Site icon Vistara News

70 Hours Work Debate: 5 ದಿನಗಳ ವೀಕ್‌ ಸತ್ತಿದೆ: ನಾರಾಯಣ ಮೂರ್ತಿ ಪರ ಹರ್ಷ ಗೋಯೆಂಕಾ ಬ್ಯಾಟಿಂಗ್‌

narayana murthy harsha goenka

ಹೊಸದಿಲ್ಲಿ: ಐದು ದಿನಗಳ ಕಚೇರಿ ಕೆಲಸದ (5 days office week) ಕಾಲ ಸತ್ತಿದೆ, ಹೈಬ್ರಿಡ್‌ ಕೆಲಸದ ಸಂಸ್ಕೃತಿ (Hybrid work culture) ಭವಿಷ್ಯದಲ್ಲಿದೆ ಎಂದು ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ (Harsh Goenka) ಹೇಳಿದ್ದಾರೆ. ಇನ್ಫೋಸಿಸ್‌ನ (Infosys) ಸಹ-ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರು ನೀಡಿದ “ವಾರಕ್ಕೆ 70 ಗಂಟೆಗಳ ಕೆಲಸʼದ ಹೇಳಿಕೆಯ (70 Hours Work Debate) ಪರವಾಗಿ ಅವರು ನಿಂತಿದ್ದಾರೆ.

ನಾರಾಯಣ ಮೂರ್ತಿ ಅವರು, ದೇಶದ ಅಭಿವೃದ್ಧಿಗೆ ಸಹಾಯ ಮಾಡಲು ಭಾರತದಲ್ಲಿ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದರು. ಇದು ಔದ್ಯಮಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹಲವಾರು ಉದ್ಯಮಿಗಳು ಮತ್ತು ನಾಗರಿಕರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ʼʼಭಾರತದ ಕೆಲಸದ ಉತ್ಪಾದಕತೆ ವಿಶ್ವದಲ್ಲೇ ಅತ್ಯಂತ ಕಡಿಮೆ. ಅದು ಸುಧಾರಿಸದ ಹೊರತು ದೇಶವು ಇತರ ರಾಷ್ಟ್ರಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲʼʼ ಎಂದು ಮೂರ್ತಿ ಹೇಳಿದ್ದರು.

ಮೂರ್ತಿ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸರಿಸಾಟಿಯಾಗಲು ಭಾರತವು ಹೆಚ್ಚು ಶ್ರಮಿಸುವುದು ಅಗತ್ಯ ಎಂದು ಕೆಲವರು ಅವರ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ. ಇತರರು ಈ ಹೇಳಿಕೆಯನ್ನು ಟೀಕಿಸಿದ್ದಾರೆ. ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನಿರೀಕ್ಷಿಸುವುದು ಶೋಷಣೆ ಮತ್ತು ಅವಾಸ್ತವಿಕ ಎಂದಿದ್ದಾರೆ.

ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಈ ಚರ್ಚೆಯ ಕುರಿತು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. “5 ದಿನಗಳ ಕಚೇರಿ ಕೆಲಸದ ವಾರವು ಸತ್ತುಹೋಗಿದೆ! ಜನರು ತಮ್ಮ ಕಚೇರಿ ಸಮಯದ ಸುಮಾರು 33%ರಷ್ಟು ದೂರದಿಂದಲೇ ಕೆಲಸ ಮಾಡುತ್ತಿದ್ದಾರೆ. ಇವರು ವಸ್ತುಸ್ಥಿತಿಯನ್ನು ಬದಲಾಯಿಸುವವರು. ಈ ನಮ್ಯತೆಯು ಕೆಲಸಕ್ಕೆ 8% ಹೆಚ್ಚಳದ ಮೌಲ್ಯವನ್ನು ನೀಡಿದೆ. ದೈನಂದಿನ ಪ್ರಯಾಣದ ಸಮಯ ಉಳಿತಾಯ ಮತ್ತು ಫ್ಲೆಕ್ಸಿಬಿಲಿಟಿಯನ್ನು ನಾವು ಹೆಚ್ಚು ಗೌರವಿಸುತ್ತೇವೆ!ʼʼ ಎಂದಿದ್ದಾರೆ.

“ಹೈಬ್ರಿಡ್ ಕೆಲಸವು ಪ್ರಸ್ತುತ ಮತ್ತು ಭವಿಷ್ಯ. ಇದು ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ಕಚೇರಿ ಮತ್ತು ರಿಮೋಟ್ ಕೆಲಸವನ್ನು ಮಿಶ್ರಣ ಮಾಡುವುದು. ಇನ್ನು ಮುಂದೆ 50 ಅಥವಾ 70 ಗಂಟೆಗಳ ಕೆಲಸವೆಂದಿರುವುದಿಲ್ಲ. ಅದು ನಿಮ್ಮ ಸ್ವಂತ ಮಹತ್ವಾಕಾಂಕ್ಷೆ, ನಿಮ್ಮ ಉದ್ದೇಶ ಮತ್ತು ನಿಮ್ಮ ಉತ್ಪಾದಕತೆಯನ್ನು ಅವಲಂಬಿಸಿರುತ್ತದೆ. ಬದಲಾವಣೆಯನ್ನು ಸ್ವೀಕರಿಸಿ. ಹೊಸ ಕೆಲಸದ ಸ್ಥಿತಿಗತಿಗೆ ಹೊಂದಿಕೊಳ್ಳಿ. ಕಚೇರಿ ಮತ್ತು ಮನೆಯ ನಡುವೆ ನಿಮಗೆ ಹಿತವಾದ ತಾಣವನ್ನು ಕಂಡುಕೊಳ್ಳಿ. ನಿಮ್ಮ ವೃತ್ತಿಜೀವನದಲ್ಲಿ ನಿಜವಾಗಿಯೂ ಮುಖ್ಯವಾದುದಕ್ಕೆ ಆದ್ಯತೆ ನೀಡುವ ಸಮಯ ಇದು” ಎಂದಿದ್ದಾರೆ.

