Site icon Vistara News

ವಿವಿ ಹಾಸ್ಟೆಲ್‌ಗೆ ನುಗ್ಗಿ ನಮಾಜ್‌ ಮಾಡಿದ ವಿದೇಶಿಯರ ಮೇಲೆ ಹಲ್ಲೆ; ಇಬ್ಬರ ಬಂಧನ

gujarath vv

gujarath vv

ಗಾಂಧಿನಗರ: ಗುಜರಾತ್‌ ವಿಶ್ವವಿದ್ಯಾಲಯದ (Gujarat University) ಹಾಸ್ಟೆಲ್‌ನಲ್ಲಿ ನಮಾಜ್‌ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಅಹಮದಾಬಾದ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಗುಜರಾತ್ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ನುಗ್ಗಿ ಮಾರ್ಚ್‌ 16ರಂದು ಹಲ್ಲೆ ನಡೆಸಿದ ಆರೋಪಿಗಳನ್ನು ಅಹಮದಾಬಾದ್ ನಗರ ಅಪರಾಧ ವಿಭಾಗ ಬಂಧಿಸಿದೆ” ಎಂದು ಸಾಮಾಜಿಕ ಜಾಲ ತಾಣ ಎಕ್ಸ್‌ ಮೂಲಕ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಜತೆಗೆ ಬಂಧಿತರ ಫೋಟೊಗಳನ್ನೂ ಶೇರ್‌ ಮಾಡಿದ್ದಾರೆ. ʼʼಬಂಧಿತರನ್ನು ಹಿತೇಶ್‌ ಮೇವಾಡ ಮತ್ತು ಭರತ್‌ ಪಟೇಲ್‌ ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಲು ಒಂಬತ್ತು ತಂಡಗಳನ್ನು ರಚಿಸಲಾಗಿದೆʼʼ ಎಂದು ಪೊಲೀಸ್‌ ಕಮಿಷನರ್‌ ಜಿ.ಎಸ್‌.ಮಲಿಕ್‌ ತಿಳಿಸಿದ್ದಾರೆ.

ಏನಿದು ಘಟನೆ?

ರಂಜಾನ್‌ ಹಿನ್ನೆಲೆಯಲ್ಲಿ ಐವರು ವಿದೇಶಿ ವಿದ್ಯಾರ್ಥಿಗಳು ಮಾರ್ಚ್‌ 16ರ ಸಂಜೆ ನಮಾಜ್‌ ಮಾಡಿದ್ದಾರೆ. ಅಫಘಾನಿಸ್ತಾನ ಸೇರಿ ಹಲವು ದೇಶಗಳ ವಿದ್ಯಾರ್ಥಿಗಳು ಇದ್ದರು. ಈ ಸುದ್ದಿ ತಿಳಿಯುತ್ತಲೇ ಉದ್ರಿಕ್ತ ಗುಂಪೊಂದು ದೊಣ್ಣೆ, ಚಾಕುವಿನಿಂದ ಹಾಸ್ಟೆಲ್‌ಗೆ ನುಗ್ಗಿದೆ. ಹಾಸ್ಟೆಲ್‌ ನುಗ್ಗಿದ ಗುಂಪಿನ ಸದಸ್ಯರು ಐವರೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

“ನಾವು ಹಾಸ್ಟೆಲ್‌ನಲ್ಲಿ ಓದುತ್ತ ಕುಳಿತಿದ್ದೆವು. ಇದೇ ವೇಳೆ ಒಂದಷ್ಟು ಜನರ ಗುಂಪು ನಮ್ಮ ಹಾಸ್ಟೆಲ್‌ಗೆ ನುಗ್ಗಿ, ನಮ್ಮ ಮೇಲೆ ದಾಳಿ ನಡೆಸಿತು. ಹಾಸ್ಟೆಲ್‌ ಕೋಣೆಗಳಿಗೇ ನುಗ್ಗಿ ಹಲ್ಲೆ ನಡೆಸಿತು. ದಾಳಿ ವೇಳೆ ನಮ್ಮನ್ನು ಯಾರೂ ರಕ್ಷಿಸಲಿಲ್ಲ. ದಾಳಿಯ ವೇಳೆ ಅವರು ಹಲವು ಘೋಷಣೆಗಳನ್ನು ಕೂಗಿದರು. ನಮ್ಮ ಲ್ಯಾಪ್‌ಟಾಪ್‌, ಫೋನ್‌ಗಳು, ಬೈಕ್‌ಗಳನ್ನು ಅವರು ಧ್ವಂಸಗೊಳಿಸಿದ್ದಾರೆ. ಘಟನೆ ನಡೆದ ಅರ್ಧ ಗಂಟೆ ಬಳಿಕ ಪೊಲೀಸರು ಹಾಸ್ಟೆಲ್‌ಗೆ ಆಗಮಿಸಿದರು. ಅಷ್ಟೊತ್ತಿಗಾಗಲೇ ದಾಳಿ ಮಾಡಿದವರು ಪರಾರಿಯಾಗಿದ್ದರು” ಎಂದು ಹಲ್ಲೆಗೀಡಾದ ವಿದ್ಯಾರ್ಥಿಯೊಬ್ಬ ತಿಳಿಸಿದ್ದಾನೆ.

ದಾಳಿಗೊಳಗಾದ ಐವರಲ್ಲಿ ಅಫಘಾನಿಸ್ತಾನ, ಶ್ರೀಲಂಕಾ ಹಾಗೂ ತುರ್ಕ್‌ಮೇನಿಸ್ತಾನದ ತಲಾ ಒಬ್ಬರು ಹಾಗೂ ಇಬ್ಬರು ಆಫ್ರಿಕನ್‌ ದೇಶದವರು. ಈ ಘಟನೆಯ ವಿಡಿಯೊ ವೈರಲ್‌ ಆಗಿ ದೇಶಾದ್ಯಂತ ಚರ್ಚೆ ನಡೆದಿತ್ತು. ಬಳಿಕ ಪೊಲೀಸರು 20-25 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಿದ್ದಾರೆ. ಗಲಾಟೆಯಲ್ಲಿ ಇಬ್ಬರು ವಿದೇಶಿ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು ಕೂಡಲೇ ಆಸ್ಪತ್ರಗೆ ದಾಖಲಿಸಲಾಗಿತ್ತು. ಈ ಪೈಕಿ ಒಬ್ಬರನ್ನು ಡಿಸ್‌ಚಾರ್ಜ್‌ ಮಾಡಲಾಗಿದೆ. ಸದ್ಯ ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ. ಗೃಹ ಖಾತೆ ಸಚಿವ ಹರ್ಷ ಸಾಂಘವಿ ಈ ಬಗ್ಗೆ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಕಠಿಣ ಮತ್ತು ನ್ಯಾಯಾಂಗ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ವಿವಿ ಹಾಸ್ಟೆಲ್‌ನಲ್ಲಿ ನಮಾಜ್‌ ಮಾಡಿದ ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ; ಐವರಿಗೆ ಗಾಯ

ʼʼದಾಳಿಯಿಂದಾಗಿ ಗುಜರಾತ್‌ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಹಾಗೂ ವಿವಿ ಹಾಸ್ಟೆಲ್‌ನಲ್ಲಿ ತಂಗಿರುವ ವಿದ್ಯಾರ್ಥಿಗಳಿಗೆ ಭಯ ಉಂಟಾಗಿದೆ. ವಿದೇಶಿ ವಿದ್ಯಾರ್ಥಿಗಳ ಮೇಲಿನ ದಾಳಿಯನ್ನು ಖಂಡಿಸುತ್ತೇನೆʼʼ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಪ್ರಕರಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version