ನವದೆಹಲಿ: ಯುದ್ಧಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಆಪರೇಷನ್ ಕಾವೇರಿ (Operation Kaveri) ಶುರುವಾಗಿದೆ. 278 ಭಾರತೀಯರ ಮೊದಲ ಬ್ಯಾಚ್ ಸುಡಾನ್‌ನಿಂದ (Sudan) ಹೊರಟಿದ್ದು, ಶೀಘ್ರವೇ ಭಾರತವನ್ನು ತಲುಪಲಿದೆ. ”ಆಪರೇಷನ್ ಕಾವೇರಿ ಅಡಿಯಲ್ಲಿ ಭಾರತೀಯರ ಮೊದಲ ಬ್ಯಾಚ್ ಸುಡಾನ್‌ನಿಂದ ಹೊರಡುತ್ತಿದೆ. 278 ಜನರೊಂದಿಗೆ ಐಎನ್‌ಎಸ್ ಸುಮೇಧಾ ಸೌದಿ ಅರೆಬಿಯಾದ ಜೆಡ್ಡಾಕ್ಕೆ ಪೋರ್ಟ್ ಸುಡಾನ್‌ನಿಂದ ಹೊರಡುತ್ತಿದೆ,” ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂಧಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಏಪ್ರಿಲ್ 15ರಿಂದ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷದಿಂದಾಗಿ ಯುದ್ಧದ ಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಸಾವು ನೋವು ಸಂಭವಿಸಿದೆ. ಹಾಗಾಗಿ, ಭಾರತೀಯರು ಸೇರಿದಂತೆ ವಿವಿಧ ರಾಷ್ಟ್ರಗಳ ಪ್ರಜೆಗಳು ವಾಪಸ್ ತಮ್ಮ ದೇಶಗಳಿಗೆ ಮರಳಲು ಹರ ಸಾಹಸಪಡುತ್ತಿದ್ದಾರೆ. ಸುಡಾನ್‌ನಲ್ಲಿ ಕನ್ನಡಿಗರು ಸೇರಿದಂತೆ ಭಾರತೀಯರು ಸಿಲುಕಿದ್ದು ಅವರನ್ನು ಸ್ಥಳಾಂತರ ಮಾಡಲು ಭಾರತ ಸರ್ಕಾರವು ಆಪರೇಷನ್ ಕಾವೇರಿ ಹೆಸರಿನಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಇದರ ಭಾಗವಾಗಿ ಮೊದಲ ಬ್ಯಾಚ್ ಈಗ ಸುಡಾನ್‌ನಿಂದ ಹೊರಟಿದೆ.
ಭಾರತೀಯರನ್ನು ವಾಪಸ್ ಕರೆ ತರಲು ಭಾರತವು ಜೆಡ್ಡಾದಲ್ಲಿ ವಿಮಾನ ಮತ್ತು ಪೋರ್ಟ್ ಸುಡಾನ್‌ನಲ್ಲಿ ಐಎನ್‌ಎಸ್ ಸುಮೇಧಾ ಹಡಗನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿದೆ. ಆಪರೇಷನ್ ಕಾವೇರಿ ಭಾಗವಾಗಿ ಈ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸುಡಾನ್‌ನಲ್ಲಿ ಸುಮಾರು 3000 ಭಾರತೀಯರು ಇದ್ದಾರೆಂದು ಅಂದಾಜಿಸಲಾಗುತ್ತಿದೆ. ಈ ನಡುವೆ ಸುಡಾನ್‌ನಲ್ಲಿ ಯುದ್ಧ ಸ್ಥಿತಿ ಮುಂದುವರಿದಿದೆ. ಸುಡಾನ್ ರಾಜಧಾನಿ ಖಾರ್ಟೂಮ್ ಸೇರಿದಂತೆ ದೇಶದ ವಿವಿಧೆಡೆ ಗುಂಡಿನ ಕಾಳಗ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಉಕ್ರೇನ್ನಿಂದ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಬೇಕಾದಾಗ ಪ್ರಧಾನಿ ಮೋದಿ ಎರಡೂ ರಾಷ್ಟ್ರಗಳ ಅಧ್ಯಕ್ಷರಿಗೆ ಹೇಳಿದ್ದೇನು?
ಮಂಗಳವಾರವೂ ಖಾರ್ಟೂಮ್‌ನ ಕೆಲವು ಗುಂಡಿನ ಕಾಳಗ ನಡೆದ ಬಗ್ಗೆ ವರದಿಯಾಗಿದೆ. 72 ಗಂಟೆಗಳ ಯುದ್ಧ ವಿರಾಮದ ಹೊರತಾಗಿಯೂ ಗುಂಡಿನ ಕಾಳಗ ನಡೆದಿದೆ ಎಂದು ಹೇಳಲಾಗುತ್ತಿದೆ. ಏರ್ ಸ್ಟ್ರೈಕ್, ಮತ್ತು ಫಿರಂಗಿ ಸೇರಿದಂತೆ ಹತ್ತು ದಿನಗಳಿಂದ ನಡೆಯುತ್ತಿರುವ ಸಶಸ್ತ್ರ ಸಂಘರ್ಷದಿಂದಾಗಿ ನೂರಾರು ಜನರು ಮೃತಪಟ್ಟಿದ್ದಾರೆ. ಈ ಪೈಕಿ ಹೆಚ್ಚಿನವರು ನಾಗರಿಕರಾಗಿದ್ದಾರೆ. ಗುಂಡಿನ ಕಾಳಗದಿಂದಾಗಿ ಖಾರ್ಟೂಮ್‌ನ ನೆರೆ ಹೊರೆಯ ಪ್ರದೇಶಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ವರದಿಯಾಗಿದೆ.