ನವದೆಹಲಿ: ತಾಲಿಬಾನ್ ಉಗ್ರರ ಆಡಳಿತವಿರುವ ಅಫಘಾನಿಸ್ತಾನವು ಭಾರತದಲ್ಲಿರುವ ರಾಯಭಾರ ಕಚೇರಿಯ (Afghan Embassy) ಕಾರ್ಯಾಚರಣೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ. ಸೆಪ್ಟೆಂಬರ್ 30 ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ರಾಯಭಾರ ಕಚೇರಿಯನ್ನು ಈಗ ಶಾಶ್ವತವಾಗಿ ಸ್ಥಗಿತಗೊಳಿಸಿದೆ. ಆದರೆ, “ಭಾರತದ ಸರ್ಕಾರದಿಂದ ಎದುರಾಗುತ್ತಿರುವ ಸವಾಲುಗಳಿಂದಾಗಿ ಸ್ಥಗಿತಗೊಳಿಸಲಾಗುತ್ತಿದೆ” ಎಂದು ತಾಲಿಬಾನ್ ಆಡಳಿತವು ಆರೋಪಿಸಿದೆ. ಇದು ಈಗ ಚರ್ಚೆಗೆ ಕಾರಣವಾಗಿದೆ.
ಕಾರ್ಯಾಚರಣೆಯ ಸ್ಥಗಿತದ ಕುರಿತು ಅಫಘಾನಿಸ್ತಾನ ಪ್ರಕಟಣೆ ಹೊರಡಿಸಿದೆ. “ಸೆಪ್ಟೆಂಬರ್ 30ರಂದು ಭಾರತದಲ್ಲಿರುವ ಆಫ್ಘನ್ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಭಾರತ ಸರ್ಕಾರದಿಂದ ಎದುರಾಗಿರುವ ಸವಾಲುಗಳಿಂದಾಗಿ ನವೆಂಬರ್ 23ರಿಂದಲೇ ಜಾರಿಗೆ ಬರುವಂತೆ ರಾಯಭಾರ ಕಚೇರಿಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಭಾರತದಲ್ಲಿರುವ ಆಫ್ಘನ್ ನಾಗರಿಕರು ಸಹಕಾರ ನೀಡಿರುವುದಕ್ಕೆ ಕೃತಜ್ಞತೆಗಳು” ಎಂದು ತಿಳಿಸಿದೆ.
The Embassy of the Islamic Republic of Afghanistan announces the permanent closure of its diplomatic mission in New Delhi. pic.twitter.com/PV1AxiXQ0h
— ANI (@ANI) November 24, 2023
ಭಾರತದಲ್ಲಿ ರಾಯಭಾರ ಕಚೇರಿಯನ್ನು ನಿರ್ವಹಿಸಲು ಸಾಕಷ್ಟು ಸಿಬ್ಬಂದಿಯ ಕೊರತೆ ಇದೆ ಎಂದು ಅಫಘಾನಿಸ್ತಾನವೇ ಇದಕ್ಕೂ ಮೊದಲು ತಿಳಿಸಿತ್ತು. ಆ ಮೂಲಕ ರಾಯಭಾರ ಕಚೇರಿ ನಿರ್ವಹಣೆಗೆ ಸಾಕಷ್ಟು ದುಡ್ಡಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ. ಆದರೂ, ಭಾರತದ ಮೇಲೆ ಆಫ್ಘನ್ ಆರೋಪ ಮಾಡಿದೆ. “ರಾಯಭಾರಿಗಳ ವೀಸಾ ನವೀಕರಣ ಮಾಡದ ಕಾರಣ ಭಾರತದಲ್ಲಿ ಹೆಚ್ಚಿನ ರಾಯಭಾರಿಗಳು ಉಳಿಯಲು ಆಗುತ್ತಿಲ್ಲ” ಎಂದು ತಿಳಿಸಿದೆ.
ಇದನ್ನೂ ಓದಿ: NIA Investigation: ಮೊಹಮ್ಮದ್ ಆರೀಫ್‌ಗೆ ಪಾಕ್, ತಾಲಿಬಾನ್ ಜತೆ ಸಂಪರ್ಕ; ಆಫ್ಘನ್ ಉಗ್ರ ಸಂಘಟನೆಗೆ ವಿದೇಶಿ ಫಂಡಿಂಗ್!
ಅನುಮಾನ ಹುಟ್ಟಿಸಿದ ನಡೆ
ಅಫಘಾನಿಸ್ತಾನವು ಏಕಾಏಕಿ ರಾಯಭಾರ ಕಚೇರಿಯನ್ನು ಸ್ಥಗಿತಗೊಳಿಸುವ ತೀರ್ಮಾನ ತೆಗೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೂಲಗಳ ಪ್ರಕಾರ, ಅಶ್ರಫ್ ಘನಿ ಅವರು ಅಧ್ಯಕ್ಷರಾಗಿದ್ದಾಗ (ತಾಲಿಬಾನ್ ಆಡಳಿತಕ್ಕೂ ಮೊದಲು) ನೇಮಿಸಿದ ರಾಯಭಾರಿಗಳಿಗೂ, ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ನೇಮಿಸಲಾದ ಸಿಬ್ಬಂದಿಗೂ ಆಗಿಬರುತ್ತಿಲ್ಲ. ಎರಡೂ ತಂಡಗಳ ಮಧ್ಯೆ ಆಂತರಿಕ ಬಿಕ್ಕಟ್ಟು ಉಂಟಾಗಿದೆ. ಹಣದ ಕೊರತೆಯೂ ಉಂಟಾಗಿದೆ. ಹಾಗಾಗಿ, ಕಚೇರಿಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ಕೂಡ, “ದೆಹಲಿಯಲ್ಲಿ ರಾಯಭಾರ ಕಚೇರಿಯನ್ನು ನಿರ್ವಹಿಸಲು ಭಾರತ ಸರ್ಕಾರ ಸಾಕಷ್ಟು ನೆರವು, ಸಹಕಾರ ನೀಡುತ್ತಿಲ್ಲ. ಇದರಿಂದಾಗಿ ಅಫಘಾನಿಸ್ತಾನದ ಹಿತಾಸಕ್ತಿಗಳು ಈಡೇರುತ್ತಿಲ್ಲ. ಹಾಗಾಗಿ, ದೆಹಲಿಯಲ್ಲಿರುವ ರಾಯಭಾರ ಕಚೇರಿಯನ್ನು ಮುಚ್ಚಲಾಗುತ್ತಿದೆ” ಎಂದು ಅಫಘಾನಿಸ್ತಾನ ಆರೋಪಿಸಿತ್ತು. ಅಫಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದ ಮೇಲೆ ಆ ಆಡಳಿತವನ್ನು ಭಾರತ ಗಣನೆಗೆ ತೆಗೆದುಕೊಂಡಿಲ್ಲ. ಹೀಗಿದ್ದರೂ, ದೇಶದಲ್ಲಿ ರಾಯಭಾರ ಕಚೇರಿಯ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದೆ. ಆದರೂ, ಭಾರತದ ಮೇಲೆಯೇ ಅಫಘಾನಿಸ್ತಾನ ಆರೋಪ ಮಾಡಿದೆ.