ಅನೇಕ ನೆಟಿಜನ್‌ಗಳು ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಕೆಲವರು ಗೋಯೆಂಕಾ ಅವರ ಅಭಿಪ್ರಾಯವನ್ನು ಒಪ್ಪಿದ್ದಾರೆ. “ಹಿಂದಿನ ಸಾಂಪ್ರದಾಯಿಕ ಉದ್ಯೋಗ ನಿರ್ವಹಣೆಯಲ್ಲಿ, ಪ್ರತಿಯೊಬ್ಬರೂ ವಾರಕ್ಕೆ 45 ಗಂಟೆ ಕಾಲ ಕಚೇರಿಯಲ್ಲಿ ಇರಬೇಕೆಂದು ನಿರೀಕ್ಷಿಸುವುದರಲ್ಲಿ ಈಗ ಯಾವುದೇ ಅರ್ಥವಿಲ್ಲ. ನಾವು ಇದನ್ನು ಕೋವಿಡ್ ಸಮಯದಲ್ಲಿ ನೋಡಿದ್ದೇವೆʼʼ ಎಂದಿದ್ದಾರೆ ಒಬ್ಬರು. ಮತ್ತೊಬ್ಬ X ಬಳಕೆದಾರ, “ಇಲಾನ್ ಮಸ್ಕ್ 5 ಕಂಪನಿಗಳಲ್ಲಿ ಮೂನ್‌ಲೈಟ್ ಮಾಡಲು ಸಾಧ್ಯವಾದರೆ, ಸಾಮಾನ್ಯ ಉದ್ಯೋಗಿಗಳಿಗೂ ಮೂನ್‌ಲೈಟಿಂಗ್‌ಗೆ ಅವಕಾಶ ನೀಡಬೇಕು” ಎಂದಿದ್ದಾರೆ.

“ರಿಮೋಟ್ ಕೆಲಸ ಪ್ರಾರಂಭವಾದಾಗಿನಿಂದ ಉತ್ಪಾದಕತೆಯು ಮತ್ತೊಂದು ಹಂತಕ್ಕೆ ಹೋಗಿದೆ. ಕಂಪನಿಗಳು ಇದನ್ನು ವಿನ್-‌ ವಿನ್‌ ವಿಧಾನವೆಂದು ಗುರುತಿಸಬೇಕು. ಹೈಬ್ರಿಡ್ ಕೆಲಸ ಮತ್ತು ಉತ್ತಮ ಫಲಿತಾಂಶ ಕಂಡುಬರುವಲ್ಲಿ ಉದ್ಯೋಗಿಗಳಿಗೆ ಅದನ್ನು ಮುಂದುವರಿಸಲು ಬಿಡಬೇಕುʼʼ ಎಂಬುದು ಇನ್ನೊಂದು ಅಭಿಪ್ರಾಯ.

ಏತನ್ಮಧ್ಯೆ, ಟೆಕ್ ಮಹೀಂದ್ರಾ ಎಂಡಿ ಮತ್ತು ಸಿಇಒ ಸಿಪಿ ಗುರ್ನಾನಿ ಅವರು, ಮೂರ್ತಿ ಹೇಳಿದ 70 ಗಂಟೆಗಳ ಕೆಲಸ ಪೂರ್ತಿಯಾಗಿ ಕಂಪನಿಗಲ್ಲ ಎಂದಿದ್ದಾರೆ. “ನಾರಾಯಣ ಮೂರ್ತಿ ಕೆಲಸದ ಸಮಯದ ಬಗ್ಗೆ ಮಾತನಾಡುವಾಗ, ಅದು ಕಂಪನಿಗೆ ಸೀಮಿತವಾಗಿಲ್ಲ. ಅದು ನಿಮಗೆ ಮತ್ತು ನಿಮ್ಮ ದೇಶಕ್ಕೂ ವಿಸ್ತರಿಸುತ್ತದೆ ಎಂದು ನಾನು ನಂಬುತ್ತೇನೆ. ಅವರು ಕಂಪನಿಗೆ 70 ಗಂಟೆಗಳ ಕೆಲಸ ಎಂದು ಹೇಳಿಲ್ಲ. ಕಂಪನಿಗಾಗಿ 40 ಗಂಟೆ ಕೆಲಸ ಮಾಡಿ. ನಿಮಗಾಗಿ 30 ಗಂಟೆ ಕೆಲಸ ಮಾಡಿ. ಒಂದು ವಿಷಯದಲ್ಲಿ ನಿಮ್ಮನ್ನು ಪರಿಣತರನ್ನಾಗಿ ಮಾಡುವ 10,000 ಗಂಟೆಗಳನ್ನು ಹೂಡಿಕೆ ಮಾಡಿ” ಎಂದು ಗುರ್ನಾನಿ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Exit mobile version