Site icon Vistara News

5G Services launch | 2023ರ ಡಿಸೆಂಬರ್‌ ಒಳಗೆ ಪ್ರತಿ ಗ್ರಾಮಕ್ಕೂ 5G ಸೇವೆ: ಮುಖೇಶ್‌ ಅಂಬಾನಿ

5g services launch

ನವ ದೆಹಲಿ: 5G ನಾಯಕತ್ವಕ್ಕೆ ನಾವು ಸಜ್ಜಾಗಿದ್ದೇವೆ. 2023ರ ಡಿಸೆಂಬರ್‌ ಒಳಗೆ ದೇಶದ ಪ್ರತಿ ಗ್ರಾಮವನ್ನೂ 5G ಸೇವೆ ತಲುಪಲಿದೆ ಎಂದು ರಿಲಯನ್ಸ್‌ ಜಿಯೊ ಅಧ್ಯಕ್ಷ ಮುಖೇಶ್‌ ಅಂಬಾನಿ ಹೇಳಿದ್ದಾರೆ. 5G ಸೇವೆಗಳ ಉದ್ಘಾಟನೆ ಸಂದರ್ಭದಲ್ಲಿ ಅವರು ಈ ಮುನ್ನೋಟ ನೀಡಿದರು.

5Gಗೆ ಚಾಲನೆ ನೀಡುತ್ತಿರುವುದು ತುಂಬಾ ಹೆಮ್ಮೆಯ ಕ್ಷಣ. 5G ಎಂಬುದು ಮುಂದಿನ ಪೀಳಿಗೆಯ ಸಂಪರ್ಕ ತಂತ್ರಜ್ಞಾನ ಎಂಬುದಕ್ಕಿಂತಲೂ ಹೆಚ್ಚಿನದು. ನನ್ನ ಅಭಿಪ್ರಾಯದಲ್ಲಿ ಇದು ಕೃತಕ ಬುದ್ಧಿಮತ್ತೆ, ವಸ್ತುಗಳ ಇಂಟರ್ನೆಟ್, ರೊಬೊಟಿಕ್ಸ್, ಬ್ಲಾಕ್‌ಚೈನ್ ಮತ್ತು ಮೆಟಾವರ್ಸ್‌ನಂತಹ 21ನೇ ಶತಮಾನದ ಇತರ ತಂತ್ರಜ್ಞಾನಗಳ ಸಂಪೂರ್ಣ ಸಾಮರ್ಥ್ಯವನ್ನು ಅನ್‌ಲಾಕ್ ಮಾಡುವ ಅಡಿಪಾಯದ ತಂತ್ರಜ್ಞಾನ. ಇದಕ್ಕಾಗಿ ಟೆಲಿಕಾಂ ವಲಯದಲ್ಲಿ ನಾಯಕತ್ವವನ್ನು ವಹಿಸಲು ನಾವು ಸಿದ್ಧರಿದ್ದೇವೆ. 5G ಡಿಜಿಟಲ್‌ ಕಾಮಧೇನು ಇದ್ದಂತೆ. ನಾವು ತಡವಾಗಿ ಆರಂಭಿಸಿರಬಹುದು, ಆದರೆ ಎಲ್ಲರಿಗಿಂತ ಮೊದಲು ಮುಗಿಸಲಿದ್ದೇವೆ. ಭಾರತೀಯ ಟೆಲಿಕಾಂ ಸಮಾವೇಶ ಮುಂದಿನ ದಿನಗಳಲ್ಲಿ ಏಷ್ಯಾದ ಟೆಲಿಕಾಂ ಕಾಂಗ್ರೆಸ್‌ ಅಥವಾ ಜಾಗತಿಕ ಟೆಲಿಕಾಂ ಕಾಂಗ್ರೆಸ್‌ ಎನಿಸಲಿದೆ ಎಂದು ಮುಖೇಶ್‌ ಅಂಬಾನಿ ನುಡಿದರು.

ಇಂದು ಭಾರತೀಯ ಟೆಲಿಕಾಂ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗುವ ಕ್ಷಣ. ಇದು ಡಿಜಿಟಲ್ ಇಂಡಿಯಾದ ಮಹಾದ್ವಾರವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ತೀವ್ರ ವೇಗದ ಡಿಜಿಟಲ್ ಸೇವೆಗಳನ್ನು ತಲುಪಿಸುವ ವಿಧಾನವಾಗಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.

ಇದೊಂದು ಮಹತ್ವದ ದಿನ. ಹೊಸ ಯುಗ ಪ್ರಾರಂಭವಾಗಲಿದೆ. ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಆರಂಭವಾಗುತ್ತಿರುವ ಈ ಸೇವೆ ದೇಶದಲ್ಲಿ ಹೊಸ ಜಾಗೃತಿ ಉಂಟುಮಾಡಲಿದ್ದು, ಜನರಿಗೆ ಹಲವಾರು ಹೊಸ ಅವಕಾಶಗಳನ್ನು ತೆರೆಯಲಿದೆ ಎಂದು ಏರ್‌ಟೆಲ್‌ನ ಸುನಿಲ್ ಭಾರ್ತಿ ಮಿತ್ತಲ್ ಹೇಳಿದರು. ದೇಶದ 130 ಕೋಟಿ ಭಾರತೀಯರ ಹಾಗೂ ಸಾವಿರಾರು ಉದ್ಯಮಿಗಳು ಡಿಜಿಟಲ್‌ ಕನಸನ್ನು ಸಾಕಾರ ಮಾಡಲು ಟೆಲಿಕಾಂ ಉದ್ಯಮ ಸಜ್ಜಾಗಿದೆ ಎಂದು ಆದಿತ್ಯ ಬಿರ್ಲಾ ಗ್ರೂಪ್‌ (ವೊಡಾಫೋನ್‌)ನ ಅಧ್ಯಕ್ಷ ಕುಮಾರಮಂಗಲಂ ಬಿರ್ಲಾ ಹೇಳಿದರು.

ಇದನ್ನೂ ಓದಿ | 5G Services Launch | ದೇಶದಲ್ಲಿ ಅಂತರ್ಜಾಲದ ಹೊಸ ಯುಗ: ಸೇವೆ ಉದ್ಘಾಟಿಸಿ ಮೋದಿ ಭರವಸೆ

Exit mobile version