ರಾಯ್‌ಪುರ: ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನವು ಶುಕ್ರವಾರ (ನವೆಂಬರ್ 17) ನಡೆಯಲಿದೆ. ಈಗಾಗಲೇ ಮೊದಲ ಹಂತದ ಮತದಾನ ಮುಗಿದಿದ್ದು, ಎರಡನೇ ಹಂತದಲ್ಲೂ ಮುನ್ನಡೆ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳು ರಣತಂತ್ರ ರೂಪಿಸಿವೆ. 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ (Lok Sabha Election 2024) ಸೆಮಿಫೈನಲ್ ಎಂದೇ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಕರೆಯಲಾಗುತ್ತಿದೆ. ಇನ್ನು ಛತ್ತೀಸ್‌ಗಢದಲ್ಲಿ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿ ಕಾಂಗ್ರೆಸ್ ಇದ್ದರೆ, ಮರಳಿ ಗದ್ದುಗೆ ಪಡೆಯುವ ಉತ್ಸಾಹ ಬಿಜೆಪಿಯಲ್ಲಿದೆ. ಸ್ಥಳೀಯ ಪಕ್ಷಗಳು ಕೂಡ ಪೈಪೋಟಿ ನೀಡಲು ಸಜ್ಜಾಗಿವೆ. ಇದರಿಂದಾಗಿ ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಕಣವು ರಂಗೇರಿದೆ.
ಕಾಂಗ್ರೆಸ್ ಪ್ಲಸ್-ಮೈನಸ್ ಏನೇನು?
ರಾಜಸ್ಥಾನ, ಹಿಮಾಚಲ ಪ್ರದೇಶ, ಕರ್ನಾಟಕದ ನಂತರ ಕಾಂಗ್ರೆಸ್ ಬಲಿಷ್ಠವಾಗಿರುವ ಏಕೈಕ ರಾಜ್ಯವೆಂದರೆ ಅದು ಛತ್ತೀಸ್‌ಗಢ. ವಿಧಾನಸಭೆಯ 90 ಸದಸ್ಯ ಬಲದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಭೂಪೇಶ್ ಬಘೇಲ್ ಮುಖ್ಯಮಂತ್ರಿಯಾಗಿದ್ದಾರೆ. ಅಷ್ಟೇ ಅಲ್ಲ, ಉತ್ತಮ ಆಡಳಿತವನ್ನು ನೀಡುವ ಮೂಲಕ ಜನರ ವಿಶ್ವಾಸವನ್ನೂ ಗಳಿಸಿದ್ದಾರೆ. ರೈತರ ಏಳಿಗೆಗೆ ಭೂಪೇಶ್ ಬಘೇಲ್ ಜಾರಿಗೆ ತಂದ ಯೋಜನೆಗಳು, ಸಾಫ್ಟ್ ಹಿಂದುತ್ವ ಪಾಲನೆಯು ಕಾಂಗ್ರೆಸ್‌ಗೆ ಸಕಾರಾತ್ಮಕ ಆಗಲಿದೆ.
ಸಹಜವಾಗಿಯೇ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಆಡಳಿತ ವಿರೋಧಿ ಅಲೆಯು ಸವಾಲಾಗಲಿದೆ. ಅದರಲ್ಲೂ, ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ವಿರುದ್ಧ 500 ಕೋಟಿ ರೂ. ಲಂಚದ ಆರೋಪ ಕೇಳಿಬಂದಿರುವುದು, ಪಕ್ಷದ ಆಂತರಿಕ ಬಿಕ್ಕಟ್ಟು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಲಿದೆ.
ಬಿಜೆಪಿ ಬಲ-ದೌರ್ಬಲ್ಯ ಏನೇನು?
