ಅಂಬರ್‌ನಾಥ್: ಮಹಾರಾಷ್ಟ್ರದ ಅಂಬರ್‌ನಾಥ್ ಎನ್ನುವುದು ಆಳವಾದ ಕಣಿವೆಯನ್ನು ಒಳಗೊಂಡ ಬೆಟ್ಟ. ಇಲ್ಲಿನ ಬೆಟ್ಟಗಳ ಕಣಿವೆಯಲ್ಲಿ ಕಳೆದ ಮೂರು ದಿನಗಳಿಂದ ಸಿಕ್ಕಿ ಹಾಕಿಕೊಂಡಿದ್ದ ಗೋವನ್ನು ಯುವಕರ ಗುಂಪೊಂದು ಸಾಹಸಿಕ ಕಾರ್ಯಾಚರಣೆ ಮೂಲಕ ರಕ್ಷಿಸಿದೆ. ೧೦ ಜನ ಯುವಕರ ಗುಂಪು ನಡೆಸಿದ ಈ ಕಾರ್ಯಾಚರಣೆ ಭಾರಿ ಶ್ಲಾಘನೆಗೆ ಒಳಗಾಗಿದೆ.
ಅಂಬರನಾಥ್ ಬೆಟ್ಟದಲ್ಲಿ ಈಗ ಚೆನ್ನಾಗಿ ಹುಲ್ಲು ಬೆಳೆದಿದೆ. ದನವೊಂದು ಹುಲ್ಲನ್ನು ಮೇಯುತ್ತಾ ಮೇಯುತ್ತಾ ಕಣಿವೆಯ ಭಾಗವನ್ನು ತಲುಪಿತ್ತು. ಹಾಗೆ ಕೆಳಗಿಳಿದ ಅದಕ್ಕೆ ಒಂದು ಕಡೆ ದಾರಿ ತಪ್ಪಿದರೆ, ಇನ್ನೊಂದು ಕಡೆ ಮೇಲೆ ಹತ್ತಲಾಗದೆ ಸಂಕಷ್ಟಕ್ಕೆ ಸಿಲುಕಿತು. ಮೂರು ದಿನಗಳಿಂದ ಅದು ಅಲ್ಲೇ ಉಳಿದಿತ್ತು.
ಆ ದನದ ಕೂಗು ಕೇಳಿದ ಕೆಲವರು ರಕ್ಷಣೆಗೆ ಮುಂದಾಗಿದ್ದರೂ ದಾರಿ ಕಾಣದೆ ಕೈ ಬಿಟ್ಟಿದ್ದರು. ಈ ನಡುವೆ ಅಂಬನಾಥ ಬೆಟ್ಟಕ್ಕೆ ಬಂದಿದ್ದ ೧೦ ಮಂದಿ ಯುವಕರ ತಂಡವೊಂದು ಇದಕ್ಕೆ ಕೈಜೋಡಿಸಿ ರಕ್ಷಣೆ ಮಾಡಿದೆ.
ಜೀವವನ್ನು ಪಣಕ್ಕಿಟ್ಟು ಕಣಿವೆಯಲ್ಲಿದ್ದ ಆ ದನದ ಬಳಿಗೆ ಹೋದ ತಂಡದ ಸದಸ್ಯರು ಅದರ ಕಾಲಿಗೆ ಹಗ್ಗವನ್ನು ಕಟ್ಟಲು ಯಶಸ್ವಿಯಾದರು. ಮೇಲೆ ಇದ್ದ ಯುವಕರ ತಂಡ ಅದನ್ನು ಮೇಲಕ್ಕೆ ಎಳೆದು ಕೊನೆಗೂ ರಕ್ಷಣೆ ಮಾಡಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಯುವಕರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೊವನ್ನು ವೀಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ| video viral: ಎಂಥಾ ಅಡ್ಜಸ್ಟ್‌ಮೆಂಟ್! ಒಂದೇ ಬೈಕಲ್ಲಿ ಆರು ಜನರ ಫ್ಯಾಮಿಲಿ ಟೂರ್!