Site icon Vistara News

Adani Group: ಸಂಘಿ ಸಿಮೆಂಟ್‌ ಕಂಪನಿ ಈಗ ಅದಾನಿ ಗ್ರೂಪ್ ಪಾಲು;‌ ಇದು ಎಷ್ಟು ಸಾವಿರ ಕೋಟಿ ರೂ. ಡೀಲ್?

Gautam Adani And Ravi Sanghi

Adani Group's Ambuja Cement Acquires Cement Maker Sanghi Industries

ನವದೆಹಲಿ: ದೇಶದ ಪ್ರಮುಖ ಸಿಮೆಂಟ್‌ ತಯಾರಿಕಾ ಕಂಪನಿಯಾದ, ಗುಜರಾತ್‌ ಮೂಲದ ‘ಸಂಘಿ ಇಂಡಸ್ಟ್ರೀಸ್‌’ (Sanghi Industries) ಈಗ ಗೌತಮ್‌ ಅದಾನಿ ಅವರ ಅದಾನಿ ಗ್ರೂಪ್‌ನ (Adani Group) ಅಂಬುಜಾ ಸಿಮೆಂಟ್‌ ಪಾಲಾಗಿದೆ. ಸಂಘಿ ಇಂಡಸ್ಟ್ರೀಸ್‌ ಕಂಪನಿಯ ಖರೀದಿಗೆ ಸುಮಾರು 5 ಸಾವಿರ ಕೋಟಿ ರೂಪಾಯಿ ಸಂಘಿ ಇಂಡಸ್ಟ್ರೀಸ್‌ನ ರವಿ ಸಂಘಿ (Ravi Sanghi) ಹಾಗೂ ಗೌತಮ್‌ ಅದಾನಿ (Gautam Adani) ಮಧ್ಯೆ ಒಪ್ಪಂದವಾಗಿದೆ. ಇದರೊಂದಿಗೆ ಸಂಘಿ ಸಿಮೆಂಟ್‌ ಇತಿಹಾಸ ಸೇರಿದಂತಾಗಿದೆ.

ಸಂಘಿ ಇಂಡಸ್ಟ್ರೀಸ್‌ ಖರೀದಿ ಕುರಿತು ಗೌತಮ್‌ ಅದಾನಿ ಅವರೇ ಮಾಹಿತಿ ನೀಡಿದ್ದಾರೆ. “2028ರ ವೇಳೆಗೆ ನಮ್ಮ ಕಂಪನಿಯ ಸಿಮೆಂಟ್‌ ಉತ್ಪಾದನೆಯನ್ನು ದುಪ್ಪಟ್ಟುಗೊಳಿಸುವ ನಿಶ್ಚಯ ಮಾಡಿದ್ದೇವೆ. ಅದರಂತೆ, ದೇಶದ ಅತ್ಯುತ್ತಮ ಹಾಗೂ ಕಡಿಮೆ ಬೆಲೆಗೆ ಸಿಮೆಂಟ್‌ ಉತ್ಪಾದಿಸುವ ಸಂಘಿ ಸಿಮೆಂಟ್‌ ಕಂಪನಿಯು ಅದಾನಿ ಗ್ರೂಪ್‌ ಸೇರಿದೆ ಎಂಬುದಾಗಿ ತಿಳಿಸಲು ಖುಷಿಯಾಗುತ್ತದೆ” ಎಂದು ಗೌತಮ್‌ ಅದಾನಿ ಟ್ವೀಟ್‌ (ಈಗ X) ಮಾಡಿದ್ದಾರೆ.

ಸಂಘಿ ಇಂಡಸ್ಟ್ರೀಸ್‌ ಲಿಮಿಟೆಡ್‌ ಕಂಪನಿಯು ಈಗ ವರ್ಷಕ್ಕೆ 61 ಲಕ್ಷ ಟನ್‌ ಸಿಮೆಂಟ್‌ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಗುಜರಾತ್‌ನ ಸಂಘಿಪುರಮ್‌ನಲ್ಲಿರುವ ಸಿಮೆಂಟ್‌ ಉತ್ಪಾದನಾ ಘಟಕವು ಒಂದೇ ಘಟಕದಲ್ಲಿ ಅತಿ ಹೆಚ್ಚು ಸಿಮೆಂಟ್‌ ಉತ್ಪಾದಿಸುವ ಘಟಕ ಎನಿಸಿದೆ. ಗೌತಮ್‌ ಅದಾನಿ ಅವರ ಅಂಬುಜಾ ಸಿಮೆಂಟ್‌ ವಾರ್ಷಿಕ 7.6 ಕೋಟಿ ಟನ್‌ ಸಿಮೆಂಟ್‌ ಉತ್ಪಾದನೆ ಮಾಡುತ್ತದೆ. ಇದನ್ನು 2028ರ ವೇಳೆಗೆ ಎರಡು ಪಟ್ಟು ಹೆಚ್ಚಿಸುವುದು ಅದಾನಿ ಗ್ರೂಪ್‌ ಗುರಿಯಾಗಿದೆ.

ಇದನ್ನೂ ಓದಿ: Adani Group : 2-3 ವರ್ಷಗಳಲ್ಲಿ 90,000 ಕೋಟಿ ರೂ. ಲಾಭ ಗಳಿಸಲು ಅದಾನಿ ಗ್ರೂಪ್‌ ಗುರಿ, ಇದು ಹೇಗೆ ?

“ಮುಂದಿನ ಎರಡು ವರ್ಷಗಳಲ್ಲಿ ಸಂಘಿಪುರಂ ಘಟಕದಲ್ಲಿ 1.5 ಕೋಟಿ ಟನ್‌ ಸಿಮೆಂಟ್‌ ಉತ್ಪಾದನೆ ಮಾಡುವುದು ಅಂಬುಜಾ ಸಿಮೆಂಟ್ಸ್‌ ಗುರಿಯಾಗಿದೆ. ಸಂಘಿ ಇಂಡಸ್ಟ್ರೀಸ್‌ ಲಿಮಿಟೆಡ್‌ ಕಂಪನಿ ಖರೀದಿಯೊಂದಿಗೆ ಕರ್ನಾಟಕ, ಗುಜರಾತ್‌ ಹಾಗೂ ಮಹಾರಾಷ್ಟ್ರಕ್ಕೆ ಸಿಮೆಂಟ್‌ ಉತ್ಪಾದನೆಗೆ ಬಳಸುವ ಕಚ್ಚಾ ವಸ್ತುವನ್ನು (Clinker) ಕಡಿಮೆ ಬೆಲೆಗೆ ಸರಬರಾಜು ಮಾಡುವ ಉದ್ದೇಶವಿದೆ” ಎಂದು ಅದಾನಿ ಪೋರ್ಟ್ಸ್‌ ಹಾಗೂ SEZ ಲಿಮಿಟೆಡ್‌ ಸಿಇಒ ಕರಣ್‌ ಅದಾನಿ ತಿಳಿಸಿದ್ದಾರೆ.

Exit mobile version