ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದಲ್ಲಿ ಭಾರತೀಯ ಸೇನೆಯ ವಾಹನವೊಂದಕ್ಕೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದು, ಅದರಲ್ಲಿದ್ದ ಯೋಧರ ಪೈಕಿ ಐವರು ಹುತಾತ್ಮರಾಗಿದ್ದಾರೆ(Army Jawans Killed). ಈ ಘಟನೆಯು ಆಕಸ್ಮಿಕವಾಗಿರದೇ, ಭಯೋತ್ಪಾದನಾ ಕೃತ್ಯವಾಗಿದ್ದು(Poonch Terror Attack), ಗ್ರೆನೇಡ್ ಎಸೆದಿದ್ದರಿಂದ ಸೇನಾವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ (Terror Attack) ಎಂದು ಸೇನೆ ಹೇಳಿದೆ. ಮತ್ತೊಬ್ಬ ಯೋಧ ತೀವ್ರವಾಗಿ ಗಾಯಗೊಂಡಿದ್ದಾನೆ.
ಪೂಂಚ್ ಪಟ್ಟಣದ ಬಿಜಿ ಸೆಕ್ಟರ್ನಲ್ಲಿರುವ ಭಟ್ಟಾ ಡುರಿಯಾನ್ ಅರಣ್ಯದ ಬಳಿಯೇ ಈ ಘಟನೆ ನಡೆದಿದೆ. ಭಾರತೀಯ ಸೇನೆಯು ಈ ಸಂಬಂಧ ತನಿಖೆಯನ್ನು ಕೈಗೊಂಡಿದೆ. ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಸೇನಾ ವಾಹನದ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಗ್ರೆನೇಡ್ ದಾಳಿಯಿಂದಾಗಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಟ್ವೀಟ್
ಭಟ್ಟಾ ಡುರಿಯಾನ್ ಅರಣ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಈ ಪರಿಸ್ಥಿತಿಯ ಲಾಭ ಪಡೆದುಕೊಂಡ ಉಗ್ರರು ಸೇನಾ ವಾಹನದ ಮೇಲೆ ದಾಳಿ ಮಾಡಿದ್ದಾರೆ ಎಂದು ನಾರ್ದರ್ನ್ ಕಮಾಂಡ್ ಸೇನಾ ಮುಖ್ಯ ಕಚೇರಿಯು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಉಗ್ರರು ಗ್ರೆನೇಡ್ಸ್ ಬಳಸಿದ್ದರಿಂದ ವಾಹನಕ್ಕೆ ಬೆಂಕಿ ತಗುಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Rajouri Terror Attack | ರಾಜೌರಿಯಲ್ಲಿ ದಾಳಿ ನಡೆಸಿದ್ದ ಇಬ್ಬರು ಉಗ್ರರ ಹತ್ಯೆ; ಮೃತ ನಾಗರಿಕರ ಸಂಖ್ಯೆ 7ಕ್ಕೆ ಏರಿಕೆ
ಉಗ್ರ ಕೃತ್ಯದಲ್ಲಿ ಮೃತಪಟ್ಟ ಐದು ಯೋಧರನ್ನು ಭಟ್ಟಾ ಡುರಿಯಾನ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕೆಲಸಕ್ಕೆ ನಿಯೋಜಿಸಲಾಗಿತ್ತು ಎಂದು ಸೇನೆ ಹೇಳಿದೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮತ್ತೊಬ್ಬ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸೇನಾ ವಾಹನದ ಮೇಲೆ ದಾಳಿ ನಡೆಸಿದ ಉಗ್ರರ ಹುಡುಕಾಟ ನಡೆದಿದೆ ಎಂದು ಹೇಳಿಕೆಯಲ್ಲಿ ಸೇನೆ ತಿಳಿಸಿದೆ.
ಹುತಾತ್ಮ ಯೋಧರು ಹೆಸರು
ಹವಾಲ್ದಾರ್ ಮಂದೀಪ್ ಸಿಂಗ್, ಲಾನ್ಸ್ ನಾಯಕ್ ದೇಬಶೀಷ್ ಬಸ್ವಾಲ್, ಲ್ಯಾನ್ಸ್ ನಾಯಕ್ ಕುಲ್ವಂತ್ ಸಿಂಗ್, ಸಿಪಾಯಿ ಹರ್‌ಕಿಶನ್ ಸಿಂಗ್, ಸಿಪಾಯಿ ಸೇವಕ್ ಸಿಂಗ್ ಅವರು ಹುತಾತ್ಮರಾದ ಯೋಧರಾಗಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಭಾರತಕ್ಕೆ ಭೇಟಿ ನೀಡಲು ಬರಲಿದ್ದಾರೆಂದು ಪಾಕಿಸ್ತಾನದ ಸರ್ಕಾರವು ಘೋಷಣೆ ಮಾಡಿದ ಬೆನ್ನಲ್ಲೇ ಈ ಉಗ್ರ ಕೃತ್ಯ ನಡೆದಿದೆ.