Site icon Vistara News

ಮೋದಿ ವಿರುದ್ಧ ಆರೋಪ; ಬಾಯ್ಕಾಟ್ ಮಾಲ್ಡೀವ್ಸ್‌ ಅಭಿಯಾನ ಶುರು, ಗಣ್ಯರ ಬೆಂಬಲ

Narendra Modi

Please be a part of Maldives tourism’: Minister's call to Indian tourists

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಬೀಚ್‌ಗಳಲ್ಲಿ ತಿರುಗಾಡಿದ ಫೋಟೊಗಳನ್ನು ಹಂಚಿಕೊಂಡಿರುವುದಕ್ಕೆ ಮಾಲ್ಡೀವ್ಸ್‌ ಅಸಮಾಧಾನ ವ್ಯಕ್ತಪಡಿಸಿದೆ. ಮಾಲ್ಡೀವ್ಸ್‌ ಸಚಿವವರು ಸೇರಿ ಹಲವರು ಭಾರತ ಹಾಗೂ ನರೇಂದ್ರ ಮೋದಿ ವಿರುದ್ಧ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇಂತಹ ಉದ್ಧಟತನಕ್ಕೆ ಪ್ರತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಎಂಬ ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ಕ್ರಿಕೆಟ್‌ ಕಾಮೆಂಟೇಟರ್‌ ಆಕಾಶ್‌ ಚೋಪ್ರಾ ಸೇರಿ ಹಲವು ಇನ್‌ಫ್ಲುಯೆನ್ಸರ್‌ಗಳು ಕೈಜೋಡಿಸಿದ್ದಾರೆ.

ಮಾಲ್ಡೀವ್ಸ್‌ ಆರೋಪಗಳೇನು?

“ಭಾರತವು ಸುಖಾಸುಮ್ಮನೆ ಮಾಲ್ಡೀವ್ಸ್‌ಅನ್ನು ಟಾರ್ಗೆ ಮಾಡುತ್ತಿದೆ. ಬೀಚ್‌ ಪ್ರವಾಸೋದ್ಯಮದಲ್ಲಿ ಭಾರತವು ಮಾಲ್ಡೀವ್ಸ್‌ಗೆ ಸವಾಲೊಡ್ಡಬೇಕು ಎಂದರೆ ತುಂಬ ಸವಾಲುಗಳನ್ನು ಎದುರಿಸಬೇಕಾಗುತ್ತದೆ” ಎಂದು ಮಾಲ್ಡೀವ್ಸ್‌ ಸಚಿವ ಅಬ್ದುಲ್ಲಾ ಮಹ್ಜೂಮ್‌ ಮಾಜಿದ್ ಪೋಸ್ಟ್‌ ಮಾಡಿದ್ದಾರೆ. ಮತ್ತೊಬ್ಬ ಸಹಾಯಕ ಸಚಿವೆ ಮರಿಯಮ್‌ ಶಿವುನಾ, “ಇಸ್ರೇಲ್‌ ಕೈಗೊಂಬೆಯಾಗಿರುವ ನರೇಂದ್ರ ಮೋದಿ ಅವರು ಲೈಫ್‌ ಜಾಕೆಟ್‌ ಧರಿಸಿ ಜಿಗಿಯುತ್ತಾರೆ” ಎಂದು ಉದ್ಧಟತನದ ಪೋಸ್ಟ್‌ ಮಾಡಿದ್ದಾರೆ.

ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ

ಭಾರತ ಹಾಗೂ ನರೇಂದ್ರ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಪೋಸ್ಟ್‌ ಮಾಡುತ್ತಲೇ ಜಾಲತಾಣಗಳಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಶುರುವಾಗಿದೆ. “ಭಾರತ ಹೊರಗೆ ಎಂದು ಚುನಾವಣೆ ವೇಳೆ ಮಾಲ್ಡೀವ್ಸ್‌ನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಜನ ಅದಕ್ಕೇ ಮತ ಚಲಾಯಿಸಿದರು. ಈಗ ಮಾಲ್ಡೀವ್ಸ್‌ ಹೊರಗೆ ಎಂಬ ತತ್ವವನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ. ನನ್ನ ಕುಟುಂಬಸ್ಥರು (ದೇಶದ ನಾಗರಿಕರು) ಅದನ್ನು ಮಾಡಿ ತೋರಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದು ಆಕಾಶ್‌ ಚೋಪ್ರಾ ಪೋಸ್ಟ್‌ ಮಾಡಿದ್ದಾರೆ.

ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಆಗಿರುವ ಸೋನಮ್‌ ಮಹಾಜನ್‌ ಅವರು ಮಾಲ್ಡೀವ್ಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪ್ರೀತಿಯ ಭಾರತೀಯರೇ, ಭಾರತೀಯರ ಕುರಿತು ಮಾಲ್ಡೀವ್ಸ್‌ ಸಚಿವ ಹೇಳಿದ್ದನ್ನು ಒಮ್ಮೆ ಕೇಳಿ. ನೀವೇನಾದರೂ ಮಾಲ್ಡೀವ್ಸ್‌ಗೆ ಹೊರಟಿದ್ದರೆ, ಕೂಡಲೇ ಟ್ರಿಪ್‌ ಕ್ಯಾನ್ಸಲ್‌ ಮಾಡಿ. ನಿಮ್ಮನ್ನು ದ್ವೇಷಿಸುವವರ ದೇಶಕ್ಕೆ ನೀವೇಕೆ ಹೋಗಬೇಕು? ಅಷ್ಟಕ್ಕೂ, ಲಕ್ಷದ್ವೀಪ ನಿಮಗಾಗಿ ಕಾಯುತ್ತಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಚೀನಾವನ್ನು ಮೆಚ್ಚಿಸಲು ಇಂತಹ ಪೋಸ್ಟ್?‌

ಕೆಲ ತಿಂಗಳ ಹಿಂದಷ್ಟೇ ಚೀನಾ ಪರ ನಿಲುವಿನ ಮೊಹಮ್ಮದ್‌ ಮುಯಿಜು ಅವರು ಮಾಲ್ಡೀವ್ಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಚೀನಾವನ್ನು ಮೆಚ್ಚಿಸಲು ಮಾಲ್ಡೀವ್ಸ್‌ ಸಚಿವ ಹೀಗೆ ಪೋಸ್ಟ್‌ ಮಾಡಿದ್ದಾರೆ ಎನ್ನಲಾಗಿದೆ. ಅದರಲ್ಲೂ, ಸೋಮವಾರ (ಜನವರಿ 8) ಮೊಹಮ್ಮದ್‌ ಮುಯಿಜು ಅವರು ಚೀನಾಗೆ ಭೇಟಿ ನೀಡಲಿದ್ದು, ಕಮ್ಯುನಿಸ್ಟ್‌ ರಾಷ್ಟ್ರದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆ ಮಾತುಕತೆ ನಡೆಸಲಿದ್ದಾರೆ. ಇದೇ ಕಾರಣಕ್ಕಾಗಿ ಮಾಲ್ಡೀವ್ಸ್‌ ಈಗ ಸುಖಾಸುಮ್ಮನೆ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಯಿಜು ಅಧ್ಯಕ್ಷರಾಗುತ್ತಲೇ ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೈನಿಕರನ್ನು ವಾಪಸ್‌ ಕಳುಹಿಸಲು ತೀರ್ಮಾನಿಸಿತ್ತು.

ಇದನ್ನೂ ಓದಿ: PM Narendra Modi: ಲಕ್ಷದ್ವೀಪ ಸಮುದ್ರದಲ್ಲಿ ಈಜಾಡಿದ ಮೋದಿ; ಇಲ್ಲಿದೆ ವಿಡಿಯೋ ನೋಡಿ

ನರೇಂದ್ರ ಮೋದಿ ಅವರು ಕೆಲ ದಿನಗಳ ಹಿಂದೆ ಲಕ್ಷದ್ವೀಪದಲ್ಲಿ ಈಜಾಡುವ (Snorkelling-ನೀರಿನ ಮೇಲ್ಮೈನಲ್ಲಿ ಕೃತಕ ಆಮ್ಲಜನಕದ ಮಾಸ್ಕ್‌, ಸ್ವಿಮ್ಮಿಂಗ್ ದಿರಸು ಧರಿಸಿ ಈಜಾಡುವುದು) ಮೂಲಕ ಗಮನ ಸೆಳೆದಿದ್ದರು. ಅಲ್ಲದೆ, ಸ್ವಿಮ್ಮಿಂಗ್‌ ಸೂಟ್‌ ಧರಿಸಿ, ಆಕ್ಸಿಜನ್‌ ಮಾಸ್ಕ್‌ ಧರಿಸಿಕೊಂಡು ಈಜಾಡಿದ ಫೋಟೊಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಯಾರು ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕನಸು ಕಾಣುತ್ತಿದ್ದೀರೋ, ನಿಮ್ಮ ಪಟ್ಟಿಯಲ್ಲಿ ಮೊದಲು ಲಕ್ಷದ್ವೀಪ ಇರಲಿ ಕೂಡ ಹೇಳಿದ್ದರು. ಇದು ಈಗ ಮಾಲ್ಡೀವ್ಸ್‌ ಕಣ್ಣು ಕೆಂಪಾಗಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version