Site icon Vistara News

ಬಿಹಾರದಲ್ಲಿ ಸಿಡಿಲಿನ ಆರ್ಭಟ, ಒಂದೇ ದಿನ 17 ಮಂದಿ ಸಾವು, ಸರ್ಕಾರದಿಂದ 4 ಲಕ್ಷ ಪರಿಹಾರ

rain update

ಬಿಹಾರ: ಉತ್ತರ ಭಾರತದಲ್ಲಿ ಕಳೆದ ಒಂದು ಒಂದು ವಾರದಿಂದ ಭಾರಿ ಮಳೆ ಸುರಿಯುತ್ತಿದ್ದು, ಪ್ರವಾಹ, ಭೂಕುಸಿತದಿಂದ ಹಲವು ರಾಜ್ಯಗಳು ಅಕ್ಷರಶಃ ನಲುಗಿವೆ. ಬಿಹಾರದಲ್ಲಂತೂ ಭಾನುವಾರ ಒಂದೇ ದಿನ ಸಿಡಿಲಿನ ಆರ್ಭಟ ೧೭ ಮಂದಿಯನ್ನು ಬಲಿ ಪಡೆದಿದೆ.

ಬಿಹಾರದ ಹಲವು ಜಿಲ್ಲೆಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ. ಪರಿಣಾಮ ಹಲವು ಜನರು ನಿರಾಶ್ರಿತರಾಗಿದ್ದು, ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದಿಷ್ಟೇ ಅಲ್ಲದೆ ಸಾವಿರಾರು ಎಕರೆ ಕೃಷಿ ಭೂಮಿ ಮಳೆಯಿಂದ ಸಂಪೂರ್ಣ ನಾಶವಾಗಿದೆ.

ಅದರಲ್ಲೂ ರಾಜ್ಯದ ಭಾಗಲ್ಪುರ ಜಿಲ್ಲೆಯಲ್ಲಿ ಅತಿಹೆಚ್ಚು ಸಾವು ಸಂಭವಿಸಿದೆ. ಇಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದರೆ, ವೈಶಾಲಿ ಜಿಲ್ಲೆಯಲ್ಲಿ 3, ಬಂಕಾ ಮತ್ತು ಕಾಗಾರಿಯಾದಲ್ಲಿ ತಲಾ ಎರಡು ಸಾವು ಹಾಗೂ ಮುಂಗರ್, ಕತಿಹಾರ್, ಮಾಧೇಪುರ್ ಮತ್ತು ಸಹ್ರಾಸ್​ದಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ.

ಇದನ್ನು ಓದಿ | ಬೆಂಗಳೂರಿನಲ್ಲಿ 2 ಗಂಟೆಗಳ ಭಾರಿ ಮಳೆಗೆ 1177 ಮನೆಗಳು ಜಲಾವೃತ

ಸದ್ಯ ಈ ದುರಂತಕ್ಕೆ ಸಂಬಂಧಿಸಿದಂತೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದು, ಮೃತ ಕುಟುಂಬಸ್ಥರಿಗೆ 4 ಲಕ್ಷ ಪರಿಹಾರವನ್ನು ಘೋಷಣೆ ಮಾಡಲಾಗಿದೆ.

ಉತ್ತರದಲ್ಲಿ 3 ರಿಂದ 5 ದಿನಗಳ ಕಾಲ ಮಳೆ

ಅಸ್ಸಾಂ ಹಾಗೂ ಮೇಘಾಲಯದಲ್ಲೂ ಕೂಡ ಭಾರಿ ಮಳೆಯಾಗುತ್ತಿದ್ದು, ಈವರೆಗೂ ಈ ಎರಡು ರಾಜ್ಯಗಳಲ್ಲಿ 31 ಕ್ಕೂ ಹೆಚ್ಚು ಜನ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇನ್ನು ಮೂರ್ನಾಲ್ಕು ದಿನ ಮಧ್ಯಪ್ರದೇಶ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಮಳೆ ಇನ್ನು ಐದು ದಿನಗಳ ಕಾಲ ಇದೇ ರೀತಿ  ಮುಂದುವರಿಯಲಿದ್ದು, ಎಚ್ಚರಿಗೆ ವಹಿಸುವಂತೆ ಮುನ್ಸೂಚನೆ ನೀಡಿದೆ.

ಕರ್ನಾಟಕದಲ್ಲೂ ಮುಂದಿನ ಮೂರು ದಿನ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಕಳೆದ ಎರಡು ಮೂರು ದಿನಗಳಿಂದ ಮಳೆಯಾಗುತ್ತಿದ್ದು, ಮುಂದಿನ ಮೂರು ದಿನಗಳು ಮಳೆ ಇದೇ ರೀತಿ ಮುಂದುವರಿಯಲಿದೆ. ಮುಂದಿನ 48 ಗಂಟೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಕರ್ನಾಟಕದಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಇದನ್ನು ಓದಿ| Flood effects | ಭೀಕರ ಮಳೆಗೆ ನಲುಗಿದ ಅಸ್ಸಾಂ, ಮೇಘಾಲಯ: ಪ್ರವಾಹಕ್ಕೆ ಸಿಲುಕಿ 31 ಮಂದಿ ಸಾವು

Exit mobile version