ಬೆಂಗಳೂರು: ದೇಶದಲ್ಲಿ ಆಧಾರ್ ಕಾರ್ಡ್ (Aadhaar Card) ಅನ್ನು ಪ್ರಮುಖ ದಾಖಲೆಯಾಗಿ ಪರಿಗಣಿಸಲಾಗುತ್ತದೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದರಿಂದ ಹಿಡಿದು ಬ್ಯಾಂಕ್ ವ್ಯವಹಾರಗಳವರೆಗೆ ಆಧಾರ್ ಕಾರ್ಡ್ ಬೇಕೇ ಬೇಕು. ಹೀಗಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India) ನೀಡುವ ಈ 12 ಅಂಕಿಯ ಗುರುತಿನ ಸಂಖ್ಯೆ ಬಹಳಷ್ಟು ಪ್ರಾಮುಖ್ಯತೆ ಹೊಂದಿದೆ. ಇದು ಹೆಸರು, ವಿಳಾಸ, ಛಾಯಾಚಿತ್ರ, ಬೆರಳಚ್ಚುಗಳನ್ನು ಒಳಗೊಂಡಿದ್ದು, ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ಮಾಹಿತಿಗೆ ಲಿಂಕ್ ಮಾಡಲಾಗುತ್ತದೆ. ಅಲ್ಲದೆ ಆಧಾರ್ ದೇಶಾದ್ಯಂತ ಗುರುತು ಮತ್ತು ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
ಬಾಲ್ ಆಧಾರ್
ಆಧಾರ್ ಕಾರ್ಡ್ ಅನ್ನು 5 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೂ ಒದಗಿಸಲಾಗುತ್ತದೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳು ಸರ್ಕಾರಿ ಯೋಜನೆ ಮತ್ತು ಸೇವೆಗಳ ಪ್ರಯೋಜನವನ್ನು ಪಡೆಯಲು ಅನುಕೂಲವಾಗುವಂತೆ ಇದನ್ನು ಜಾರಿಗೊಳಿಸಲಾಗಿದೆ. 2018 ಯುಐಡಿಎಐ ಮೊದಲ ಬಾರಿಗೆ ʼಬಾಲ್ ಆಧಾರ್ʼ (Baal Aadhaar) ಕಾರ್ಡ್ ಅನ್ನು ಪರಿಚಯಿಸಿತ್ತು. ಇದನ್ನು ವಿಶೇಷವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ಕಂಡು ಬರುವ ಬಿಳಿ ಬಣ್ಣದ ಆಧಾರ್ ಕಾರ್ಡ್‌ಗಿಂತ ಭಿನ್ನವಾಗಿ ನೀಲಿ ಬಣ್ಣದಲ್ಲಿ ಈ ಬಾಲ ಆಧಾರ್ ಕಾರ್ಡ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿಯೂ 12 ಅಂಕಿಯ ವಿಶಿಷ್ಟ ಸಂಖ್ಯೆಗಳಿರುತ್ತವೆ.
5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವಾಗ ಯಾವುದೇ ಬಯೋಮೆಟ್ರಿಕ್‌ಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಅಂದರೆ ಫಿಂಗರ್ ಪ್ರಿಂಟ್ ಒದಗಿಸಬೇಕಾಗಿಲ್ಲ. ಮಗು 5 ವರ್ಷ ಪೂರೈಸಿದ ಬಳಿಕ ಬಯೋ ಮೆಟ್ರಿಕ್ ಒದಗಿಸಿ ಹೊಸ ಆಧಾರ್ ಕಾರ್ಡ್ ಪಡೆಯಬೇಕು. ಆದರೆ ಅವಾಗಲೂ ಇದೇ ನಂಬರ್ ಮುಂದುವರಿಯುತ್ತದೆ. ಕಾರ್ಡ್ ಮಾತ್ರ ಬದಲಾಗುತ್ತದೆ.
ಬಾಲ ಆಧಾರ್ ಪಡೆಯುವುದು ಹೇಗೆ?
- ಯುಐಡಿಎಐನ ಅಧಿಕೃತ ವೆಬ್ಸೈಟ್ https://uidai.gov.in/ಗೆ ಭೇಟಿ ನೀಡಿ.
- ಮೈ ಆಧಾರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಪೋಷಕರ ಫೋನ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಯೊಂದಿಗೆ ಮಗುವಿನ ವಿವರಗಳನ್ನು ನಮೂದಿಸಿ.
- ಬಾಲ ಆಧಾರ್ ಕಾರ್ಡ್ ಅನ್ನು ನೋಂದಾಯಿಸಲು ಅನುಕೂಲಕರ ಅಪಾಯಿಂಟ್ಮೆಂಟ್ ಸ್ಲಾಟ್ ಆಯ್ಕೆ ಮಾಡಿ.
- ನೋಂದಣಿ ಪ್ರಕ್ರಿಯೆಗಾಗಿ ಹತ್ತಿರದ ದಾಖಲಾತಿ ಕೇಂದ್ರದಲ್ಲಿ ಅಪಾಯಿಂಟ್ಮೆಂಟ್ ಕಾಯ್ದಿರಿಸಿ.
- ಅಪಾಯಿಂಟ್ಮೆಂಟ್ ಕಾಯ್ದಿರಿಸಿದ ದಿನಾಂಕದಂದು ಮಗುವಿನೊಂದಿಗೆ, ಅಗತ್ಯ ದಾಖಲೆಗಳೊಂದಿಗೆ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಿ.
- ಇಲ್ಲಿ ನಿಮ್ಮ ಮಗುವಿನ ಫೋಟೊ ತೆಗೆಯಲಾಗುತ್ತದೆ.
- ಇದಾಗಿ 60 ದಿನಗಳೊಳಗೆ ನಿಮ್ಮ ಮಗುವಿಗೆ ಬಾಲ ಆಧಾರ್ ಕಾರ್ಡ್ ದೊರೆಯುತ್ತದೆ.
ಇದನ್ನೂ ಓದಿ: Aadhaar Card: ಇನ್ನು ಮುಂದೆ ಆಧಾರ್ ಕಾರ್ಡ್ ಮಾಡಿಸುವುದು ಅಷ್ಟು ಸುಲಭವಲ್ಲ! ಕಠಿಣ ನಿಯಮ
ಬಾಲ ಆಧಾರ್ ಕಾರ್ಡ್ ಪಡೆಯಲು ಅಗತ್ಯವಾದ ದಾಖಲೆಗಳು
- ಮಗುವಿನ ಬರ್ತ್ ಸರ್ಟಿಫಿಕೆಟ್ ಅಥವಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಾಖಲೆ.
- ಪೋಷಕರ ಆಧಾರ್ ಕಾರ್ಡ್.
ಗಮನಿಸಿ, ಶಾಲೆಗಳ ದಾಖಲಾತಿ ಸೇರಿದಂತೆ ವಿವಿಧ ಕಡೆ ಈ ಬಾಲ ಆಧಾರ್ ಕಡ್ಡಾಯವಾಗಿರುವುದರಿಂದ ಕೂಡಲೇ ಮಾಡಿಸಿಕೊಳ್ಳಿ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