ಲಾಹೋರ್, ಪಾಕಿಸ್ತಾನ: ಪ್ರಖ್ಯಾತ ಉರ್ದು ಕವಿ ಫೈಯಾಜ್ ಅಹ್ಮದ್ ಫೈಯಾಜ್ ಸ್ಮರಣಾರ್ಥ ಆಯೋಜಿಸಲಾಗಿರುವ ಫಯಾಜ್ ಫೆಸ್ಟಿವಲ್ 2023 (Faiz Festival 2023) ಪಾಲ್ಗೊಳ್ಳಲು ಭಾರತದ ಖ್ಯಾತ ಬರಹಗಾರ ಹಾಗೂ ಚಿತ್ರಸಾಹಿತಿ ಜಾವೇದ್ ಅಖ್ತರ್ (Javed Akhtar) ಅವರು ಪಾಕಿಸ್ತಾನದಲ್ಲಿದ್ದಾರೆ. ಲಾಹೋರ್‌ನಲ್ಲಿ ಆಯೋಜಿಸಲಾಗಿರುವ ಈ ಫೆಸ್ಟಿವಲ್‌ನಲ್ಲಿ ಮಾತನಾಡಿದ ಅಖ್ತರ್ ಅವರು, 26/11 ಮುಂಬೈ ದಾಳಿಯನ್ನು ಪ್ರಸ್ತಾಪಿಸಿ, ಪಾಕಿಸ್ತಾನಕ್ಕೆ ಚುರುಕು ಮುಟ್ಟಿಸಿದ್ದಾರೆ. 2011ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದವರು ನಿಮ್ಮ ದೇಶ(ಪಾಕಿಸ್ತಾನ)ದಿಂದಲೇ ಬಂದವರು. ಈ ಬಗ್ಗೆ ಭಾರತೀಯರು ದೂರಿದರೆ ನೀವು ಅಸಮಾಧಾನಗೊಳ್ಳಲು ಕಾರಣಗಳೇ ಇಲ್ಲ ಎಂದು ಹೇಳಿದ್ದಾರೆ.
ನಾವು ಒಬ್ಬರನ್ನೊಬ್ಬರನ್ನು ಆರೋಪಿಸಿಕೊಂಡು ಉಪಯೋಗವಿಲ್ಲ. ಇದರಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ನಾನು ಕೂಡ ಬಾಂಬೆಯಿಂದಲೇ ಬಂದಿದ್ದೇನೆ. ಬಾಂಬೆ ಮೇಲಿನ ದಾಳಿಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ದಾಳಿಕೋರರು ನಾರ್ವೇ ಅಥವಾ ಈಜಿಪ್ಟ್‌ನಿಂದ ಬಂದಿದ್ದರೇ? ಅವರು ಈಗಲೂ ನಿಮ್ಮ ದೇಶ(ಪಾಕಿಸ್ತಾನ)ದಲ್ಲಿದ್ದಾರೆ. ಹಾಗಾಗಿ, ಮುಂಬೈ ದಾಳಿಯ ಬಗ್ಗೆ ಭಾರತೀಯರು ನಿಮ್ಮನ್ನು ದೂರಿದರೆ, ಅದಕ್ಕೆ ನೀವು ಅಸಮಾಧಾನ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆಂದು ದಿ ಪ್ರಿಂಟ್ ವರದಿ ಮಾಡಿದೆ.
ಪಾಕಿಸ್ತಾನದಲ್ಲೇಕೆ ಲತಾ ಮಂಗೇಶ್ಕರ್ ಶೋ ಆಗಲಿಲ್ಲ?
ಭಾರತದಲ್ಲಿ ಇಂದಿಗೂ ಪಾಕಿಸ್ತಾನದ ಪ್ರಖ್ಯಾತ ಗಾಯಕರಾದ ನುಸ್ರತ್ ಫತೇ ಅಲಿಖಾನ್ ಮತ್ತು ಮೆಹ್ದಿ ಹಸನ್ ಅವರು ಜನಪ್ರಿಯರಾಗಿದ್ದಾರೆ. ಆದರೆ, ಪಾಕಿಸ್ತಾನ ಎಂದೂ ಲತಾ ಮಂಗೇಶ್ಕರ್ ಅವರ ಕಾರ್ಯಕ್ರಮವನ್ನು ಆಯೋಜಿಸಲಿಲ್ಲ ಎಂದು ಅಖ್ತರ್ ದೂರಿದರು.
ಇದನ್ನೂ ಓದಿ: Gulzar-Akhtar | ಜಾವೇದ್ ಅಖ್ತರ್‌ಗೋಸ್ಕರ ಕವಿತೆ ವಾಚಿಸಿದ ಗುಲ್ಜಾರ್; ಸಾಹಿತಿಗಳ ಸಮ್ಮಿಲನಕ್ಕೆ ಎಲ್ಲಿಲ್ಲದ ಮೆಚ್ಚುಗೆ!
ಮೆಹ್ದಿ ಹಸನ್ ಅವರು ಭಾರತಕ್ಕೆ ಭೇಟಿ ನೀಡಿದಾಗ, ಆ ಕಾರ್ಯಕ್ರಮವನ್ನು ಶಬನಾ ಅಜ್ಮಿ ಆಯೋಜಿಸಿದ್ದರು. ನಾನು ಇದಕ್ಕಾಗಿ ಹಾಡು ಬರೆದಿದ್ದೆ. ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಇಬ್ಬರೂ ಮೆಚ್ಚಿದ್ದರು. ಫಯಾಜ್ ಸಾಹೇಬ್ ಅವರು ಭಾರತಕ್ಕೆ ಭೇಟಿ ನೀಡಿದಾಗ, ಅದು ಅಧಿಕಾರಿಯೊಬ್ಬರು ಭೇಟಿ ನೀಡಿದಂತಿರುತ್ತಿತ್ತು. ಎಲ್ಲಡೆಯೂ ಅವರ ಬಗ್ಗೆ ಪ್ರಸಾರ ಮಾಡಲಾಗುತ್ತಿತ್ತು. ಆದರೆ, ಎಂದಾದರೂ ನೀವು ಪಾಕಿಸ್ತಾನದ ಪಿಟಿವಿಯಲ್ಲಿ ಸಾಹಿರ್ ಲುಧಿಯಾನ್ವಿ, ಕೈಫಿ ಆಜ್ಮಿ ಅಥವಾ ಅಲಿ ಸರ್ದಾರ್ ಜಾಫ್ರಿ ಅವರ ಸಂದರ್ಶನವನ್ನು ಕಂಡಿದ್ದೀರಾ? ಆದರೆ, ಭಾರತದಲ್ಲಿ ನಾವು ಕಂಡಿದ್ದೇವೆ ಎಂದು ಅಖ್ತರ್ ಅವರು ಪಾಕಿಸ್ತಾನ ಭಾರತದ ವಿರೋಧಿ ನೀತಿಯ ವಿರುದ್ಧ ಕಿಡಿ ಕಾರಿದರು.