮಾಡಿದ್ದಾರೆ. ಇವನು ಲಷ್ಕರೆ ಜಬ್ಬರ್ ಉಗ್ರ ಸಂಘಟನೆಯ ಪ್ರಮುಖನಾಗಿದ್ದು, ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿದ್ದ ಎಂದು ಹೇಳಲಾಗಿದೆ.
4. ಶಾಹಿದ್ ಲತೀಫ್, ಅಕ್ಟೋಬರ್ 11
2016ರ ಪಠಾಣ್‌ಕೋಟ್ ಭಯೋತ್ಪಾದನೆ ದಾಳಿಯ ರೂವಾರಿಯಾದ ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯ ಶಾಹಿದ್ ಲತೀಫ್‌ನನ್ನು ಕಳೆದ ಅಕ್ಟೋಬರ್‌ನಲ್ಲಿ ಅಪರಿಚಿತರು ಗುಂಡಿನ ದಾಳಿ ಮೂಲಕ ಹತ್ಯೆಗೈದಿದ್ದಾರೆ. ಸಿಯಾಲ್‌ಕೋಟ್‌ನಲ್ಲಿ ಉಗ್ರ ಸೇರಿ ಆತನ ಏಳು ಗನ್‌ಮ್ಯಾನ್‌ಗಳನ್ನು ಹತ್ಯೆ ಮಾಡಲಾಗಿದೆ.
5. ಜಿಯೌರ್ ರೆಹಮಾನ್, ಸೆಪ್ಟೆಂಬರ್ 29
6. ಸುಖದೂಲ್ ಸಿಂಗ್, ಸೆಪ್ಟೆಂಬರ್ 21
7. ಅಬು ಖಾಸಿಂ ಕಾಶ್ಮೀರಿ, ಸೆಪ್ಟೆಂಬರ್ 8
8. ಸರ್ದಾರ್ ಹುಸೇನ್ ಅರೈನ್, ಆಗಸ್ಟ್ 1
9. ಹರ್ದೀಪ್ ಸಿಂಗ್ ನಿಜ್ಜರ್, ಜೂನ್ 19 (ಕೆನಡಾದಲ್ಲಿ ಹತ್ಯೆ)
10. ಅವತಾರ್ ಸಿಂಗ್ ಖಂಡಾ, ಜೂನ್ 16 (ಲಂಡನ್‌ನಲ್ಲಿ ಕೊಲೆ)
11. ಪರಮ್‌ಜಿತ್ ಸಿಂಗ್ ಪಂಜ್ವಾರ್, ಮೇ 6
12. ಸೈಯದ್ ನೂರ್ ಶಾಲೋಬರ್, ಮಾರ್ಚ್ 4
13. ಬಷೀರ್ ಅಹ್ಮದ್ ಪೀರ್, ಫೆಬ್ರವರಿ 20
14. ಸೈಯದ್ ಖಾಲಿದ್ ರಾಜಾ, ಫೆಬ್ರವರಿ 27
15. ಅಜೈಜ್ ಅಹ್ಮದ್ ಅಹಂಗರ್, ಫೆಬ್ರವರಿ 14
16. ಹರ್ವಿಂದರ್ ಸಿಂಗ್ ಸಂಧು, 2022, ನವೆಂಬರ್ 19
ಇದನ್ನೂ ಓದಿ: ಪಾಕ್‌ನಲ್ಲಿ ‘ಅಪರಿಚಿತರ’ ಗುಂಡಿಗೆ ಜೈಶೆ ಮೊಹಮ್ಮದ್ ಉಗ್ರ ಬಲಿ; ವಾರದಲ್ಲಿ ಇಬ್ಬರು ಉಗ್ರರ ಹತ್ಯೆ!
ಆಂತರಿಕ ದ್ವೇಷ ಕಾರಣ?
ಪಾಕಿಸ್ತಾನ ಸರ್ಕಾರವು ಐಎಸ್‌ಐ ಮೂಲಕ ಉಗ್ರರಿಗೆ ಹಲವು ರೀತಿಯಲ್ಲಿ ನೆರವು ನೀಡುತ್ತಿದ್ದರೂ ಇತ್ತೀಚೆಗೆ ಉಗ್ರರಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ಸರಬರಾಜು ಆಗುತ್ತಿಲ್ಲ. ಪಾಕಿಸ್ತಾನವೇ ಆರ್ಥಿಕವಾಗಿ ದಿವಾಳಿಯಾಗಿದ್ದು, ಜಾಗತಿಕ ಸಂಸ್ಥೆಗಳ ಎದುರು ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಅಮೆರಿಕ ಕೂಡ ಮೊದಲಿನ ಹಾಗೆ ಹಣದ ನೆರವು ನೀಡುತ್ತಿಲ್ಲ. ಇದರಿಂದಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ಇದು ಪಾಕಿಸ್ತಾನದಲ್ಲಿ ಉಗ್ರರ ಮಧ್ಯೆಯೇ ಒಳಜಗಳಕ್ಕೆ ಕಾರಣವಾಗಿದೆ. ಹಾಗಾಗಿಯೇ, ಉಗ್ರರನ್ನೇ ಹತ್ಯೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಹತರಾದ ಬಹುತೇಕ ಉಗ್ರರು ಭಾರತ ವಿರೋಧಿ ಚಟುವಟಿಕೆ, ಪಿತೂರಿ, ಉಗ್ರರ ದಾಳಿಗೆ ಕಾರಣರಾದ ಕಾರಣ ಅವರ ಸಾವಿನ ಹಿಂದಿನ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ.