Site icon Vistara News

ಲೋಕಸಭೆಯಲ್ಲಿ ಫಲಕ ಪ್ರದರ್ಶನ, ನಾಲ್ವರು ಕೈ ಸಂಸದರು ಸಸ್ಪೆಂಡ್‌, ಹಾಲಿ ಅಧಿವೇಶನವಿಡೀ ಪ್ರವೇಶವಿಲ್ಲ

ನವ ದೆಹಲಿ: ಲೋಕಸಭೆಯಲ್ಲಿ ಬೆಲೆ ಏರಿಕೆ, ಹಣದುಬ್ಬರ, ಜಿಎಸ್ಟಿ ದರ ಹೆಚ್ಚಳಕ್ಕೆ ಸಂಬಂಧಿಸಿ ತೀವ್ರ ಪ್ರತಿಭಟನೆ ನಡೆಸಿದ ನಾಲ್ವರು ಕಾಂಗ್ರೆಸ್‌ ಸಂಸದರನ್ನು ಸೋಮವಾರ ಅಮಾನತು ಮಾಡಲಾಗಿದೆ. ಸಂಸದರಾದ ಮಾಣಿಕಂ ಠಾಗೋತ್‌, ರಮ್ಯಾ ಹರಿದಾಸ್‌, ಜ್ಯೋತಿಮಣಿ ಮತ್ತು ಟಿ.ಎನ್‌. ಪ್ರತಾಪನ್‌ ಅವರನ್ನು ಮುಂಗಾರು ಅಧಿವೇಶನದ ಇನ್ನುಳಿದ ಪೂರ್ಣಾವಧಿಗೆ ಸಸ್ಪೆಂಡ್‌ ಮಾಡಲಾಗಿದೆ. ಇದೇ ವೇಳೆ ಪ್ರತಿಪಕ್ಷಗಳ ಸಂಸದರ ಪ್ರತಿಭಟನೆ, ಘೋಷಣೆ ಕೂಗುವಿಕೆ ನಡುವೆ ಕೆಳಮನೆಯ ಕಲಾಪವನ್ನು ಮಂಗಳವಾರ ಬೆಳಗ್ಗೆ ೧೧ ಗಂಟೆವರೆಗೆ ಮುಂದೂಡಲಾಗಿದೆ.

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಗೊಂಡು ಆರು ದಿನಗಳಾಗಿವೆ. ಪ್ರತಿಪಕ್ಷಗಳ ಪ್ರತಿಭಟನೆ, ಕೋಲಾಹಲಗಳು ಪ್ರತಿ ದಿನವೂ ಕೋಲಾಹಲ ಸೃಷ್ಟಿಸುತ್ತಿವೆ. ಪ್ರತಿಪಕ್ಷಗಳ ಸಂಸದರು ಸೋಮವಾರ ಬೆಲೆ ಏರಿಕೆ ಮತ್ತು ಹಣದುಬ್ಬರದ ವಿರುದ್ಧ ಪ್ರತಿಭಟನೆಗಾಗಿ ಫಲಕಗಳನ್ನು ತಂದಿದ್ದರು. ಈ ವೇಳೆ ಸ್ಪೀಕರ್‌ ಓಂ ಬಿರ್ಲಾ ಅವರು ಸದನಕ್ಕೆ ಫಲಕಗಳನ್ನು ತಂದಿರುವುದನ್ನು ಆಕ್ಷೇಪಿಸಿದರು. ಆದರೆ, ಪ್ರತಿಪಕ್ಷಗಳ ಪ್ರತಿಭಟನೆ, ಘೋಷಣೆಗಳು ಇನ್ನೂ ಜೋರಾದವು.