ಛತ್ತೀಸ್‌ಗಢದಲ್ಲಿ ಗೆಲುವು ಸಾಧಿಸಲು ಬಿಜೆಪಿಯು ರಣತಂತ್ರ ರೂಪಿಸಿದೆ. 2003, 2008 ಹಾಗೂ 2013ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯು 2018ರಲ್ಲಿ ಹೀನಾಯವಾಗಿ ಸೋತಿದೆ. ಆದರೆ, ಈ ಬಾರಿ ಗೆದ್ದು ಮತ್ತೆ ಅಧಿಕಾರದ ಗದ್ದುಗೆ ಏರಲು ತುದಿಗಾಲ ಮೇಲೆ ನಿಂತಿದೆ. ರಮಣ್ ಸಿಂಗ್ ಅವರ ನಾಯಕತ್ವ, ಆಡಳಿತ ವಿರೋಧಿ ಅಲೆ, ನರೇಂದ್ರ ಮೋದಿ ಅವರ ವರ್ಚಸ್ಸಿನ ಫಲವಾಗಿ ಬಿಜೆಪಿ ಮುನ್ನಡೆ ಸಾಧಿಸಿದರೂ ಅಚ್ಚರಿ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ರಮಣ್ ಸಿಂಗ್ ಹೊರತಾಗಿ ರಾಜ್ಯದಲ್ಲಿ ಬಲಿಷ್ಠ ನಾಯಕ ಇರದಿರುವುದು, ಇದುವರೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಬಿಜೆಪಿ ಘೋಷಿಸದಿರುವುದು ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ. ನರೇಂದ್ರ ಮೋದಿ ಅವರೊಬ್ಬರ ವರ್ಚಸ್ಸಿನಿಂದ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ಬಿಜೆಪಿ ನಾಯಕರಲ್ಲಿಯೇ ಕಾಣಿಸುತ್ತಿಲ್ಲ. ಅದರಲ್ಲೂ, ಪ್ರತಿಪಕ್ಷವಾಗಿ ಬಿಜೆಪಿಯು ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸಿಲ್ಲ. ಇವೆಲ್ಲ ಅಂಶಗಳು ಬಿಜೆಪಿಗೆ ತಲೆನೋವಾಗಿವೆ ಎನ್ನಲಾಗುತ್ತಿದೆ.
ಒಟ್ಟು ಕ್ಷೇತ್ರ: 90
ಮ್ಯಾಜಿಕ್ ನಂಬರ್: 46
ಕಳೆದ ಚುನಾವಣೆ ಫಲಿತಾಂಶ ಹೀಗಿದೆ
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತ್ತು. ಒಟ್ಟು 90 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 68 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದರೆ, ಬಿಜೆಪಿಯು 15 ಸೀಟುಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿತ್ತು. ಜನತಾ ಕಾಂಗ್ರೆಸ್ ಛತ್ತೀಸ್‌ಗಢ (J) ಪಕ್ಷವು ಐದು ಹಾಗೂ ಬಿಎಸ್‌ಪಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿ ಜನ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದರು.
ಇದನ್ನೂ ಓದಿ: Rahul Gandhi : ಛತ್ತೀಸ್‌ಗಢದಲ್ಲಿ ಬಡವರಿಗೆ 10 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯ ಭರವಸೆ ಕೊಟ್ಟ ರಾಹುಲ್
ಲೋಕಸಭೆ ಚುನಾವಣೆಯ ಸೆಮಿಫೈನಲ್
2023ರ ಲೋಕಸಭೆ ಚುನಾವಣೆಗೆ ಐದೂ ರಾಜ್ಯಗಳ ವಿಧಾನಸಭೆ ಚುನಾವಣೆಯು ಸೆಮಿಫೈನಲ್ ಎಂದೇ ಹೇಳಲಾಗುತ್ತಿದೆ. ಛತ್ತೀಸ್‌ಗಢ 11, ಮಧ್ಯಪ್ರದೇಶ 29, ಮಿಜೋರಾಂ 1, ರಾಜಸ್ಥಾನ 25 ಹಾಗೂ ತೆಲಂಗಾಣದ 17 ಲೋಕಸಭೆ ಕ್ಷೇತ್ರ ಸೇರಿ ಐದೂ ರಾಜ್ಯಗಳಲ್ಲಿ ಒಟ್ಟು 83 ಲೋಕಸಭೆ ಕ್ಷೇತ್ರಗಳಿವೆ. ಈ ರಾಜ್ಯಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ, ಆ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರ ಗೆಲ್ಲಲು ಸಾಧ್ಯವಾಗಲಿದೆ. ಹಾಗೆಯೇ, ಜನರ ಒಲವು ಯಾವ ಪಕ್ಷದ ಕಡೆ ಇದೆ ಎಂಬುದರ ಮುನ್ಸೂಚನೆಯು ವಿಧಾನಸಭೆ ಚುನಾವಣೆಯಲ್ಲಿಯೇ ತಿಳಿಯಲಿದೆ. ಲೋಕಸಭೆ ಚುನಾವಣೆಯ ಪ್ರಚಾರಕ್ಕೂ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮುನ್ನುಡಿ ಬರೆಯಲಿದೆ.