ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಪಕ್ಷದ (ಎಐಸಿಸಿ) ಅತ್ಯುನ್ನತ ಹುದ್ದೆಗೆ ಇಂದು ಮತದಾನ ನಡೆಯಲಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ.
ಮತದಾನಕ್ಕಾಗಿ ಕೆಪಿಸಿಸಿ ಕಚೇರಿಯಲ್ಲಿ ಒಟ್ಟು 3 ಬೂತ್ ವ್ಯವಸ್ಥೆ ಮಾಡಲಾಗಿದ್ದು, ಪ್ರದೇಶ ಚುನಾವಣಾಧಿಕಾರಿಯಾಗಿ ನಾಚಿಯಪ್ಪನ್ ನೇಮಕ ಮಾಡಲಾಗಿದೆ. ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಬಳ್ಳಾರಿಯ ಬಳ್ಳಾರಿಯ ಸಂಗನಕಲ್ಲುನಲ್ಲಿ ರಾಹುಲ್ ಮತದಾನ ಮಾಡಲಿದ್ದಾರೆ. ಅಧ್ಯಕ್ಷ ಸ್ಥಾನದ ಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಘಟಾನುಘಟಿಗಳು ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಮತದಾನ ಮಾಡಲಿದ್ದಾರೆ.
ಪ್ರದೇಶ ಕಾಂಗ್ರೆಸ್ ಸಮಿತಿಯ 40ಕ್ಕೂ ಅಧಿಕ ಮಂದಿ ಸದಸ್ಯರು ಭಾರತ್ ಜೋಡೋ ಯಾತ್ರೆಯಲ್ಲಿರುವುದರಿಂದ ಅವರಿಗೂ ಬಳ್ಳಾರಿಯಲ್ಲೇ ಮತದಾನಕ್ಕೆ ಅವಕಾಶ ಮಾಡಲಾಗಿದೆ. ಮತದಾನಕ್ಕೆ ಬ್ಯಾಲೆಟ್ ಪೇಪರ್ ಬಳಕೆ ಮಾಡಲಾಗುತ್ತದೆ. ದೇಶಾದ್ಯಂತ ಒಟ್ಟು 9100 ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 503 ಮಂದಿ ಮತದಾನಕ್ಕೆ ಅರ್ಹರಿದ್ದಾರೆ. 479 ಪಿಸಿಸಿ ಮೆಂಬರ್ಸ್ ಹಾಗೂ ಸಿಎಲ್‌ಪಿ ವತಿಯಿಂದ 15 ಮಂದಿ, ರಾಜ್ಯವನ್ನು ಪ್ರತಿನಿಧಿಸುವ ಎಐಸಿಸಿ ಸದಸ್ಯರು ಸೇರಿದಂತೆ ಒಟ್ಟು 503 ಜನ ಮತದಾನ ಮಾಡಲಿದ್ದಾರೆ. ಅಕ್ಟೋಬರ್ 19ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ | Congress President | ಅಧ್ಯಕ್ಷ ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಮಹತ್ವದ ಬದಲಾವಣೆ, ಏನದು?
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಇದು ಐದನೇ ಚುನಾವಣೆಯಾಗಿದೆ. ಮೊದಲ ಚುನಾವಣೆಯಲ್ಲಿ ಸುಭಾಸ್ ಚಂದ್ರ ಬೋಸ್ ಹಾಗೂ ಪಟ್ಟಾಭಿ ಸೀತಾರಾಮಯ್ಯ ನಡುವೆ ಪೈಪೋಟಿ ಇತ್ತು. ಸುಭಾಸ್ ಚಂದ್ರ ಬೋಸ್ ಗೆಲುವು ದಾಖಲಿಸಿದ್ದರು. 1950ರಲ್ಲಿ ನಡೆದ ಚುನಾವಣೆಯಲ್ಲಿ ಆಚಾರ್ಯ ಕೃಪಲಾನಿ ಹಾಗೂ ಪುರುಷೋತ್ತಮ ದಾಸ ಟಂಡನ್ ನಡುವೆ ಪೈಪೋಟಿಯಿತ್ತು. ಪುರುಷೋತ್ತಮ ದಾಸ ಟಂಡನ್ ಜಯ ಗಳಿಸಿದ್ದರು. 1997ರಲ್ಲಿ ಸೀತಾರಾಮ್ ಕೇಸರಿ ಗೆಲುವು ಕಂಡಿದ್ದರು. 2000ರಲ್ಲಿ ಸೋನಿಯಾ ಗಾಂಧಿ ಗೆದ್ದು ಜಿತೇಂದ್ರ ಪ್ರಸಾದ್ ಸೋಲು ಅನುಭವಿಸಿದ್ದರು.
ಪ್ರಸ್ತುತ 2022ರಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರು ನಡುವೆ ಪೈಪೋಟಿ ನಡೆದಿದೆ. ಮಲ್ಲಿಕಾರ್ಜುನ ಖರ್ಗೆಗೆ ಗಾಂಧಿ ಕುಟುಂಬದ ಬೆಂಬಲವಿದೆ. ಶಶಿ ತರೂರ್‌ಗೆ ತಮ್ಮ ರಾಜ್ಯದ ಮುಖಂಡರಿಂದಲೂ ಬೆಂಬಲ ಸಾಕಷ್ಟು ಇಲ್ಲ. ಹಾಗಾಗಿ ಬಹುತೇಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಖಚಿತ ಎನ್ನಲಾಗಿದೆ.