ನವದೆಹಲಿ: ಫೇಸ್‌ಬುಕ್‌ನಲ್ಲಿ ಮೆಸೆಂಜರ್ ಮೂಲಕ ಯುವತಿ ಮೆಸೇಜ್ ಮಾಡುವುದು. ಯುವಕರು ಸೇರಿ ಯಾವುದೇ ಪುರುಷರು ಕಾಮದ ಬಲೆಗೆ ಬೀಳುತ್ತಾರೆ ಎಂಬುದು ತಿಳಿದ ಕೂಡಲೇ ವಿಡಿಯೊ ಕಾಲ್ (Video Call) ಮಾಡುವುದು. ತುಂಡುಡುಗೆ ತೊಟ್ಟ ಯುವತಿ ಜತೆ ವಿಡಿಯೊಕಾಲ್‌ನಲ್ಲಿ ಕಾಮಪ್ರಚೋದನೆಗೆ ಒಳಗಾದವನು ಮಾತನಾಡಿದ ವಿಡಿಯೊ ರೆಕಾರ್ಡ್ ಮಾಡಿ, ಬಳಿಕ ಬ್ಲ್ಯಾಕ್‌ಮೇಲ್ (Blackmail) ಮೂಲಕ ಆತನಿಂದ ಹಣ ವಸೂಲಿ ಮಾಡುವ ವಂಚನೆ ಗ್ಯಾಂಗ್‌ಗಳು (Sextortion Gang) ಇತ್ತೀಚೆಗೆ ಹೆಚ್ಚಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಲ್ಲಿ ಇಂತಹದ್ದೇ ವಿಡಿಯೊ ಕಾಲ್ ಬಲೆಗೆ ಬಿದ್ದ 71 ವರ್ಷದ ವೈದ್ಯರೊಬ್ಬರು 9 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಹೌದು, ಅದೊಂದು ಮಧ್ಯರಾತ್ರಿ ಡಾಕ್ಟರ್ ಮೊಬೈಲ್‌ಗೆ ರಾತ್ರಿ ವಿಡಿಯೊ ಕಾಲ್ ಬಂದಿದೆ. ಯಾವುದೇ ರೋಗಿಯೋ, ಆಸ್ಪತ್ರೆ ಸಿಬ್ಬಂದಿಯೋ ಕರೆ ಮಾಡಿರಬಹುದು ಎಂದು ರಿಸೀವ್ ಮಾಡಿದ್ದಾರೆ. ಆ ಕಡೆ ನೋಡಿದರೆ, ತುಂಡುಡುಗೆ ತೊಟ್ಟ ಮಹಿಳೆಯು ವೈದ್ಯರನ್ನು ಕಾಮದ ಬಲೆಗೆ ಬೀಳಿಸಿದ್ದಾಳೆ. ವೈದ್ಯರು ಕೂಡ ಆಕೆಯ ಜತೆ ಆತ್ಮೀಯವಾಗಿ ಮಾತನಾಡಿದ್ದಾರೆ. ಆದರೆ, ಈ ವಿಡಿಯೊ ರೆಕಾರ್ಡ್ ಆಗಿದ್ದು, ಡಾಕ್ಟರ್‌ಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. 71 ನೇ ವಯಸ್ಸಿನಲ್ಲಿ ಡಾಕ್ಟರ್ ಎಂಥ ಕೆಲಸ ಮಾಡಿದ ಎಂದು ಜನ ಆಡಿಕೊಳ್ಳಬಾರದು ಎಂದು ಹೆದರಿದ ಡಾಕ್ಟರ್, ವಂಚಕರಿಗೆ ಸುಮಾರು 9 ಲಕ್ಷ ರೂ. ಟ್ರಾನ್ಸ್‌ಫರ್ ಮಾಡಿದ್ದಾರೆ.
ಪ್ರತಿ ದಿನ ವಿಡಿಯೊ ಕಾಲ್ ಮಾಡುವುದು, ವಿಡಿಯೊ ವೈರಲ್ ಮಾಡುತ್ತೇನೆ ಎಂಬುದಾಗಿ ಹೆದರಿಸುವುದು, ಪದೇಪದೆ ಹಣಕ್ಕಾಗಿ ಪೀಡಿಸುವುದು ಹೆಚ್ಚಾದ ಕಾರಣ ಕೊನೆಗೂ ವೈದ್ಯರು ಪೂರ್ವ ದೆಹಲಿ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಾದ ಬಳಿಕ ಪೊಲೀಸರು ರಾಜಸ್ಥಾನದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಅಲ್ಲದೆ, ಇವರು ಸೆಕ್ಸ್ ಜಾಲದ ಮೂಲಕ ಸುಮಾರು 25 ಮಂದಿಗೆ ವಂಚಿಸಿದ್ದಾರೆ ಎಂಬ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿದೆ. ಹಾಗಾಗಿ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Fraud Case: ವರ್ಕ್ ಫ್ರಂ ಹೋಮ್ ಆಮಿಷ, ಐಟಿ ಉದ್ಯೋಗಿಗೆ 4.33 ಲಕ್ಷ ರೂ. ವಂಚನೆ
ಸುಮಾರು 8.6 ಲಕ್ಷ ರೂಪಾಯಿಯನ್ನು ಬ್ಲ್ಯಾಕ್‌ಮೇಲ್ ಮೂಲಕ ವಸೂಲಿ ಮಾಡಿದ್ದಾರೆ, ಪ್ರತಿದಿನ ವಿಡಿಯೊ ಕಾಲ್ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಡಾಕ್ಟರ್ ದೂರು ನೀಡಿದ್ದಾರೆ. ಇದಾದ ಬಳಿಕವೇ ಜಾಲ ಬಯಲಾಗಿದೆ. “ವೈದ್ಯ ನೀಡಿದ ಮೊಬೈಲ್ ನಂಬರ್ ಟ್ರೇಸ್ ಮಾಡಿದೆವು. ಕೆಲ ದಿನಗಳ ಬಳಿಕ ರಾಜಸ್ಥಾನದ ಒಬ್ಬ ವ್ಯಕ್ತಿಯ ಮೊಬೈಲ್ ಟ್ರೇಸ್ ಆಯಿತು. ಮೊಬೈಲ್ ನಂಬರ್ ಜಾಡು ಹಿಡಿದು ತನಿಖೆ ನಡೆಸಿದಾಗ ಇಬ್ಬರು ಸಹೋದರರು ಸಿಕ್ಕಿದ್ದಾರೆ. ಇವರ ಜತೆ ಇನ್ನೂ ಹಲವರು ಕೈಜೋಡಿಸಿರುವ ಶಂಕೆ ಇರುವ ಕಾರಣ ತನಿಖೆ ನಡೆಸಲಾಗುತ್ತಿದೆ” ಎಂದು ಡಿಸಿಪಿ ಅಪೂರ್ವ ಗುಪ್ತಾ ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