Site icon Vistara News

Agniveer: ಮೃತ ಅಗ್ನಿವೀರನ ಕುಟುಂಬಕ್ಕೆ ಸಲ್ಲುತ್ತಿದೆ ₹1.13 ಕೋಟಿ ಪರಿಹಾರ; ರಾಹುಲ್‌ ಆರೋಪ ಸುಳ್ಳು ಎಂದ ಸೇನೆ

agniveer death

ಹೊಸದಿಲ್ಲಿ: ಸಿಯಾಚಿನ್‌ನಲ್ಲಿ ಮೃತಪಟ್ಟಿರುವ ಭಾರತೀಯ ಸೈನ್ಯದ ʼಅಗ್ನಿವೀರʼನಿಗೆ (Agniveer) ಸಂದ ಹಾಗೂ ಸಲ್ಲಲಿರುವ ಆರ್ಥಿಕ ನೆರವಿನ ವಿವರಗಳನ್ನು ಸೈನ್ಯಾಧಿಕಾರಿಗಳು (Indian Army) ನೀಡಿದ್ದು, ರಾಹುಲ್‌ ಗಾಂಧಿ (Rahul Gandhi) ಮಾಡಿರುವ ಆರೋಪಗಳು ಸುಳ್ಳು ಎಂದು ಸಾಬೀತುಪಡಿಸಿದ್ದಾರೆ.

ಸಿಯಾಚಿನ್‌ನಲ್ಲಿ (Siachin) ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಅಗ್ನಿವೀರ ಗವಟೆ ಅಕ್ಷಯ್ ಲಕ್ಷ್ಮಣ್ ಅವರ ಕುಟುಂಬಕ್ಕೆ ನೀಡಲಾಗುತ್ತಿರುವ ಹಣಕಾಸಿನ ನೆರವಿನ ಬಗ್ಗೆ ಭಾರತೀಯ ಸೈನ್ಯ ವಿವರವಾದ ಸ್ಪಷ್ಟನೆ ನೀಡಿದೆ. ಮೃತರ ಕುಟುಂಬದವರಿಗೆ ಪರಿಹಾರವನ್ನು ಸೈನಿಕ ಸೇವೆಯ ಸಂಬಂಧಿತ ನಿಯಮಗಳ ಮೂಲಕವೇ ನೀಡಲಾಗುತ್ತಿದೆ.

ಭಾರತೀಯ ಸೈನ್ಯದ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ನಿರ್ದೇಶನಾಲಯ ನೀಡಿರುವ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಲಕ್ಷ್ಮಣ್ ಅವರ ದುಃಖಿತ ಕುಟುಂಬಕ್ಕೆ ಬೆಂಬಲವನ್ನು ವ್ಯಕ್ತಪಡಿಸಲಾಗಿದೆ. ʼʼಸಾಮಾಜಿಕ ಮಾಧ್ಯಮದಲ್ಲಿ ಬಂದಿರುವ ಅಪಪ್ರಚಾರಕ್ಕೆ ಸಂಬಂಧಿಸಿ ಈ ಕುರಿತು ಸ್ಪಷ್ಟಪಡಿಸುವುದು ಮುಖ್ಯವಾಗಿದೆ. ಮೃತ ಅಗ್ನಿವೀರರ ಕುಟುಂಬದವರಿಗೆ ₹48 ಲಕ್ಷದ ವಿಮಾ ಹಣದ ಮೊತ್ತ (ಇದಕ್ಕೆ ಪ್ರೀಮಿಯಂ ಕಟ್ಟಬೇಕಿಲ್ಲ), ₹44 ಲಕ್ಷ ಪರಿಹಾರ, ಅಗ್ನಿವೀರ್‌ನಿಂದ ಸೇವಾ ನಿಧಿ ಕೊಡುಗೆ (30%) ಮತ್ತು ಸರ್ಕಾರದಿಂದ ಇಷ್ಟೇ ಪ್ರಮಾಣದ ಹೊಂದಾಣಿಕೆಯ ಕೊಡುಗೆ, ಸಂಚಿತ ಬಡ್ಡಿಯೊಂದಿಗೆ ಕೊಡಲಾಗುತ್ತಿದೆʼʼ ಎಂದು ಭಾರತೀಯ ಸೇನೆ ತಿಳಿಸಿದೆ.

