Site icon Vistara News

UK PM Award: ಭಾರತೀಯ ಮೂಲದ 7 ವರ್ಷದ ಬಾಲಕಿಗೆ ಬ್ರಿಟನ್‌ನ ಪ್ರಧಾನಿ ಪ್ರಶಸ್ತಿ

moksha roy

ಲಂಡನ್: ಕೇವಲ ಮೂರು ವರ್ಷದವಳಿದ್ದಾಗಿನಿಂದಲೇ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ವಿಶ್ವಸಂಸ್ಥೆಯ ಸುಸ್ಥಿರ ಉಪಕ್ರಮದಲ್ಲಿ ಸ್ವಯಂಸೇವಕಳಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದ ಭಾರತೀಯ ಮೂಲದ ಶಾಲಾ ಬಾಲಕಿಗೆ ಬ್ರಿಟನ್ ಪ್ರಧಾನಿಯ (UK PM Award) ʼಪಾಯಿಂಟ್ಸ್ ಆಫ್ ಲೈಟ್ʼ (points of light award) ಪ್ರಶಸ್ತಿ ನೀಡಲಾಗಿದೆ. ಈಕೆಗೆ ಈಗ ಏಳು ವರ್ಷ.

ಕಳೆದ ವಾರ ಬ್ರಿಟನ್‌ನ ಉಪ ಪ್ರಧಾನಿ ಆಲಿವರ್ ಡೌಡೆನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಮೋಕ್ಷ ರಾಯ್, ʼವಿಶ್ವದ ಅತ್ಯಂತ ಕಿರಿಯ ಸುಸ್ಥಿರತೆಯ ಪ್ರತಿಪಾದಕಿʼ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ. ಹಣಕಾಸಿನ ಅಗತ್ಯವಿರುವ ಮಕ್ಕಳಿಗಾಗಿ ನಿಧಿ ಸಂಗ್ರಹಿಸುವುದು ಸೇರಿದಂತೆ ಹಲವಾರು ಸುಸ್ಥಿರ ಅಭಿಯಾನಗಳಿಗೆ (sustainable development) ಸ್ವಯಂಸೇವಕಳಾಗಿ ಮೋಕ್ಷ ದುಡಿಯುತ್ತಿದ್ದಾಳೆ. ಸಾಮಾಜಿಕವಾಗಿ ಉತ್ತಮ ಕೆಲಸಗಳನ್ನು ಮಾಡಿದ ವ್ಯಕ್ತಿಗಳನ್ನು ಗುರುತಿಸಿ ʼಪಾಯಿಂಟ್ಸ್ ಆಫ್ ಲೈಟ್ʼ ಪ್ರಶಸ್ತಿಗಳನ್ನು ಯುಕೆ ಪ್ರಧಾನಿ ಕಾರ್ಯಾಲಯ ನೀಡುತ್ತದೆ.

ʼʼವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಸಾಧನೆಯಲ್ಲಿ ಮೋಕ್ಷಾ ಅತ್ಯುತ್ತಮ ದೃಷ್ಟಾಂತವಾಗಿದ್ದಾಳೆ. ಶಾಲಾ ಪಠ್ಯಕ್ರಮದಲ್ಲಿ ಇದನ್ನು ಸೇರಿಸಲು ಆಕೆ ಗಮನಾರ್ಹ ಪ್ರಯತ್ನ ಮಾಡಿದ್ದಾಳೆ; ಇದನ್ನು ಪರಿಗಣಿಸಲು, ಪ್ರೋತ್ಸಾಹಿಸಲು ಪ್ರಪಂಚದಾದ್ಯಂತದ ನಾಯಕರೊಂದಿಗೆ ಸಂವಹನ ನಡೆಸುತ್ತಿದ್ದಾಳೆ” ಎಂದು ಉಪಪ್ರಧಾನಿ ಡೌಡೆನ್ ಹೇಳಿದ್ದಾರೆ.

“ಅವಳ ಶಾಲೆಯು ಪ್ಲಾಸ್ಟಿಕ್ ಗ್ಲಿಟರ್, ಕಾನ್ಫೆಟ್ಟಿ ಅಥವಾ ಪ್ಲಾಸ್ಟಿಕ್ ಕಲಾ ವಸ್ತುಗಳನ್ನು ಬಳಸುವುದಿಲ್ಲ. ಇದು ಆಕೆಯ ಬಲವಾದ ನಂಬಿಕೆ, ಕಾರ್ಯಸಾಧನೆ ಮತ್ತು ಇನ್ನಷ್ಟು ಉತ್ತಮ ಜಗತ್ತಿನ ಸೃಷ್ಟಿಗಾಗಿ ತನ್ನ ಸುತ್ತಲಿನವರನ್ನು ಬದಲಾಯಿಸುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ,” ಎಂದಿದ್ದಾರೆ.

ಮೋಕ್ಷಾ ಭಾರತದ ಶಾಲಾ ಶಿಕ್ಷಣ ವಂಚಿತ ಮಕ್ಕಳಿಗೂ ಸಹಾಯ ಒದಗಿಸಿದ್ದಾಳೆ. ಆಕೆಯ ಪೋಷಕರು ರಾಗಿಣಿ ಜಿ. ರಾಯ್ ಮತ್ತು ಸೌರವ್ ರಾಯ್. “ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿಯಿಂದ ತುಂಬಾ ಸಂತೋಷವಾಗಿದೆ. ಭೂಗ್ರಹ ಮತ್ತು ಇಲ್ಲಿನ ಜನರ ಬಗ್ಗೆ ಕಾಳಜಿ ವಹಿಸುವುದು ಕೇವಲ ಕೆಲವೇ ಮಂದಿಯ ಕೆಲಸ ಆಗಿರಬಾರದು. ನಿತ್ಯ ನಮ್ಮ ಹಲ್ಲುಜ್ಜಿದಂತೆಯೇ ಇದು ಕೂಡ ಅಗತ್ಯ. ಅದೇ ರೀತಿ ನಾವು ಸುರಕ್ಷಿತವಾಗಿರಬೇಕಾದರೆ ಭೂಗ್ರಹದ ಬಗ್ಗೆ ಕಾಳಜಿ ವಹಿಸಬೇಕು. ಹವಾಮಾನ ವೈಪರೀತ್ಯ, ಮಾಲಿನ್ಯ, ಬಡತನ ಮತ್ತು ಅಸಮಾನತೆಯಂತಹ ದೊಡ್ಡ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬರೂ ತಮಗೆ ಸಾಧ್ಯವಾದ ಸಣ್ಣ ಸಣ್ಣ ಕೆಲಸಗಳನ್ನು ಮಾಡಬಹುದು” ಎಂದು ಮೋಕ್ಷಾ ಹೇಳಿದ್ದಾಳೆ.

ಇದನ್ನೂ ಓದಿ: PM Modi US Visit: ʼಅಮೆರಿಕದಲ್ಲಿ ಮಿನಿ ಭಾರತ…ʼ: ಮೋದಿ ವಿದಾಯ ಭಾಷಣ

Exit mobile version