ನ್ಯೂಯಾರ್ಕ್: ಮುಂಬಯಿ ಉಗ್ರ ದಾಳಿಯ ರೂವಾರಿಗಳಲ್ಲಿ ಒಬ್ಬನಾದ ಪಾಕಿಸ್ತಾನ ಮೂಲದ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿಯನ್ನು ʼಜಾಗತಿಕ ಭಯೋತ್ಪಾದಕʼ ಪಟ್ಟಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿಸಿದೆ.
ಇದರೊಂದಿಗೆ, ಈತನನ್ನು ರಕ್ಷಿಸಲು ಚೀನಾ ಮಾಡಿದ್ದ ಪ್ರಯತ್ನಕ್ಕೆ ಸೋಲಾಗಿದೆ. ಈತ ಲಷ್ಕರೆ ತಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ನ ಭಾವನಾಗಿದ್ದಾನೆ. ಈತನೂ ಲಷ್ಕರೆ ಮುಖಂಡರಲ್ಲಿ ಒಬ್ಬ. 2020ರಲ್ಲಿ ಈತನನ್ನು ಜಾಗತಿಕ ಉಗ್ರ ಎಂದು ಘೋಷಿಸಬೇಕು ಎಂದು ಭಾರತ ಮಾಡಿದ್ದ ಪ್ರಯತ್ನಗಳಿಗೆ ಚೀನಾ ಅಡ್ಡಗಾಲು ಹಾಕಿತ್ತು. ಈ ಪ್ರಸ್ತಾಪವನ್ನು ತಳ್ಳಿಹಾಕಲು ಸಹಾಯ ಮಾಡಿದ್ದ ಚೀನಾವನ್ನು 2022ರ ಜೂನ್‌ನಲ್ಲಿ ಭಾರತ ತರಾಟೆಗೆ ತೆಗೆದುಕೊಂಡಿತ್ತು.
16 ಜನವರಿ 2023ರಂದು, ಭದ್ರತಾ ಮಂಡಳಿಯ ಸಮಿತಿಯು 1267 (1999), 1989 (2011) ಮತ್ತು 2253 (2015) ISIL (ದಯೆಶ್) ನಿರ್ಣಯಗಳಿಗೆ ಸಂಬಂಧಿಸಿ, ಅಲ್-ಖೈದಾ ಮತ್ತು ಸಂಬಂಧಿತ ವ್ಯಕ್ತಿಗಳು, ಗುಂಪುಗಳು, ಉದ್ಯಮಗಳು ಮತ್ತು ಘಟಕಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಅನುಮೋದಿಸಿತು. ಭದ್ರತಾ ಮಂಡಳಿಯ ನಿರ್ಣಯ 2610 (2021)ರಲ್ಲಿ ರುವಂತೆ ಇವರ ಸ್ವತ್ತುಗಳ ಮುಟ್ಟಗೋಲು, ಪ್ರಯಾಣ ನಿಷೇಧ, ಶಸ್ತ್ರಾಸ್ತ್ರ ಸಾಗಣೆ ನಿರ್ಬಂಧಕ್ಕೆ ಸೂಚಿಸಲಾಗಿದೆ ಎಂದು ನಿರ್ಣಯ ತಿಳಿಸಿದೆ.
ಯಾರು ಈ ಮಕ್ಕಿ?
ಭಾರತ ಹಾಗೂ ಅಮೆರಿಕದ ಆಂತರಿಕ ಕಾಯಿದೆಗಳ ಪ್ರಕಾರ ಈಗಾಗಲೇ ಅಬ್ದುಲ್ ರೆಹಮಾನ್ ಮಕ್ಕಿ ಮೋಸ್ಟ್ ವಾಂಟೆಡ್ ಉಗ್ರ. ಈತ ಹಿಂಸಾಚಾರಕ್ಕೆ ಮುಸ್ಲಿಂ ಯುವಕರನ್ನು ಪ್ರೇರೇಪಿಸುವುದು, ಹಣಸಹಾಯ ಮಾಡುವುದು, ಜಮ್ಮು- ಕಾಶ್ಮೀರದಲ್ಲಿ ಉುಗ್ರ ದಾಳಿಗಳನ್ನು ಸಂಘಟಿಸುವುದರಲ್ಲಿ ನಿರತನಾಗಿದ್ದಾನೆ. ಲಷ್ಕರೆ ತಯ್ಬಾದಲ್ಲಿ ಹಲವು ಸ್ಥಾನಗಳನ್ನು ನಿಭಾಯಿಸಿದ್ದಾನೆ. ಅಮೆರಿಕ ಭದ್ರತಾ ಇಲಾಖೆ ಪ್ರಕಾರ, 2020ರಲ್ಲಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್ ಈತನಿಗೆ ಶಿಕ್ಷೆ ವಿಧಿಸಿದ್ದು, ಜೈಲಿನಲ್ಲಿದ್ದಾನೆ. ಭಾವ ಹಫೀಜ್ ಸಯೀದ್ ಜತೆ ಸೇರಿಕೊಂಡು ಮುಂಬಯಿ ಮೇಲಿನ ದಾಳಿ (26/11)ಗಳನ್ನು ಈತ ರೂಪಿಸಿದ್ದ.
ಇದನ್ನೂ ಓದಿ | ಮುಂಬೈ ದಾಳಿ ರೂವಾರಿ ಹಫೀಜ್ ಪುತ್ರನ ಕಪ್ಪುಪಟ್ಟಿಗೆ ಸೇರಿಸುವ ಭಾರತದ ಪ್ರಸ್ತಾಪಕ್ಕೆ ಚೀನಾ ಮತ್ತೆ ಅಡ್ಡಿ