Site icon Vistara News

Ajay Julie Love: ಜೂಲಿ ಐ ಲವ್‌ ಯು; ಗೆಳತಿಗಾಗಿ ಬಾಂಗ್ಲಾಗೆ ತೆರಳಿದ ಭಾರತದ ಯುವಕ, ಕತೆಯಲ್ಲಿದೆ ಬಿಗ್‌ ಟ್ವಿಸ್ಟ್

Ajay Julie Love Story

After Seema Sachin Love Story, Indo-Bangladesh Love Story Has A Big Twist

ನವದೆಹಲಿ: ಪ್ರೀತಿಗೆ ಕಣ್ಣಿಲ್ಲ, ಪ್ರೀತಿಗೆ ಭಾಷೆಯ ಹಂಗಿಲ್ಲ, ಪ್ರೀತಿಗಾಗಿ ವಯಸ್ಸಿನ ಮಿತಿ ಇಲ್ಲ ಎಂಬ ಮಾತುಗಳು ಈಗ ಕ್ಲೀಷೆಗಳಾಗಿ ಬದಲಾಗಿವೆ. ಈಗ ಇವುಗಳ ಸಾಲಿಗೆ ‘ಪ್ರೀತಿಗೆ ಗಡಿ ಇಲ್ಲ’ ಮಾತು ಸೇರಿದೆ. ಭಾರತದ ಸಚಿನ್‌ ಮೀನಾನನ್ನು ಹುಡುಕಿಕೊಂಡು ಪಾಕಿಸ್ತಾನದ ಸೀಮಾ ಹೈದರ್‌ ಭಾರತಕ್ಕೆ ಬಂದ, ಪಾಕಿಸ್ತಾನದ ನಸ್ರುಲ್ಲಾನನ್ನು ಹುಡುಕಿಕೊಂಡು ಭಾರತದ ಅಂಜು ಪಾಕಿಸ್ತಾನಕ್ಕೆ ಹೋದ ಪ್ರಕರಣಗಳು ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ, ಫೇಸ್‌ಬುಕ್‌ನಲ್ಲಿ ಪರಿಚಯವಾದ ಬಾಂಗ್ಲಾದೇಶದ ಮಹಿಳೆಗಾಗಿ ಉತ್ತರ ಪ್ರದೇಶದ ಯುವಕನೊಬ್ಬ (Ajay Julie Love) ಈಗ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಆದರೆ, ಈ ಪ್ರೇಮಕತೆಯಲ್ಲಿ ದೊಡ್ಡದೊಂದು ಟ್ವಿಸ್ಟ್‌ ಇದೆ.

ಪ್ರೀತಿ ಶುರುವಾಗಿದ್ದು ಹೇಗೆ?

ಫೇಸ್‌ಬುಕ್‌ನಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ ನಿವಾಸಿ ಅಜಯ್‌ ಹಾಗೂ ಬಾಂಗ್ಲಾದೇಶದ ಜೂಲಿ ಎಂಬ ಮಹಿಳೆಯ ಮಧ್ಯೆ ಫೇಸ್‌ಬುಕ್‌ ಪರಿಚಯದ ಬೆಸುಗೆ ಹಾಕಿದೆ. ಪರಿಚಯವು ಪ್ರೀತಿಗೆ ತಿರುಗಲು ತುಂಬ ದಿನ ಬೇಕಾಗಿರಲಿಲ್ಲ. ಜೂಲಿಗೆ ಈಗಾಗಲೇ ಮದುವೆಯಾಗಿದ್ದು, 11 ವರ್ಷದ ಮಗಳಿದ್ದಾಳೆ. ಆದರೆ, ಜೂಲಿಯ ಪತಿ ತೀರಿಕೊಂಡಿದ್ದಾರೆ. ಇದೆಲ್ಲ ಮಾಹಿತಿ ತಿಳಿದ ಬಳಿಕವೂ ಅಜಯ್‌ ಪ್ರೀತಿಸಲು ಒಪ್ಪಿದ್ದಾನೆ. ಅಷ್ಟೇ ಅಲ್ಲ, 2022ರಲ್ಲಿ ಜೂಲಿಯು ಮಗಳನ್ನು ಕರೆದುಕೊಂಡು ಉತ್ತರ ಪ್ರದೇಶದ ಮೊರಾದಾಬಾದ್‌ಗೆ ಬಂದಿದ್ದಾರೆ. ಅದೇ ವರ್ಷ ಇಬ್ಬರೂ ಮದುವೆಯಾಗಿದ್ದಾರೆ.

ಟ್ವಿಸ್ಟ್‌ ಇರೋದೇ ಇಲ್ಲಿ

ಬಾಂಗ್ಲಾದಿಂದ ಭಾರತಕ್ಕೆ ಬಂದ ಜೂಲಿಯನ್ನು ಅಜಯ್‌ ಮದುವೆಯಾಗಿ, ಇಬ್ಬರೂ ಸುಖವಾಗಿದ್ದರೆ ಪ್ರಕರಣ ಸುದ್ದಿಯಾಗುತ್ತಿರಲಿಲ್ಲ. ಇತ್ತೀಚೆಗೆ, ಜೂಲಿಯ ತಂದೆ-ತಾಯಿಯನ್ನು ಭೇಟಿಯಾಗಲು ಅಜಯ್‌ ಹಾಗೂ ಜೂಲಿ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಆದರೆ, ಬಾಂಗ್ಲಾದೇಶಕ್ಕೆ ತೆರಳಿದ ಅಜಯ್‌ ಮೇಲೆ ಹಲ್ಲೆ ನಡೆದಿದ್ದು, ಆತನನ್ನು ಭಾರತಕ್ಕೆ ಕಳುಹಿಸಲು ಮಹಿಳೆಯ ಸಂಬಂಧಿಕರು ಒಪ್ಪುತ್ತಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Anju Love Story: ನಮ್ಮ ಪಾಲಿಗೆ ಅವಳು ಸತ್ತಂತೆ; ಪ್ರೀತಿಗಾಗಿ ಪಾಕ್‌ಗೆ ತೆರಳಿದ ಅಂಜು ತಂದೆಯ ಆಕ್ರೋಶ

ಹೌದು, ಅಜಯ್‌ ತಾಯಿಯು ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಮಗ ಗಾಯಗೊಂಡಿರುವ ಫೋಟೊವನ್ನು ಅಪರಿಚಿತರು ಕಳುಹಿಸಿದ್ದಾರೆ. ಬಾಂಗ್ಲಾದೇಶದಲ್ಲಿ ನನ್ನ ಮಗನ ಮೇಲೆ ಹಲ್ಲೆ ನಡೆದಿದೆ. ಹಾಗಾಗಿ, ಆತನನ್ನು ಭಾರತಕ್ಕೆ ವಾಪಸ್‌ ಕರೆತರಲು ವ್ಯವಸ್ಥೆ ಮಾಡಿ ಎಂದು ಮಹಿಳೆಯು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಯ ಸಂಬಂಧಿಕರು ಅಜಯ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Exit mobile version