ಇದು ಸೈನಿಕನ ಮರಣದ ದಿನಾಂಕದಿಂದ ನಾಲ್ಕು ವರ್ಷಗಳು ಪೂರ್ಣಗೊಳ್ಳುವವರೆಗಿನ ಉಳಿದ ಸೇವಾವಧಿಯ ವೇತನವನ್ನು ಸಹ ಒಳಗೊಂಡಿದೆ. ಪ್ರಸ್ತುತ ಪ್ರಕರಣದಲ್ಲಿ ಈ ಮೊತ್ತ ₹13 ಲಕ್ಷಕ್ಕಿಂತ ಹೆಚ್ಚು ಇದೆ. ಇನ್ನು ಸಶಸ್ತ್ರ ಪಡೆಗಳ ಯುದ್ಧ ಅಪಘಾತ ನಿಧಿಯಿಂದ ₹8 ಲಕ್ಷ ಹೆಚ್ಚುವರಿ ಕೊಡುಗೆಯನ್ನು ಸಂಬಂಧಿಕರಿಗೆ ನೀಡಲಾಗುತ್ತದೆ. ತಕ್ಷಣದ ಪರಿಹಾರವಾಗಿ ಒದಗಿಸಲು ಸೇನಾಯೋಧರ ಪತ್ನಿಯರ ಕಲ್ಯಾಣ ಸಂಘ (AWWA) ₹30 ಸಾವಿರ ಆರ್ಥಿಕ ನೆರವು ನೀಡುತ್ತಿದೆ ಎಂದು ಸೇನೆ ತಿಳಿಸಿದೆ. ಹೀಗಾಗಿ ಒಟ್ಟಾರೆ ಮೊತ್ತ ₹1.13 ಕೋಟಿ ದಾಟಲಿದೆ.

“ಅಗ್ನಿವೀರ್‌ಗಳ ಸೇವಾ ನಿಯಮಗಳ ಪ್ರಕಾರ, ಮರಣಹೊಂದಿದ, ಯುದ್ಧದಲ್ಲಿ ಗಾಯಗೊಂಡವರಿಗೆ ಅಧಿಕೃತವಾದ ಪರಿಹಾರಗಳು ಇವುಗಳನ್ನು ಒಳಗೊಂಡಿರುತ್ತವೆ: ಕೊಡುಗೆ ರಹಿತ ವಿಮಾ ಮೊತ್ತ ₹48 ಲಕ್ಷ, ಅಗ್ನಿವೀರ್‌ ಸೇವಾ ನಿಧಿ (30%) ಮತ್ತು ಸರ್ಕಾರ ನೀಡುವ ಸಮಾನ ಹೊಂದಾಣಿಕೆಯ ಕೊಡುಗೆ; ಮತ್ತು ಅದಕ್ಕೆ ಬಡ್ಡಿ. ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ ​​(AWWA) ನಿಂದ ₹30 ಸಾವಿರ ತಕ್ಷಣದ ಆರ್ಥಿಕ ನೆರವು ಎಂದು ADG PI ಬರೆದಿದ್ದಾರೆ.

ಸೇನೆಯ ಈ ಸ್ಪಷ್ಟನೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟೀಕೆಯ ಬಳಿಕ ಬಂದಿದೆ. ರಾಹುಲ್‌ ಅವರು ʼಅಗ್ನಿವೀರ್‌ʼ ಅನ್ನು ʼʼಭಾರತದ ವೀರರನ್ನು ಅವಮಾನಿಸುವ ಯೋಜನೆʼʼ ಎಂದು ಕರೆದಿದ್ದರು. ʼʼಸಿಯಾಚಿನ್‌ನಲ್ಲಿ ಲಕ್ಷ್ಮಣ್‌ ಅವರ ಸಾವಿನ ಸುದ್ದಿ ದುಃಖಕರವಾಗಿದೆ. ಅವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪಗಳು. ಒಬ್ಬ ಯುವಕ ದೇಶಕ್ಕಾಗಿ ಹುತಾತ್ಮನಾಗಿದ್ದಾನೆ. ಆದರೆ ಆತನಿಗೆ ಯಾವುದೇ ಗ್ರಾಚ್ಯುಟಿ ಇಲ್ಲ, ಅವನ ಸೇವೆಗೆ ಯಾವುದೇ ಮಿಲಿಟರಿ ಸೌಲಭ್ಯಗಳಿಲ್ಲ ಮತ್ತು ಹುತಾತ್ಮನಾದ ಅವನ ಕುಟುಂಬಕ್ಕೆ ಪಿಂಚಣಿ ಇಲ್ಲ. ಅಗ್ನಿವೀರ್ ಭಾರತದ ವೀರರನ್ನು ಅವಮಾನಿಸುವ ಯೋಜನೆಯಾಗಿದೆ” ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ರಾಹುಲ್‌ ಟೀಕಿಸಿದ್ದರು.

ರಾಹುಲ್‌ ಅವರ ಈ ನಡೆ ಅತ್ಯಂತ ಬೇಜವಾಬ್ದಾರಿತನದ್ದು ಎಂದು ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಟೀಕಿಸಿದ್ದಾರೆ.

ಇದನ್ನೂ ಓದಿ: Amritpal Singh: ಮೃತ ಅಗ್ನಿವೀರ ಅಮೃತ್‌ಪಾಲ್‌ ಸಿಂಗ್‌ಗೆ ಸೇನಾ ಗೌರವ ಏಕಿಲ್ಲ?

Exit mobile version