Site icon Vistara News

ಒಳ ಚರಂಡಿ ಸ್ವಚ್ಛಗೊಳಿಸುವಾಗ 5 ವರ್ಷಗಳಲ್ಲಿ 443 ಕಾರ್ಮಿಕರ ಸಾವು!

cleaning

cleaning

ನವದೆಹಲಿ: 2018ರಿಂದ ದೇಶದಲ್ಲಿ ಸೆಪ್ಟಿಕ್ ಟ್ಯಾಂಕ್‌ ಮತ್ತು ಒಳಚರಂಡಿಗಳನ್ನು (Septic tanks and sewers) ಸ್ವಚ್ಛಗೊಳಿಸುವಾಗ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನುವ ಕಳವಳಕಾರಿ ಅಂಶ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ (Ministry of social justice and empowerment) ವರದಿಯಲ್ಲಿ ಬಹಿರಂಗಗೊಂಡಿದೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯೆ ಅಪರೂಪ ಪೊದ್ದಾರ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಠಾವಳೆ, 2018 ಮತ್ತು ಈ ವರ್ಷದ ನವೆಂಬರ್ 20ರ ನಡುವೆ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವಾಗ 443 ಜನರು ಸಾವನ್ನಪ್ಪಿದ್ದಾರೆ ಎಂದು ಲೋಕಸಭೆಗೆ ತಿಳಿಸಿದ್ದಾರೆ.

ಅಂಕಿ-ಅಂಶ

2018ರಲ್ಲಿ 76 ಮಂದಿ, 2019ರಲ್ಲಿ 133 ಮಂದಿ, 2020ರಲ್ಲಿ 35 ಜನರು, 2021ರಲ್ಲಿ 66 ಕಾರ್ಮಿಕರು, 2022ರಲ್ಲಿ 84 ಮಂದಿ ಮತ್ತು ಈ ವರ್ಷದ ನವೆಂಬರ್‌ 20ರ ತನಕ 49 ಮಂದಿ ಅಸುನೀಗಿದ್ದಾರೆ ಎಂದು ವರದಿ ಹೇಳಿದೆ. ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ ಸ್ವಚ್ಛತೆ ವೇಳೆ 5 ವರ್ಷಗಳ ಅವಧಿಯಲ್ಲಿ ಮೃತಪಟ್ಟವರ ರಾಜ್ಯವಾರು ಅಂಕಿ-ಅಂಶಗಳ ಬಗ್ಗೆಯೂ ಅಪರೂಪ ಪೊದ್ದಾರ್ ಪ್ರಶ್ನಿಸಿದ್ದಾರೆ.

ಯಾವ ರಾಜ್ಯದಲ್ಲಿ ಎಷ್ಟು?

ಈ ವರ್ಷ ರಾಜಸ್ಥಾನದಲ್ಲಿ 10, ಗುಜರಾತ್‌ನಲ್ಲಿ 9 ಮತ್ತು ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ತಲಾ 7 ಮರಣ ಪ್ರಮಾಣ ದಾಖಲಾಗಿದೆ ಎಂದು ಸರ್ಕಾರ ತಿಳಿಸಿದೆ. ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅಠಾವಳೆ, ”ನೀತಿ ಆಯೋಗದ ಆದೇಶದ ಮೇರೆಗೆ 2018ರಲ್ಲಿ ನಡೆಸಿದ ಮ್ಯಾನ್ಯುವಲ್ ಸ್ಕಾವೆಂಜರ್‌ಗಳ ರಾಷ್ಟ್ರೀಯ ಸಮೀಕ್ಷೆ (National Survey of Manual Scavengers) ವೇಳೆ 44,217 ಮ್ಯಾನ್ಯುವಲ್ ಸ್ಕಾವೆಂಜರ್‌ಗಳನ್ನು ಗುರುತಿಸಲಾಗಿದೆ” ಎಂದು ತಿಳಿಸಿದ್ದಾರೆ. ಸರ್ಕಾರವು ಮತ್ತೊಂದು ಸಮೀಕ್ಷೆಯನ್ನು ನಡೆಸಲಿದೆಯೇ ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ʼʼಸುಪ್ರೀಂ ಕೋರ್ಟ್ ಮ್ಯಾನ್ಯುವಲ್ ಸ್ಕಾವೆಂಜರ್‌ಗಳ ರಾಷ್ಟ್ರವ್ಯಾಪಿ ಸಮೀಕ್ಷೆಗೆ ನಿರ್ದೇಶನ ನೀಡಿದೆ. ಅದರಂತೆ ಸಮೀಕ್ಷೆ ನಡೆಸಲಿದ್ದೇವೆʼʼ ಎಂದು ವಿವರಿಸಿದ್ದಾರೆ.

ನಿಯಮ ಏನು ಹೇಳುತ್ತದೆ?

ಮ್ಯಾನ್ಯುವಲ್ ಸ್ಕಾವೆಂಜರ್ ಉದ್ಯೋಗ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013ರ ಪ್ರಕಾರ ಮ್ಯಾನ್ಯುವಲ್ ಸ್ಕಾವೆಂಜಿಂಗ್ ಅನ್ನು ನಿಷೇಧಿಸಲಾಗಿದೆ. ಅಂದರೆ ಕೈಯಿಂದ ಮಲ ಸ್ವಚ್ಛಗೊಳಿಸುವ, ಹೊರುವ ಕೆಲಸವನ್ನು ಮಾಡುವಂತಿಲ್ಲ. ಒಳಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವುದು ಕೂಡ ಈ ನಿಷೇಧಿತ ಅಭ್ಯಾಸದ ಒಂದು ಭಾಗ ಎಂದು ತಜ್ಞರು ಹೇಳುತ್ತಾರೆ.

“ದೇಶದ 766 ಜಿಲ್ಲೆಗಳ ಪೈಕಿ 714 ಜಿಲ್ಲೆಗಳು ಈ ವರ್ಷದ ನವೆಂಬರ್‌ 29ರಂದು ತಮ್ಮನ್ನು ಮ್ಯಾನ್ಯುವಲ್ ಸ್ಕಾವೆಂಜಿಂಗ್ ಮುಕ್ತವೆಂದು ಘೋಷಿಸಿಕೊಂಡಿವೆʼʼ ಎಂದು ಸಚಿವರು ಹೇಳಿದ್ದಾರೆ. ಸರ್ಕಾರವು ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಲು ರೋಬೋಟ್‌ಗಳನ್ನು ನಿಯೋಜಿಸಿದೆಯೇ ಎಂದು ಕೇಳಿದಾಗ, ಉತ್ತರಿಸಿದ ರಾಮದಾಸ್ ಅಠಾವಳೆ, ʼʼಅಂತಹ ರೋಬೋಟ್‌ಗಳ ಸಂಖ್ಯೆ ಅಥವಾ ಅವುಗಳನ್ನು ಎಲ್ಲಿ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.

Exit mobile version