ʻʻಸದನದ ಒಳಗೆ ಯಾವುದೇ ಸದಸ್ಯನೂ ಫಲಗಳನ್ನು ಪ್ರದರ್ಶಿಸುವಂತಿಲ್ಲ. ಅದಕ್ಕೆ ಅವಕಾಶವಿಲ್ಲ. ಫಲಕಗಳನ್ನು ತಂದದವರಿಗೆ ಕಲಾಪದಲ್ಲಿ ಭಾಗವಹಿಸಲು ಅವಕಾಶ ನೀಡಲಾಗದುʼʼ ಎಂದು ಹೇಳಿದ ಸ್ಪೀಕರ್‌, ʻʻಇದು ಪ್ರಜಾಪ್ರಭುತ್ವದ ದೇವಾಲಯ. ಸದನದ ಗೌರವವನ್ನು, ಘನತೆಯನ್ನು ಕಾಪಾಡುವುದು ಎಲ್ಲ ಸದಸ್ಯರ ಜವಾಬ್ದಾರಿʼʼ ಎಂದು ಗುಡುಗಿದರು. ಆದರೆ, ಕಾಂಗ್ರೆಸ್‌ ಸಂಸದರು ಅವರ ಮಾತಿಗೆ ಕಿವಿಗೊಡದೆ ಪ್ರತಿಭಟನೆ ಮುಂದುವರಿಸಿದಾಗ ನಾಲ್ವರನ್ನು ಅಮಾನತು ಮಾಡಿರುವುದಾಗಿ ಸ್ಪೀಕರ್‌ ಪ್ರಕಟಿಸಿದರು.

ಲೋಕಸಭೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್‌ ಸಂಸದರು

ಈ ನಡುವೆ ಅಮಾನತು ಶಿಕ್ಷೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌, ʻʻನಮ್ಮ ಸಂಸದರು ಜನರಿಗೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಅವರನ್ನು ಅಮಾನತು ಮಾಡುವ ಮೂಲಕ ಸರಕಾರ ನಮ್ಮನ್ನು ದಮನಿಸಲು ಯತ್ನಿಸುತ್ತಿದೆ,ʼʼ ಎಂದಿದೆ.

ಕಠಿಣ ಸೂಚನೆ
ಈ ಬಾರಿ ಅಧಿವೇಶನ ಆರಂಭಕ್ಕೆ ಮೊದಲೇ ಸದನದಲ್ಲಿ ಸದಸ್ಯರ ವರ್ತನೆ ಹೇಗಿರಬೇಕು ಎಂಬ ಬಗ್ಗೆ ನೀತಿ ನಿಯಮಾವಳಿಗಳನ್ನು ಪ್ರಕಟಿಸಲಾಗಿತ್ತು. ಯಾವುದೇ ಕಾರಣಕ್ಕೂ ಸದನದ ಒಳಗೆ ಫಲಕಗಳನ್ನು ಪ್ರದರ್ಶಿಸುವಂತಿಲ್ಲ ಎಂದು ಸೂಚಿಸಲಾಗಿತ್ತು. ಆದರೆ, ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು.

ಸಂಸತ್ತಿನ ಹೊರಗಡೆ ಪ್ರತಿಭಟನೆ
ಲೋಕಸಭೆಯಿಂದ ಅಮಾನತಿನ ಶಿಕ್ಷೆಗೆ ಒಳಗಾದ ನಾಲ್ವರು ಸಂಸದರು ಸದನದಿಂದ ಹೊರಗೆ ಬಂದು ಪ್ರತಿಭಟನೆ ನಡೆಸಿದರು. ನಾಲ್ವರೂ ಫಲಕಗಳನ್ನು ಕೈಯಲ್ಲಿ ಹಿಡಿದುಕೊಂಡು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ| ಇಂಧನ ದರ ಏರಿಕೆ ಖಂಡಿಸಿ ಸಂಸತ್ತಿನಲ್ಲಿ ವಿಪಕ್ಷಗಳ ಕೋಲಾಹಲ: ಕೇಂದ್ರದ ವಿರುದ್ಧ ಆಕ್ರೋಶ

Exit mobile version