ನವ ದೆಹಲಿ: ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರು ನಾಳೆ (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರದ ಹೊಸ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಮೂಲಗಳ ಪ್ರಕಾರ, ಮೂರು ಸೇನಾ ಮುಖ್ಯಸ್ಥರು ಪ್ರಧಾನ ಮಂತ್ರಿಯವರನ್ನು ಪ್ರತ್ಯೇಕವಾಗಿ ಭೇಟಿಯಾಗಲಿದ್ದಾರೆ ಮತ್ತು ಕಳೆದ ವಾರ ಅನಾವರಣಗೊಂಡ ಅಗ್ನಿಪಥ್ ಯೋಜನೆ ಕುರಿತು ಚರ್ಚಿಸಲಿದ್ದಾರೆ.
ಮೂವರು ಸೇನಾ ಮುಖ್ಯಸ್ಥರ ಸಮ್ಮುಖದಲ್ಲಿ ಜೂನ್ 14ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಯೋಜನೆಯನ್ನು ಘೋಷಿಸಿದ್ದರು. “ಈ ಯೋಜನೆಯು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ಸಶಸ್ತ್ರ ಪಡೆಗಳ ಯುವ ತಲೆಮಾರನ್ನು ಅನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ನಾಲ್ಕು ವರ್ಷಗಳ ಸೇವೆಯಲ್ಲಿ ಅಗ್ನಿವೀರರಿಗೆ ಉತ್ತಮ ವೇತನ ಪ್ಯಾಕೇಜ್ ಮತ್ತು ನಂತರ ನಿರ್ಗಮನ ನಿವೃತ್ತಿ ಪ್ಯಾಕೇಜ್ ನೀಡಲಾಗುವುದು” ಎಂದು ರಾಜನಾಥ್ ಸಿಂಗ್ ಹೇಳಿದ್ದರು.
ಯೋಜನೆ ಪ್ರಾರಂಭವಾದಾಗಿನಿಂದ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳನ್ನು ಕಂಡಿದೆ. ಮೊದಲು, 17.5 ವರ್ಷದಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳವರೆಗೆ ನೇಮಕ ಮಾಡಿಕೊಳ್ಳುವ ಉದ್ದೇಶ ಈ ಸ್ಕೀಮ್‌ನದಾಗಿತ್ತು. ಪ್ರತಿಭಟನೆಗಳು ಆರಂಭವಾದ ಬಳಿಕ ಗರಿಷ್ಠ ವಯಸ್ಸಿನ ಮಿತಿಯನ್ನು ಸರ್ಕಾರ 23 ವರ್ಷಗಳಿಗೆ ವಿಸ್ತರಿಸಿತು.
ಇದನ್ನೂ ಓದಿ: Agnipath | ಅಗ್ನಿಪಥ್ ಮೂಲಕ ಮೊದಲ ಬಾರಿಗೆ ನೌಕಾಪಡೆಗೆ ಮಹಿಳಾ ನಾವಿಕರ ನೇಮಕ
ರಕ್ಷಣಾ ಸಚಿವಾಲಯ ಈ ಯೋಜನೆಯನ್ನು ಹಿಂಪಡೆಯಲು ನಿರಾಕರಿಸಿದೆ. ಇನ್ನು ಮುಂದೆ ಸಶಸ್ತ್ರ ಪಡೆಗಳಿಗೆ ನೇಮಕಾತಿ ಅಗ್ನಿಪಥ್ ಯೋಜನೆಯ ಮೂಲಕ ಮಾತ್ರ ನಡೆಯಲಿದೆ ಎಂದಿದೆ. ಸಿಯಾಚಿನ್ ಮತ್ತು ಇತರ ಪ್ರದೇಶಗಳಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಸಾಮಾನ್ಯ ಸೈನಿಕರಿಗೆ ಅನ್ವಯವಾಗುವ ಭತ್ಯೆಯನ್ನೇ ಅಗ್ನಿವೀರರು ಪಡೆಯುತ್ತಾರೆ, ಮತ್ತು ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ 1 ಕೋಟಿ ರೂಪಾಯಿಗಳ ಪರಿಹಾರವನ್ನು ಸಹ ವಿತರಿಸಲಾಗುವುದು ಎಂದು ಅದು ಸ್ಪಷ್ಟಪಡಿಸಿದೆ.
ನಿವೃತ್ತಿಯ ನಂತರ ಯುವಕರಿಗೆ ಉದ್ಯೋಗ ಇಲ್ಲದಾಗುತ್ತದೆ ಎಂಬ ಕಳವಳವನ್ನು ನಿವಾರಿಸಲು, ಖಾಸಗಿ ವಲಯದಲ್ಲಿ ಯುವಕರಿಗೆ ಉದ್ಯಮಕ್ಕೆ ಸಹಾಯ, ಸಾಲ ಸೌಲಭ್ಯ, ಉತ್ತಮ ನಿವೃತ್ತಿ ಪ್ಯಾಕೇಜ್‌ಗಳನ್ನೂ ಘೋಷಿಸಲಾಗಿದೆ. ಸರ್ಕಾರದ ಪ್ರಕಾರ ಇಂತಹ ಅಲ್ಪಾವಧಿಯ ನೇಮಕಾತಿ ಯೋಜನೆಗಳು ಹೆಚ್ಚಿನ ದೇಶಗಳಲ್ಲಿ ಅಸ್ತಿತ್ವದಲ್ಲಿವೆ. ಮೊದಲ ವರ್ಷದಲ್ಲಿ ನೇಮಕಗೊಳ್ಳುವ ಅಗ್ನಿವೀರರ ಸಂಖ್ಯೆಯು ಸಶಸ್ತ್ರ ಪಡೆಗಳ 3% ಮಾತ್ರ.
ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ “ಒಳ್ಳೆಯ ಉದ್ದೇಶದಿಂದ ಮಾಡಿದ ಅನೇಕ ಯೋಜನೆಗಳು ರಾಜಕೀಯದ ಬಣ್ಣದಲ್ಲಿ ಸಿಲುಕಿಕೊಳ್ಳುವುದು ನಮ್ಮ ದೇಶದ ದೌರ್ಭಾಗ್ಯ” ಎಂದು ಹೇಳಿದ್ದರು. ಸೋಮವಾರ ಬೆಂಗಳೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ʼʼಸರ್ಕಾರ ಆರಂಭಿಸಿದ ಕೆಲವು ಸುಧಾರಣೆಗಳು ಆರಂಭದಲ್ಲಿ ಅನ್ಯಾಯವೆಂದು ತೋರಬಹುದು, ಆದರೆ ನಂತರ ದೇಶಕ್ಕೆ ಪ್ರಯೋಜನ ನೀಡುತ್ತವೆʼʼ ಎಂದಿದ್ದರು.
ಇದನ್ನೂ ಓದಿ: ಕೆಲವು ಯೋಜನೆಗಳು ಅನ್ಯಾಯ ಅನಿಸಬಹುದು, ಆದರೆ ದೇಶ ಕಟ್ಟಲು ಅಗತ್ಯ ಎಂದ ಮೋದಿ, ಅಗ್ನಿಪಥ್ ಹಿನ್ನೆಲೆ?