ನವದೆಹಲಿ: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 225 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋ (Delhi-San Francisco)ಗೆ ತೆರಳುತ್ತಿದ್ದ ಏರ್ ಇಂಡಿಯಾ (Air India Flight) ವಿಮಾನವನ್ನು ರಷ್ಯಾದ ಕ್ರಾಸ್ನೋಯರ್ಸ್ಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Krasnoyarsk international airport)ಕ್ಕೆ ಕಳುಹಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಕಾಕ್ ಪಿಟ್ ಸಿಬ್ಬಂದಿ ತಾಂತ್ರಿಕ ದೋಷವನ್ನು ಪತ್ತೆ ಹಚ್ಚಿದ ಹಿನ್ನಲೆಯಲ್ಲಿ ಎಐ 183 (AI 183) ವಿಮಾನವನ್ನು ರಷ್ಯಾದ ಕ್ರಾಸ್ನೋಯರ್ಸ್ಕ್ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಈ ವಿಮಾನದಲ್ಲಿ 225 ಪ್ರಯಾಣಿಕರು ಮತ್ತು 19 ಸಿಬ್ಬಂದಿ ಸೇರಿ ಒಟ್ಟು 244 ಮಂದಿ ಇದ್ದರು. ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ ಬಳಿಕ ಅವರೆಲ್ಲರನ್ನೂ ಹೆಚ್ಚಿನ ಟರ್ಮಿನಲ್ ಕಟ್ಟಡಕ್ಕೆ ಕರೆದೊಯ್ಯಲಾಯಿತು ಎಂದು ಅಧಿಕೃತರು ಮಾಹಿತಿ ನೀಡಿದ್ದಾರೆ.
“ಕ್ರಾಸ್ನೋಯರ್ಸ್ಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ತನ್ನದೇ ಆದ ಸಿಬ್ಬಂದಿಯನ್ನು ಹೊಂದಿಲ್ಲದ ಕಾರಣ, ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಾವು ಬೇರೆ ವ್ಯವಸ್ಥೆ ಮಾಡುತ್ತಿದ್ದೇವೆ” ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. “ಏರ್ ಇಂಡಿಯಾ ಸರ್ಕಾರಿ ಸಂಸ್ಥೆಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಪ್ರಯಾಣಿಕರನ್ನು ಸ್ಯಾನ್ ಫ್ರಾನ್ಸಿಸ್ಕೋಗೆ ತಲುಪಿಸಲು ಶೀಘ್ರ ಪರ್ಯಾಯ ವ್ಯವಸ್ಥೆ ಮಡುತ್ತೇವೆʼʼ ಎಂದು ಭರವಸೆ ನೀಡಿದೆ.
Update #2: Air India Flight AI183
— Air India (@airindia) July 18, 2024
Air India flight AI183 of 18 July 2024 operating Delhi to San Francisco made a precautionary landing at Krasnoyarsk International Airport (KJA) in Russia after the cockpit crew detected a potential issue in the cargo hold area. The aircraft…
“ಏರ್ ಇಂಡಿಯಾ ವಿಮಾನದಲ್ಲಿರುವ ಪ್ರಯಾಣಿಕರು ಮತ್ತು ಸಿಬ್ಬಂದಿಯ ಬಗ್ಗೆ ಕಾಳಜಿ ವಹಿಸುತ್ತೇವೆ. ಆದಷ್ಟು ಶೀಘ್ರ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮತ್ತು ಅಲ್ಲಿಯವರೆಗೆ ಎಲ್ಲರ ಆರೋಗ್ಯ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಂದೆಯೂ ಆಗಿತ್ತು
ಇದೇ ರೀತಿಯ ಘಟನೆ ಈ ಹಿಂದೆಯೂ ನಡೆದಿತ್ತು. ಕಳೆದ ವರ್ಷ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ರಷ್ಯಾದ ಮಗದನ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು.
ಆ ಬೋಯಿಂಗ್ 777-200 ಎಲ್ಆರ್ (Boeing 777-200 LR) ವಿಮಾನದಲ್ಲಿ 216 ಪ್ರಯಾಣಿಕರು ಮತ್ತು 16 ಸಿಬ್ಬಂದಿ ಇದ್ದರು. ತುರ್ತು ಭೂ ಸ್ಪರ್ಶದ ಬಳಿಕ ಅವರಿಗೆಲ್ಲ ಸಮೀಪದ ಶಾಲೆಯಲ್ಲಿ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸಲಾಗಿತ್ತು. ಅಲ್ಲಿ ಅವರು ಎರಡು ದಿನಗಳ ಕಾಲ ತಂಗಿದ್ದರು. ನಂತರ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಹೊತ್ತ ಬದಲಿ ವಿಮಾನವನ್ನು ಮುಂಬೈನಿಂದ ಕಳುಹಿಸಲಾಯಿತು. ಎರಡು ದಿನಗಳ ಬಳಿಕ ಪರ್ಯಾಯ ವಿಮಾನ ಮೂಲಕ ಪ್ರಯಾಣಿಕರನ್ನು ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಿದ್ದರು.
ಇದನ್ನೂ ಓದಿ: Bomb threat: ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿ ಬಂದಿತ್ತು ಸಂದೇಶ
ತುರ್ತು ಭೂ ಸ್ಪರ್ಶ
ಈ ವರ್ಷದ ಮೇಯಲ್ಲಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು. ಬೆಂಗಳೂರಿನಿಂದ ಕೇರಳದ ಕೊಚ್ಚಿಗೆ ಹೊರಟಿದ್ದ ವಿಮಾನದ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ತುರ್ತು ಭೂ ಸ್ಪರ್ಶ ಮಾಡಲಾಗಿತ್ತು. ಆ ಮೂಲಕ ಭಾರೀ ಅವಘಡವೊಂದು ತಪ್ಪಿತ್ತು.