ನವದೆಹಲಿ: ದೇಶದ ಬಹುದೊಡ್ಡ ಉದ್ಯಮ ಸಂಸ್ಥೆಯಾದ ಅದಾನಿ ಗ್ರೂಪ್ (Adani Group) ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಉಬರ್‌ನೊಂದಿಗೆ (Uber) ವಿದ್ಯುತ್ ಚಾಲಿತ ವಾಹನಗಳ ಪೂರೈಕೆ (electric passenger cars) ಸಂಬಂಧ ಪಾಲುದಾರಿಕೆಯನ್ನು ಹೊಂದಲು ಸಿದ್ಧವಾಗುತ್ತಿದೆ. ಈ ಸಂಬಂಧ ಫೆ.24ರಂದು ಗೌತಮ್ ಅದಾನಿ (Gautam Adani) ಮತ್ತು ಉಬರ್ ಸಿಇಒ ದಾರಾ ಖೋಸ್ರೋಶಾಹಿ (Uber CEO Dara Khosrowshahi) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಉಬರ್ ಸಿಇಒ ಸದ್ಯ ಭಾರತದ ಪ್ರವಾಸದಲ್ಲಿದ್ದಾರೆ.
ಉದ್ದೇಶಿತ ಪಾಲುದಾರಿಕೆಯಲ್ಲಿ ಉಬರ್ ಸೇವೆಗಳನ್ನು ಅದಾನಿ ಒನ್ ವೇದಿಕೆಯಡಿ ತರಲಾಗುತ್ತದೆ. ವಿಮಾನ ಟಿಕೆಟ್ ಬುಕ್ಕಿಂಗ್, ಹಾಲಿಡೇ ಪ್ಯಾಕೇಜ್‌ಗಳು, ಕ್ಯಾಬ್ ಬುಕ್ಕಿಂಗ್ಸ್ ಸೇರಿದಂತೆ ಇತರ ಸೇವೆಗಳನ್ನು ಒದಗಿಸುವ ಅದಾನಿ ಒನ್ ಅನ್ನು ಅದಾನಿ ಗ್ರೂಪ್ 2022ರಲ್ಲಿ ಲಾಂಚ್ ಮಾಡಿದೆ. ಇದೀಗ ಈ ಸೇವೆಗಳ್ನು ಉಬರ್ ಜತೆಗೆ ಸಂಯೋಜಿಸಲಾಗುತ್ತಿದೆ.
ಅಹಮದಾಬಾದ್ ಮೂಲದ ಮೂಲಸೌಕರ್ಯ ಕಂಪನಿಯಾಗಿರುವ ಅದಾನಿ ಗ್ರೂಪ್, ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನ ವಿಭಾಗವನ್ನು ಪ್ರವೇಶಿಸುವ ಗುರಿಯನ್ನು ಹೊಂದಿದೆ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಆಧಾರಿತ ರೈಡ್-ಹೇಲಿಂಗ್ ಅಗ್ರಿಗೇಟರ್‌ನ ಸಹಯೋಗದೊಂದಿಗೆ ಸ್ಥಾನವನ್ನು ‘ಭದ್ರಪಡಿಸಲು’ ಮುಂದಾಗಿದೆ. ಆದಾಗ್ಯೂ, ಅದಾನಿ ಗ್ರೂಪ್ ಈಗಾಗಲೇ ವಾಣಿಜ್ಯ ಇವಿ ವಿಭಾಗದಲ್ಲಿ ಕಾರ್ಯಾಚರಣೆ ನಡೆಸಿದೆ. ಬಸ್‌ಗಳು, ಕೋಚ್‌ಗಳು ಮತ್ತು ಟ್ರಕ್‌ಗಳನ್ನು ಪೂರೈಸುತ್ತದೆ.
ಹಾಗಂತ, ಅದಾನಿ ಗ್ರೂಪ್ ಇವಿ ವಾಹವನಗಳನ್ನು ಉತ್ಪಾದನೆ ಮಾಡುವುದಿಲ್ಲ. ಕಂಪನಿಯ ಬಂದರು ಮತ್ತು ವಿಮಾನಗಳ ನಿಲ್ದಾಣಗಳಲ್ಲಿ ವಿವಿಧ ಸೇವೆಗಳಿಗಾಗಿ ಭಾರೀ ಪ್ರಮಾಣದಲ್ಲಿ ವಿದ್ಯುತ್ ಚಾಲಿತ ವಾಹನಗಳ ಅಗತ್ಯವಿದೆ. ಹಾಗಾಗಿಯೇ, ಕಂಪನಿಯು ಎಲೆಕ್ಟ್ರಿಕ್ ವೆಹಿಕಲ್‌ಗಳನ್ನು ಖರೀದಿಸುತ್ತದೆ ಮತ್ತು ತನ್ನ ಬ್ರ್ಯಾಂಡ್ ಮೇಲೆ ಮಾರಾಟ ಮಾಡುತ್ತದೆ. ಅವುಗಳನ್ನು ಉಬರ್ ನೆಟ್ವರ್ಕ್‌ಗೆ ಒದಗಿಸಲಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು 3600 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ಕರೆಯಲಾದ ಟೆಂಡರ್‌ಗಾಗಿ ಅದಾನಿ ಗ್ರೂಪ್ ಕೂಡ ಭಾಗವಹಿಸಿದೆ.
ಅದಾನಿ ಮತ್ತು ಉಬರ್ ಪಾಲುದಾರಿಕೆಯು ದೇಶದಲ್ಲಿ ಎಲೆಕ್ಟ್ರಿಕ್ ನಾಲ್ಕು-ಚಕ್ರ ವಾಹನಗಳ ಅಳವಡಿಕೆ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಉಬರ್‌ಗೆ ವಿಶ್ವದಲ್ಲೇ ಅದರ ಅತಿದೊಡ್ಡ ಎಲೆಕ್ಟ್ರಿಕ್ ವೆಹಿಕಲ್‌ಗಳ ಸಹಯೋಗವನ್ನು ನೀಡಬಹುದು. ಇದರೊಂದಿಗೆ ಅದಾನಿ ಗ್ರೂಪ್ ಎಲೆಕ್ಟ್ರಿಕ್ ವಾಹನಗಳ ಅಗ್ರಿಗೇಟರ್ ವಲಯಕ್ಕೂ ಕಾಲಿಡಲಿದೆ. ಹಲವು ಕ್ಷೇತ್ರಗಳಲ್ಲಿ ಈಗಾಗಲೇ ತನ್ನ ಪ್ರಾಬಲ್ಯವನ್ನು ಮೆರೆದಿರುವ ಅದಾನಿ ಈಗ ಮತ್ತೊಂದು ಹಂತಕ್ಕೆ ಹೊರಡಲು ಅಣಿಯಾಗಿದೆ ಎಂದು ಹೇಳಬಹುದು.
ಈ ಸುದ್ದಿಯನ್ನೂ ಓದಿ: Gautam Adani: ವಿವಿಧ ಕೈಗಾರಿಕೆಗಳಲ್ಲಿ 7 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ ಅದಾನಿ ಗ್ರೂಪ್