ಮುಂಬೈ: ಭೂಗತ ಪಾತಕಿ, ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ (Dawood Ibrahim) ಆಸ್ತಿಯನ್ನು ಶುಕ್ರವಾರ (ಜನವರಿ 5) ಹರಾಜು (Auction) ಹಾಕಲಾಗುತ್ತದೆ. ಮಹಾರಾಷ್ಟ್ರದಲ್ಲಿರುವ ದಾವೂದ್ ಇಬ್ರಾಹಿಂನ ಬಾಲ್ಯದ ಮನೆ, ಕೃಷಿ ಭೂಮಿ ಸೇರಿ ನಾಲ್ಕು ಆಸ್ತಿಗಳನ್ನು (Property) ಹರಾಜಿಗಿಡಲಾಗುತ್ತದೆ. ಇದರ ಮೂಲ ಬೆಲೆಯು 19 ಲಕ್ಷ ರೂ. ಆಗಿದ್ದು, ಯಾರು ಬೇಕಾದರೂ ಖರೀದಿ ಮಾಡಬಹುದಾಗಿದೆ. ಇದಕ್ಕೂ ಮೊದಲು ದಾವೂದ್ ಇಬ್ರಾಹಿಂ ಆಸ್ತಿಯನ್ನು ಖರೀದಿಸಲು ಜನ ಹಿಂಜರಿಯುತ್ತಿದ್ದರು. ಆದರೀಗ ಬಿಡ್ಡಿಂಗ್‌ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ಪೂರ್ವಿಕರ ಆಸ್ತಿಯಾದ ಜಮೀನು, ಮುಂಬಕೆ ಗ್ರಾಮದಲ್ಲಿರುವ ಮನೆ ಸೇರಿ ನಾಲ್ಕು ಆಸ್ತಿಗಳನ್ನು ಮುಂಬೈನಲ್ಲಿ ಹರಾಜು ಹಾಕಲಾಗುತ್ತದೆ. ಸ್ಮಗ್ಲರ್ಸ್ ಆ್ಯಂಡ್ ಎಕ್ಸ್‌ಚೇಂಜ್ ಮ್ಯಾನಿಪುಲೇಟರ್ಸ್ ಆ್ಯಕ್ಟ್ 1976 ಅಡಿಯಲ್ಲಿ ದಾವೂದ್ ಇಬ್ರಾಹಿಂನ ಈ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೂಲ ಬೆಲೆ 19.22 ಲಕ್ಷ ರೂ. ಆಗಿದೆ. ಇದುವರೆಗೆ ದಾವೂದ್ ಇಬ್ರಾಹಿಂ ಆಸ್ತಿಯನ್ನು ಖರೀದಿಸಲು ಎಷ್ಟು ಜನ ಬಿಡ್ ಮಾಡಿದ್ದಾರೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಇದಕ್ಕೂ ಮೊದಲು ಕೂಡ ದಾವೂದ್ ಇಬ್ರಾಹಿಂ ಅಂಗಡಿ, ರೆಸ್ಟೋರೆಂಟ್ ಸೇರಿ ಹಲವು ಆಸ್ತಿಗಳನ್ನು ಹರಾಜು ಮಾಡಲಾಗಿತ್ತು.
1993ರ ಮುಂಬೈ ಸ್ಫೋಟದಿಂದ ಹಿಡಿದು 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಸೇರಿದಂತೆ ಹಲವು ಘೋರ ಅಪರಾಧಗಳ ಮಾಸ್ಟರ್ ಮೈಂಡ್ ಈತ. ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳ ಸಾಗಣೆ, ನಕಲಿ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲೂ ಭಾಗಿಯಾಗಿದ್ದ. ದಾವೂದ್ ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದು, ಭಾರತ ಮತ್ತು ಅಮೆರಿಕ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿವೆ. ಇಂಟರ್‌ಪೋಲ್‌ನ ರೆಡ್ ನೋಟಿಸ್ ಪಟ್ಟಿಯಲ್ಲಿಯೂ ಆತನ ಹೆಸರಿದ್ದು, ದಾವೂದ್ ತಲೆಗೆ 25 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಲಾಗಿದೆ.
ಇದನ್ನೂ ಓದಿ: Dawood Ibrahim: ದಾವೂದ್ ಇಬ್ರಾಹಿಂ ಸತ್ತಿಲ್ಲ, ಬದುಕಿದ್ದಾನೆ; ಛೋಟಾ ಶಕೀಲ್ ಮಾಹಿತಿ
ದಾವೂದ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ (ISI) ಮತ್ತು ಭಯೋತ್ಪಾದಕ ಗುಂಪು ಲಷ್ಕರ್-ಎ-ತಯ್ಬಾ (Lashkar-e-Taiba)ದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ ಅನೇಕ ನಕಲಿ ಪಾಸ್‌ಪೋರ್ಟ್ ಹೊಂದಿದ್ದಾನೆ ಮತ್ತು ಪದೇಪದೆ ತನ್ನ ವಾಸಸ್ಥಳವನ್ನು ಬದಲಾಯಿಸುತ್ತಾನೆ ಎಂದು ಊಹಿಸಲಾಗಿದೆ. ಈತ ಪಾಕಿಸ್ತಾನದ ಕರಾಚಿಯಲ್ಲಿ ಶೇಖ್ ದಾವೂದ್ ಹಸನ್ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದಷ್ಟೇ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮಾಡಿಸಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