ನವದೆಹಲಿ: ಬಿಹಾರದಲ್ಲಿ (Bihar) 22 ವರ್ಷದ ಯುವತಿಯೊಬ್ಬಳು (Rukmini Kumari) ಮಗುವಿಗೆ ಜನ್ಮ ನೀಡಿದ ಮೂರು ಗಂಟೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದು, ಪರೀಕ್ಷೆ ಬರೆದ ಘಟನೆ ನಡೆದಿದೆ. ಬಿಹಾರದಲ್ಲಿ ಸದ್ಯ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದೆ. ರುಕ್ಮಿಣಿ ಕುಮಾರಿ ಬಂಕಾ ಜಿಲ್ಲೆಯವರು. ಇವರು ಬುಧವಾರ ಬೆಳಗ್ಗೆ ಮಗುವಿಗೆ ಜನ್ಮ ನೀಡಿ, ಅದಾದ ಮೂರು ಗಂಟೆ ಬಳಿಕ ಎಸ್ಸೆಸ್ಸೆಲ್ಸಿಯ ವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷೆಗೆ ಹೋಗದಂತೆ ವೈದ್ಯರು ಮತ್ತು ಕುಟುಂಬದ ಸದಸ್ಯರು ಸಲಹೆ ನೀಡಿದರೂ, ಅದನ್ನ ತಿರಸ್ಕರಿಸಿ, ಪರೀಕ್ಷೆಯನ್ನು ಬರೆದು ಗಮನ ಸೆಳೆದಿದ್ದಾರೆ(Viral News).
ಮಹಿಳೆಯರ ಶಿಕ್ಷಣಕ್ಕೆ ಸರ್ಕಾರ ನೀಡಿದ ಒತ್ತಿಗೆ ಹೆಚ್ಚಿನ ಸ್ಪಂದನ ದೊರೆಯುತ್ತಿದೆ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ. ಪರಿಶಿಷ್ಟ ಜಾತಿಗೆ ಸೇರಿದ ರುಕ್ಮಿಣಿ ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಪವನ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರುಕ್ಮಿಣಿ, ಮಂಗಳವಾರ ಗಣಿತ ಎಕ್ಸಾಮ್ ಬರೆದಾಗ ಸ್ವಲ್ಪ ಅಸ್ವಸ್ಥತೆ ಇತ್ತು. ಮರುದಿನ ನಿಗದಿಯಾಗಿದ್ದ ವಿಜ್ಞಾನ ಪತ್ರಿಕೆಯ ಬಗ್ಗೆ ಉತ್ಸುಕಳಾಗಿದ್ದೆ. ಆದರೆ ಆಸ್ಪತ್ರೆಗೆ ಹೋಗುವುದು ಅನಿವಾರ್ಯವಾಯಿತು ಮತ್ತು ಬೆಳಗ್ಗೆ 6 ಗಂಟೆಗೆ ನನ್ನ ಮಗ ಜನಿಸಿದ. ಮೂರು ಗಂಟೆ ಬಳಿಕ ನಾನು ಮತ್ತೆ ಪರೀಕ್ಷೆ ಬರೆಯಲು ಹೋದೆ ಎಂದು ಅವರು ತಿಳಿಸಿದ್ದಾರೆ. ಪರೀಕ್ಷೆ ಬರೆದು ಭಾರೀ ಸುದ್ದಿಯಾಗಿರುವ ರುಕ್ಮಿಣಿ, ತನ್ನ ಮಗ ಕೂಡ ಶಿಕ್ಷಣ ಪಡೆಯಬೇಕು ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ, ವಿಜ್ಞಾನ ಪತ್ರಿಕೆಯನ್ನು ಚೆನ್ನಾಗಿ ಬರೆದಿರುವೆ ಎಂದೂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ವೈರಲ್ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!
ಹೆರಿಗೆಯ ತೀವ್ರತೆಯು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದರಿಂದ ನಾವು ರುಕ್ಮಿಣಿಗೆ ಎಕ್ಸಾಮ್ ಹೋಗದಂತೆ ಮನವೊಲಿಸಲು ಪ್ರಯತ್ನಿಸಿದೆವು. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಪರೀಕ್ಷೆ ಬರೆಯಲೇಬೇಕೆಂದು ಹಠ ಹಿಡಿದರು. ಆದ್ದರಿಂದ ಅವರಿಗೆ ಬೇಕಾದ ವ್ಯವಸ್ಥೆ ಮಾಡಿದೆವು. ತುರ್ತು ಸಂದರ್ಭದಲ್ಲಿ ಅವಳಿಗೆ ಸಹಾಯ ಮಾಡಲು ಆಂಬ್ಯುಲೆನ್ಸ್ ಮತ್ತು ಕೆಲವು ವೈದ್ಯಾಧಿಕಾರಿಗಳನ್ನು ನಿಯೋಜಿಸಲಾಯಿತು ಎಂದು ರುಕ್ಮಿಣಿ ಅವರಿಗೆ ಹೆರಿಗೆ ಮಾಡಿಸಿದ ವೈದ್ಯ ಭೋಲಾನಾಥ್ ಅವರು ತಿಳಿಸಿದ್ದಾರೆ.